ಪುರುಷರಂತೆ ಮಹಿಳಾ ಆಟಗಾರ್ತಿಯರಿಗೂ ಸಮಾನ ವೇತನ, ಮಹತ್ವದ ನಿರ್ಧಾರ ಪ್ರಕಟಿಸಿದ ಬಿಸಿಸಿಐ!

27-10-22 02:30 pm       Source: Vijayakarnataka   ಕ್ರೀಡೆ

ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯು (ಬಿಸಿಸಿಐ) ಲಿಂಗ ಸಮಾನತೆಯ ಬಗ್ಗೆ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದೆ.

ಮುಂಬೈ: ಭಾರತ ಪುರುಷರ ತಂಡ ಪಡೆಯುವ ಪಂದ್ಯದ ಸಂಭಾವನೆಯಷ್ಟೆ ಇನ್ನು ಮುಂದೆ ಮಹಿಳಾ ಆಟಗಾರ್ತಿಯರು ಕೂಡ ಸಮಾನ ವೇತನವನ್ನು ಪಡೆದುಕೊಳ್ಳಲಿದ್ದಾರೆಂದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ಗುರುವಾರ ಐತಿಹಾಸಿಕ ನಿರ್ಧಾರವನ್ನು ಪ್ರಕಟಿಸಿದೆ. ಆ ಮೂಲಕ ಮಂಡಳಿಯಲ್ಲಿದ್ದ ಲಿಂಗಾಧಾರಿತ ವೇತನ ತಾರತಮ್ಯವನ್ನು ಅಂತ್ಯಗೊಳಿಸಲಾಗಿದೆ.

ಗುರುವಾರ ಟ್ವಿಟರ್‌ ಸೇರಿದಂತೆ ತಮ್ಮ ಅಧಿಕೃತ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ ಶಾ ಅವರು ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ.

India women cricketers to earn same match fee as male counterparts, BCCI  secretary Jay Shah confirms

"ತಾರತಮ್ಯವನ್ನು ಹೊಗಲಾಡಿಸಲು ಬಿಸಿಸಿಐ ಮುಂದಾಗಿದೆ ಎಂದು ಪ್ರಕಟಿಸಲು ನನಗೆ ತುಂಬಾ ಸಂತೋಷವಾಗುತ್ತಿದೆ. ಬಿಸಿಸಿಐ ಮಹಿಳಾ ಆಟಗಾರ್ತಿಯರಿಗೆ ಸಮಾನ ವೇತನ ನೀತಿಯನ್ನು ನಾವು ಜಾರಿಗೆ ತಂದಿದ್ದೇವೆ. ಲಿಂಗಾಧಾರಿತ ವೇತನ ಅಸಮಾನತೆಯನ್ನು ನಿವಾರಿಸುವ ನಿಟ್ಟಿನಲ್ಲಿ ಪುರುಷರಿಗೆ ನೀಡುವಷ್ಟೇ ಪಂದ್ಯದ ಸಂಭಾವನೆಯನ್ನು ಮಹಿಳಾ ಆಟಗಾರ್ತಿಯರಿಗೆ ನೀಡುತ್ತೇವೆ," ಎಂದು ಬಿಸಿಸಿಐ ಕಾರ್ಯದರ್ಶಿ ಟ್ವೀಟ್‌ ಮಾಡಿದ್ದಾರೆ.

"ಭಾರತ ತಂಡದ ಪುರುಷ ಆಟಗಾರರು ಪಡೆಯುವ ಪಂದ್ಯದ ಸಂಭಾವನೆಯಷ್ಟೇ ಇನ್ನು ಮುಂದೆ ಮಹಿಳಾ ಆಟಗಾರ್ತಿಯರು ಪಡೆದುಕೊಳ್ಳಲಿದ್ದಾರೆ. ಟೆಸ್ಟ್ ಪಂದ್ಯಕ್ಕೆ 15 ಲಕ್ಷ ರೂ. , ಏಕದಿನ ಪಂದ್ಯಕ್ಕೆ 6 ಲಕ್ಷ ರೂ ಹಾಗೂ ಟಿ20ಐ ಪಂದ್ಯಕ್ಕೆ 3 ಲಕ್ಷ ರೂ. ಸಮಾನ ವೇತನವನ್ನು ಭಾರತ ಮಹಿಳಾ ತಂಡದ ಆಟಗಾರ್ತಿಯರು ಪಡೆದುಕೊಳ್ಳಲಿದ್ದಾರೆ. ಮಹಿಳಾ ತಂಡಕ್ಕೆ ಸಮಾನ ವೇತನ ನೀಡಲು ನಾವು ಬದ್ದರಾಗಿದ್ದೇವೆ ಹಾಗೂ ಇದಕ್ಕೆ ಬೆಂಬಲ ನೀಡಿದ ಅಪೆಕ್ಸ್‌ ಕೌನ್ಸಿಲ್‌ಗೆ ಧನ್ಯವಾದ ಹೇಳಲು ಬಯಸುತ್ತೇನೆ. ಜೈ ಹಿಂದ್‌," ಎಂದು ಜಯ ಶಾ ಮತ್ತೊಂದು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ನ್ಯೂಜಿಲೆಂಡ್‌ ಬಳಿಕ ರಾಷ್ಟ್ರೀಯ ಕ್ರಿಕೆಟ್‌ ಮಂಡಳಿಯಲ್ಲಿ ಸಮಾನ ವೇತನ ಘೋಷಿಸಿದ ಎರಡನೇ ದೇಶ ಎಂಬ ಖ್ಯಾತಿಗೆ ಭಾರತ ಭಾಜನವಾಗಿದೆ. ಆಗಸ್ಟ್‌ 1 ರಂದು ಬ್ಲ್ಯಾಕ್‌ಕ್ಯಾಪ್ಸ್‌ ತನ್ನ ಪುರುಷರಿಗೆ ನೀಡುವಷ್ಟೇ ಸಮಾನ ವೇತನವನ್ನು ಮಹಿಳೆಯರುಗೂ ಪ್ರಕಟಿಸಿತ್ತು. ಇದೀಗ ಬಿಸಿಸಿಐ ಇದೇ ರೀತಿಯ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದಿದ್ದ 2022ರ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ, ಇಂಗ್ಲೆಂಡ್‌ ವಿರುದ್ಧ 3-0 ಅಂತರದಲ್ಲಿ ಏಕದಿನ ಸರಣಿ ಕ್ಲೀನ್‌ ಸ್ವೀಪ್‌ ಹಾಗೂ ಏಳನೇ ಬಾರಿ ಏಷ್ಯಾ ಕಪ್‌ ಟೂರ್ನಿಯಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡ ಬೆನ್ನಲ್ಲೆ ಭಾರತ ಮಹಿಳಾ ಕ್ರಿಕೆಟ್‌ ತಂಡಕ್ಕೆ ಬಿಸಿಸಿಐ ಸಮಾನ ವೇತನ ಘೋಷಿಸಿರುವುದು ಶ್ಲಾಘನೀಯವಾದದ್ದು.

Women Players To Be Paid Same Match Fee As Male Counterparts Bcci Takes Major Step Towards Gender Equality.