'ಇದು ನಿಮ್ಮ ಅಸಾಧಾರಣ ಇನಿಂಗ್ಸ್‌' -ಸಿಕ್ಕಾಪಟ್ಟೆ ಟ್ರೋಲ್ ಆದ ರಿಷಭ್‌ ಪಂತ್!

30-11-22 12:17 pm       Source: Vijayakarnataka   ಕ್ರೀಡೆ

ನ್ಯೂಜಿಲೆಂಡ್‌ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿಯೂ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ ರಿಷಭ್‌ ಪಂತ್‌ ಅವರನ್ನು ಅಭಿಮಾನಿಗಳು ಟ್ವಿಟರ್‌ ಸೇರಿದಂತೆ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್‌ ಮಾಡಿದ್ದಾರೆ.

ನ್ಯೂಜಿಲೆಂಡ್‌ ವಿರುದ್ಧ ಮೂರನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ ವೈಫಲ್ಯ ಅನುಭವಿಸಿದರು. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಟ್ವಿಟರ್‌ ಸೇರಿದಂತೆ ಸೋಶಿಯಲ್‌ ಮೀಡಿಯಾದಲ್ಲಿ ರಿಷಭ್‌ ಪಂತ್ ಅವರನ್ನು ಸಿಕ್ಕಾಪಟ್ಟೆ ಟ್ರೋಲ್‌ ಮಾಡಿದ್ದಾರೆ.

ಮೊದಲನೇ ಏಕದಿನ ಪಂದ್ಯದಲ್ಲಿ ನಾಲ್ಕನೇ ಕ್ರಮಾಂಕಲ್ಲಿ ಆಡಿದ್ದ ರಿಷಭ್‌ ಪಂತ್‌ 15 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದ್ದರು. ಆದರೆ, ಇದೇ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ನಿರ್ಣಾಯಕ 36 ರನ್‌ ಗಳಿಸಿದ್ದರು ಹಾಗೂ ಶ್ರೇಯಸ್‌ ಅಯ್ಯರ್‌ ಅವರ ಜೊತೆ ಮುರಿಯದ 5ನೇ ವಿಕೆಟ್‌ಗೆ 94 ರನ್‌ಗಳ ಪ್ರಮುಖ ಜೊತೆಯಾಟವನ್ನು ಆಡಿದ್ದರು.

ಆದರೆ, ಎರಡನೇ ಪಂದ್ಯಕ್ಕೆ ಸಂಜು ಸ್ಯಾಮ್ಸನ್‌ ಅವರನ್ನು ಕೈ ಬಿಟ್ಟು ದೀಪಕ್‌ ಹೂಡ ಅವರಿಗೆ ಅವಕಾಶ ನೀಡಲಾಗಿತ್ತು. ಅಂದಹಾಗೆ ಈ ಪಂದ್ಯದಲ್ಲಿ ಔಟ್‌ ಫಾರ್ಮ್ ರಿಷಭ್‌ ಪಂತ್‌ ಅವರನ್ನು ಕೈ ಬಿಟ್ಟು ಸಂಜು ಸ್ಯಾಮ್ಸನ್ ಅವರನ್ನು ಆಡುವ ಬಳಗದಲ್ಲಿ ಉಳಿಸಿಕೊಳ್ಳಬಹುದಿತ್ತು. ಆದರೆ, ಈ ಕೆಲಸವನ್ನು ಟೀಮ್‌ ಮ್ಯಾನೇಜ್‌ಮೆಂಟ್‌ ಮಾಡಿರಲಿಲ್ಲ. ಇದಕ್ಕೂ ಮುನ್ನ ಟಿ20 ಸರಣಿಯಲ್ಲಿಯೂ ರಿಷಭ್‌ ಪಂತ್‌ ವೈಫಲ್ಯ ಅನುಭವಿಸಿದ್ದರು.

ಇದರಿಂದ ಕೆರಳಿದ ಅಭಿಮಾನಿಗಳು ಸೇರಿದಂತೆ ಕೆಲ ಮಾಜಿ ಆಟಗಾರರು ಎರಡನೇ ಪಂದ್ಯದಲ್ಲಿ ರಿಷಭ್‌ ಪಂತ್ ಕೂರಿಸಿ ಸಂಜು ಸ್ಯಾಮ್ಸನ್ ಅವರನ್ನು ಉಳಿಸಿಕೊಳ್ಳಬಹುದಿತ್ತು ಎಂದು ಹೇಳಿದ್ದರು. ಆದರೆ, ಮೂರನೇ ಏಕದಿನ ಪಂದ್ಯಕ್ಕೂ ಅದೇ ಆಡುವ ಬಳಗವನ್ನು ಶಿಖರ್‌ ಧವನ್‌ ಕಣಕ್ಕೆ ಇಳಿಸಿದರು. ಮತ್ತೊಂದು ಅವಕಾಶ ಪಡೆದುಕೊಂಡಿದ್ದ ರಿಷಭ್‌ ಪಂತ್‌ ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಉತ್ತಮ ಅವಕಾಶವಿತ್ತು. ಆದರೆ, ಸಿಕ್ಕ ಅವಕಾಶವನ್ನು ಕೈಚೆಲ್ಲಿಕೊಂಡರು.

ಡ್ಯಾರಿಲ್‌ ಮಿಚೆಲ್‌ ಎಸೆತದಲ್ಲಿ ಪುಲ್‌ ಮಾಡಲು ಪ್ರಯತ್ನಿಸಿದ ರಿಷಭ್‌ ಪಂತ್‌ ಬೌಂಡರಿ ಲೈನ್‌ ಬಳಿ ಗ್ಲೆನ್‌ ಫಿಲಿಪ್ಸ್‌ಗೆ ಕ್ಯಾಚಿತ್ತರು. ಆ ಮೂಲಕ ನಿರಾಶೆಯೊಂದಿಗೆ ಪೆವಿಲಿಯನ್‌ಗೆ ಮರಳಿದರು. ಈ ಪಂದ್ಯದಲ್ಲಿ 16 ಎಸೆತಗಳನ್ನು ಎದುರಿಸಿದ್ದ ಪಂತ್‌, ಎರಡು ಬೌಂಡರಿಯೊಂದಿಗೆ 10 ರನ್‌ಗಳಿಗೆ ಸೀಮಿತರಾದರು.

ಮೂರನೇ ಏಕದಿನ ಪಂದ್ಯದಲ್ಲಿ ರಿಷಭ್‌ ಪಂತ್ ವಿಕೆಟ್‌ ಒಪ್ಪಿಸುತ್ತಿದ್ದಂತೆ ಅಭಿಮಾನಿಗಳು ಸೋಶಿಯಲ್‌ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಪದೇ-ಪದೆ ಬ್ಯಾಟಿಂಗ್‌ ವೈಫಲ್ಯದ ಹೊರತಾಗಿಯೂ ರಿಷಭ್‌ ಪಂತ್‌ ಅವರಿಗೆ ಅವಕಾಶ ನೀಡುತ್ತಿದ್ದೀರಿ, ಆದರೆ ಉತ್ತಮ ಪ್ರದರ್ಶನ ತೋರುತ್ತಿದ್ದರೂ ಸಂಜು ಸ್ಯಾಮ್ಸನ್‌ ಅವರಿಗೆ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಅವಕಾಶ ನೀಡುತ್ತಿಲ್ಲವೆಂದು ಫ್ಯಾನ್ಸ್ ದೂರಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಒಡಿಐ ಸರಣಿಯ ಬಳಿಕ ರಿಷಭ್‌ ಪಂತ್ ಇಲ್ಲಿಯವರೆಗೂ ಆಡಿರುವ 10 ಇನಿಂಗ್ಸ್‌ಗಳಿಂದ 37.33ರ ಸರಾಸರಿಯಲ್ಲಿ 336 ರನ್‌ ಗಳಿಸಿದ್ದಾರೆ. ಇದರಲ್ಲಿ ಅವರ ಸ್ಟ್ರೈಕ್ ರೇಟ್‌ 96.55 ರಷ್ಟಿದೆ. ಈ ಅವಧಿಯಲ್ಲಿ ಅವರು ಒಂದು ಶತಕ ಹಾಗೂ ಎರಡು ಅರ್ಧಶತಕಗಳನ್ನು ಮಾತ್ರ ಗಳಿಸಿದ್ದಾರೆ.

Ind Vs Nz 3rd Odi Incredible Innings, Secured His Place For Next 10 Matches Fans Troll Rishabh Pant After Another Faillure.