ಐಪಿಎಲ್ ಸಂಬಳದಲ್ಲಿ ದಾಖಲೆ ಬರೆದ ಚೆನ್ನೈ ನಾಯಕ ಎಂಎಸ್ ಧೋನಿ

02-02-21 03:04 pm       Source: MYKHEL Madhukara Shetty   ಕ್ರೀಡೆ

ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ 2021ನೇ ಆವೃತ್ತಿಗೂ ಎಂಎಸ್ ಧೋನಿ ನಾಯಕತ್ವದಲ್ಲಿಯೇ ಕಣಕ್ಕಿಳಿಯಲಿದೆ.

ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ 2021ನೇ ಆವೃತ್ತಿಗೂ ಎಂಎಸ್ ಧೋನಿ ನಾಯಕತ್ವದಲ್ಲಿಯೇ ಕಣಕ್ಕಿಳಿಯಲಿದೆ. ಕಳೆದ ಆವೃತ್ತಿಯಲ್ಲಿ ಸಿಎಸ್‌ಕೆ ತಂಡದ ಕಳಪೆ ಪ್ರದರ್ಶನದ ಬಳಿಕ ಮುಂದಿನ ಆವೃತ್ತಿಗೆ ಹೊಸ ಹುಮ್ಮಸ್ಸಿನಿಂದ ಕಣಕ್ಕಿಳಿಯಲು ಬಯಸಿರುವ ತಂಡವನ್ನು ಮುನ್ನಡೆಸಲು ಧೋನಿಯೇ ಸಮರ್ಥ ನಾಯಕ.

ಈ ಬಾರಿಯ ಐಪಿಎಲ್‌ಗೆ ಧೋನಿಯೇ ಸಿಎಸ್‌ಕೆ ತಂಡವನ್ನು ಮುನ್ನಡೆಸುತ್ತಾರಾ ಎಂಬ ಬಗ್ಗೆ ಸಾಕಷ್ಟು ಅನುಮಾನಗಳು ಚರ್ಚೆಗಳು ವ್ಯಕ್ತವಾಗಿದ್ದವು. ಆದರೆ ಈ ಚರ್ಚೆಗೆ ಸ್ವತಃ ಎಂಎಸ್ ಧೋನಿ ಹಾಗೂ ಚೆನ್ನೈ ಫ್ರಾಂಚೈಸಿ ಸ್ಪಷ್ಟನೆಯನ್ನು ನೀಡಿದ್ದು ಧೋನಿಯೇ ಮುನ್ನಡೆಸುವುದನ್ನು ಖಾತ್ರಿ ಪಡಿಸಿದ್ದಾರೆ. ಇದೀಗ ಧೋನಿ ಈ ಬಾರಿಯ ಐಪಿಎಲ್‌ನಲ್ಲಿ ಐಪಿಎಸ್ ಸಂಭಾವನೆಯ ವಿಚಾರದಲ್ಲಿ ವಿಶೇಷ ಮೈಲಿಗಲ್ಲೊಂದನ್ನು ದಾಟಲಿದ್ದಾರೆ.



150 ಕೋಟಿ ಕ್ಲಬ್‌ಗೆ ಎಂಎಸ್ ಧೋನಿ

ಎರಡು ವರ್ಷಗಳ ಕಾಲ ಚೆನ್ನೈ ತಂಡದ ಅಮಾನತು ಹೊರತು ಪಡಿಸಿದರೆ ಎಂಎಸ್ ಧೋನಿ 2008ರಿಂದಲೂ ಚೆನ್ನೈ ತಂಡವನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಈ ಬಾರಿಯ ಐಪಿಎಲ್‌ನಲ್ಲಿನ ಸಂಬಾವನೆಯನ್ನು ಪಡೆಯುವ ಮೂಲಕ ಧೋನಿ ಐಪಿಎಲ್‌ನಲ್ಲಿ 150 ಕೋಟಿ ರೂಪಾಯಿ ಸಂಭಾವನೆಯನ್ನು ಗಳಿಸಿದ ಆಟಗಾರ ಎನಿಸಲಿದ್ದಾರೆ. ಈ ವಿಶೇಷ ಸಾಧನೆಯನ್ನು ಮಾಡಿದ ಏಕೈಕ ಆಟಗಾರ ಎನಿಸಲಿದ್ದಾರೆ. ಧೋನಿ ಈವರೆಗೆ 137 ಕೋಟಿ ರೂಪಾಯಿ ಮೊತ್ತವನ್ನು ಐಪಿಎಲ್‌ನ ಆದಾಯವಾಗಿ ಪಡೆದುಕೊಂಡಿದ್ದು ಮುಂದಿನ ಆವೃತ್ತಿಗೆ ಚೆನ್ನೈ ಧೋನಿಯನ್ನು ರಿಟೈನ್ ಮಾಡಿಕೊಂಡಿರುವ ಕಾರಣ 15 ಕೋಟಿಯನ್ನು ಸಂಭಾವನೆಯನ್ನು ಪಡೆಯಲಿದ್ದಾರೆ.



ವಿರಾಟ್ ಕೊಹ್ಲಿಯ ಸಂಭಾವನೆ

ಇನ್ನು ಐಪಿಎಲ್‌ನಲ್ಲಿ ವಿರಾಟ್ ಕೊಹ್ಲಿ ಕೂಡ 2008ರಿಂದ ಆರ್‌ಸಿಬಿ ತಂಡದ ಭಾಗವಾಗಿದ್ದಾರೆ. ಸದ್ಯ ಐಪಿಎಲ್‌ನಲ್ಲಿ ಎಲ್ಲಾ ಆಟಗಾರರಿಗಿಂತ ಹೆಚ್ಚಿನ ಸಂಭಾವನೆ ಪಡೆಯುವ ಆಟಗಾರ ವಿರಾಟ್ ಕೊಹ್ಲಿ ಎನಿಸಿದ್ದು ಆವೃತ್ತಿಗೆ 17 ಕೋಟಿ ಆದಾಯ ಪಡೆಯಲಿದ್ದಾರೆ. ಆದರೆ ಐಪಿಎಲ್‌ನ ಆರಂಭಿಕ ಆವೃತ್ತಿಯಿಂದ ಗಳಿಸಿದ ಆದಾಯದಲ್ಲಿ ಕೊಹ್ಲಿ ಧೋಣಿಗಿಂತ ಹಿಂದಿದ್ದಾರೆ. ಈ ಬಾರಿಯ ಆವೃತ್ತಿಯ ಸಂಭಾವನೆ ಸೇರಿಸಿದರೆ ಕೊಹ್ಲಿ 143.2 ಕೋಟಿ ಆದಾಯವನ್ನು ಐಪಿಎಲ್‌ನಿಂದ ಗಳಿಸಿದಂತಾಗಲಿದೆ.



ರೋಹಿತ್ ಶರ್ಮಾ ಗಳಿಸಿದ ಐಪಿಎಲ್ ಆದಾಯ

ಇನ್ನು ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಐಪಿಎಲ್‌ನ ಆವೃತ್ತಿಯೊಂದಕ್ಕೆ 15 ಕೋಟಿ ಆದಾಯವನ್ನು ಪಡೆಯುತ್ತಿದ್ದಾರೆ. ಹೀಗಾಗಿ ರೋಹಿತ್ ಶರ್ಮಾ ಅವರ ಐಪಿಎಲ್‌ನ ಆದಾಯ ಈ ಬಾರಿ 146.6 ಕೋಟಿಗೆ ಏರಿಕೆಯಾಗಲಿದೆ. ರೋಹಿತ್ ಶರ್ಮಾ ಮೊದಲಿಗೆ ಸದ್ಯ ಐಪಿಎಲ್‌ನಲ್ಲಿಲ್ಲದ ಡೆಕ್ಕನ್ ಚಾರ್ಜರ್ಸ್ ತಂಡದ ಪರವಾಗಿ ಆಡಿದ್ದು ಬಳಿಕ ಮುಂಬೈ ಇಂಡಿಯನ್ಸ್ ತಂಡದ ಪಾಲಾದರು. 2014ರಿಂದ ಮುಂಬೈ ತಂಡವನ್ನು ಮುನ್ನಡೆಸಿರುವ ರೋಹಿತ್ ಶರ್ಮಾ 5 ಬಾರಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದು ಐಪಿಎಲ್‌ನ ಅತ್ಯಂತ ಯಶಸ್ವಿ ತಂಡವೆನಿಸುವಂತೆ ಮಾಡಿದ್ದಾರೆ.



14ನೇ ಐಪಿಎಲ್‌ಗೆ ಸಿದ್ಧತೆ

ಸದ್ಯ ಬಿಸಿಸಿಐ 14ನೇ ಆವೃತ್ತಿಯ ಐಪಿಎಲ್ ಆಯೋಜನೆಗೆ ಸಿದ್ಧತೆಗಳನ್ನು ನಡೆಸುತ್ತಿದೆ. ಇದೇ ತಿಂಗಳ 18ರಂದು ಚೆನ್ನೈನಲ್ಲಿ ಐಪಿಎಲ್ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದೆ. ಎಲ್ಲಾ ತಂಡಗಳು ತಮ್ಮ ತಂಡವನ್ನು ಬಲಿಷ್ಠಗೊಳಿಸುವ ಪ್ರಯತ್ನದಲ್ಲಿದ್ದು ಉತ್ತಮ ಲಯದಲ್ಲಿರುವ ಆಟಗಾರರನ್ನು ಸೆಳೆದುಕೊಳ್ಳುವ ಪ್ರಯತ್ನವನ್ನು ನಡೆಸಲಿದ್ದಾರೆ.

This News Article is a Copy of MYKHEL