ಪತ್ನಿಯ ನೆನಪಿಗೆ ಪ್ರತಿಮೆ ಸ್ಥಾಪಿಸಿದ ಮಧುರೈನ ವೃದ್ಧ ಉದ್ಯಮಿ !

12-09-20 11:38 am       Headline Karnataka News Network   ಸ್ಪೆಷಲ್ ಕೆಫೆ

ಅಗಲಿದ ಪತ್ನಿಯ ನೆನಪಿಗಾಗಿ ಆಕೆಯ ಮೂರ್ತಿಯನ್ನು ರಚಿಸಿ ಮನೆಯಲ್ಲಿ ಸ್ಥಾಪಿಸಿದ ಮಧುರೈನ ವೃದ್ಧ ಉದ್ಯಮಿ !

ಚೆನ್ನೈ, ಸೆಪ್ಟೆಂಬರ್ 12: ನೀವು ಇತ್ತೀಚೆಗೆ ಕರ್ನಾಟಕದಲ್ಲಿ ಉದ್ಯಮಿಯೊಬ್ವರು ತನ್ನ ಪತ್ನಿಯ ಪ್ರತಿಮೆ ಮಾಡಿದ್ದನ್ನು ಕೇಳಿರಬಹುದು. ಅದೇ ಪ್ರಸಂಗ ಈಗ ತಮಿಳುನಾಡಿನ ಮದುರೈ ಮೂಲದ 74 ವರ್ಷದ ವೃದ್ಧ ಸಿ.ಸೇತುರಾಮನ್ ಎಂಬ ಉದ್ಯಮಿಗೆ ಪ್ರೇರಣೆ ಆಗಿದೆ. ಅಗಲಿದ ಪತ್ನಿಯ ನೆನಪಿಗಾಗಿ ಆಕೆಯ ಮೂರ್ತಿಯನ್ನು ರಚಿಸಿ ಮನೆಯಲ್ಲಿ ಸ್ಥಾಪನೆ ಮಾಡಿದ್ದಾರೆ. ‌

67 ವರ್ಷ ಆಗಿದ್ದ ಸೇತುರಾಮನ್ ಪತ್ನಿ ಎಸ್.ಪಿಚೈಮನಿ ಕಳೆದ ಆಗಸ್ಟ್ 10ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು. ಮದುರೈಯಲ್ಲಿ ಹೆಸರಾಂತ ಉದ್ಯಮಿಯಾಗಿರುವ ಸೇತುರಾಮನ್, ಮೂರು ದೊಡ್ಡ ಮ್ಯಾರೇಜ್ ಹಾಲ್ ಹೊಂದಿದ್ದಾರೆ. 48 ವರ್ಷಗಳ ಸುದೀರ್ಘ ವೈವಾಹಿಕ ಬದುಕಿನಲ್ಲಿ ಪತ್ನಿಯೇ ಆಸರೆಯಾಗಿದ್ದಳು. ಕಷ್ಟದ ಸಂದರ್ಭದಲ್ಲಿ ಕೈಹಿಡಿದಿದ್ದಳು. ಹೆಲ್ತ್ ಇನ್ಸ್ಪೆಕ್ಟರ್ ಆಗಿದ್ದ ನಾನು ಸರಕಾರಿ ಕರ್ತವ್ಯ ಬಿಟ್ಟು ರಿಯಲ್ ಎಸ್ಟೇಟ್ ಶುರು ಮಾಡಿದಾಗ ಹಣಕಾಸಿನ ತೊಂದರೆ ಎದುರಾಗಿತ್ತು. ಅಂಥ ಸಂದರ್ಭ ಬಂದಾಗೆಲ್ಲ ಪತ್ನಿ ಬೆನ್ನೆಲುಬಾಗಿ ನಿಂತಿದ್ದಳು. ಆಕೆ ನನ್ನ ಅತ್ಯುತ್ತಮ ಗೆಳತಿಯಾಗಿದ್ದಳು ಎಂದು ಸೇತುರಾಮನ್ ಸ್ಮರಿಸಿದ್ದಾರೆ. 

"ಕರ್ನಾಟಕದಲ್ಲಿ ಬಿಸಿನೆಸ್ ಮ್ಯಾನ್ ಒಬ್ವರು ತನ್ನ ಪತ್ನಿಯ ಪ್ರತಿಮೆ ಸ್ಥಾಪಿಸಿದ್ದು ನನಗೂ ಸ್ಫೂರ್ತಿ ನೀಡಿತ್ತು " ಎಂದ ಸೇತುರಾಮನ್, ಮಧುರೈನ ಶಿಲ್ಪಕಾರರಿಗೆ ಫೈಬರ್ ಪ್ರತಿಮೆ ರಚಿಸಲು 25 ದಿನಗಳು ಬೇಕಾದುವು. ಫೈಬರ್ ಆಕೃತಿಯನ್ನು ಮನೆಯ ಒಳಗಿಟ್ಟರೆ ಮುಂದೆ ಹಲವು ದಶಕಗಳ ಕಾಲ ಉಳಿಯಬಹುದು ಎನ್ನೋದು ನನ್ನ ಭಾವನೆ ಎನ್ನುತ್ತಾರೆ. 

ಸೇತುರಾಮನ್ ಅವರ ಮೂವರು ಹೆಣ್ಮಕ್ಕಳಿಗೆ ಮದುವೆಯಾಗಿದ್ದು ದೊಡ್ದ ಮಗಳ ಪುತ್ರ ಪಿ. ಸರವಣನ್ ತಿರುಪ್ಪರಕುಂಡ್ರಮ್ ಕ್ಷೇತ್ರದಲ್ಲಿ ಶಾಸಕರಾಗಿದ್ದಾರೆ. ಸರವಣನ್ ಅಜ್ಜಿಯ ಪ್ರತಿಮೆಯನ್ನು ತನ್ನದೇ ಕೊಠಡಿಯಲ್ಲಿ ಇರಿಸಿದ್ದಾರೆ. ಸೇತುರಾಮನ್ ಕೂಡ ಪತ್ನಿಯ ಮೂರ್ತಿಯನ್ನು ತನ್ನ ಕೊಠಡಿಯಲ್ಲಿ ಇರಿಸಿದ್ದು ನಾನು ಪ್ರತಿ ಬಾರಿ ಬಾಗಿಲು ತೆರೆದು ಒಳಬರುವಾಗ ಪತ್ನಿಯೇ ಬಾಗಿಲು ತೆರೆದಂತೆ ಅನಿಸುತ್ತದೆ ಎಂದು ಹೇಳುತ್ತಾರೆ.

ಇದನ್ನೂ ಓದಿ: Special: ಮೃತ ಪತ್ನಿಗೆ ಪ್ರತಿಮೆ, ಮನೆ ನಿರ್ಮಿಸಿದ ಆಧುನಿಕ ಶಾಜಹಾನ್ !!

Join our WhatsApp group for latest news updates