ಅಳಿಯನ ವೈದ್ಯಕೀಯ ವೆಚ್ಚ ಭರಿಸದ ಪಿಸಿಬಿ ವಿರುದ್ಧ ಶಾಹಿದ್ ಅಫ್ರಿದಿ ಗರಂ!

16-09-22 01:40 pm       Source: Vijayakarnataka   ಕ್ರೀಡೆ

ಏಷ್ಯಾ ಕಪ್‌ 2022 ಟೂರ್ನಿಗೂ ಮುನ್ನ ಮಂಡಿ ನೋವಿನ ಗಾಯದ ಸಮಸ್ಯೆಗೆ ತುತ್ತಾಗಿರುವ ಪಾಕಿಸ್ತಾನ ತಂಡದ...

ಹೊಸದಿಲ್ಲಿ: ಮುಂಬರುವ ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗೆ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ತನ್ನ 15 ಸದಸ್ಯರ ಬಲಿಷ್ಠ ತಂಡವನ್ನು ಪ್ರಕಟ ಮಾಡಿದೆ. ಗಾಯದ ಸಮಸ್ಯೆ ಕಾರಣ ಏಷ್ಯಾ ಕಪ್‌ 2022 ಟೂರ್ನಿಯಿಂದ ಹೊರಗುಳಿದಿದ್ದ ಸ್ಟಾರ್‌ ಎಡಗೈ ವೇಗದ ಬೌಲರ್‌ ಶಾಹೀನ್ ಶಾ ಅಫ್ರಿದಿ, ಇದೀಗ ವಿಶ್ವಕಪ್‌ ಮೂಲಕ ಪಾಕ್‌ ತಂಡಕ್ಕೆ ಕಮ್‌ಬ್ಯಾಕ್‌ ಮಾಡುವುದನ್ನು ಎದುರು ನೋಡುತ್ತಿದ್ದಾರೆ. ಅಂದಹಾಗೆ ಕಳೆದ ಜುಲೈನಲ್ಲಿ ಅವರು ಮಂಡಿ ನೋವಿನ ಗಾಯದ ಸಮಸ್ಯೆಗೆ ತುತ್ತಾಗಿದ್ದರು.

ಇದೀಗ ತಮ್ಮ ಸ್ವಂತ ಖರ್ಚಿನಲ್ಲಿ ಇಂಗ್ಲೆಂಡ್‌ಗೆ ತೆರಳಿ ಚಿಕಿತ್ಸೆ ಪಡೆದಿರುವ ಶಾಹೀನ್‌ ಶಾ ಅಫ್ರಿದಿ, ಪುನಶ್ಚೇತನ ಶಿಬಿರದಲ್ಲಿದ್ದಾರೆ. ಈ ಕುರಿತಾಗಿ ಮಾತಿಗಿಳಿದ ಪಾಕಿಸ್ತಾನ ತಂಡದ ಮಾಜಿ ನಾಯಕ ಹಾಗೂ ನಿವೃತ ಆಲ್‌ರೌಂಡರ್‌ ಶಾಹಿದ್‌ ಅಫ್ರಿದಿ, ತಮ್ಮ ಹಿರಿಯ ಪುತ್ರಿಯನ್ನು ವಿವಾಹವಾಗಲಿರುವ ಶಾಹೀನ್ ಶಾ ಅಫ್ರಿದಿ ಅವರ ಗಾಯದ ಸಮಸ್ಯೆಗೆ ನೆರವಾಗಲು ಪಿಸಿಬಿ ಯಾವುದೇ ವೈದ್ಯಕೀಯ ವೆಚ್ಚ ಭರಿಸಿಲ್ಲ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಸ್ಟಾರ್‌ ವೇಗಿ ತಮ್ಮ ಜೇಬಿನಿಂದ ದುಡ್ಡು ಖರ್ಚು ಮಾಡಿ ಚಿಕಿತ್ಸೆ ಪಡೆಯುವಂತ್ತಾಗಿದೆ ಎಂದು ಗುಡುಗಿದ್ದಾರೆ.

ಏಷ್ಯಾ ಕಪ್‌ ಅಲ್ಲದೆ ಈಗ ತಾಯ್ನಾಡಿನಲ್ಲಿ ಪ್ರವಾಸಿ ಇಂಗ್ಲೆಂಡ್‌ ವಿರುದ್ಧದ 7 ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಯಿಂದಲೂ ಶಾಹೀನ್ ಶಾ ಹೊರಗುಳಿಯುವಂತ್ತಾಗಿದೆ. ಆದರೆ, ಅಕ್ಟೋಬರ್‌ 16ರಂದು ಶುರುವಾಗಲಿರುವ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿ ಹೊತ್ತಿಗೆ ಚೇತರಿಸುತ್ತಾರೆ ಎಂಬ ವಿಶ್ವಾಸದಿಂದ ಅವರನ್ನು ಪಿಸಿಬಿ ಪಾಕಿಸ್ತಾನದ ಟಿ20 ವಿಶ್ವಕಪ್‌ ತಂಡಕ್ಕೆ ಆಯ್ಕೆ ಮಾಡಿದೆ. ಟೂರ್ನಿಯಲ್ಲಿ ಅಕ್ಟೋಬರ್‌ 23ರಂದು ಸಾಂಪ್ರದಾಯಿಕ ಎದುರಾಳಿ ಟೀಮ್ ಇಂಡಿಯಾ ಎದುರು ಪಾಕಿಸ್ತಾನ ತನ್ನ ಮೊದಲ ಪಂದ್ಯವನ್ನಾಡಲಿದೆ.

"ಶಾಹೀನ್‌ ಬಗ್ಗೆ ಮಾತನಾಡುವುದಾದರೆ ಆತ ಇಂಗ್ಲೆಂಡ್‌ಗೆ ತನ್ನ ಸ್ವಂತ ದುಡ್ಡಿನಿಂದ ತೆರಳಿದ್ದಾನೆ. ಏರ್‌ ಟಿಕೆಟ್‌, ತಂಗಲು ಹೋಟೆಲ್‌ ಎಲ್ಲದಕ್ಕೂ ತನ್ನ ಜೇಬಿನಿಂದಲೇ ಹಣ ನೀಡಿದ್ದಾನೆ. ಆತನಿಗೆ ವೈದ್ಯರ ವ್ಯವಸ್ಥೆಯನ್ನು ನಾನೇ ಮಾಡಿಕೊಡಬೇಕಾಯಿತು. ಆ ನಂತರ ಆತ ವೈದ್ಯರನ್ನು ಸಂಪರ್ಕಿಸಿದ್ದಾನೆ. ಪಿಸಿಬಿ ಇಲ್ಲಿ ಏನನ್ನೂ ಮಾಡುತ್ತಿಲ್ಲ. ಶಾಹೀನ್‌ ಶಾ ಎಲ್ಲವನ್ನೂ ತಮ್ಮ ಖರ್ಚಿನಲ್ಲೇ ಮಾಡುವಂತ್ತಾಗಿದೆ," ಎಂದು ಶಾಹಿದ್‌ ಅಫ್ರಿದಿ ಇತ್ತೀಚಿನ ಸಂದರ್ಶನದಲ್ಲಿ ಪಿಸಿಬಿ ವಿರುದ್ಧ ಗುಡುಗಿದ್ದರು.

Shaheen Shah Afridi Paying For Rehabilitation Out Of His Own Pocket Says Shahid Afridi.