ಪಾಕ್‌ ವಿರುದ್ಧ ಮುಗ್ಗರಿಸಿದರೂ ಟೀಮ್ ಇಂಡಿಯಾ ಫೈನಲ್‌ ತಲುಪುವ ಲೆಕ್ಕಾಚಾರ ಹೀಗಿದೆ!

05-09-22 01:28 pm       Source: Vijayakarnataka   ಕ್ರೀಡೆ

ಟೀಮ್ ಇಂಡಿಯಾ, ದಾಖಲೆಯ 8ನೇ ಏಷ್ಯಾ ಕಪ್‌ ಟೂರ್ನಿ ಗೆಲುವಿನ ಕಡೆಗೆ ಕಣ್ಣಿಟ್ಟಿದೆ. ಆದರೆ, ಭಾರತ ತಂಡದ ಈ ಹಾದಿ ಈಗ ಕಠಿಣವಾಗಿದ್ದು, ಏಷ್ಯಾ ಕಪ್‌...

ದುಬೈ: ಹಾಟ್‌ ಸ್ಟಾರ್‌ನ ಲೈವ್‌ ವೀಕ್ಷಣೆಯಲ್ಲಿ ಬರೋಬ್ಬರಿ 1.4 ದಶಲಕ್ಷ ಮಂದಿಯಿಂದ ವೀಕ್ಷಣೆಗೆ ಒಳಪಟ್ಟಿದ ಟೀಮ್ ಇಂಡಿಯಾ ಮತ್ತು ಪಾಕಿಸ್ತಾನ ನಡುವಣ ಏಷ್ಯಾ ಕಪ್‌ 2022 ಟೂರ್ನಿಯ ಸೂಪರ್‌-4 ಪಂದ್ಯದಲ್ಲಿ ಭಾರತ ತಂಡ 5 ವಿಕೆಟ್‌ಗಳ ಅಚ್ಚರಿಯ ಸೋಲುಂಡಿತು. ಅಂದಹಾಗೆ ಟೂರ್ನಿಯ 'ಎ' ಗುಂಪಿನ ಮೊದಲ ಪಂದ್ಯದಲ್ಲಿ ಭಾರತ ತಂಡ 5 ವಿಕೆಟ್‌ಗಳಿಂದ ಪಾಕ್‌ ಎದುರು ಜಯ ದಾಖಲಿಸಿತ್ತು. ಈ ಸೋಲಿಗೆ ಪಾಕ್‌ ಪಡೆ ಇದೀಗ ಸೇಡು ತೀರಿಸಿಕೊಂಡಿದೆ.

ಸೂಪರ್-4 ಹಂತದಲ್ಲಿ ಟೀಮ್ ಇಂಡಿಯಾದ ಸೋಲು ಫೈನಲ್‌ ಹಾದಿಯನ್ನು ಕಠಿಣವನ್ನಾಗಿಸಿದೆ. ಏಕೆಂದರೆ ರೋಹಿತ್ ಶರ್ಮಾ ಸಾರಥ್ಯದ ಭಾರತ ತಂಡ ತನ್ನ ಮುಂದಿನ ಎರಡು ಪಂದ್ಯಗಳಲ್ಲಿ ಉತ್ತಮ ಲಯದಲ್ಲಿರುವ ಶ್ರೀಲಂಕಾ ಮತ್ತು ಅಫಘಾನಿಸ್ತಾನ ಎದುರು ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದೆ. ಅತ್ತ ಪಾಕಿಸ್ತಾನ ತಂಡ ಇನ್ನೊಂದು ಪಂದ್ಯ ಗೆದ್ದರೂ ಫೈನಲ್‌ನಲ್ಲಿ ತನ್ನ ಸ್ಥಾನ ಭದ್ರ ಪಡಿಸಿಕೊಳ್ಳಲಿದೆ.

How India can qualify for Asia Cup final despite losing to Pakistan in  Super 4 | Cricket - Hindustan Times

ಸೆಪ್ಟೆಂಬರ್‌ 6ರಂದು ಭಾರತ ತಂಡ ಐದು ಬಾರಿಯ ಚಾಂಪಿಯನ್ಸ್‌ ಶ್ರೀಲಂಕಾ ಎದುರು ಪೈಪೋಟಿ ನಡೆಸಲಿದೆ. ಲೀಗ್‌ ಹಂತದ ಕೊನೇ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು 2 ವಿಕೆಟ್‌ಗಳ ರೋಚಕ ಜಯ ದಾಖಲಿಸಿ ಸೂಪರ್‌-4 ಹಂತಕ್ಕೆ ಕಾಲಿಟ್ಟಿರುವ ಶ್ರೀಲಂಕಾ ತಂಡ ಆತ್ಮವಿಶ್ವಾಸದ ಅಲೆಯಲ್ಲಿದೆ. ಹೀಗಾಗಿ ದ್ವೀಪರಾಷ್ಟ್ರದ ಎದುರು ಭಾರತ ತಂಡ ಜಯ ದಕ್ಕಿಸಕೊಳ್ಳಲು ತನ್ನ ಶ್ರೇಷ್ಠ ಆಟ ಹೊರತರಬೇಕಾದ ಅನಿವಾರ್ಯತೆ ಇದೆ. ಅಂದಹಾಗೆ ಸೂಪರ್-4 ಹಂತದ ಮೊದಲ ಹಣಾಹಣಿಯಲ್ಲಿ ಶ್ರೀಲಂಕಾ ತಂಡ ಅಫಘಾನಿಸ್ತಾನ ಎದುರು ಗೆದ್ದಿದ್ದು, ಇನ್ನೊಂದು ಪಂದ್ಯ ಗೆದ್ದರೂ ಫೈನಲ್‌ ತಲುಪುವ ಅತ್ಯುತ್ತಮ ಅವಕಾಶ ಹೊಂದಿದೆ.

ಅತ್ತ ಪಾಕಿಸ್ತಾನ ತಂಡ ತನ್ನ ಮುಂದಿನ ಎರಡು ಪಂದ್ಯಗಳಲ್ಲಿ ಅಫಘಾನಿಸ್ತಾನ (ಸೆಪ್ಟೆಂಬರ್‌ 7) ಮತ್ತು ಶ್ರೀಲಂಕಾ (ಸೆಪ್ಟೆಂಬರ್‌ 9) ಎದುರು ಪೈಪೋಟಿ ನಡೆಸಲಿದ್ದು, ಎರಡರಲ್ಲಿ ಕನಿಷ್ಠ ಒಂದು ಗೆಲುವಿನ ಹುಡುಕಾಟದಲ್ಲಿದೆ. ಹೀಗಾಗಿ ಟೀಮ್ ಇಂಡಿಯಾಗೆ ತನ್ನ ಮುಂದಿನ ಎರಡೂ ಪಂದ್ಯಗಳಲ್ಲಿ ಶ್ರೀಲಂಕಾ ಮತ್ತು ಅಫಘಾನಿಸ್ತಾನ ಎದುರು ಬೃಹತ್‌ ಗೆಲುವು ದಾಖಲಿಸುವ ಅನಿವಾರ್ಯತೆ ಎದುರಾಗಿದೆ.

ಭಾರತ ತಂಡ ಅಫಘಾನಿಸ್ತಾನ ಮತ್ತು ಶ್ರೀಲಂಕಾ ಎದುರು ಗೆದ್ದರೆ ಒಟ್ಟು 4 ಅಂಕಗಳನ್ನು ಗಳಿಸಲಿದೆ. ಅತ್ತ, ಪಾಕಿಸ್ತಾನ ತಂಡಕ್ಕೆ ಕನಿಷ್ಠ ಒಂದು ಜಯ ಸಿಕ್ಕರೂ 4 ಅಂಕ ಗಳಿಸಲಿದೆ. ಸದ್ಯಕ್ಕೆ 2 ಪಂದ್ಯಗಳನ್ನು ಅತ್ಯುತ್ತಮವಾಗಿ ಗೆಲ್ಲುವ, ಅಂದರೆ ಉತ್ತಮ ರನ್‌ರೇಟ್‌ನೊಂದಿಗೆ ಗೆಲ್ಲುವ ತಂಡಕ್ಕೆ ಫೈನಲ್‌ ಟಿಕೆಟ್‌ ಸಿಗಲಿದೆ. ಭಾರತ ತಂಡ ಇನ್ನೊಂದು ಪಂದ್ಯ ಸೋತರೂ ಸ್ಪರ್ಧೆಯಿಂದ ಹೊರ ಬೀಳಲಿದೆ.

ಏಷ್ಯಾ ಕಪ್‌ 2022 ಟೂರ್ನಿಯ ಸೂಪರ್‌-4 ಹಂತದ ವೇಳಾಪಟ್ಟಿ/ಫಲಿತಾಂಶ
ಸೆಪ್ಟೆಂಬರ್‌ 03 (ಶನಿವಾರ): ಸೂಪರ್‌ 4 ಹಂತದ ಪಂದ್ಯ ಅಫಘಾನಿಸ್ತಾನ vs ಶ್ರೀಲಂಕಾ (ಶಾರ್ಜಾ)
(ಶ್ರೀಲಂಕಾ ತಂಡಕ್ಕೆ 4 ವಿಕೆಟ್‌ಗಳ ಜಯ)
ಸೆಪ್ಟೆಂಬರ್‌ 04 (ಭಾನುವಾರ): ಸೂಪರ್‌ 4 ಹಂತದ ಪಂದ್ಯ ಭಾರತ vs ಪಾಕಿಸ್ತಾನ (ದುಬೈ)
(ಭಾರತಕ್ಕೆ 5 ವಿಕೆಟ್‌ಗಳ ಸೋಲು)

  • ಸೆಪ್ಟೆಂಬರ್‌ 06 (ಮಂಗಳವಾರ): ಸೂಪರ್‌ 4 ಹಂತದ ಪಂದ್ಯ ಭಾರತ vs ಶ್ರೀಲಂಕಾ (ದುಬೈ)
  • ಸೆಪ್ಟೆಂಬರ್‌ 07 (ಬುಧವಾರ): ಸೂಪರ್‌ 4 ಹಂತದ ಪಂದ್ಯ ಪಾಕಿಸ್ತಾನ vs ಅಫಘಾನಿಸ್ತಾನ (ದುಬೈ)
  • ಸೆಪ್ಟೆಂಬರ್‌ 08 (ಗುರುವಾರ): ಸೂಪರ್‌ 4 ಹಂತದ ಪಂದ್ಯ ಭಾರತ vs ಅಫಘಾನಿಸ್ತಾನ (ದುಬೈ)
  • ಸೆಪ್ಟೆಂಬರ್‌ 09 (ಶುಕ್ರವಾರ): ಸೂಪರ್‌ 4 ಹಂತದ ಪಂದ್ಯ ಪಾಕಿಸ್ತಾನ vs ಶ್ರೀಲಂಕಾ (ದುಬೈ)

Team India Can Still Make It To The Final Of Asia Cup 2022, Here Is All You Need To Know About