'ನನಗೆ ತಪ್ಪಿನ ಅರಿವಾಗಿದೆ'-25 ವರ್ಷಗಳ ಬಳಿಕ ರಾಹುಲ್‌ ದ್ರಾವಿಡ್‌ ಬಳಿ ಕ್ಷಮೆಯಾಚಿಸಿದ ಡೊನಾಲ್ಡ್‌!

15-12-22 01:13 pm       Source: Vijayakarnataka   ಕ್ರೀಡೆ

25 ವರ್ಷಗಳ ಹಳಯೆ ಘಟನೆ ಸಂಬಂಧ ದಕ್ಷಿಣ ಆಫ್ರಿಕಾ ಮಾಜಿ ವೇಗಿ ಹಾಗೂ ಪ್ರಸ್ತುತ ಬಾಂಗ್ಲಾದೇಶ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್‌ ಅಲಾನ್‌ ಡೊನಾಲ್ಡ್‌ ಅವರು ಟೀಮ್ ಇಂಡಿಯಾ ಹೆಡ್‌ ಕೋಚ್‌ ರಾಹುಲ್‌ ದ್ರಾವಿಡ್‌ ಬಳಿ ಕ್ಷಮೆಯಾಚಿಸಿದ್ದಾರೆ.

ದಕ್ಷಿಣ ಆಫ್ರಿಕಾ ಮಾಜಿ ವೇಗಿ ಹಾಗೂ ಬಾಂಗ್ಲಾದೇಶ ಕ್ರಿಕೆಟ್‌ ತಂಡದ ಬೌಲಿಂಗ್ ಕೋಚ್‌ ಅಲಾನ್‌ ಡೊನಾಲ್ಡ್ ಅವರು 25 ವರ್ಷಗಳ ಹಳೆಯ ಘಟನೆ ಬಗ್ಗೆ ಇದೀಗ ಟೀಮ್ ಇಂಡಿಯಾ ಹೆಡ್‌ ಕೋಚ್‌ ರಾಹುಲ್‌ ದ್ರಾವಿಡ್‌ ಬಳಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.

ಇಲ್ಲಿನ ಝಹೂರ್‌ ಅಹ್ಮದ್‌ ಚೌಧುರಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಮುಖಾಮುಖಿಯಾಗಿರುವ ಭಾರತ ಹಾಗೂ ಬಾಂಗ್ಲಾದೇಶ ತಂಡಗಳಲ್ಲಿ ವಿವಿಧ ಹುದ್ದೆಗಳನ್ನು ರಾಹುಲ್‌ ದ್ರಾವಿಡ್‌ ಹಾಗೂ ಅಲಾನ್‌ ಡೊನಾಲ್ಡ್‌ ನಿರ್ವಹಿಸುತ್ತಿದ್ದಾರೆ. ದ್ರಾವಿಡ್‌ ಟೀಮ್ ಇಂಡಿಯಾ ಕೋಚ್‌ ಆಗಿ ಕಾರ್ಯನಿರ್ವಹಿಸುತ್ತಿದ್ದರೆ, ಅಲಾನ್‌ ಡೊನಾಲ್ಡ್‌ ಅವರು ಬಾಂಗ್ಲಾದೇಶ ತಂಡದ ಬೌಲಿಂಗ್ ಕೋಚ್‌ ಆಗಿ ಕೆಲಸ ಮಾಡುತ್ತಿದ್ದಾರೆ.

ಸೋನಿ ಸ್ಪೋರ್ಟ್ಸ್‌ ನೆಟ್‌ವರ್ಕ್‌ ಸಂದರ್ಶನದಲ್ಲಿ ಮಾತನಾಡಿದ ಅಲಾನ್ ಡೊನಾಲ್ಡ್‌, 1997ರಲ್ಲಿ ಡರ್ಬನ್‌ನಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಏಕದಿನ ಪಂದ್ಯದ ವೇಳೆ ಮಿತಿ ಮೀರಿ ರಾಹುಲ್‌ ದ್ರಾವಿಡ್‌ ಅವರನ್ನು ಸ್ಲೆಡ್ಜ್‌ ಮಾಡಿದ್ದ ಘಟನೆಯನ್ನು ಸ್ಮರಿಸಿಕೊಂಡರು. ಈ ಘಟನೆಯಿಂದಾಗಿ ನಾನು ಇದೀಗ ಅವರ ಬಳಿ ಸಾರ್ವಜನಿಕವಾಗಿ ಕ್ಷಮೆಯಾಚಿಸುತ್ತೇನೆಂದು ಹೇಳಿದ್ದಾರೆ.

"ಡರ್ಬನ್‌ನಲ್ಲಿ ನಡೆದಿದ್ದ ಘಟನೆಯು ತುಂಬಾ ಕೊಳಕಿನಿಂದ ಕೂಡಿತ್ತು ಹಾಗೂ ಇದನ್ನು ಸಂಪೂರ್ಣವಾಗಿ ವಿವರಿಸಲು ನಾನು ಹೋಗುವುದಿಲ್ಲ. ರಾಹುಲ್‌ ದ್ರಾವಿಡ್‌ ಹಾಗೂ ಸಚಿನ್‌ ತೆಂಡೂಲ್ಕರ್‌ ಇಬ್ಬರೂ ಮೈದಾನದ ಎಲ್ಲಾ ಕಡೆ ಚೆಂಡನ್ನು ಹೊಡೆಯುವ ಮೂಲಕ ನಮ್ಮನ್ನು ತುಂಬಾ ಕಾಡಿದ್ದರು. ಈ ವೇಳೆ ಸ್ವಲ್ಪ ಮಿತಿ ಮೀರಿ ವರ್ತಿಸಿದ್ದೆ ಎಂದು ನಾನು ಭಾವಿಸುತ್ತೇನೆ. ಈ ಘಟನೆಯ ಹೊರತಾಗಿಯೂ ದ್ರಾವಿಡ್‌ ಎಂದರೆ, ನನಗೆ ಬಹಳಾ ಗೌರವವಿದೆ," ಎಂದು ಅಲಾನ್ ಡೊನಾಲ್ಡ್‌ ತಿಳಿಸಿದರು.

"ಒಂದು ಕಡೆ ರಾಹುಲ್‌ ದ್ರಾವಿಡ್‌ ಜೊತೆ ಕುಳಿತುಕೊಂಡು ಈ ಹಿಂದೆ ನಡೆದಿದ್ದ ಘಟನೆ ಬಗ್ಗೆ ಅವರ ಬಳಿ ಕ್ಷಮೆಯಾಚಿಸಬೇಕು. ಏಕೆಂದರೆ ಅಂದು(1997ರಲ್ಲಿ) ದ್ರಾವಿಡ್ ಅವರನ್ನು ಹೇಗಾದರೂ ಮಾಡಿ ಔಟ್‌ ಮಾಡಬೇಕೆಂಬುದು ನನ್ನ ತಲೆಯಲ್ಲಿ ಇತ್ತು. ಈ ಕಾರಣದಿಂದ ನಾನು ಅವರನ್ನು ಸ್ಲೆಡ್ಜ್‌ ಮಾಡಿದ್ದೆ. ಅಂದು ನಡೆದುಕೊಂಡ ಹಾದಿಗೆ ಇದೀಗ ಕ್ಷಮೆಯಾಚಿಸುತ್ತೇನೆ. ಅವರು(ದ್ರಾವಿಡ್) ಅದ್ಭುತ ವ್ಯಕ್ತಿ ಹಾಗೂ ಅದ್ಭುತ ಆಟಗಾರ ಕೂಡ. ಒಂದು ದಿನ ರಾತ್ರಿ ಅವರೊಂದಿಗೆ ಹೊರಗಡೆ ಹೋಗಿ ಭೋಜನ ಸವಿಯಲು ಇಷ್ಟಪಡುತ್ತೇನೆ," ಎಂದು ದಕ್ಷಿಣ ಆಫ್ರಿಕಾ ಮಾಜಿ ವೇಗಿ ಹೇಳಿದರು.

1990ರ ದಶಕದಲ್ಲಿ ಅಲಾನ್‌ ಡೊನಾಲ್ಡ್‌ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತ್ಯಂತ ಭಯಾನಕ ವೇಗದ ಬೌಲರ್‌ ಆಗಿ ಗುರುತಿಸಿಕೊಂಡಿದ್ದರು. ತಮ್ಮ ವೇಗದ ಬೌಲಿಂಗ್‌ ಹಾಗೂ ತಮ್ಮ ಸ್ಲೆಡ್ಜಿಂಗ್‌ ಮೂಲಕ ಎದುರಾಳಿ ಬ್ಯಾಟ್ಸ್‌ಮನ್‌ಗಳನ್ನು ಕಾಡುತ್ತಿದ್ದರು. ಅದರಂತೆ 1997ರಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಡರ್ಬನ್‌ನಲ್ಲಿ ನಡೆದಿದ್ದ ಒಡಿಐ ಪಂದ್ಯದಲ್ಲಿ ರಾಹುಲ್ ದ್ರಾವಿಡ್‌ ಅವರನ್ನು ಅಲಾನ್ ಡೊನಾಲ್ಡ್‌ ಸ್ಲೆಡ್ಜ್‌ ಮಾಡಿದ್ದರು. ಇದೀಗ ಆ ಘಟನೆ ಬಗ್ಗೆ ಅವರೇ ಸ್ವತಃ ದ್ರಾವಿಡ್‌ ಬಳಿ ಕ್ಷಮೆಯಾಚಿಸಿದ್ದಾರೆ.

ಅಂದಹಾಗೆ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡ ಎರಡನೇ ದಿನದಾಟದಲ್ಲಿ 133.3 ಓವರ್‌ಗಳಿಗೆ 404 ರನ್‌ ಗಳಿಗೆ ಆಲ್‌ಔಟ್‌ ಆಗಿದೆ. ಮೊದಲನೇ ದಿನದಲ್ಲಿ ಅದ್ಭುತ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದ ಶ್ರೇಯಸ್‌ ಅಯ್ಯರ್‌, ಗುರುವಾರ 86 ರನ್‌ಗೆ ವಿಕೆಟ್‌ ಒಪ್ಪಿಸಿದರು. ಆದರೆ, ಎರಡನೇ ದಿನವೂ ದೀರ್ಘಾವಧಿ ಬ್ಯಾಟ್‌ ಮಾಡಿದ ಆರ್‌ ಅಶ್ವಿನ್ 113 ಎಸೆತಗಳಲ್ಲಿ 58 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು.

India Vs Bangladesh 1st Test Allan Donald Issues Public Apology To Rahul Dravid For Old Ugly Behaviour.