ಗೋಲ್ಡನ್ ಬಾಲ್ ಗೆಲ್ಲುವ ಬೌಲರ್‌ಗಳ ರೇಸ್‍ನಲ್ಲಿ ವಾನಿಂದು ಹಸರಂಗ!

02-11-22 12:18 pm       Source: Vijayakarnataka   ಕ್ರೀಡೆ

2022ರ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಶ್ರೀಲಂಕಾವು ಅರ್ಹತಾ ಸುತ್ತಿನಲ್ಲೇ ಕ್ರಿಕೆಟ್ ಶಿಶು ನಮೀಬಿಯಾ ವಿರುದ್ಧ ಸೋಲು ಕಂಡು ಸೂಪರ್-12 ಹಂತ ತಲುಪಲ್ಲಿ ಎಡವುತ್ತದೆ ಎಂದು ಲೆಕ್ಕಾಚಾರ ಹಾಕಲಾಗಿತ್ತು.

ಅಫಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಶ್ರೀಲಂಕಾ ಗೆಲುವು ಸಾಧಿಸುವ ಮೂಲಕ ಸೆಮಿಫೈನಲ್‌ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಮಂಗಳವಾರ ಟಾಸ್ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ಅಫಘಾನಿಸ್ತಾನ, ವಾನಿಂದು ಹಸರಂಗ ( 3/13) ಅವರ ಸ್ಪಿನ್ ಮೋಡಿಗೆ ನಲುಗಿ 144 ರನ್‍ಗಳ ಸಾಧಾರಣ ಮೊತ್ತಕ್ಕೆ ಸೀಮಿತವಾಗಿತ್ತು.

ಬಳಿಕ ಗುರಿ ಬೆನ್ನಟ್ಟಿದ ಶ್ರೀಲಂಕಾ, ಧನಂಜಯ ಡಿಸಿಲ್ವಾ (ಅಜೇಯ 66 ರನ್, 6 ಬೌಂಡರಿ, 2 ಸಿಕ್ಸರ್) ಅವರ ಅರ್ಧಶತಕದ ನೆರವಿನಿಂದ 18.3 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 148 ರನ್ ಗಳಿಸಿ ಗೆಲುವು ದಕ್ಕಿಸಿಕೊಂಡಿತು. ಆ ಮೂಲಕ ಒಟ್ಟು 4 ಅಂಕಗಳೊಂದಿಗೆ ಸೆಮಿಫೈನಲ್‌ಗೆ ಅರ್ಹತೆ ಪಡೆಯುವ ಆಶಭಾವನೆಯನ್ನು ಲಂಕಾ ಉಳಿಸಿಕೊಂಡಿದೆ.

ಮಾಜಿ ಚಾಂಪಿಯನ್ ಶ್ರೀಲಂಕಾ ಏಷ್ಯಾ ಕಪ್ ಗೆಲ್ಲುವ ಮೂಲಕ ವಿಶ್ವಕಪ್‍ ಟೂರ್ನಿ ಅರ್ಹತಾ ಸುತ್ತಿನ ಪಂದ್ಯಕ್ಕೆ ಭರ್ಜರಿ ಪ್ರವೇಶ ಪಡೆದಿತ್ತು. ಆದರೆ, ಕ್ರಿಕೆಟ್ ಕೂಸು ನಮೀಬಿಯಾ ವಿರುದ್ಧ ಸೋಲು ಕಂಡು ಆಘಾತ ಅನುಭವಿಸಿತ್ತಾದರೂ ವಾನಿಂದು ಹಸರಂಗ ಅವರ ಉತ್ತಮ ಬೌಲಿಂಗ್‌ ಪ್ರದರ್ಶನದಿಂದಾಗಿ ಸೂಪರ್-12ರ ಹಂತ ತಲುಪಿತ್ತು.

wanindu hasaranga, T20 World Cup: ಗೋಲ್ಡನ್ ಬಾಲ್ ಗೆಲ್ಲುವ ಬೌಲರ್‌ಗಳ ರೇಸ್‍ನಲ್ಲಿ  ವಾನಿಂದು ಹಸರಂಗ! - icc t20 world cup 2022: sri lanka star spinner wanindu  hasaranga in t20 world cup golden ball race - Vijaya Karnataka

ಈ ಹಂತದಲ್ಲಿಯೂ ತಮ್ಮ ಸ್ಪಿನ್ ಮೋಡಿಯಿಂದ ತಂಡಕ್ಕೆ ಗೆಲುವು ತಂದುಕೊಡುತ್ತಿರುವುದರ ಜೊತೆಗೆ ಈ ಬಾರಿ ಅತಿ ಹೆಚ್ಚು ವಿಕೆಟ್ ಪಡೆಯುವ ಬೌಲರ್‌ಗಳ ರೇಸ್‌ನಲ್ಲಿ ವಾನಿಂದು ಹಸರಂಗ ಮುಂಚೂಣಿಯಲ್ಲಿದ್ದಾರೆ. ಆ ಮೂಲಕ ಗೋಲ್ಡನ್ ಬಾಲ್ ತನ್ನದಾಗಿಸಿಕೊಳ್ಳುವ ಹಾದಿಯಲ್ಲಿದ್ದಾರೆ.

ಐಪಿಎಲ್‍ನಲ್ಲಿ ಜಬರ್‌ದಸ್ತ್ ಬೌಲಿಂಗ್: 2022ರ ಐಪಿಎಲ್ ಟೂರ್ನಿಯಲ್ಲಿ 10.75 ಕೋಟಿ ರೂ. ಗಳಿಗೆ ಆರ್‌ಸಿಬಿ ಪಾಲಾಗಿದ್ದ ವಾನಿಂದು ಹಸರಂಗ ತಂಡದಲ್ಲಿ ಯುಜ್ವೇಂದ್ರ ಚಹಲ್ ಅವರ ಸ್ಥಾನವನ್ನು ತುಂಬಿದ್ದರು. ಸನ್‍ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ 18 ರನ್ ನೀಡಿ ಪ್ರಮುಖ 5 ವಿಕೆಟ್ ಪಡೆದಿದ್ದರು ಹಾಗೂ ತಂಡವನ್ನು ಎಲಿಮಿನೇಟರ್ ಹಂತ ತಲುಪಿಸುವಲ್ಲಿ ಆರ್‌ಸಿಬಿಗೆ ನೆರವಾಗಿದ್ದರು. ಯುಜ್ವೇಂದ್ರ ಚಹಲ್ (27 ವಿಕೆಟ್) ನಂತರ 2022ರ ಐಪಿಎಲ್‌ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್‌ ಆಗಿ ವಾನಿಂದು ಹಸರಂಗ (26 ವಿಕೆಟ್‌) ಗುರುತಿಸಿಕೊಂಡಿದ್ದರು.

T20 World Cup: Kusal Mendis, Wanindu Hasaranga star as SL beat Netherlands  by 16 runs; confirm Super 12 spot

ಟೂರ್ನಿ ಶ್ರೇಷ್ಠ ಪ್ರಶಸ್ತಿ: ಐಪಿಎಲ್‍ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಶ್ರೀಲಂಕಾದ ವಾನಿಂದು ಹಸರಂಗ, ಯುಎಇಯಲ್ಲಿ ನಡೆದಿದ್ದ ಏಷ್ಯಾಕಪ್ ಟಿ20 ಟೂರ್ನಿಯಲ್ಲೂ ಬೌಲಿಂಗ್ ಜಾದು ನಡೆಸಿದ್ದರು. ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ದ ಬೌಲ್‌ ಮಾಡಿದ್ದ 4 ಓವರ್‌ಗಳಲ್ಲಿ 27 ರನ್ ನೀಡಿ 3 ಪ್ರಮುಖ ವಿಕೆಟ್ ಪಡೆದುಕೊಂಡಿದ್ದರು. ಆ ಮೂಲಕ ಶ್ರೀಲಂಕಾ ತಂಡಕ್ಕೆ ಚಾಂಪಿಯನ್ ಪಟ್ಟ ದಕ್ಕಿಸಿಕೊಡುವಲ್ಲಿ ನೆರವಾಗಿದ್ದರು. ಒಟ್ಟಾರೆ ಏಷ್ಯಾ ಕಪ್‌ ಟೂರ್ನಿಯಲ್ಲಿ 6 ಪಂದ್ಯಗಳಿಂದ ಒಟ್ಟು 9 ವಿಕೆಟ್ ಕಬಳಿಸಿದ್ದರು. ಆ ಮೂಲಕ ಈ ಟೂರ್ನಿಯಲ್ಲಿ ಭುವನೇಶ್ವರ್‌ ಕುಮಾರ್‌(11 ವಿಕೆಟ್‌) ಬಳಿಕ ಅತಿ ಹೆಚ್ಚು ವಿಕೆಟ್ ಪಡೆದ 2ನೇ ಬೌಲರ್ ಆಗಿದ್ದರು.

2021ರ ಗೋಲ್ಡನ್ ಬಾಲ್ ವಿನ್ನರ್: ಯುಎಇ ಹಾಗೂ ಒಮಾನ್‌ ಆತಿಥ್ಯದಲ್ಲಿ ನಡೆದಿದ್ದ 2021ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ವಾನಿಂದು ಹಸರಂಗ 8 ಪಂದ್ಯಗಳಿಂದ 16 ವಿಕೆಟ್‍ಗಳನ್ನು ಕಬಳಿಸುವ ಮೂಲಕ ಗೋಲ್ಡನ್ ಬಾಲ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದರು. ಪ್ರಸ್ತುತ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ 2022ರ ಐಸಿಸಿ ಟಿ20 ವಿಶ್ವಕಪ್‍ ಟೂರ್ನಿಯಲ್ಲಿಯೂ 7 ಪಂದ್ಯಗಳಿಂದ 13 ವಿಕೆಟ್ ಗಳಿಸಿರುವ ವಾನಿಂದು ಹಸರಂಗ ಈ ಬಾರಿಯೂ ಗೋಲ್ಡನ್ ಬಾಲ್ ಗೆಲ್ಲುವ ರೇಸ್‍ನಲ್ಲಿ ಮುಂಚೂಣಿಯಲ್ಲಿದ್ದಾರೆ.

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇದುವರೆಗೂ ಪಾಕಿಸ್ತಾನದ ಉಮರ್ ಗುಲ್ (13 ವಿಕೆಟ್-2007 ,13 ವಿಕೆಟ್‌-2009) ಎರಡು ಬಾರಿ, ಆಸ್ಟ್ರೇಲಿಯಾದ ಡ್ರಿಕ್ ನ್ಯಾನಿಸ್ (14 ವಿಕೆಟ್-2010), ಶ್ರೀಲಂಕಾದ ಅಜಂತಾ ಮೆಂಡಿಸ್ (15 ವಿಕೆಟ್-2012), ದಕ್ಷಿಣ ಆಫ್ರಿಕಾದ ಇಮ್ರಾನ್ ತಾಹೀರ್ ( 12 ವಿಕೆಟ್-2014), ಅಫಘಾನಿಸ್ತಾನದ ಮೊಹಮ್ಮದ್ ನಬಿ (13 ವಿಕೆಟ್-2016), ಶ್ರೀಲಂಕಾದ ವಾನಿಂದು ಹಸರಂಗ (16 ವಿಕೆಟ್-2021) ಗೋಲ್ಡನ್ ಬಾಲ್ ವಿಜೇತರಾಗಿದ್ದಾರೆ.

ICC T20 World Cup 2022 Sri Lanka Star Spinner Wanindu Hasaranga In T20 World Cup Golden Ball Race.