ನ್ಯೂಜಿಲೆಂಡ್‌ ವಿರುದ್ಧದ ಮೊದಲನೇ ಟಿ20ಗೆ ಭಾರತ ಸಂಭಾವ್ಯ XI ಹೀಗಿದೆ!

17-11-22 02:12 pm       Source: Vijayakarnataka   ಕ್ರೀಡೆ

ಆಸ್ಟ್ರೇಲಿಯಾ ಆತಿಥ್ಯದ 2022ರ ಐಸಿಸಿ ಟಿ20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ ಹಂತದಲ್ಲಿ ತನ್ನ ಅಭಿಯಾನ ಮುಗಿಸಿದ್ದ ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳು ಶುಕ್ರವಾರದಿಂದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಮುಖಾಮುಖಿಯಾಗಲಿವೆ.

ಟಿ20 ವಿಶ್ವಕಪ್‌ ಟೂರ್ನಿಯ ಸೆಮಿಫೈನಲ್‌ ಹಂತದಲ್ಲಿ ಸೋಲುವ ಮೂಲಕ ತನ್ನ ಅಭಿಯಾನವನ್ನು ಅಂತ್ಯಗೊಳಿಸಿದ್ದ ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳು ಶುಕ್ರವಾರದಿಂದ ಮೂರು ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಯಲ್ಲಿ ಮುಖಾಮುಖಿ ಕಾದಾಟ ನಡೆಸಲು ಸಜ್ಜಾಗುತ್ತಿವೆ.

ರೋಹಿತ್‌ ಶರ್ಮಾ, ವಿರಾಟ್‌ ಕೊಹ್ಲಿ, ಕೆ.ಎಲ್‌ ರಾಹುಲ್ ಸೇರಿದಂತೆ ಹಲವು ಹಿರಿಯ ಆಟಗಾರರು ಟಿ20 ವಿಶ್ವಕಪ್‌ ಟೂರ್ನಿಯ ಬಳಿಕ ವಿಶ್ರಾಂತಿ ಪಡೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯೂಜಿಲೆಂಡ್‌ ಟಿ20 ಸರಣಿಯಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಲು ಯುವ ಆಟಗಾರರಿಗೆ ಅವಕಾಶ ಲಭಿಸಲಿದೆ.

ರೋಹಿತ್‌ ಶರ್ಮಾ ಅನುಪಸ್ಥಿತಿಯಲ್ಲಿ ಸ್ಟಾರ್‌ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಈ ಟಿ20 ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಹಾರ್ದಿಕ್‌ ಪಾಂಡ್ಯ ಅವರ ಟಿ20 ತಂಡದ ನಾಯಕತ್ವದ ಭವಿಷ್ಯ ಈ ಸರಣಿಯನ್ನು ಅವಲಂಬಿಸಿದೆ. ಈ ಸರಣಿಯಲ್ಲಿ ಅವರು ಟಿ20 ಸರಣಿ ಗೆದ್ದರೆ, ಮುಂದಿನ ದಿನಗಳಲ್ಲಿ ಭಾರತ ಚುಟುಕು ತಂಡಕ್ಕೆ ನಿಯಮಿತ ನಾಯಕನಾಗಬಹುದು.

Image

ಓಪನರ್ಸ್ ಆಯ್ಕೆಯ ಬಗ್ಗೆ ಗೊಂದಲ: ಕೆ.ಎಲ್‌ ರಾಹುಲ್‌ ಹಾಗೂ ರೋಹಿತ್‌ ಶರ್ಮಾ ಇಬ್ಬರೂ ವಿರಾಮ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಕಿವೀಸ್‌ ವಿರುದ್ಧ ಟಿ20 ಸರಣಿಯಲ್ಲಿ ಯಾವ ಜೋಡಿಗೆ ಇನಿಂಗ್ಸ್‌ ಆರಂಭಿಸಲು ಅವಕಾಶ ನೀಡಬೇಕೆಂಬ ಬಗ್ಗೆ ವಿವಿಎಸ್‌ ಲಕ್ಷ್ಮಣ್‌ ಮಾರ್ಗದರ್ಶನದ ಟೀಮ್‌ ಮ್ಯಾನೇಜ್‌ಮೆಂಟ್‌ಗೆ ತಲೆ ನೋವು ಉಂಟಾಗಿದೆ. ಇಶಾನ್‌ ಕಿಶನ್‌, ಶುಭಮನ್‌ ಗಿಲ್‌, ಸೂರ್ಯಕುಮಾರ್‌ ಯಾದವ್‌, ರಿಷಭ್‌ ಪಂತ್‌, ಸಂಜು ಸ್ಯಾಮ್ಸನ್‌ ಹಾಗೂ ದೀಪಕ್‌ ಹೂಡ ಸೇರಿ ಆರು ಮಂದಿ ಓಪನಿಂಗ್‌ ಆಯ್ಕೆಯ ರೇಸ್‌ನಲ್ಲಿದ್ದಾರೆ . ಇದರಲ್ಲಿ ಯಾವ ಜೋಡಿಗೆ ಇನಿಂಗ್ಸ್ ಆರಂಭಿಸಲು ಅವಕಾಶ ಮಾಡಿಕೊಡಬೇಕೆಂಬುದು ಟೀಮ್‌ ಮ್ಯಾನೇಜ್‌ಮೆಂಟ್‌ ತಲೆ ನೋವು ಉಂಟಾಗಿದೆ.

Image

ಹಲವು ಪಂದ್ಯಗಳಲ್ಲಿ ಭಾರತ ತಂಡದ ಪರ ಇನಿಂಗ್ಸ್ ಆರಂಭಿಸಿರುವ ಅನುಭವ ಹೊಂದಿರುವ ಇಶಾನ್‌ ಕಿಶನ್‌ ಅವರನ್ನು ಮೊದಲನೇ ಪಂದ್ಯದಲ್ಲಿ ಇನಿಂಗ್ಸ್‌ ಆರಂಭಿಸಲು ಅವಕಾಶ ನೀಡುವುದು ಬಹುತೇಕ ಖಚಿತ. ಇವರ ಜೊತೆಗೆ ಅನುಭವಿ ಸೂರ್ಯಕುಮಾರ್‌ ಯಾದವ್‌ ಅವರನ್ನು ಕ್ರೀಸ್‌ಗೆ ಕಳುಹಿಸುವ ಸಾಧ್ಯತೆ ಇದೆ.

ಮೂರನೇ ಕ್ರಮಾಂಕದಲ್ಲಿ ಶ್ರೇಯಸ್‌ ಅಯ್ಯರ್‌, ನಾಲ್ಕನೇ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್‌ ಹಾಗೂ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಆಗಿ ಐದನೇ ಕ್ರಮಾಂಕದಲ್ಲಿ ರಿಷಭ್‌ ಪಂತ್ ಆಡಬಹುದು. ಇನ್ನು ಆಲ್‌ರೌಂಡರ್‌ಗಳಾಗಿ ಹಾರ್ದಿಕ್‌ ಪಾಂಡ್ಯ ಹಾಗೂ ವಾಷಿಂಗ್ಟನ್ ಸುಂದರ್‌ ಕಾಣಿಸಿಕೊಳ್ಳಲಿದ್ದಾರೆ. ಯುಜ್ವೇಂದ್ರ ಚಹಲ್‌ ಏಕೈಕ ಸ್ಪಿನ್ನರ್‌ ಆಗಿ ಆಡಬಹುದು. ಭುವನೇಶ್ವರ್‌ ಕುಮಾರ್‌ ಜೊತೆಗೆ ಮೊಹಮ್ಮದ್‌ ಸಿರಾಜ್‌ ಹಾಗೂ ಯುವ ವೇಗಿ ಉಮ್ರಾನ್‌ ಮಲಿಕ್‌ ವೇಗಿಗಳಾಗಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ.

ಪಿಚ್‌ ರಿಪೋರ್ಟ್‌: ಭಾರತ ಹಾಗೂ ನ್ಯೂಜಿಲೆಂಡ್‌ ತಂಡಗಳು ಮೊದಲನೇ ಪಂದ್ಯವಾಡುವ ವೆಲ್ಲಿಂಗ್ಟನ್‌ನ ಸ್ಕೈ ಕ್ರೀಡಾಂಗಣದ ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿದೆ. ಚೆಂಡು ಹೆಚ್ಚಿನ ಬೌನ್ಸ್‌ ಇರುವ ಹಿನ್ನೆಲೆಯಲ್ಲಿ ಬ್ಯಾಟ್‌ಗೆ ಸುಲಭವಾಗಿ ಸಿಗಲಿದೆ. ಅಂದಹಾಗೆ ಈ ವಿಕೆಟ್‌ನಲ್ಲಿ ಮಧ್ಯಮ ಓವರ್‌ಗಳಲ್ಲಿ ಸ್ಪಿನ್ನರ್‌ಗಳು ಪರಿಣಾಮಕಾರಿಯಾಗಬಹುದು. ಈ ಮೈದಾನದಲ್ಲಿ ನಡೆದಿರುವ 15 ಟಿ20ಐ ಪಂದ್ಯಗಳ ಪೈಕಿ, 8 ಬಾರಿ ಚೇಸಿಂಗ್‌ ತಂಡಗಳು ಗೆಲುವು ಪಡೆದಿವೆ. ಈ ಮೈದಾನದ ಸರಾಸರಿ ಮೊತ್ತ 160 ರಿಂದ 170 ರನ್‌ಗಳಾಗಿದೆ.

ನ್ಯೂಜಿಲೆಂಡ್‌ ವಿರುದ್ಧ ಮೊದಲನೇ ಟಿ20 ಪಂದ್ಯಕ್ಕೆ ಭಾರತ ತಂಡ ಸಂಭಾವ್ಯ ಪ್ಲೇಯಿಂಗ್‌ XI

1. ಇಶಾನ್‌ ಕಿಶನ್‌ (ಓಪನರ್‌)
2. ಸೂರ್ಯಕುಮಾರ್‌ ಯಾದವ್ (ಓಪನರ್)
3. ಶ್ರೇಯಸ್‌ ಅಯ್ಯರ್‌ (ಬ್ಯಾಟ್ಸ್‌ಮನ್‌)
4.ಸಂಜು ಸ್ಯಾಮ್ಸನ್‌
5. ರಿಷಭ್‌ ಪಂತ್‌ (ವಿ.ಕೀ)
6.ಹಾರ್ದಿಕ್‌ ಪಾಂಡ್ಯ (ನಾಯಕ, ಆಲ್‌ರೌಂಡರ್‌)
7. ವಾಷಿಂಗ್ಟನ್‌ ಸುಂದರ್‌ (ಆಲ್‌ರೌಂಡರ್‌)
8. ಭುವನೇಶ್ವರ್‌ ಕುಮಾರ್‌ (ವೇಗಿ)
9.ಮೊಹಮ್ಮದ್‌ ಸಿರಾಜ್‌ (ವೇಗಿ)
10. ಉಮ್ರಾನ್‌ ಮಲಿಕ್‌(ವೇಗಿ)
11.ಯುಜ್ವೇಂದ್ರ ಚಹಲ್‌ (ಸ್ಪಿನ್ನರ್‌)

ಪಂದ್ಯದ ವಿವರ

ಮೊದಲನೇ ಟಿ20 ಪಂದ್ಯ
ಭಾರತ vs ನ್ಯೂಜಿಲೆಂಡ್‌
ದಿನಾಂಕ: ನವೆಂಬರ್‌ 18, 2022
ಸಮಯ: ಮಧ್ಯಾನ 12ಕ್ಕೆ (ಭಾರತೀಯ ಕಾಲಮಾನ)
ಸ್ಥಳ: ಸ್ಕೈ ಸ್ಟೇಡಿಯಂ, ವೆಲ್ಲಿಂಗ್ಟನ್‌(ನ್ಯೂಜಿಲೆಂಡ್‌)
ನೇರ ಪ್ರಸಾರ: ದೂರದರ್ಶನ ಸ್ಪೋರ್ಟ್ಸ್‌ (ಡಿಡಿ ಸ್ಪೋರ್ಟ್ಸ್‌)

Ind Vs Nz 2022 Ind Vs Nz T20 Preview, India's Probable Playing Xi, Pitch Report, Ind Vs Nz 1st T20, Date, Time.