87 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ರಣಜಿ ಟ್ರೋಫಿ ನಡೆಯುತ್ತಿಲ್ಲ!

30-01-21 03:26 pm       Source: MYKHEL Sadashiva   ಕ್ರೀಡೆ

ದೇಶಿ ಕ್ರಿಕೆಟ್ ಟೂರ್ನಿಗಳಲ್ಲಿ ಅತ್ಯಂತ ಪ್ರಮುಖ ಟೂರ್ನಿ ಎನಿಸಿದ್ದ ರಣಜಿ ಟ್ರೋಫಿ ಈ ಬಾರಿ ನಡೆಯುತ್ತಿಲ್ಲ.

ನವದೆಹಲಿ: ದೇಸಿ ಕ್ರಿಕೆಟ್‌ನಲ್ಲಿ ಹಿನ್ನಡೆಯ ಸಂಗತಿಯೊಂದು ಕೇಳಿಬಂದಿದೆ. ದೇಶಿ ಕ್ರಿಕೆಟ್ ಟೂರ್ನಿಗಳಲ್ಲಿ ಅತ್ಯಂತ ಪ್ರಮುಖ ಟೂರ್ನಿ ಎನಿಸಿದ್ದ ರಣಜಿ ಟ್ರೋಫಿ ಈ ಬಾರಿ ನಡೆಯುತ್ತಿಲ್ಲ. ರಣಜಿ ಟ್ರೋಫಿಯನ್ನು ನಡೆಸದಿರಲು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ ನಿರ್ಧರಿಸಿದೆ.

ಈ ಬಾರಿ ಅಂದರೆ 2021-22ರ ಸೀಸನ್‌ನಲ್ಲಿ ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿ, ವಿಜಯ್ ಹಜಾರೆ ಟೂರ್ನಿ ಮತ್ತು ವಿನೂ ಮಂಕಡ್ ಟ್ರೋಫಿ ಟೂರ್ನಿಗಳು ನಡೆಯಲಿವೆ. ಆದರೆ ರಣಜಿ ಟ್ರೋಫಿ ನಡೆಯುತ್ತಿಲ್ಲ. 87 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ರಣಜಿ ಟ್ರೋಫಿ ಟೂರ್ನಿ ನಡೆಯುತ್ತಿಲ್ಲ. ಬಿಸಿಸಿಐ ಈ ಸಂಬಂಧ ರಾಜ್ಯ ಕ್ರಿಕೆಟ್ ಅಸೋಸಿಯೇಶನ್‌ಗಳಿಗೆ ಪತ್ರ ಬರೆದಿದ್ದು, ರಣಜಿ ಬದಲು ವಿಜಯ್ ಹಜಾರೆ, ಅಂಡರ್ 19 ವಿಭಾಗದವರಿಗೆ ವಿನೂ ಮಂಕಡ್ ಏಕದಿನ ಕ್ರಿಕೆಟ್ ಟೂರ್ನಿ ಮತ್ತು ರಾಷ್ಟ್ರೀಯ ತಂಡದ ಆಟಗಾರ್ತಿಯರಿಗೆ 50 ಓವರ್‌ಗಳ ಟೂರ್ನಿ ನಡೆಸುವುದಾಗಿ ಹೇಳಿದೆ. ಇದಕ್ಕೆ ಸ್ಟೇಟ್ ಅಸೋಸಿಯೇಶನ್‌ಗಳು ಸಮ್ಮತಿಸಿದರೆ ಅದರಂತೆ ಟೂರ್ನಿಗಳು ನಡೆಯಲಿವೆ.

ದೇಶಿ ಕ್ರಿಕೆಟ್ ಪಂದ್ಯಗಳಿಗೆ ಪ್ರತೀ ಪಂದ್ಯಗಳಿಗೆ ಗರಿಷ್ಠ 1.5 ಲಕ್ಷ ರೂ. ನೀಡಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್‌ ಶಾ ಯೋಚಿಸುತ್ತಿದ್ದಾರೆ. ಸುಮಾರು ಎರಡು ತಿಂಗಳುಗಳ ಕಾಲ ನಡೆಯುವ ರಣಜಿಗೆ ಬಯೋ ಬಬಲ್ ಸೇರಿ ಹೆಚ್ಚು ಖರ್ಚಿನ ಹೊರೆ ಬೀಳುವ ಸಾಧ್ಯತೆಯಿದೆ. ಹೀಗಾಗಿ ಟೂರ್ನಿ ಕೈಬಿಡಲು ನಿರ್ಧರಿಸಲಾಗಿದೆ ಎಂದು ಹೇಳಲಾಗುತ್ತಿದೆ.

This News Article is a Copy of MYKHEL