ರಾಹುಲ್‌ ದ್ರಾವಿಡ್‌ ಹೆಸರಲ್ಲಿರುವ ಬಹುದೊಡ್ಡ ದಾಖಲೆ ಮುರಿಯಲು ಸಜ್ಜಾದ ವಿರಾಟ್‌ ಕೊಹ್ಲಿ!

20-09-22 02:40 pm       Source: Vijayakarnataka   ಕ್ರೀಡೆ

ಏಷ್ಯಾ ಕಪ್‌ 2022 ಟೂರ್ನಿಯಲ್ಲಿ ತಮ್ಮ ಶ್ರೇಷ್ಠ ಲಯ ಕಂಡುಕೊಂಡಿರುವ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್‌ ಕೊಹ್ಲಿ, ಇದೀಗ..

ಮೊಹಾಲಿ: ಏಷ್ಯಾ ಕಪ್‌ 2022 ಟೂರ್ನಿಯಲ್ಲಿ ತಮ್ಮ ಶ್ರೇಷ್ಠ ಲಯಕ್ಕೆ ಮರಳುವುದರ ಜೊತೆಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 24 ಸಾವಿರ ರನ್‌ಗಳ ಗಡಿಯನ್ನೂ ದಾಟ್ಟಿದ್ದ ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್‌ ಕೊಹ್ಲಿ, ಇದೀಗ ತಾಯ್ನಾಡಿನಲ್ಲಿ ಪ್ರವಾಸಿ ಆಸ್ಟ್ರೇಲಿಯಾ ಎದುರು ನಡೆಯಲಿರುವ ಮೂರು ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಯಲ್ಲೂ ಬಹುದೊಡ್ಡ ದಾಖಲೆ ಒಂದನ್ನು ಎದುರು ನೋಡುತ್ತಿದ್ದಾರೆ.

ಏಷ್ಯಾ ಕಪ್‌ನಲ್ಲಿ ಆಡಿದ 5 ಇನಿಂಗಳಲ್ಲಿ ಒಮ್ಮೆ ಡಕ್‌ಔಟ್‌ ಆದರೂ ಕೂಡ, ಎರಡು ಅರ್ಧಶತಕ ಮತ್ತು 1 ಶತಕದ ಬಲದಿಂದ ಒಟ್ಟಾರೆ 276 ರನ್‌ಗಳನ್ನು ಸಿಡಿಸಿದ್ದ ವಿರಾಟ್‌ ಕೊಹ್ಲಿ, ಇದೀಗ ಆಸೀಸ್‌ ಎದುರು 3 ಪಂದ್ಯಗಳಿಂದ ಒಟ್ಟು 207 ರನ್‌ಗಳನ್ನು ಗಳಿಸಿದರೆ, ಭಾರತ ತಂಡದ ಹಾಲಿ ಮುಖ್ಯ ಕೋಚ್‌ ಹಾಗೂ ದಿಗ್ಗಜ ಬ್ಯಾಟರ್‌ ರಾಹುಲ್‌ ದ್ರಾವಿಡ್‌ ಅವರ ದಾಖಲೆಯನ್ನು ಮುರಿಯಲ್ಲಿದ್ದಾರೆ. ಭಾರತದ ಪರ ಅತಿ ಹೆಚ್ಚು ಅಂತಾರಾಷ್ಟ್ರೀಯ ರನ್‌ ಗಳಿಸಿದವರ ಪಟ್ಟಿಯಲ್ಲಿ ದ್ರಾವಿಡ್‌ಗೆ ಸಡ್ಡು ಹೊಡೆದು ಎರಡನೇ ಸ್ಥಾನ ಅಲಂಕರಿಸಲಿದ್ದಾರೆ.

33 ವರ್ಷದ ಅನುಭವಿ ಬಲಗೈ ಬ್ಯಾಟರ್‌, ಏಷ್ಯಾ ಕಪ್‌ ಟೂರ್ನಿಯ ಸೂಪರ್‌-4 ಹಂತದ ಪಂದ್ಯದಲ್ಲಿ ಅಫಘಾನಿಸ್ತಾನ ಎದುರು 61 ಎಸೆತಗಳಲ್ಲಿ ಅಜೇಯ 122 ರನ್‌ ಚೆಚ್ಚಿದರು. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 2019ರ ನವೆಂಬರ್‌ ಬಳಿಕ ಮೊದಲ ಶತಕ ಬಾರಿಸಿದರೆ, ಟಿ20-ಐ ಕ್ರಿಕೆಟ್‌ನಲ್ಲಿ ತಮ್ಮ ಮೊದಲ ಶತಕ ದಕ್ಕಿಸಿಕೊಳ್ಳುವ ಮೂಲಕ ಆತ್ಮವಿಶ್ವಾಸವನ್ನು ಮುಗಿಲೆತ್ತರಕ್ಕೆ ಏರಿಸಿಕೊಂಡಿದ್ದಾರೆ.

The wall returns to rebuild', Twitterati react to Rahul Dravid being  appointed Team India head coach - Firstcricket News, Firstpost

ಭಾರತದ ಪರ ಅತಿ ಹೆಚ್ಚು ಅಂತಾರಾಷ್ಟ್ರೀಯ ರನ್‌ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅಗ್ರಸ್ಥಾನದಲ್ಲಿದ್ದಾರೆ. ಕ್ರಿಕೆಟ್‌ ದೇವರು ಖ್ಯಾತಿಯ ದಿಗ್ಗಜ ತಮ್ಮ 24 ವರ್ಷಗಳ ಸುದೀರ್ಘಾವಧಿಯ ವೃತ್ತಿಬದುಕಿನಲ್ಲಿ ಆಡಿದ ಒಟ್ಟಾರೆ 664 ಪಂದ್ಯಗಳಿಂದ ವಿಶ್ವ ದಾಖಲೆಯ 34,357 ರನ್‌ ಗಳಿಸಿದ್ದಾರೆ. ಎರಡನೇ ಸ್ಥಾನದಲ್ಲಿರುವ 'ದಿ ವಾಲ್‌' ಖ್ಯಾತಿಯ ಚಾಂಪಿಯನ್‌ ಬ್ಯಾಟರ್‌ ರಾಹುಲ್‌ ದ್ರಾವಿಡ್‌, ಆಡಿದ 509 ಪಂದ್ಯಗಳಿಂದ 24,208 ರನ್‌ಗಳನ್ನು ಬಾರಿಸಿದ್ದಾರೆ. ಮೂರನೇ ಸ್ಥಾನದಲ್ಲಿರುವ ವಿರಾಟ್‌ ಕೊಹ್ಲಿ, 468 ಪಂದ್ಯಗಳಿಂದ 24,002 ರನ್‌ಗಳನ್ನು ಬಾರಿಸಿದ್ದಾರೆ.

ಅಂದಹಾಗೆ ವಿರಾಟ್‌, ಮಾಜಿ ನಾಯಕ ದ್ರಾವಿಡ್ ಅವರ ಈ ದಾಖಲೆ ಅಳಿಸಿ ಹಾಕಿದರೂ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ದಾಖಲೆ ಮುರಿಯುವ ಸಾಧ್ಯತೆ ಬಹಳಾ ಕಡಿಮೆ ಇದೆ. ಈ ಸಲುವಾಗಿ ಇನ್ನೂ 10 ಸಾವಿರಕ್ಕೂ ಹೆಚ್ಚು ಅಂತಾರಾಷ್ಟ್ರೀಯ ರನ್‌ ಗಳಿಸುವ ಅಗತ್ಯವಿದೆ.

ಆಸೀಸ್‌ ಸರಣಿಗೆ ಭಾರತದ ಟಿ20 ತಂಡ
ರೋಹಿತ್‌ ಶರ್ಮಾ (ನಾಯಕ), ಕೆ.ಎಲ್‌ ರಾಹುಲ್‌ (ಉಪನಾಯಕ), ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್, ದೀಪಕ್ ಹೂಡ, ರಿಷಭ್ ಪಂತ್‌ (ವಿಕೆಟ್‌ಕೀಪರ್‌), ದಿನೇಶ್‌ ಕಾರ್ತಿಕ್‌ (ವಿಕೆಟ್‌ಕೀಪರ್‌), ಹಾರ್ದಿಕ್ ಪಾಂಡ್ಯ, ಆರ್‌. ಅಶ್ವಿನ್‌, ಯುಜ್ವೇಂದ್ರ ಚಹಲ್‌, ಅಕ್ಷರ್‌ ಪಟೇಲ್‌, ಭುವನೇಶ್ವರ್‌ ಕುಮಾರ್‌, ಹರ್ಷಲ್‌ ಪಟೇಲ್‌, ದೀಪಕ್‌ ಚಹರ್‌, ಜಸ್‌ಪ್ರೀತ್‌ ಬುಮ್ರಾ, ಮೊಹಮ್ಮದ್‌ ಶಮಿ ಅಥವಾ ಉಮೇಶ್ ಯಾದವ್‌.

ನೇರ (LIVE) ಪ್ರಸಾರ ವಿವರ
ಟೆಲಿವಿಷನ್‌: ಸ್ಟಾರ್‌ ಸ್ಪೋರ್ಟ್ಸ್‌ ಮತ್ತು ಡಿ.ಡಿ
ಲೈವ್‌ ಸ್ಟ್ರೀಮಿಂಗ್‌: ಡಿಸ್ನಿ ಪ್ಲಸ್‌ ಹಾಟ್‌ ಸ್ಟಾರ್‌
ಎಲ್ಲ ಪಂದ್ಯಗಳು ರಾತ್ರಿ 7 ಗಂಟೆಗೆ ಶುರುವಾಗಲಿವೆ (ಭಾರತೀಯ ಕಾಲಮಾನ).

Ind Vs Aus Virat Kohli Looks To Surpass Rahul Dravid In Elite List Of Batters.