ಮೋದಿಗೆ ವಿಶೇಷ ಗಿಫ್ಟ್ ನೀಡಿದ ಮೆಸ್ಸಿ, ಫುಟ್​ಬಾಲ್​ ದಿಗ್ಗಜನ ಉಡುಗೊರೆಗೆ ಮನಸೋತ ನಮೋ

07-02-23 01:49 pm       Source: news18   ಕ್ರೀಡೆ

ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಲಿಯೋನೆಲ್ ಮೆಸ್ಸಿ (Lionel Messi) ಅವರ ಹೆಸರಿನ ಜರ್ಸಿಯನ್ನು ಉಡುಗೊರೆಯಾಗಿ ನೀಡಲಾಗಿದೆ. ಬೆಂಗಳೂರಿನಲ್ಲಿ ನಡೆದ ಇಂಡಿಯಾ ಎನರ್ಜಿ ವೀಕ್‌ನಲ್ಲಿ ಅರ್ಜೆಂಟೀನಾದ YPF ಅಧ್ಯಕ್ಷ ಪಾಬ್ಲೋ ಗೊನ್ಜಾಲೆಜ್ ಅವರು ಭಾರತೀಯ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಅವರಿಗೆ ಶರ್ಟ್ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

ಇನ್ನು, ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಅರ್ಜೆಂಟೀನಾದ ಫುಟ್​ಬಾಲ್​ ತಂಡದ ನಾಯಕ ಲಿಯೋನೆಲ್ ಮೆಸ್ಸಿ ಅವರ ಜೆರ್ಸಿಯನ್ನು ಗಿಫ್ಟ್ ಆಗಿ ನೀಡಲಾಗಿದೆ. ಉಡುಗೊರೆಯನ್ನು ಪಡೆದ ಮೋದಿ ಸಹ ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು, ಇದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಕಳೆದ ಡಿಸೆಂಬರ್​ನಲ್ಲಿ ಲಿಯೋನೆಲ್ ಮೆಸ್ಸಿ ನಾಯಕತ್ವದ ಅರ್ಜೆಂಟೀನಾ ತಂಡವು ಫಿಫಾ ವಿಶ್ವಕಪ್​ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದರು. ಈ ಗೆಲುವಿಗೆ ಮೋದಿ ಸಹ ಮೆಸ್ಸಿ ಹಾಗೂ ಅವರ ತಂಡಕ್ಕೆ ಶುಭಕೋರಿದ್ದರು.

ಮೆಸ್ಸಿಗೆ ಶುಭಕೋರಿದ್ದ ಮೋದಿ:

ಇನ್ನು, ಪ್ರಧಾನಿ ನರೇಂದ್ರ ಮೋದಿ FIFA ವಿಶ್ವಕಪ್ ಚಾಂಪಿಯನ್ ಆದ ಅರ್ಜೆಂಟೀನಾಗೆ ಅಭಿನಂದನೆ ಸಲ್ಲಿಸಿದ್ದರು. ಫಿಫಾ ವಿಶ್ವಕಪ್ 2022ರ ಅಂತಿಮ ಪಂದ್ಯವು ಫುಟ್‌ಬಾಲ್‌ನ ಅತ್ಯಂತ ರೋಚಕ ಪಂದ್ಯಗಳಲ್ಲಿ ಒಂದಾಗಿ ನೆನಪಿನಲ್ಲಿ ಉಳಿಯುತ್ತದೆ ಎಂದು ಅವರು ಹೇಳಿದ್ದರು. ಪ್ರಧಾನಿ ಮೋದಿ ಟ್ವೀಟ್ ಮಾಡಿ, 'ಇದು ಅತ್ಯಂತ ರೋಚಕ ಫುಟ್‌ಬಾಲ್ ಪಂದ್ಯಗಳಲ್ಲಿ ಒಂದಾಗಿದೆ. ಚಾಂಪಿಯನ್ಸ್ ಕಿರೀಟವನ್ನು ಅಲಂಕರಿಸಿದ ಅರ್ಜೆಂಟೀನಾಗೆ ಅಭಿನಂದನೆಗಳು. ಪಂದ್ಯಾವಳಿಯುದ್ದಕ್ಕೂ ಅವರು ಅದ್ಭುತ ಪ್ರದರ್ಶನ ನೀಡಿದರು. ಅರ್ಜೆಂಟೀನಾ ಮತ್ತು ಮೆಸ್ಸಿ ಅವರ ಲಕ್ಷಾಂತರ ಭಾರತೀಯ ಅಭಿಮಾನಿಗಳು ಈ ಅದ್ಭುತ ವಿಜಯದಿಂದ ತುಂಬಾ ಸಂತೋಷಪಟ್ಟಿದ್ದಾರೆ‘ ಎಂದು ಬರೆದುಕೊಂಡಿದ್ದರು.

PM Modi, EAM Jaishankar get Lionel Messi Argentina jerseys as gifts at  India Energy Week; See Pics

ಮೆಸ್ಸಿ ಇದ್ದ ಹೋಟೆಲ್‌ ರೂಂ ಇದೀಗ ಮ್ಯೂಸಿಯಂ:

ಫುಟ್ಬಾಲ್‌ ಕೊನೆಯ ಪಂದ್ಯದ ದಿನ ಅರ್ಜೆಂಟೀನಾದ ಆಟಗಾರ ಮೆಸ್ಸಿ ಮತ್ತು ಸೆರ್ಗಿಯೋ ಅಗುರೊ ಅವರು ಒಂದೇ ಕೊಠಡಿಯಲ್ಲಿ ತಂಗಿದ್ದರು. 36 ವರ್ಷಗಳ ಬಳಿಕ ಅರ್ಜೆಂಟೀನಾ ಚಾಂಪಿಯನ್‌ಶಿಪ್‌ ಆಗಿದ್ದರ ಸವಿನೆನಪಿಗೆ ಮತ್ತು ಮೆಸ್ಸಿಯ ರೋಚಕ ಆಟಕ್ಕೆ ಗೌರವ ನೀಡಲು ಕತಾರ್‌ ವಿಶೇಷ ಮ್ಯೂಸಿಯಂ ಅನ್ನು ತೆರೆದಿದೆ. ಮೆಸ್ಸಿ ಉಳಿದುಕೊಂಡ ಕೋಣೆಗೆ ಇನ್ನುಮುಂದೆ ಉಳಿದುಕೊಳ್ಳಲು ಇತರರಿಗೆ ಪ್ರವೇಶ ನೀಡುವುದಿಲ್ಲ ಬದಲಿಗೆ ಅದನ್ನು ಮ್ಯೂಸಿಯಂ ಆಗಿ ಪರಿವರ್ತಿಸುವ ನಿರ್ಧಾರಕ್ಕೆ ಬಂದಿದೆ.

ಮೆಸ್ಸಿ ಉಳಿದುಕೊಂಡ ಕೋಣೆಯನ್ನು ಪ್ರವಾಸಿಗರಿಗೆ ಭೇಟಿ ನೀಡುವ ವಸ್ತುಸಂಗ್ರಹಾಲಯವನ್ನಾಗಿ ಮಾಡಲು ಯೋಜಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಹಾಗೆಯೇ ಕೆಲವು ಫೋಟೋಗಳನ್ನು ಸಹ ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾಗಿದೆ. ಮೆಸ್ಸಿಯ ವಸ್ತುಗಳು ವಿದ್ಯಾರ್ಥಿಗಳಿಗೆ ಮತ್ತು ಭವಿಷ್ಯದ ಪೀಳಿಗೆಗೆ ಪರಂಪರೆಯಾಗಿರುತ್ತವೆ ಎಂದಿದೆ.

 

PM Narendra Modi Presented with Lionel Messi Jersey Photo Viral.