ನೆಟ್ಸ್‌ನಲ್ಲಿ ಕೈಗೆ ಚೆಂಡು ತಗುಲಿಸಿಕೊಂಡ ರೋಹಿತ್‌ ಶರ್ಮಾ! ವಿಡಿಯೋ

08-11-22 02:32 pm       Source: Vijayakarnataka   ಕ್ರೀಡೆ

ಇಂಗ್ಲೆಂಡ್‌ ವಿರುದ್ದ ಟಿ20 ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್ ನಿಮಿತ್ತ ನೆಟ್ಸ್‌ನಲ್ಲಿ ಬ್ಯಾಟಿಂಗ್‌ ಅಭ್ಯಾಸ ನಡೆಸುತ್ತಿದ್ದ ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮಾ, ತಮ್ಮ ಕೈಗೆ ಚೆಂಡು ತಗುಲಿಸಿಕೊಂಡಿದ್ದಾರೆ.

ಇಂಗ್ಲೆಂಡ್‌ ವಿರುದ್ಧ ಇಲ್ಲಿನ ಅಡಿಲೇಡ್‌ ಓವಲ್‌ ಮೈದಾನದಲ್ಲಿ ನಡೆಯುವ ಎರಡನೇ ಸೆಮಿಫೈನಲ್‌ ಪಂದ್ಯದ ನಿಮಿತ್ತ ಮಂಗಳವಾರ ನೆಟ್ಸ್‌ನಲ್ಲಿ ಬ್ಯಾಟಿಂಗ್‌ ಅಭ್ಯಾಸ ನಡೆಸುತ್ತಿದ್ದ ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಅವರು ತಮ್ಮ ಕೈಗೆ ಚೆಂಡು ತಗುಲಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಹತ್ವದ ಪಂದ್ಯಕ್ಕೂ ಮುನ್ನ ಟೀಮ್‌ ಇಂಡಿಯಾಗೆ ಗಾಯದ ಭೀತಿ ಎದುರಾಗಿದೆ.

ಥ್ರೋ ಡೌನ್‌ ಸ್ಪೆಷಲಿಸ್ಟ್‌ ಎಸ್‌ ರಘು ಅವರಿಂದ ಚೆಂಡನ್ನು ಹಾಕಿಸಿಕೊಂಡು ಬ್ಯಾಟಿಂಗ್‌ ಅಭ್ಯಾಸ ನಡೆಸುತ್ತಿದ್ದ ರೋಹಿತ್‌ ಶರ್ಮಾ ಅವರು ತಮ್ಮ ಬಲಗೈ ಮಂದೋಳಿಗೆ ಚೆಂಡು ತಗುಲಿಸಿಕೊಂಡರು. ನೋವಿಗೆ ತಾಳಲಾದರೆ ಅವರು ತಕ್ಷಣ ಬ್ಯಾಟಿಂಗ್‌ ನಿಲ್ಲಿಸಿ ಹೊರಗಡೆ ತೆರಳಿದರು.

ನಂತರ ತಂಡದ ಫಿಸಿಯೊ ಕಮಲೇಶ್‌ ಜೈನ್ ಹಾಗೂ ತಂಡದ ವೈದ್ಯರಾದ ಚಾರ್ಲ್ಸ್‌ ಮಿಂಝ್‌ ಸ್ಥಳಕ್ಕೆ ಆಗಮಿಸಿ ರೋಹಿತ್‌ ಶರ್ಮಾ ಅವರ ಕೈಯನ್ನು ಪರಿಶೀಲಿಸಿದರು ಹಾಗೂ ಚೆಂಡು ತಗುಲಿದ ಜಾಗಕ್ಕೆ ಐಸ್‌ ಇಟ್ಟರು. ಕೆಲ ನಿಮಿಷಗಳ ಕಾಲ ಚೇರ್‌ ಮೇಲೆ ಕುಳಿತುಕೊಂಡು ಟೀಮ್‌ ಇಂಡಿಯಾ ನಾಯಕ ವಿಶ್ರಾಂತಿ ಪಡೆದರು.

Rohit Sharma escapes serious injury after being hit on hand at nets in  Adelaide - myKhel

ಒಟ್ಟು 40 ನಿಮಿಷಗಳ ಕಾಲ ವಿಶ್ರಾಂತಿ ಪಡೆದ ರೋಹಿತ್‌ ಶರ್ಮಾ, ಮತ್ತೆ ಬ್ಯಾಟಿಂಗ್‌ ಅಭ್ಯಾಸ ನಡೆಸಲು ತೀರ್ಮಾನಿಸಿದರು. ಮತ್ತೊರ್ವ ಥ್ರೋ ಡೌನ್‌ ಸ್ಪಷಲಿಸ್ಟ್‌ ದಯಾನಂದ ಗರಾಣಿ ಅವರು ರೋಹಿತ್‌ ಶರ್ಮಾ ಅವರಿಗೆ ಬ್ಯಾಟಿಂಗ್ ಅಭ್ಯಾಸಕ್ಕೆ ನೆರವು ನೀಡಿದರು. ಆರಂಭದಲ್ಲಿ ಕೈಯಿಂದ ಚೆಂಡನ್ನು ಹಾಕಿಸಿಕೊಂಡ ರೋಹಿತ್‌ ಶರ್ಮಾ, ಬಳಿಕ ಬಾಲ್‌ ಥ್ರೋ ಸಲಕರಣೆಯಿಂದ ಚೆಂಡನ್ನು ಹಾಕುವಂತೆ ಸೂಚಿಸಿದರು.

ರಘು ಎಲ್ಲಿ ಹೋದರು?

ರೋಹಿತ್‌ ಶರ್ಮಾ ನೆಟ್ಸ್‌ಗೆ ಮರಳಿ ಬ್ಯಾಟಿಂಗ್‌ ಅಭ್ಯಾಸ ನಡೆಸುತ್ತಿದ್ದ ವೇಳೆ ,ರಘು ಎಲ್ಲಿ? ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಬೌಲಿಂಗ್‌ ಕೋಚ್‌ ಪರಾಸ್‌ ಮಾಂಬ್ರಿ, 'ರೋಹಿತ್‌ ಶರ್ಮಾ ಬೈದಿದ್ದಕ್ಕೆ ಅವರು ಹೊರಗಡೆ ಹೋಗಿದ್ದಾರೆ' ಎಂದರು. ಇದಕ್ಕೆ ರೋಹಿತ್‌ ಶರ್ಮಾ, 'ಇಲ್ಲ ನಾನು ಆ ರೀತಿ ಅವರನ್ನು ಬೈದಿಲ್ಲ, ಅವರನ್ನು ನೆಟ್ಸ್‌ಗೆ ಮರಳುವಂತೆ ಹೇಳಿ', ಎಂದು ಹೇಳಿದರು.

ನಂತರ ದಿನೇಶ್‌ ಕಾರ್ತಿಕ್‌ ಬ್ಯಾಟಿಂಗ್‌ ಅಭ್ಯಾಸ ನಡೆಸುತ್ತಿದ್ದ ವೇಳೆ ಮಾತನಾಡಿದ ರೋಹಿತ್‌ ಶರ್ಮಾ, ರಘು ಆರಂಭಿಕ ಎಸೆತ ಯಾರ್ಕರ್ ಹಾಕಿದರು. ನಂತರ ಶಾರ್ಟ್‌ ಬಾಲ್‌ ಹಾಕಿದರು. ಇದರಿಂದ ವಿಚಲಿತನಾದ ನಾನು ತಗುಲಿಸಿಕೊಂಡೆ. ಅಂದಹಾಗೆ ಬ್ಯಾಕ್‌ ಲೆನ್ತ್‌ ಹಾಕಬೇಕಾಗಿತ್ತು. ಆದರೆ, ಮಿಸ್‌ ಆಗಿದೆ ಎಂದು ತಿಳಿಸಿದರು.

ಇಂಗ್ಲೆಂಡ್‌-ಭಾರತ ನಡುವೆ ಕಾದಾಟ: ಸೂಪರ್-12ರ ಹಂತದಲ್ಲಿ ಅತ್ಯುತ್ತಮ ಪ್ರದರ್ಶನ ತೋರುವ ಮೂಲಕ 2022ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ಗೆ ಪ್ರವೇಶಿಸಿರುವ ಭಾರತ ತಂಡ ಎರಡನೇ ಚುಟುಕು ವಿಶ್ವಕಪ್‌ ಮುಡಿಗೇರಿಸಿಕೊಳ್ಳಲು ಎದುರು ನೋಡುತ್ತಿದೆ. ತಮ್ಮ ಬಹುದಿನಗಳ ಕನಸನ್ನು ಈಡೇರಿಸಿಕೊಳ್ಳಲು ಭಾರತ ತಂಡಕ್ಕೆ ಇನ್ನೂ ಎರಡು ಹೆಜ್ಜೆ ಮಾತ್ರ ಬಾಕಿ ಇದೆ.

ಟೂರ್ನಿಯ ಎರಡನೇ ಗುಂಪಿನಲ್ಲಿ ಓಟ್ಟು 5 ಪಂದ್ಯಗಳಲ್ಲಿ ಕಣಕ್ಕೆ ಇಳಿದಿದ್ದ ಭಾರತ ತಂಡ 4ರಲ್ಲಿ ಗೆಲುವು ಕಂಡು ಇನ್ನುಳಿದ ಒಂದು ಪಂದ್ಯದಲ್ಲಿ ಸೋಲು ಅನುಭವಿಸಿತ್ತು. ಒಟ್ಟಾರೆ 8 ಅಂಕಗಳೊಂದಿಗೆ ಪಾಯಿಂಟ್ಸ್‌ ಟೇಬಲ್‌ನಲ್ಲಿ ಅಗ್ರ ಸ್ಥಾನದ ಮೂಲಕ ಸೂಪರ್‌-12ರ ಹಂತವನ್ನು ಮುಗಿಸಿರುವ ಭಾರತ ತಂಡ, ನವೆಂಬರ್‌ 10 ರಂದು ಗುರುವಾರ ಇಂಗ್ಲೆಂಡ್‌ ವಿರುದ್ಧ ಎರಡನೇ ಸೆಮಿಫೈನಲ್‌ ಆಡಲಿದೆ. ಉಭಯ ತಂಡಗಳ ನಡುವಣ ಪಂದ್ಯಕ್ಕೆ ಅಡಿಲೇಡ್‌ ಓವಲ್‌ನಲ್ಲಿ ವೇದಿಕೆ ಸಿದ್ದವಾಗಿದೆ.

ಐಸಿಸಿ ಟಿ20 ವಿಶ್ವಕಪ್ 2022 ಎರಡನೇ ಸೆಮಿಫೈನಲ್‌
ಭಾರತ vs ಇಂಗ್ಲೆಂಡ್‌
ದಿನಾಂಕ: ನ. 10, 2022
ಸಮಯ: ಮಧ್ಯಾನ 01: 30ಕ್ಕೆ (ಭಾರತೀಯ ಕಾಲಮಾನ)
ಸ್ಥಳ: ಅಡಿಲೇಡ್‌ ಓವಲ್‌, ಅಡಿಲೇಡ್‌
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

Ind Vs Eng Team India Skipper Rohit Sharma Escapes Injury After Hit On Hand Ahead Of Semi-Final Vs England.