ಕೆ.ಎಲ್‌ ರಾಹುಲ್‌ರನ್ನು ಕೈ ಬಿಟ್ಟು ಶುಭಮನ್‌ ಗಿಲ್‌ಗೆ ಹೆಚ್ಚಿನ ಅವಕಾಶ ನೀಡಿ ಎಂದ ಕೈಫ್‌!

20-12-22 03:20 pm       Source: Vijayakarnataka   ಕ್ರೀಡೆ

ಬಾಂಗ್ಲಾದೇಶ ವಿರುದ್ಧ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಶತಕ ಸಿಡಿಸಿದ್ದ ಯುವ ಆರಂಭಿಕ ಬ್ಯಾಟ್ಸ್‌ಮನ್ ಶುಭಮನ್‌ ಗಿಲ್ ಅವರನ್ನು ಮಾಜಿ ಕ್ರಿಕೆಟಿಗ.

ಬಾಂಗ್ಲಾದೇಶ ವಿರುದ್ಧ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಶತಕ ಸಿಡಿಸಿ ಗಮನ ಸೆಳೆದಿದ್ದ ಶುಭಮನ್‌ ಗಿಲ್‌ ಅವರನ್ನು ಭಾರತ ತಂಡದ ಮಾಜಿ ಬ್ಯಾಟ್ಸ್‌ಮನ್‌ ಮೊಹಮ್ಮದ್‌ ಕೈಫ್‌ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ತಂಡದ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಶುಭಮನ್ ಗಿಲ್‌ಗೆ ಹೆಚ್ಚಿನ ಅವಕಾಶಗಳನ್ನು ನೀಡಬೇಕು ಎಂದಿದ್ದಾರೆ.

ಕಳೆದ ಒಂದು ವರ್ಷದಿಂದ ಭಾರತ ತಂಡದ ಎಲ್ಲಾ ಸ್ವರೂಪದಲ್ಲಿಯೂ ಶುಭಮನ್ ಗಿಲ್‌ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯುವ ಆಟಗಾರನನ್ನು ಸಾಧ್ಯವಾದಷ್ಟು ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಉಳಿಸಿಕೊಳ್ಳಬೇಕು ಎಂದು ಹೇಳಿದ ಮೊಹಮ್ಮದ್‌ ಕೈಫ್‌, ಅನಿವಾರ್ಯವಾದರೆ ಕೆ.ಎಲ್‌ ರಾಹುಲ್ ಅಥವಾ ಶ್ರೇಯಸ್‌ ಅಯ್ಯರ್‌ ಅವರನ್ನು ಬೆಂಚ್‌ ಕಾಯಿಸಿದರೂ ಸಮಸ್ಯೆ ಇಲ್ಲ ಎಂದಿದ್ದಾರೆ.

ಸೋನಿ ಸ್ಪೋರ್ಟ್ಸ್ ಜೊತೆ ಮಾತನಾಡಿದ ಮೊಹಮ್ಮದ್‌ ಕೈಫ್‌, "ದೀರ್ಘಾವಧಿ ಶುಭಮನ್ ಗಿಲ್‌ ಅವರಂತಹ ಆಟಗಾರನನ್ನು ಪ್ಲೇಯಿಂಗ್‌ ಇಲೆವೆನ್‌ನಿಂದ ಹೊರಗಿಡಲು ಸಾಧ್ಯವಿಲ್ಲ. ಗಿಲ್‌ಗೆ ಅವಕಾಶ ನೀಡಲು ಕೆ.ಎಲ್‌ ರಾಹುಲ್‌ ಅಥವಾ ಶ್ರೇಯಸ್‌ ಅಯ್ಯರ್‌ ಅವರಲ್ಲಿ ಒಬ್ಬರನ್ನು ಬೆಂಚ್‌ ಕಾಯಿಸಿದರೂ ಪರವಾಗಿಲ್ಲ," ಎಂದರು.

Shubman Gill, Cheteshwar Pujara smash hundreds as India set Bangladesh  victory target of 513 runs in first Test

"ಏಕೆಂದರೆ ಸಿಕ್ಕ ಸೀಮಿತ ಅವಕಾಶಗಳಲ್ಲಿ ಶುಭಮನ್‌ ಗಿಲ್‌ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ. ಮೂರು ದಿನಗಳ ಬಳಿಕ ಎರಡನೇ ಟೆಸ್ಟ್‌ ಪಂದ್ಯವಿದೆ. ಈ ಹಿನ್ನೆಲೆಯಲ್ಲಿ ರೋಹಿತ್‌ ಶರ್ಮಾ ತಂಡಕ್ಕೆ ಆಗಮಿಸಿ ನೇರವಾಗಿ ಪಂದ್ಯವಾಡಲು ಸಾಧ್ಯವಿಲ್ಲ. ಹಾಗಾಗಿ, ಶುಭಮನ್‌ ಗಿಲ್‌ ಎರಡನೇ ಟೆಸ್ಟ್‌ಗೂ ಮುಂದುವರಿಯಬೇಕು," ಎಂದು ಹೇಳಿದರು.

Rohit Sharma named India's permanent Test captain ahead of series vs Sri  Lanka | Cricket News | Sky Sports

ಒಂದು ವೇಳೆ ರೋಹಿತ್‌ ಶರ್ಮಾ ಸಂಪೂರ್ಣ ಫಿಟ್‌ ಆಗಿ ತಂಡಕ್ಕೆ ಮರಳಿದರೆ, ಶುಭಮನ್‌ ಗಿಲ್‌ ಸ್ವಲ್ಪ ದಿನಗಳಗಳ ಕಾಲ ಬೆಂಚ್‌ ಕಾಯಬೇಕಾಗುತ್ತದೆ ಎಂದು ಇದೇ ವೇಳೆ ಮಾಜಿ ಕ್ರಿಕೆಟಿಗ ಹೇಳಿದ್ದಾರೆ.

"ಶುಭಮನ್ ಗಿಲ್ ಅವರನ್ನು ಆಡಿಸದೆ ಕೂರಿಸುವುದು ಕಠಿಣ ಕರೆ. ಏಕೆಂದರೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ತಕ್ಷಣ ಯಾವುದೇ ಸಂಯೋಜನೆಯನ್ನು ಬದಲಿಸಲು ಸಾಧ್ಯವಿಲ್ಲ. ಅಂದಹಾಗೆ ಮೊದಲನೇ ಟೆಸ್ಟ್‌ ಪಂದ್ಯದಲ್ಲಿ ಆರು ಬೌಲರ್‌ಗಳನ್ನು ಕಣಕ್ಕೆ ಇಳಿಸಲಾಗಿತ್ತು. ಆದರೆ, ಎರಡನೇ ಟೆಸ್ಟ್‌ ಪಂದ್ಯದಲ್ಲಿ ನಾಲ್ವರು ಬೌಲರ್‌ಗಳನ್ನು ಕಣಕ್ಕೆ ಇಳಿಸುವ ಮೂಲಕ ಗಿಲ್‌ಗೆ ಆಡಲು ಅವಕಾಶ ಕಲ್ಪಿಸಬೇಕು," ಎಂದು ಕೈಫ್‌ ಆಗ್ರಹಿಸಿದ್ದಾರೆ.

"ಶುಭಮನ್ ಗಿಲ್‌ ಅವರು ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಒಂದು ವೇಳೆ ಇದೀಗ ನಾನೇ ಶುಭಮನ್ ಗಿಲ್‌ ಆಗಿದ್ರೆ, ಸೆಲೆಕ್ಷನ್‌ ಆಗಲಿ ಅಥವಾ ಬಿಡಲಿ, ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ, ನನ್ನ ಕೆಲಸವನ್ನು ನಾನು ಅಚ್ಚು ಕಟ್ಟಾಗಿ ಮಾಡುತ್ತಿದ್ದೆ. ಭಾರತ ತಂಡದ ಮೂರೂ ಸ್ವರೂಪದಲ್ಲಿ ಶುಭಮನ್ ಗಿಲ್ ಅವರನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ," ಎಂದು ಮಾಜಿ ಕ್ರಿಕೆಟಿಗ ತಿಳಿಸಿದ್ದಾರೆ.

"ಅವರು ತಮ್ಮ ಬ್ಯಾಟಿಂಗ್‌ನಲ್ಲಿ ಉತ್ತಮ ತಂತ್ರವನ್ನು ಹೊಂದಿದ್ದಾರೆ ಹಾಗೂ ಸ್ಥಿರವಾಗಿ ರನ್‌ ಗಳಿಸುತ್ತಿದ್ದಾರೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿಯೂ ಸಾಕಷ್ಟು ರನ್‌ಗಳನ್ನು ಗಳಿಸಿದ್ದಾರೆ. ಇವರು ಪ್ರತಿನಿಧಿಸುವ ಗುಜರಾತ್‌ ಟೈಟನ್ಸ್‌ ತಂಡ ತನ್ನ ಚೊಚ್ಚಲ ಆವೃತ್ತಿಯಲ್ಲಿಯೇ ಪ್ರಶಸ್ತಿ ಗೆದ್ದುಕೊಂಡಿದೆ. ಅಷ್ಟೇ ಅಲ್ಲದೆ ಟೆಸ್ಟ್‌ ಹಾಗೂ ಏಕದಿನ ಕ್ರಿಕೆಟ್‌ನಲ್ಲಿಯೂ ಗಿಲ್‌ ಶತಕ ಬಾರಿಸಿದ್ದಾರೆ," ಎಂದು ಮೊಹಮ್ಮದ್‌ ಕೈಫ್‌ ಗುಣಗಾನ ಮಾಡಿದ್ದಾರೆ.

Ind Vs Ban 2nd Test You Cant Stop Shubman Gill For Long, Even If You Have To Drop Kl Rahul Or Shreyas Iyer Mohammad Kaif.