ಒಡಿಐ ಸರಣಿಗೆ ರಾಹುಲ್‌ ಇಲ್ಲದ ಪ್ಲೇಯಿಂಗ್‌ XI ಕಟ್ಟಿದ ಗೌತಮ್ ಗಂಭೀರ್‌!

31-12-22 01:11 pm       Source: Vijayakarnataka   ಕ್ರೀಡೆ

ಪ್ರವಾಸಿ ಶ್ರೀಲಂಕಾ ವಿರುದ್ಧದ ಸೀಮಿತ ಓವರ್‌ಗಳ ಕ್ರಿಕೆಟ್‌ ಸರಣಿ ಮೂಲಕ ಟೀಮ್ ಇಂಡಿಯಾ 2023ರ ಸಾಲಿನ ಕ್ರಿಕೆಟ್‌ ಅಭಿಯಾನ ಆರಂಭಿಸಲಿದೆ.

ಪ್ರವಾಸಿ ಶ್ರೀಲಂಕಾ ಎದುರು ಟೀಮ್ ಇಂಡಿಯಾ ಮೂರು ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯನ್ನು ಆಡಲಿದೆ. ಈ ಸರಣಿಗೆ ಭಾರತ ತಂಡದ ಆಡುವ ಹನ್ನೊಂದರ ಬಳಗವನ್ನು ಆಯ್ಕೆ ಮಾಡಿರುವ ಮಾಜಿ ಓಪನರ್‌ ಗೌತಮ್‌ ಗಂಭೀರ್‌, ಸ್ಟಾರ್‌ ಆಟಗಾರ ಕೆ.ಎಲ್‌ ರಾಹುಲ್‌ ಅವರನ್ನು ಹೊರಗಿಟ್ಟಿದ್ದಾರೆ. ಅಷ್ಟೇ ಅಲ್ಲದೆ ನಾಯಕ ರೋಹಿತ್‌ ಶರ್ಮಾ ಜೊತೆಗೆ ಇನಿಂಗ್ಸ್‌ ಆರಂಭಿಸಲು ಶುಭಮನ್‌ ಗಿಲ್ ಅವರಿಗಿಂತಲೂ ಇಶಾನ್‌ ಕಿಶನ್‌ ಅವರನ್ನು ನೆಚ್ಚಿಕೊಂಡಿದ್ದಾರೆ. ಶ್ರೀಲಂಕಾ ಎದುರು ಮೊದಲು 3 ಪಂದ್ಯಗಳ ಟಿ20 ಸರಣಿ ನಡೆಯಲಿದ್ದು, ಜ.3ರಂದು ಮೊದಲ ಪಂದ್ಯ ನಡೆಯಲಿದೆ. ಒಡಿಐ ಸರಣಿ ಜ.10ರಂದು ಶುರುವಾಗಲಿದೆ.

ಬಾಂಗ್ಲಾದೇಶ ಪ್ರವಾಸ ಮುಗಿಸಿ ಬಂದಿರುವ ಭಾರತ ತಂಡ ಹೊಸ ವರ್ಷದ ಸಂಭ್ರಮಾಚರಣೆ ಬಳಿಕ ಅಂಗಣಕ್ಕೆ ಇಳಿಯಲಿದೆ. ಪ್ರವಾಸಿ ಶ್ರೀಲಂಕಾ ಎದುರು 6 ಸೀಮಿತ ಓವರ್‌ಗಳ ಪಂದ್ಯಗಳನ್ನು ಆಡಲಿದೆ. ಟೀಮ್ ಇಂಡಿಯಾದ ಹೊಸ ಸೆಲೆಕ್ಷನ್‌ ಕಮಿಟಿಯ ಆಯ್ಕೆ ಆಗದೇ ಇರುವ ಕಾರಣ, ಚೇತನ್‌ ಶರ್ಮಾ ಸಾರಥ್ಯದಲ್ಲೇ ಶ್ರೀಲಂಕಾ ವಿರುದ್ಧದ ಸರಣಿಗೂ ತಂಡದ ರಚನೆಯಾಗಿದೆ. ಸೆಲೆಕ್ಷನ್‌ ಕಮಿಟಿ ಎರಡೂ ತಂಡಗಳಿಂದ ರಿಷಭ್ ಪಂತ್‌ ಅವರನ್ನು ಕೈಬಿಟ್ಟು ಅದಕ್ಕೆ ಕಾರಣ ಏನೆಂಬುದನ್ನು ತಿಳಿಸಿರಲಿಲ್ಲ. ಟಿ20 ಸರಣಿಯಿಂದ ಕೆ.ಎಲ್‌ ರಾಹುಲ್‌, ವಿರಾಟ್‌ ಕೊಹ್ಲಿ ಮತ್ತು ರೋಹಿತ್‌ ಶರ್ಮಾ ಅವರನ್ನು ಹೊರಗಿಟ್ಟು ವಿಶ್ರಾಂತಿ ನೀಡಿದೆ.

Asia Cup 2022: Gautam Gambhir on India's readiness for the World Cup being  judged by losses against Pakistan and Sri Lanka

ಇನ್ನು ಏಕದಿನ ಸರಣಿಗೆ ಈ ಬಾರಿ ಶಿಖರ್‌ ಧವನ್‌ ಆಯ್ಕೆ ಆಗಿಲ್ಲ. ಉತ್ತಮ ಲಯದಲ್ಲಿ ಇರದೇ ಇರುವ ಕಾರಣ 2013ರ ಬಳಿಕ ಇದೇ ಮೊದಲ ಬಾರಿ ಧವನ್‌ ಭಾರತದ ಒಡಿಐ ತಂಡದಿಂದ ಹೊರಬಿದ್ದಿದ್ದಾರೆ. ಹೀಗಾಗಿ ತಮ್ಮೊಟ್ಟಿಗೆ ಯಾರನ್ನು ಓಪನರ್‌ ಆಗಿ ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲ ನಾಯಕ ರೋಹಿತ್‌ ಶರ್ಮಾ ಅವರನ್ನು ಖಂಡಿತಾ ಕಾಡಲಿದೆ. ಈ ಬಗ್ಗೆ ಮಾತನಾಡಿರುವ ಭಾರತ ತಂಡದ ಮಾಜಿ ಓಪನರ್‌ ಗೌತಮ್‌ ಗಂಭೀರ್‌, ಒಡಿಐ ಸರಣಿಗೆ ಭಾರತದ ಸೂಕ್ತ ಪ್ಲೇಯಿಂಗ್‌ ಇಲೆವೆನ್‌ ಆಯ್ಕೆ ಮಾಡಿ ಕೆ.ಎಲ್‌ ರಾಹುಲ್‌ ಅವರನ್ನು ಕೈಬಿಟ್ಟು ಅಚ್ಚರಿ ಮೂಡಿಸಿದ್ದಾರೆ.

IND vs SL 2022, 1st T20 Probable XIs: How The Two Teams Could Line up For  The Series Opener

"ರೋಹಿತ್‌ ಮತ್ತು ಇಶಾನ್‌ ಕಿಶನ್‌ ಇನಿಂಗ್ಸ್‌ ಆರಂಭಿಸಬೇಕು. ಇವರಿಗಿಂತ ಉತ್ತಮ ಆಯ್ಕೆ ಸಿಗಲಾರದು. ವಿರಾಟ್‌ ಕೊಹ್ಲಿ ಮೂರನೇ ಕ್ರಮಾಂಕದಲ್ಲೇ ಆಡಲಿದ್ದಾರೆ. ಸೂರ್ಯಕುಮಾರ್‌ ಯಾದವ್‌ ಮತ್ತು ಶ್ರೇಯಸ್‌ ಅಯ್ಯರ್‌ ಕ್ರಮವಾಗಿ 4 ಮತ್ತು 5ನೇ ಕ್ರಮಾಂಕ ಪಡೆದುಕೊಳ್ಳುತ್ತಾರೆ. ಕಳೆದ ಒಂದೂವರೆ ವರ್ಷದಿಂದ ಶ್ರೇಯಸ್‌ ಅಯ್ಯರ್‌ ಭಾರತ ತಂಡದ ಮಧ್ಯಮ ಕ್ರಮಾಂಕದಲ್ಲಿ ಅದ್ಭುತವಾಗಿ ಆಡಿದ್ದಾರೆ. ಶಾರ್ಟ್‌ ಪಿಚ್‌ ಎಸೆತಗಳ ಎದುರು ಅವರ ಕಷ್ಟ ಪಟ್ಟಿರುವುದು ನಿಜ. ಆದರೆ, ಈಗ ಅದನ್ನು ನಿಭಾಯಿಸುವುದು ಹೇಗೆ ಎಂಬುದನ್ನು ಕರಗತ ಮಾಡಿಕೊಂಡಿದ್ದಾರೆ. ಎಲ್ಲದರಲ್ಲೂ ಯಾರೊಬ್ಬರೂ ಪರಿಣತರಾಗಲು ಸಾಧ್ಯವಿಲ್ಲ. ಸಮಸ್ಯೆಗೆ ಪರಿಹಾರ ಕಂಡುಕೊಂಡು ಅಗತ್ಯದ ರನ್‌ ಗಳಿಸುವುದಷ್ಟೇ ಮುಖ್ಯವಾಗುತ್ತದೆ. ಶ್ರೇಯಸ್‌ ಅದನ್ನು ಮಾಡಿದ್ದಾರೆ. ಹೀಗಾಘಿ 5ನೇ ಕ್ರಮಾಂಕಕ್ಕೆ ಶ್ರೇಯಸ್‌ಗಿಂತಲೂ ಉತ್ತಮ ಆಯ್ಕೆ ಇಲ್ಲ. ಹಾರ್ದಿಕ್‌ ಪಾಂಡ್ಯ 6ನೇ ಕ್ರಮಾಂಕದಲ್ಲಿ ಆಡಬೇಕು," ಎಂದು ಕ್ರಿಕ್‌ಇನ್ಫೋ ಕಾರ್ಯಕ್ರಮದಲ್ಲಿ ಗಂಭೀರ್‌ ಹೇಳಿದ್ದಾರೆ.

ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡವನ್ನು ಹಾರ್ದಿಕ್‌ ಪಾಂಡ್ಯ ಮುನ್ನಡೆಸಲಿದ್ದಾರೆ. ಒಡಿಐ ಸರಣಿಯಲ್ಲಿ ರೋಹಿತ್‌ ಶರ್ಮಾ ಕ್ಯಾಪ್ಟನ್‌ ಆಗಿದ್ದು ಹಾರ್ದಿಕ್‌ ಉಪನಾಯಕನ ಜವಾಬ್ದಾರಿ ನಿಭಾಯಿಸಲಿದ್ದಾರೆ.

ಗೌತಮ್ ಗಂಭೀರ್‌ ಆಯ್ಕೆಯ ಪ್ಲೇಯಿಂಗ್‌ ಇಲೆವೆನ್‌ ಹೀಗಿದೆ
01. ರೋಹಿತ್‌ ಶರ್ಮಾ (ಓಪನರ್‌/ ಕ್ಯಾಪ್ಟನ್‌)
02. ಇಶಾನ್‌ ಕಿಶನ್‌ (ಓಪನರ್‌)
03. ವಿರಾಟ್‌ ಕೊಹ್ಲಿ (ಬ್ಯಾಟ್ಸ್‌ಮನ್‌)
04. ಸೂರ್ಯಕುಮಾರ್‌ ಯಾದವ್‌ (ಬ್ಯಾಟ್ಸ್‌ಮನ್‌)
05. ಶ್ರೇಯಸ್‌ ಅಯ್ಯರ್‌ (ಬ್ಯಾಟ್ಸ್‌ಮನ್‌)
06. ಹಾರ್ದಿಕ್ ಪಾಂಡ್ಯ (ಆಲ್‌ರೌಂಡರ್‌)
07. ವಾಷಿಂಗ್ಟನ್‌ ಸುಂದರ್‌ (ಆಲ್‌ರೌಂಡರ್‌)
08. ಯುಜ್ವೇಂದ್ರ ಚಹಲ್/ ಕುಲ್ದೀಪ್ ಯಾದವ್‌ (ಸ್ಪಿನ್ನರ್‌)
09. ಮೊಹಮ್ಮದ್‌ ಶಮಿ (ಬಲಗೈ ವೇಗಿ)
10. ಮೊಹಮ್ಮದ್‌ ಸಿರಾಜ್‌ (ಬಲಗೈ ವೇಗಿ)
11. ಅರ್ಷದೀಪ್‌ ಸಿಂಗ್‌ (ಎಡಗೈ ವೇಗಿ)

ಶ್ರೀಲಂಕಾ ವಿರುದ್ಧದ ಒಡಿಐ ಸರಣಿಗೆ ಭಾರತ ತಂಡ ಹೀಗಿದೆ
ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್ , ಅರ್ಷದೀಪ್ ಸಿಂಗ್.

Ind Vs Sl Gautam Gambhir Picks His Playing Xi For Odi Series Against Sri Lanka.