ಆಸ್ಟ್ರೇಲಿಯಾ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಭಾರತಕ್ಕೆ 6 ರನ್‌ ರೋಚಕ ಜಯ!

17-10-22 02:01 pm       Source: Vijayakarnataka   ಕ್ರೀಡೆ

ಕೆ.ಎಲ್‌ ರಾಹುಲ್‌(57) ಹಾಗೂ ಸೂರ್ಯಕುಮಾರ್‌ ಯಾದವ್‌(50) ಅವರ ಅರ್ಧಶತಕಗಳು ಮತ್ತು ಕೊನೆಯ ಓವರ್‌ನಲ್ಲಿ ಮೊಹಮ್ಮದ್‌ ಶಮಿ(4 ಕ್ಕೆ 3) ಅವರ ಮಾರಕ ದಾಳಿಯ ನೆರವಿನಿಂದ ಭಾರತ ತಂಡ, ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 6 ರನ್‌ಗಳ ರೋಚಕ ಗೆಲುವು ಸಾಧಿಸಿತು.

ಬ್ರಿಸ್ಬೇನ್‌: ಕೆ.ಎಲ್‌ ರಾಹುಲ್‌(57) ಹಾಗೂ ಸೂರ್ಯಕುಮಾರ್‌ ಯಾದವ್‌(50) ಅವರ ಅರ್ಧಶತಕಗಳು ಮತ್ತು ಕೊನೆಯ ಓವರ್‌ನಲ್ಲಿ ಮೊಹಮ್ಮದ್‌ ಶಮಿ(4 ಕ್ಕೆ 3) ಅವರ ಮಾರಕ ದಾಳಿಯ ನೆರವಿನಿಂದ ಭಾರತ ತಂಡ, ಅಭ್ಯಾಸ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 6 ರನ್‌ಗಳ ರೋಚಕ ಗೆಲುವು ಸಾಧಿಸಿತು. ಆ ಮೂಲಕ 2022ರ ಟಿ20 ವಿಶ್ವಕಪ್‌ ಟೂರ್ನಿಗೆ ವಿಶ್ವಾಸವನ್ನು ಹೆಚ್ಚಿಸಿಕೊಂಡಿತು.

ಸೋಮವಾರ ಇಲ್ಲಿನ ದಿ ಗಬ್ಬಾ ಸ್ಟೇಡಿಯಂನಲ್ಲಿ ಭಾರತ ತಂಡ ನೀಡಿದ್ದ 187 ರನ್ ಗುರಿ ಹಿಂಬಾಲಿಸಿದ್ದ ಆಸ್ಟ್ರೇಲಿಯಾ ತಂಡಕ್ಕೆ ಮಿಚೆಲ್‌ ಮಾರ್ಷ್‌(35 ರನ್‌ ) ಹಾಗೂ ಆರೋನ್ ಫಿಂಚ್‌(76 ರನ್‌) ಜೋಡಿ ಉತ್ತಮ ಅಡಿಪಾಯ ಹಾಕಿಕೊಟ್ಟಿತ್ತು. ಆದರೆ, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ ಆಸ್ಟ್ರೇಲಿಯಾ ತಂಡ ಕೊನೆಯ ಓವರ್‌ವರೆಗೂ ಹೋರಾಟ ನಡೆಸಿ ಕೊದಲೆಳೆಯ ಅಂತರದಲ್ಲಿ ಸೋಲು ಒಪ್ಪಿಕೊಂಡಿತು.

ಆರಂಭದಲ್ಲಿ ಅಬ್ಬರಿಸಿದ ಮಿಚೆಲ್‌ ಮಾರ್ಷ್‌ ಕೇವಲ 18 ಎಸೆತಗಳಲ್ಲಿ 35 ರನ್ ಸಿಡಿಸಿ ವಿಕೆಟ್‌ ಒಪ್ಪಿಸಿದರು. ನಂತರ ತಂಡದ ಜವಾಬ್ದಾರಿ ಹೊತ್ತುಕೊಂಡ ನಾಯಕ ಆರೋನ್‌ ಫಿಂಚ್‌ ಭಾರತ ತಂಡದ ಬೌಲರ್‌ಗಳಿಗೆ ಬೆವರಿಳಿಸಿದರು. ಎದುರಿಸಿದ 54 ಎಸೆತಗಳಲ್ಲಿ 4 ಸಿಕ್ಸರ್‌ ಹಾಗೂ 7 ಬೌಂಡರಿಗಳೊಂದಿಗೆ 76 ರನ್‌ ಸಿಡಿಸಿದರು. ಆ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ಕೊನೆಯ ಎರಡು ಓವರ್‌ಗಳಲ್ಲಿ ಕೇವಲ 16 ರನ್‌ ಅಗತ್ಯವಿತ್ತು.

ಅದರಂತೆ ಆಸ್ಟ್ರೇಲಿಯಾ ತಂಡ ಗೆಲುವು ಪಡೆಯುವುದು ಬಹುತೇಕ ಖಚಿತ ಎಂದೇ ಭಾವಿಸಲಾಗಿತ್ತು. ಆದರೆ, ಹರ್ಷಲ್‌ ಪಟೇಲ್‌ ಅವರ ನಿಧಾನಗತಿಯ ಎಸೆತವನ್ನು ಅರಿತುಕೊಳ್ಳುವಲ್ಲಿ ವಿಫಲರಾದ ಆರೋನ್‌ ಫಿಂಚ್‌ 19ನೇ ಓವರ್‌ ಮೊದಲನೇ ಎಸೆತದಲ್ಲಿ ಕ್ಲೀನ್‌ ಬೌಲ್ಡ್‌ ಆದರು. ನಂತರ ಎರಡನೇ ಎಸೆತದಲ್ಲಿ ಟಿಮ್ ಡೇವಿಡ್‌ ಅವರನ್ನು ವಿರಾಟ್‌ ಕೊಹ್ಲಿ ಅದ್ಭುತವಾಗಿ ರನ್‌ಔಟ್‌ ಮಾಡಿದರು. ಇದು ಪಂದ್ಯದ ಪಾಲಿಗೆ ಟರ್ನಿಂಗ್‌ ಪಾಯಿಂಟ್‌ ಆಯಿತು. 19ನೇ ಓವರ್‌ನಲ್ಲಿ ಹರ್ಷಲ್‌ ಪಟೇಲ್‌ ಕೇವಲ 5 ರನ್‌ ನೀಡುವ ಮೂಲಕ ಆಸ್ಟ್ರೇಲಿಯಾ ತಂಡವನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದರು.

Shami's emotional note after replacing Bumrah in India's T20 World Cup  squad | Cricket - Hindustan Times

ಅಂತಿಮವಾಗಿ ಓವರ್‌ನಲ್ಲಿ ಬೌಲಿಂಗ್‌ಗೆ ಬಂದ ಮೊಹಮ್ಮದ್‌ ಶಮಿ ಆರಂಭಿಕ ಎರಡು ಎಸೆತಗಳಲ್ಲಿ ತಲಾ ಎರಡೆರಡು ರನ್‌ಗಳನ್ನು ನೀಡಿದರು. ಆದರೆ, ಕೊನೆಯ 4 ಎಸೆತಗಳಲ್ಲಿ ಒಂದು ರನ್‌ಔಟ್‌ ಸೇರಿದಂತೆ ಒಟ್ಟು 4 ವಿಕೆಟ್‌ಗಳನ್ನು ಕಬಳಿಸಿ ಭಾರತ ತಂಡಕ್ಕೆ ಕೇವಲ 6 ರನ್‌ ರೋಚಕ ಗೆಲುವು ತಂದುಕೊಟ್ಟರು. ಭಾರತದ ಪರ ಮೊಹಮ್ಮದ್‌ ಶಮಿ 4 ವಿಕೆಟ್‌ ಕಿತ್ತರೆ, ಭುವನೇಶ್ವರ್‌ ಕುಮಾರ್‌ 2 ವಿಕೆಟ್‌ ಪಡೆದುಕೊಂಡರು.

Wicket - KL Rahul - Australia v India ICC T20WC 2022

ಕೆ.ಎಲ್‌ ರಾಹುಲ್‌ ಆರ್ಭಟ: ಟಾಸ್‌ ಗೆದ್ದು ಎದುರಾಳಿ ಭಾರತ ತಂಡವನ್ನು ಮೊದಲು ಬ್ಯಾಟಿಂಗ್‌ಗೆ ಆಹ್ವಾನಿಸಿದ ಆಸ್ಟ್ರೇಲಿಯಾ ತಂಡದ ನಾಯಕ ಆರೋನ್‌ ಫಿಂಚ್‌ ಅವರ ನಿರ್ಧಾರವನ್ನು ಆರಂಭದಲ್ಲಿಯೇ ಕೆ.ಎಲ್‌ ರಾಹುಲ್‌ ತಲೆ ಕೆಳಗಾಗುವಂತೆ ಮಾಡಿದರು. ಆರಂಭದಿಂದಲೇ ಸ್ಪೋಟಕ ಬ್ಯಾಟ್‌ ಮಾಡಿದ ಕೆ.ಎಲ್‌ ರಾಹುಲ್‌, ಆಸೀಸ್‌ ಬೌಲರ್‌ಗಳಿಗೆ ಬೆವರಿಳಿಸಿದರು. ಎದುರಿಸಿದ ಕೇವಲ 33 ಎಸೆತಗಳಲ್ಲಿ ಭರ್ಜರಿ ಮೂರು ಸಿಕ್ಸರ್ ಹಾಗೂ ಆರು ಬೌಂಡರಿಗಳೊಂದಿಗೆ 57 ರನ್‌ ಚಚ್ಚಿದ್ದರು. ಆ ಮೂಲಕ ಪವರ್‌ಪ್ಲೇನಲ್ಲಿ ಭಾರತ ತಂಡದ ಮೊತ್ತವನ್ನು ಏರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಕೆ.ಎಲ್‌ ರಾಹುಲ್ ವಿಕೆಟ್‌ ಒಪ್ಪಿಸಿದ ಬಳಿಕ ನಾಯಕ ರೋಹಿತ್‌ ಶರ್ಮಾ (14 ರನ್‌) ಕೂಡ ನಿರ್ಗಮಿಸಿದರು. 19 ರನ್‌ ಗಳಿಸಿ ವಿರಾಟ್‌ ಕೊಹ್ಲಿ ವಿಕೆಟ್‌ ಒಪ್ಪಿಸಿದರೆ, ಹಾರ್ದಿಕ್‌ ಪಾಂಡ್ಯ ಕೇವಲ 2 ರನ್‌ಗೆ ಔಟ್‌ ಆದರು. ಆದರೆ, ಮಧ್ಯಮ ಕ್ರಮಾಂಕದಲ್ಲಿ ತಮ್ಮ ಲಯವನ್ನು ಮುಂದುವರಿಸಿದ ಸೂರ್ಯಕುಮಾರ್‌ ಯಾದವ್‌ 33 ಎಸೆತಗಳಲ್ಲಿ ಒಂದು ಸಿಕ್ಸರ್‌ 6 ಬೌಂಡರಿಗಳೊಂದಿಗೆ 50 ರನ್‌ ಚಚ್ಚಿದರು. ಕೊನೆಯ ಹಂತದಲ್ಲಿ ದಿನೇಶ್‌ ಕಾರ್ತಿಕ್‌ 14 ಎಸೆತಗಳಲ್ಲಿ 20 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು.

ಸಂಕ್ಷಿಪ್ತ ಸ್ಕೋರ್‌
ಭಾರತ: 20 ಓವರ್‌ಗಳಿಗೆ 186-7 (ಕೆ.ಎಲ್‌ ರಾಹುಲ್‌ 57, ಸೂರ್ಯಕುಮಾರ್‌ ಯಾದವ್‌ 50, ದಿನೇಶ್‌ ಕಾರ್ತಿಕ್‌ 20; ಕೇನ್‌ ರಿಚರ್ಡ್ಸನ್‌ 30ಕ್ಕೆ 4. ಮಿಚೆಲ್‌ ಸ್ಟಾರ್ಕ್‌ 20ಕ್ಕೆ 1, ಆಷ್ಟನ್‌ ಎಗರ್‌ 36ಕ್ಕೆ 1)

ಆಸ್ಟ್ರೇಲಿಯಾ: 20 ಓವರ್‌ಗಳಿಗೆ 180-10 (ಆರೋನ್‌ ಫಿಂಚ್‌ 76, ಮಿಚೆಲ್‌ ಮಾರ್ಷ್‌ 35, ಗ್ಲೆನ್‌ ಮ್ಯಾಕ್ಸ್‌ವೆಲ್‌ 23; ಮೊಹಮ್ಮದ್‌ ಶಮಿ 4 ಕ್ಕೆ 3, ಭುವನೇಶ್ವರ್‌ ಕುಮಾರ್‌ 20ಕ್ಕೆ 2)

ಇತ್ತಂಡಗಳ ಪ್ಲೇಯಿಂಗ್‌ ಇಲೆವೆನ್‌

ಭಾರತ: ರೋಹಿತ್‌ ಶರ್ಮಾ(ನಾಯಕ), ಕೆ.ಎಲ್‌ ರಾಹುಲ್, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್‌ ಯಾದವ್‌, ಹಾರ್ದಿಕ್‌ ಪಾಂಡ್ಯ, ದಿನೇಶ್‌ ಕಾರ್ತಿಕ್‌(ವಿ.ಕೀ), ಅಕ್ಷರ್‌ ಪಟೇಲ್‌, ರವಿಚಂದ್ರನ್‌ ಅಶ್ವಿನ್‌, ಹರ್ಷಲ್‌ ಪಟೇಲ್‌, 10 ಭುವನೇಶ್ವರ್‌ ಕುಮಾರ್‌,ಅರ್ಷದೀಪ್‌ ಸಿಂಗ್‌

ಆಸ್ಟ್ರೇಲಿಯಾ: ಆರೋನ್ ಫಿಂಚ್ (ನಾಯಕ), ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೋಯ್ನಿಸ್‌, ಟಿಮ್ ಡೇವಿಡ್, ಜಾಶ್ ಇಂಗ್ಲಿಸ್ (ವಿ.ಕೀ), ಪ್ಯಾಟ್ ಕಮಿನ್ಸ್, ಆಷ್ಟನ್ ಅಗರ್, ಮಿಚೆಲ್ ಸ್ಟಾರ್ಕ್, ಕೇನ್ ರಿಚರ್ಡ್ಸನ್

ಪಂದ್ಯದ ವಿವರ
ಭಾರತ ಆಸ್ಟ್ರೇಲಿಯಾ ನಡುವಣ ಅಭ್ಯಾಸ ಪಂದ್ಯ
ದಿನಾಂಕ: ಅ. 17, 2022
ಸಮಯ: ಬೆಳಗ್ಗೆ 09: 30ಕ್ಕೆ (ಭಾರತೀಯ ಕಾಲಮಾನ)
ಸ್ಥಳ: ದಿ ಗಬ್ಬಾ ಸ್ಟೇಡಿಯಂ, ಬ್ರಿಸ್ಬೇನ್‌
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್‌

T20 World Cup 2022 Australia Vs India, Warm Up Match Live Score Updates From The Gabba, Brisbane.