ಶಾರ್ದುಲ್‌-ಸಂಜು ಅಬ್ಬರ, ಕಿವೀಸ್‌ ಎದುರು ಭಾರತ 'ಎ' ತಂಡಕ್ಕೆ ಭರ್ಜರಿ ಜಯ!

23-09-22 02:03 pm       Source: Vijayakarnataka   ಕ್ರೀಡೆ

ಸಂಜು ಸ್ಯಾಮ್ಸನ್‌ ಸಾರಥ್ಯದ ಭಾರತ 'ಎ' ತಂಡ ಪ್ರವಾಸಿ ನ್ಯೂಜಿಲೆಂಡ್‌ 'ಎ' ತಂಡದ ವಿರುದ್ಧ ಏಕದಿನ ಕ್ರಿಕೆಟ್‌ ಸರಣಿಯ ಮೊದಲ...

ಚೆನ್ನೈ: ಆಲ್‌ರೌಂಡ್‌ ಆಟವಾಡಿದ ಸಂಜು ಸ್ಯಾಮ್ಸನ್‌ ಸಾರಥ್ಯದ ಭಾರತ 'ಎ' ತಂಡ ನಿರೀಕ್ಷೆಯಂತೆ ಪ್ರವಾಸಿ ನ್ಯೂಜಿಲೆಂಡ್‌ 'ಎ' ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಯ ಮೊದಲ ಪಂದ್ಯದಲ್ಲಿ 7 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಗಳಿಸಿದೆ. ಶಾರ್ದುಲ್‌ ಠಾಕೂರ್‌ (32ಕ್ಕೆ 4) ಭರ್ಜರಿ ಬೌಲಿಂಗ್‌ ದಾಳಿ ಸಂಘಟಿಸುವ ಮೂಲಕ ಗೆಲುವಿನ ರೂವಾರಿಯಾದರು.

ಇಲ್ಲಿನ ಎಂ.ಎ ಚಿದಂಬರಂ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ನ್ಯೂಜಿಲೆಂಡ್‌ 'ಎ' ತಂಡ ಆತಿಥೇಯರ ಶಿಸ್ತಿನ ದಾಳಿಯೆದುರು ತಬ್ಬಿಬ್ಬಾಯಿತು. ಶಾರ್ದುಲ್‌ ಠಾಕೂರ್‌ ಮತ್ತು ಯುವ ವೇಗದ ಬೌಲರ್‌ (30ಕ್ಕೆ 3) ಭರ್ಜರಿ ಬೌಲಿಂಗ್‌ ದಾಳಿ ಸಂಘಟಿಸಿದ ಪರಿಣಾಮ ಕಿವೀಸ್‌ ಪಡೆ 51 ರನ್‌ ಗಳಿಸುವ ಹೊತ್ತಿಗೆ 6 ವಿಕೆಟ್‌ಗಳನ್ನು ಕಳೆದುಕೊಂಡಿತ್ತು.

Michael Ripon, who plays for the Netherlands, is now on the New Zealand  team - Today Match Prediction

ಆದರೆ, ಕೆಳ ಮಧ್ಯಮ ಕ್ರಮಾಂಕದಲ್ಲಿ ಅಮೊಘ ಆಟವಾಡಿದ ಆಲ್‌ರೌಂಡರ್‌ ಮೈಕಲ್‌ ರಿಪನ್‌ 104 ಎಸೆತಗಳಲ್ಲಿ 61 ರನ್‌ಗಳ ಅಮೂಲ್ಯ ಕೊಡುಗೆ ಕೊಟ್ಟು ತಂಡದ ಮೊತ್ತವನ್ನು 150ರ ಗಡಿ ದಾಟುವಂತೆ ಮಾಡಿದರು. ಜೋ ವಾಕರ್‌, 49 ಎಸೆತಗಳಲ್ಲಿ 36 ರನ್‌ ಗಳಿಸಿದರೂ ಕಿವೀಸ್‌, 40.2 ಓವರ್‌ಗಳಲ್ಲಿ 167 ರನ್‌ಗಳಿಗೆ ಆಲ್‌ಔಟ್‌ ಆಯಿತು. ಚೈನಾಮನ್‌ ಸ್ಪಿನ್ನರ್ ಕುಲ್ದೀಪ್‌ ಯಾದವ್‌ (22ಕ್ಕೆ 1) ಕೂಡ ಒಂದು ವಿಕೆಟ್‌ ಪಡೆದರು.

ಸುಲಭವಾಗಿ ಗುರಿ ಬೆನ್ನತ್ತಿದ ಭಾರತ
ಗುರಿ ಬೆನ್ನತ್ತಿದ ಭಾರತ ತಂಡ ಆರಂಭದಲ್ಲೇ ಸ್ಟಾರ್ ಓಪನರ್‌ ಪೃಥ್ವಿ ಶಾ (17) ಅವರ ವಿಕೆಟ್‌ ಕಳೆದುಕೊಂಡಿತು. ಆದರೆ, ಋತುರಾಜ್‌ ಗಾಯಕ್ವಾಡ್‌ (41), ರಾಹುಲ್‌ ತ್ರಿಪಾಠಿ (31), ಸಂಜು ಸ್ಯಾಮ್ಸನ್‌ (ಅಜೇಯ 29) ಮತ್ತು ರಜತ್‌ ಪಾಟಿದಾರ್‌ (41 ಎಸೆತಗಳಲ್ಲಿ ಅಜೇಯ 45 ರನ್‌) ಅವರ ಭರ್ಜರಿ ಬ್ಯಾಟಿಂಗ್‌ ನೆರವಿನಿಂದ 31.5 ಓವರ್‌ಗಳಲ್ಲಿ 3 ವಿಕೆಟ್‌ಗೆ 170 ರನ್‌ಗಳಿಸಿ ಸುಲಭದ ಜಯ ದಕ್ಕಿಸಿಕೊಂಡಿತು. ನ್ಯೂಜಿಲೆಂಡ್‌ ಪರ ವ್ಯಾನ್‌ ಬೆಕ್‌, ಮೈಕಲ್‌ ರಿಪನ್‌ ಮತ್ತು ಮ್ಯಾಥ್ಯೂ ಫಿಷರ್ ತಲಾ ವಿಕೆಟ್‌ ಪಡೆಯುವ ಮೂಲಕ ಭಾರತೀಯ ಬ್ಯಾಟರ್‌ಗಳನ್ನು ಕಟ್ಟುಹಾಕುವ ಪ್ರಯತ್ನ ಮಾಡಿದರು. ಆದರೆ ಫಲ ಸಿಗಲಿಲ್ಲ.

ಸಂಕ್ಷಿಪ್ತ ಸ್ಕೋರ್‌
ನ್ಯೂಜಿಲೆಂಡ್‌ 'ಎ' ತಂಡ: 40.2 ಓವರ್‌ಗಳಲ್ಲಿ 167 ರನ್‌ಗಳಿಗೆ ಆಲ್‌ಔಟ್‌ (ಮೈಕಲ್‌ ರಿಪನ್‌ 61, ಜೋ ವಾಕರ್‌ 36; ಶಾರ್ದುಲ್‌ ಠಾಕೂರ್‌ 32ಕ್ಕೆ 4, ಕುಲ್ದೀಪ್‌ ಸೇನ್‌ 30ಕ್ಕೆ 3).
ಭಾರತ 'ಎ' ತಂಡ 31.5 ಓವರ್‌ಗಳಲ್ಲಿ 3 ವಿಕೆಟ್‌ಗೆ 170 ರನ್‌ (ಋತುರಾಜ್ ಗಾಯಕ್ವಾಡ್‌ 41, ರಾಹುಲ್‌ ತ್ರಿಪಾಠಿ 31, ಸಂಜು ಸ್ಯಾಮ್ಸನ್‌ ಅಜೇಯ 28, ರಜತ್‌ ಪಾಟಿದಾರ್‌ ಅಜೇಯ 45; ಲೋಗನ್‌ ವ್ಯಾನ್‌ ಬೀಕ್‌ 38ಕ್ಕೆ 1, ಮ್ಯಾಥ್ಯೂ ಫಿಷರ್‌ 32ಕ್ಕೆ 1, ಮೈಕಲ್‌ ರಿಪನ್‌ 28ಕ್ಕೆ 1).

Ind Vs Nz Shardul Thakur Shine As India A Beat New Zealand A In 1st Odi.