ಸತತ 6ನೇ ಟಿ20 ಸರಣಿ ಗೆದ್ದ ಬಳಿಕ ಕ್ಯಾಪ್ಟನ್‌ ರೋಹಿತ್‌ ಶರ್ಮಾ ಹೇಳಿದ್ದಿದು!

26-09-22 02:29 pm       Source: Vijayakarnataka   ಕ್ರೀಡೆ

ಹಾಲಿ ಟಿ20 ವಿಶ್ವ ಚಾಂಪಿಯನ್ಸ್‌ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಆತಿಥೇಯ ಟೀಮ್ ಇಂಡಿಯಾ 2-1 ಅಂತರದ ಜಯ ದಾಖಲಿಸಿದೆ.

ಹೈದರಾಬಾದ್‌: ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರ ಎದುರು ದಿಟ್ಟ ಪ್ರದರ್ಶನ ಹೊರತಂದ ಟೀಮ್ ಇಂಡಿಯಾ, ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ 3ನೇ ಪಂದ್ಯದಲ್ಲಿ 6 ವಿಕೆಟ್‌ಗಳ ಜಯ ದಾಖಲಿಸುವ ಮೂಲಕ ಮೂರು ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಯನ್ನು 2-1 ಅಂತರದಲ್ಲಿ ಗೆದ್ದುಕೊಂಡಿತು. ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗೆ ಭರದ ಸಿದ್ದತೆಯಲ್ಲಿರುವ ರೋಹಿತ್‌ ಶರ್ಮಾ ಸಾರಥ್ಯದ ಭಾರತ ತಂಡಕ್ಕೆ ಹಾಲಿ ಟಿ20 ವಿಶ್ವ ಚಾಂಪಿಯನ್ನರ ಎದುರು ಸಿಕ್ಕಿರುವ ಈ ಗೆಲುವು ಆತ್ಮವಿಶ್ವಾಸ ಹೆಚ್ಚುವಂತೆ ಮಾಡಿದೆ.

ಅಂದಹಾಗೆ ರೋಹಿತ್‌ ಶರ್ಮಾ, ಕಳೆದ ವರ್ಷ ನವೆಂಬರ್‌ನಲ್ಲಿ ಭಾರತ ಟಿ20 ತಂಡದ ಪೂರ್ಣ ಪ್ರಮಾಣದ ನಾಯಕತ್ವ ಸ್ವೀಕರಿಸಿದ ನಂತರ ಗೆದ್ದುಕೊಟ್ಟ ಸತತ 6ನೇ ದ್ವಿಪಕ್ಷೀಯ ಟಿ20 ಕ್ರಿಕೆಟ್‌ ಸರಣಿ ಇದಾಗಿದೆ. 2021ರ ನವೆಂಬರ್‌ನಲ್ಲಿ ನಾಯಕತ್ವ ತೆಗೆದುಕೊಂಡ ರೋಹಿತ್‌, ನ್ಯೂಜಿಲೆಂಡ್‌, ವೆಸ್ಟ್‌ ಇಂಡೀಸ್‌, ಇಂಗ್ಲೆಂಡ್‌ ಮತ್ತು ಇದೀಗ ಆಸ್ಟ್ರೇಲಿಯಾ ವಿರುದ್ಧದ ಸರಣಿಗಳಲ್ಲಿ ಭಾರತಕ್ಕೆ ಮೇಲುಗೈ ತಂದುಕೊಟ್ಟಿದ್ದಾರೆ. ಆದರೆ, ಏಷ್ಯಾ ಕಪ್‌ 2022 ಟೂರ್ನಿಯಲ್ಲಿ ತಂಡಕ್ಕೆ ಟ್ರೋಫಿ ಗೆದ್ದುಕೊಡುವಲ್ಲಿ ವಿಫಲರಾದರು.

Rohit Sharma elated after India win T20I series vs Australia: Individuals  stepped up for us - Sports News

ಇನ್ನು ಆಸೀಸ್‌ ವಿರುದ್ಧದ ಸರಣಿಯ ಮೂರನೇ ಪಂದ್ಯ ಗೆದ್ದ ಬಳಿಕ ಮಾತನಾಡಿದ ರೋಹಿತ್‌, ಒಂದು ತಂಡವಾಗಿ ಹೋರಾಡಿದ್ದಕ್ಕೆ ಸಿಕ್ಕ ಫಲವನ್ನು ಗುಣಗಾನ ಮಾಡಿದ್ದಾರೆ. ಅಷ್ಟೇ ಅಲ್ಲದೆ ಈ ಸರಣಿಯಲ್ಲಿ ಹಲವು ತಪ್ಪುಗಳನ್ನು ತಿದ್ದುಕೊಳ್ಳಲು ಕೂಡ ಅವಕಾಶ ಲಭ್ಯವಾಗಿದೆ ಎಂದಿದ್ದಾರೆ. ಜೊತೆಗೆ ಗಾಯದ ಸಮಸ್ಯೆಯಿಂದ ಚೇತರಿಸಿ ಕಮ್‌ಬ್ಯಾಕ್‌ ಮಾಡಿರುವ ಹರ್ಷಲ್‌ ಪಟೇಲ್ ಮತ್ತು ಜಸ್‌ಪ್ರೀತ್‌ ಬುಮ್ರಾಗೆ ಶ್ರೇಷ್ಠ ಲಯ ಕಂಡುಕೊಳ್ಳಲು ಕೊಂಚ ಸಮಯ ಬೇಕಿದೆ ಎಂದಿದ್ದಾರೆ.

"ಹೈದರಾಬಾದ್‌ ಯಾವಾಗಲು ವಿಶೇಷ. ಇಲ್ಲಿ ಭಾರತ ತಂಡ ಜಯ ದಾಖಲಿಸಿದ ಅದೆಷ್ಟೋ ನೆನಪುಗಳಿವೆ. ಡೆಕನ್‌ ಚಾರ್ಜಸ್‌ ಪರ ಆಡಿದ ಅನುಭವ ಕೂಡ ಇದೆ. 2-3 ವರ್ಷಗಳ ಬಳಿಕ ಇಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ನಡೆಯುತ್ತಿದ್ದು, ಅದ್ಭುತ ಆಟ ಹೊರತರುವ ಪ್ರಯತ್ನ ಮಾಡಿದೆವು. ಇದರಲ್ಲಿ ಯಶಸ್ಸು ಗಳಿಸಿದೆವು ಕೂಡ. ವಿಶೇಷ ಎಂದರೆ ಈ ಸರಣಿಯ ಪ್ರತಿ ಪಂದ್ಯದಲ್ಲಿ ಬ್ಯಾಟಿಂಗ್‌ ವಿಭಾಗದಲ್ಲಿ ಒಬ್ಬರಲ್ಲ ಒಬ್ಬರು ಜವಾಬ್ದಾರಿ ಹೊತ್ತು ಜಯ ತಂದಿದ್ದೇವೆ. ಆಟಗಾರರ ಈ ಪ್ರದರ್ಶನ ಟೀಮ್‌ ಮ್ಯಾನೇಜ್ಮೆಂಟ್‌ಗೆ ಅತೀವ ಸಂತಸ ತಂದಿದೆ," ಎಂದು ಪಂದ್ಯದ ಬಳಿಕ ಮಾತನಾಡಿದ ರೋಹಿತ್‌ ಶರ್ಮಾ ಹೇಳಿಕೊಂಡಿದ್ದಾರೆ.

Rohit Sharma elated after India win T20I series vs Australia Individuals  stepped up for us - Cricket.Surf

"ಹಲವು ಪ್ರಯೋಗಗಳನ್ನು ಮಾಡುವ ಸಂದರ್ಭದಲ್ಲಿ ತಪ್ಪಾಗುವುದು ಸಹಜ. ಟಿ20 ಕ್ರಿಕೆಟ್‌ನಲ್ಲಿ ಸಣ್ಣ ತಪ್ಪುಗಳಿಂದಲೂ ಸೋಲೆದುರಾಗಬಹುದು. ಆದರೆ, ನಮಗೆ ಸಿಕ್ಕ ಅವಕಾಶಗಳನ್ನು ನಾವು ಬಳಸಿಕೊಂಡೆವು. ದಿಟ್ಟ ಆಟವಾಡಿದ್ದೇವೆ. ಕೆಲವೊಮ್ಮೆ ಯಶಸ್ಸು ಸಿಗದೇ ಇದ್ದರೂ, ಅದರಿಂದ ಸಾಕಷ್ಟು ಪಾಠವಂತೂ ಕಲಿಯುತ್ತೇವೆ. ಈ ಸರಣಿಯಲ್ಲಿ ಸುಧಾರಣೆಗೆ ಹಲವು ಅಂಶಗಳು ಸಿಕ್ಕಿವೆ. ಪ್ರಮುಖವಾಗಿ ಡೆತ್‌ ಓವರ್‌ಗಳಲ್ಲಿನ ಬೌಲಿಂಗ್‌. ಬುಮ್ರಾ ಮತ್ತು ಹರ್ಷಲ್‌ ಈಗಷ್ಟೇ ಗಾಯದಿಂದ ಚೇತರಿಸಿ ಕಮ್‌ಬ್ಯಾಕ್‌ ಮಾಡಿದ್ದು, ತಮ್ಮ ಶ್ರೇಷ್ಠ ಲಯ ಕಂಡುಕೊಳ್ಳಲು ಕೊಂಚ ಸಮಯ ಬೇಕಾಗುತ್ತದೆ. ಶೀಘ್ರವೇ ಲಯಕ್ಕೆ ಮರಳುತ್ತಾರೆಂಬ ಆಶಯವಿದೆ," ಎಂದಿದ್ದಾರೆ.

ಭಾರತ ತಂಡ ಈಗ ತಾಯ್ನಾಡಿನಲ್ಲೇ ದಕ್ಷಿಣ ಆಫ್ರಿಕಾ ಎದುರು ಮೂರು ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಯನ್ನು ಆಡಲಿದೆ. ಸೆಪ್ಟೆಂಬರ್‌ 28ರಂದು ಮೊದಲ ಹಣಾಹಣಿ ನಡೆಯಲಿದ್ದು, ಈ ಸರಣಿ ಮುಗಿದ ಬೆನ್ನಲ್ಲೇ ಅಕ್ಟೋಬರ್‌ 5ರಂದು ಐಸಿಸಿ ಟಿ20 ಕ್ರಿಕೆಟ್‌ ವಿಶ್ವಕಪ್‌ ಟೂರ್ನಿ ಸಲುವಾಗಿ ಭಾರತ ತಂಡ ಆಸ್ಟ್ರೇಲಿಯಾಕ್ಕೆ ಪ್ರಯಾಣ ಬೆಳೆಲಿದೆ.

ಭಾರತ-ಆಸ್ಟ್ರೇಲಿಯಾ ಮೂರನೇ ಟಿ20 ಪಂದ್ಯದ ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 186 ರನ್‌ (ಕ್ಯಾಮರೂನ್ ಗ್ರೀನ್ 52, ಜಾಶ್ ಇಂಗ್ಲಿಸ್‌ 24, ಟಿಮ್‌ ಡೇವಿಡ್‌ 54, ಡೇನಿಯೆಲ್‌ ಸ್ಯಾಮ್ಸ್‌ 28*; ಅಕ್ಷರ್‌ ಪಟೇಲ್ 33ಕ್ಕೆ 3).
ದಕ್ಷಿಣ ಆಫ್ರಿಕಾ: 19.5 ಓವರ್‌ಗಳಲ್ಲಿ 4 ವಿಕೆಟ್‌ಗೆ 187 ರನ್ (ವಿರಾಟ್‌ ಕೊಹ್ಲಿ 63, ಸೂರ್ಯಕುಮಾರ್ ಯಾದವ್‌ 69; ಡೇನಿಯೆಲ್ ಸ್ಯಾಮ್ಸ್‌ 33ಕ್ಕೆ 2).
ಸರಣಿ ಶ್ರೇಷ್ಠ: ಅಕ್ಷರ್‌ ಪಟೇಲ್
ಪಂದ್ಯಶ್ರೇಷ್ಠ: ಸೂರ್ಯಕುಮಾರ್‌ ಯಾದವ್‌

Ind Vs Aus Rohit Sharma Elated After India Win T20i Series Against Australia.