ಹಾರ್ದಿಕ್‌ ಔಟ್‌-ಹೂಡ ಇನ್? ನೆದರ್ಲೆಂಡ್ಸ್‌ ಕದನಕ್ಕೆ ಭಾರತ ತಂಡದಲ್ಲಿ ಒಂದು ಬದಲಾವಣೆ ಸಾಧ್ಯತೆ!

26-10-22 01:37 pm       Source: Vijayakarnataka   ಕ್ರೀಡೆ

ಪಾಕಿಸ್ತಾನ ವಿರುದ್ಧ 4 ವಿಕೆಟ್‌ಗಳ ರೋಚಕ ಗೆಲುವು ಪಡೆದು 2022ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಶುಭಾರಂಭ ಕಂಡಿರುವ ಭಾರತ ತಂಡ ಗುರುವಾರ ನೆದರ್ಲೆಂಡ್ಸ್‌ ವಿರುದ್ಧ ತನ್ನ ಎರಡನೇ ಪಂದ್ಯದಲ್ಲಿ ಸೆಣಸಲಿದೆ.

ಪಾಕಿಸ್ತಾನ ವಿರುದ್ಧ ಕೊನೆಯ ಎಸೆತದಲ್ಲಿ 4 ವಿಕೆಟ್‌ ರೋಚಕ ಗೆಲುವು ಸಾಧಿಸಿದ್ದ ರೋಹಿತ್‌ ಶರ್ಮಾ ನಾಯಕತ್ವದ ಭಾರತ ತಂಡ ಗುರುವಾರ ನೆದರ್ಲೆಂಡ್ಸ್‌ ವಿರುದ್ಧ ತನ್ನ ಎರಡನೇ ಪಂದ್ಯದಲ್ಲಿ ಕಾದಾಟ ನಡೆಸಲು ಸಜ್ಜಾಗುತ್ತಿದೆ. ಉಭಯ ತಂಡಗಳ ನಡುವಣ ಈ ಪಂದ್ಯಕ್ಕೆ ಇಲ್ಲಿನ ಸಿಡ್ನಿ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ವೇದಿಕೆ ಸಿದ್ದವಾಗಿದೆ.

ಭಾನುವಾರ ಮೆಲ್ಬೋರ್ನ್‌ ಕ್ರಿಕೆಟ್‌ ಗ್ರೌಂಡ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಟಾಸ್‌ ಗೆದ್ದು ಎದುರಾಳಿ ಪಾಕಿಸ್ತಾನ ತಂಡವನ್ನು ಮೊದಲ ಬ್ಯಾಟಿಂಗ್‌ಗೆ ರೋಹಿತ್‌ ಶರ್ಮಾ ಆಹ್ವಾನಿಸಿದ್ದರು. ಅದರಂತೆ ಪಾಕಿಸ್ತಾನ ತಂಡಕ್ಕೆ ಪವರ್‌ಪ್ಲೇನಲ್ಲಿ ಅರ್ಷದೀಪ್ ಸಿಂಗ್ ಆರಂಭಿಕ ಆಘಾತ ನೀಡಿದ್ದರು. ಆದರೆ, ಮಧ್ಯಮ ಓವರ್‌ಗಳಲ್ಲಿ ಶಾನ್‌ ಮಸೂದ್‌ ಹಾಗು ಇಫ್ತಿಖಾರ್‌ ಅಹ್ಮದ್‌ ಅವರ ಅರ್ಧಶತಕಗಳ ಬಲದಿಂದ ಪಾಕಿಸ್ತಾನ ತನ್ನ ಪಾಲಿನ 20 ಓವರ್‌ಗಳಿಗೆ 8 ವಿಕೆಟ್‌ ನಷ್ಟಕ್ಕೆ 159 ರನ್‌ ಗಳಿಸಿತ್ತು.

ಬಳಿಕ ಗುರಿ ಹಿಂಬಾಲಿಸಿದ್ದ ಭಾರತ ತಂಡ ಕೇವಲ 31 ರನ್‌ಗಳಿಗೆ ಪ್ರಮುಖ 4 ವಿಕೆಟ್‌ಗಳನ್ನು ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತ್ತು. ಆದರೆ, ಜವಾಬ್ದಾರಿಯುತ ಬ್ಯಾಟ್‌ ಮಾಡಿದ್ದ ವಿರಾಟ್‌ ಕೊಹ್ಲಿ 53 ಎಸೆತಗಳಲ್ಲಿ ಅಜೇಯ 82 ರನ್‌ ಹಾಗೂ ಹಾರ್ದಿಕ್‌ ಪಾಂಡ್ಯ ಜೊತೆ 5ನೇ ವಿಕೆಟ್‌ಗೆ 113 ರನ್ ನಿರ್ಣಾಯಕ ಜೊತೆಯಾಟವಾಡುವ ಮೂಲಕ ಭಾರತ ತಂಡಕ್ಕೆ 4 ವಿಕೆಟ್‌ ರೋಚಕ ಗೆಲುವು ತಂದುಕೊಟ್ಟಿದ್ದರು.

Put That Topic to Rest': Hardik Pandya to Presenter on Question About His  Fitness

ಇದೇ ವಿಶ್ವಾಸದಲ್ಲಿ ನೆದರ್ಲೆಂಡ್ಸ್‌ ವಿರುದ್ಧ ದೊಡ್ಡ ಅಂತರದಲ್ಲಿ ಗೆಲುವು ಪಡೆದು ರನ್‌ ರೇಟ್‌ ಅನ್ನು ಉತ್ತಮ ಪಡಿಸಿಕೊಳ್ಳಲು ಟೀಮ್‌ ಇಂಡಿಯಾ ಎದುರು ನೋಡುತ್ತಿದೆ. ಮತ್ತೊಂದೆಡೆ ನೆದರ್ಲೆಂಡ್ಸ್‌ ತಂಡ ತನ್ನ ಆರಂಭಿಕ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 9 ರನ್‌ಗಳಿಂದ ಸೋಲು ಅನುಭವಿಸಿತ್ತು. ಆದರೆ, ಈ ಪಂದ್ಯದಲ್ಲಿ ಭಾರತಕ್ಕೆ ಕಠಿಣ ಸವಾಲು ನೀಡಲು ನೆದರ್ಲೆಂಡ್ಸ್‌ ಪ್ರಯತ್ನಿಸಲಿದೆ.

ಭಾರತ ತಂಡಕ್ಕೆ ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧ ದೊಡ್ಡ ಪಂದ್ಯವಿದೆ. ಈ ಸಲುವಾಗಿ ಆಟಗಾರರನ್ನು ಬಹುತೇಕ ಫ್ರೆಶ್‌ ಆಗಿ ಉಳಿಸಿಕೊಳ್ಳಲು ಟೀಮ್‌ ಮ್ಯಾನೇಜ್‌ಮೆಂಟ್‌ ಬಯಸಬಹುದು. ಈ ನಿಟ್ಟಿನಲ್ಲಿ ಹಾರ್ದಿಕ್ ಪಾಂಡ್ಯಗೆ ವಿಶ್ರಾಂತಿ ನೀಡಿ, ಐದನೇ ಕ್ರಮಾಂಕದಲ್ಲಿ ದೀಪಕ್‌ ಹೂಡ ಅವರನ್ನು ಆಡಿಸಬಹುದು. ಹಾಗಾಗಿ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಒಂದು ಬದಲಾವಣೆ ತರಬಹುದು.

Team India's lucky charm Deepak Hooda sets world record | Cricket News |  Onmanorama

 ಪಿಚ್‌ ರಿಪೋರ್ಟ್‌: ಆಸ್ಟ್ರೇಲಿಯಾದಲ್ಲಿನ ಇತರೆ ಪಿಚ್‌ಗಳಿಗೆ ಹೋಲಿಕೆ ಮಾಡಿದರೆ, ಇಲ್ಲಿನ ಸಿಡ್ನಿ ಕ್ರಿಕೆಟ್‌ ಮೈದಾನದ ಪಿಚ್‌ ಬ್ಯಾಟಿಂಗ್‌ ಸ್ನೇಋಹಿಯಾಗಿದೆ. ಬ್ಯಾಟ್ಸ್‌ಮನ್‌ಗಳು, ಸ್ಪಿನ್ನರ್‌ಗಳು ಹಾಗೂ ವೇಗದ ಬೌಲರ್‌ಗಳಿಗೆ ಇಲ್ಲಿನ ವಿಕೆಟ್‌ ಹೊಂದಾಣಿಕೆಯಾಗಲಿದೆ. ಈ ಪಂದ್ಯದಲ್ಲಿ 160 ರಿಂದ 170 ರನ್‌ಗಳನ್ನು ನಿರೀಕ್ಷಿಸಬಹುದಾಗಿದೆ. ಈ ಮೈದಾನದಲ್ಲಿ ಇಲ್ಲಿಯವರೆಗೂ ನಡೆದಿರುವ 7 ಟಿ20ಐ ಪಂದ್ಯಗಳಲ್ಲಿ ಮೊದಲು ಬ್ಯಾಟ್‌ ಮಾಡಿದ ತಂಡಗಳು 2ರಲ್ಲಿ ಗೆಲುವು ಪಡೆದಿದ್ದರೆ, ಚೇಸಿಂಗ್‌ ತಂಡಗಳು 4ರಲ್ಲಿ ಗೆಲುವು ಪಡೆದಿವೆ.

ಭಾರತ: ರೋಹಿತ್‌ ಶರ್ಮಾ(ನಾಯಕ), ಕೆ.ಎಲ್‌ ರಾಹುಲ್‌, ವಿರಾಟ್‌ ಕೊಹ್ಲಿ, ಸೂರ್ಯಕುಮಾರ್ ಯಾದವ್‌, ಹಾರ್ದಿಕ್‌ ಪಾಂಡ್ಯ/ದೀಪಕ್‌ ಹೂಡ, ದಿನೇಶ್‌ ಕಾರ್ತಿಕ್‌ (ವಿ.ಕೀ), ಅಕ್ಷರ್ ಪಟೇಲ್‌, ಆರ್‌ ಅಶ್ವಿನ್‌, ಭುವನೇಶ್ವರ್‌ ಕುಮಾರ್‌, ಮೊಹಮ್ಮದ್‌ ಶಮಿ, ಅರ್ಷದೀಪ್‌ ಸಿಂಗ್

ನೆದರ್ಲೆಂಡ್ಸ್‌: ಮ್ಯಾಕ್ಸ್‌ ಒಡೌಡ್‌, ವಿಕ್ರಮ್‌ಜಿತ್‌ ಸಿಂಗ್‌, ಬಸ್‌ ಡಿ ಲೀಡೆ, ಟಾಮ್‌ ಕೂಪರ್‌, ಕಾಳಿನ್‌ ಅಕಿರ್ಮನ್, ಸ್ಕಾಟ್‌ ಎಡ್ವರ್ಡ್ಸ್ (ನಾಯಕ, ವಿ.ಕೀ), ಲಗಾನ್ ವಾನ್‌ ಬೀಕ್‌, ಟಿಮ್‌ ಫ್ರಿಂಗ್ಲ್‌, ಶರಿಝ್‌ ಅಹ್ಮದ್‌, ಫ್ರೆಡ್‌ ಕ್ಲಾಸೆನ್‌, ಪಾಲ್‌ ವಾನ್‌ ಮೀಕೆರನ್‌

ಪಂದ್ಯದ ವಿವರ
ಟಿ20 ವಿಶ್ವಕಪ್‌ 2022
ಸೂಪರ್‌-12ರ ಪಂದ್ಯ
ಭಾರತ vs ನೆದರ್ಲೆಂಡ್ಸ್
ದಿನಾಂಕ: ಅ. 27, 202
ಸಮಯ: ಮಧ್ಯಾನ 12: 30ಕ್ಕೆ (ಬಾರತೀಯ ಕಾಲಮಾನ)
ಸ್ಥಳ: ಸಿಡ್ನಿ ಕ್ರಿಕೆಟ್‌ ಗ್ರೌಂಡ್‌, ಸಿಡ್ನಿ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

T20 World Cup 2022: Ind Vs Ned Match Preview, Indias Probable Playing Xi Vs Netherlands, Pitch Report, Date, Time.