ಬಜೆಟ್ ಭಾಷಣದಲ್ಲೂ ಉಲ್ಲೇಖವಾಯಿತು ಆಸಿಸ್ ನೆಲದಲ್ಲಿ ಟೀಮ್ ಇಂಡಿಯಾದ ಸಾಧಿಸಿದ ದಿಗ್ವಿಜಯ

01-02-21 04:11 pm       Source: MYKHEL Madhukara Shetty   ಕ್ರೀಡೆ

ಟೀಮ್ ಇಂಡಿಯಾ ಗೆಲುವಿನ ಸಾಹಸಗಾಥೆ ಭಾರತದ ಕೇಂದ್ರ ಸರ್ಕಾರದ ಬಜೆಟ್‌ ಭಾಷಣದ ವೇಳೆಯಲ್ಲಿಯೂ ಉಲ್ಲೇಖವಾಗಿದೆ.

ಟೀಮ್ ಇಂಡಿಯಾ ಆಸ್ಟ್ರೇಲಿಯಾ ನೆಲದಲ್ಲಿ ಸಾಧಿಸಿದ ದಿಗ್ವಿಜಯ ಕ್ರಿಕೆಟ್ ಪ್ರೇಮಿಗಳಿಗೆ ಸುದೀರ್ಘ ಕಾಲ ನೆನಪಿನಲ್ಲಿ ಉಳಿಯುಂತಾ ಕ್ಷಣ. ಆಸಿಸ್ ನೆಲದಲ್ಲಿ ಭಾರತ ಸರಣಿ ಗೆದ್ದ ರೀತಿಗೆ ವಿಶ್ವ ಕ್ರಿಕೆಟ್ ಲೋಕವೇ ತಲೆದೂಗಿದೆ. ಈಗ ಈ ಗೆಲುವಿನ ಸಾಹಸಗಾಥೆ ಭಾರತದ ಕೇಂದ್ರ ಸರ್ಕಾರದ ಬಜೆಟ್‌ ಭಾಷಣದ ವೇಳೆಯಲ್ಲಿಯೂ ಉಲ್ಲೇಖವಾಗಿದೆ.

ಫೆಬ್ರವರಿ 1ರಂದು ಕೇಂದ್ರ ಸರ್ಕಾರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021-22ನೇ ಸಾಲಿನ ಬಜೆಟ್‌ಅನ್ನು ಪಾರ್ಲಿಮೆಂಟ್‌ನಲ್ಲಿ ಮಂಡಿಸಿದರು. ಈ ಸಂದರ್ಭದಲ್ಲಿ ಆಸ್ಟ್ರೇಲಿಯಾ ನೆಲದಲ್ಲಿ ಭಾರತೀಯ ಕ್ರಿಕೆಟ್ ತಂಡ ಸಾಧಿಸಿದ ಅಮೋಘ ಜಯವನ್ನು ನಿರ್ಮಲಾ ಸೀತಾರಾಮನ್ ಅವರು ಉದಾಹರಣೆಯಾಗಿ ನೀಡಿದರು.

ಕ್ರಿಕೆಟ್‌ಅನ್ನು ಪ್ರೀತಿಸುವ ದೇಶವಾಗಿ ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾದಲ್ಲಿ ಸಾಧಿಸಿದ ಅಭೂತಪೂರ್ವ ಯಶಸ್ಸನ್ನು ಸ್ಮರಿಸಿಕೊಳ್ಳುತ್ತೇನೆ" ಎಂದು ನಿರ್ಮಲಾ ಸೀತಾರಾಮನ್ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ವಶಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ ಸಾಧನೆಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದರು. "ಈ ಗೆಲುವು ನಮಗೆ ವ್ಯಕ್ತಿಗಳಾಗಿ ನಾವು ಅದರಲ್ಲೂ ವಿಶೇಷವಾಗಿ ನಮ್ಮ ಯುವಕರು ಹೊಂದಿರುವ ಸಾಮರ್ಥ್ಯ ಹಾಗೂ ಗೆಲುವನ್ನು ಪಡೆಯುವ ಸಲುವಾಗಿ ಹೇರಳವಾದ ಭರವಸೆಯನ್ನು ನಮಗೆ ನೆನಪಿಸಿದೆ" ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧದ ಟೀಮ್ ಇಂಡಿಯಾ ಮೊದಲ ಟೆಸ್ಟ್‌ನಲ್ಲಿ 36 ರನ್‌ಗೆ ಎರಡನೇ ಇನ್ನಿಂಗ್ಸ್‌ನಲ್ಲಿ ಆಲೌಟ್ ಆಗಿ ಹೀನಾಯ ಸೋಲು ಕಂಡಿತ್ತು. ಆದರೆ ಈ ಸೋಲಿನಿಂದ ಅದ್ಭುತವಾಗಿ ತಿರುಗಿ ಬೀಳಲು ಯಶಸ್ವಿಯಾದ ತಂಡ ಮುಂದಿನ ಮೂರು ಪಂದ್ಯಗಳಲ್ಲಿ ಎರಡು ಪಂದ್ಯವನ್ನು ಗೆದ್ದು ಮತ್ತೊಂದು ಪಂದ್ಯವನ್ನು ಡ್ರಾ ಮಾಡಿಕೊಂಡು ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಮತ್ತೊಮ್ಮೆ ವಶಕ್ಕೆ ಪಡೆಯಲು ಯಶಸ್ವಿಯಾಗಿತ್ತು.

This News Article is a Copy of MYKHEL