ಭಾರತೀಯ ಕ್ರಿಕೆಟಿಗರು ಕೂಡ ಮನುಷ್ಯರು, ಅವರಿಗೆ ವಿರಾಮ ಕೊಡಿ: ಕೋಚ್ ರವಿ ಶಾಸ್ತ್ರಿ

05-02-21 04:11 pm       Source: MYKHEL Madhukara Shetty   ಕ್ರೀಡೆ

ಭಾರತೀಯ ಕ್ರಿಕೆಟ್ ತಂಡದ ಕೋಚ್ ರವಿ ಶಾಸ್ತ್ರಿ ಈ ಬಾರಿಯ ಐಪಿಎಲ್ ಆವೃತ್ತಿಯ ಅಂತ್ಯದ ಬಳಿಕ ಎರಡು ವಾರಗಳ ವಿರಾಮ ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದ್ದಾರೆ.

ಭಾರತೀಯ ಕ್ರಿಕೆಟ್ ತಂಡದ ಕೋಚ್ ರವಿ ಶಾಸ್ತ್ರಿ ಈ ಬಾರಿಯ ಐಪಿಎಲ್ ಆವೃತ್ತಿಯ ಅಂತ್ಯದ ಬಳಿಕ ಎರಡು ವಾರಗಳ ವಿರಾಮ ಅತ್ಯಂತ ಅಗತ್ಯವಾಗಿದೆ ಎಂದು ಹೇಳಿದ್ದಾರೆ. ಬಯೋ ಬಬಲ್ ಹಾಗೂ ಕ್ವಾರಂಟೈನ್ ಅವಧಿಗಳು ಆಟಗಾರರಿಗೆ ಮಾನಸಿಕವಾಗಿ ಒತ್ತಡವನ್ನು ನಿಡುತ್ತದೆ. ಹೀಗಾಗಿ ಭಾರತೀಯ ಕ್ರಿಕೆಟ್‌ನ ಒತ್ತಡ ಕ್ಯಾಲೆಂಡರ್ ಮಧ್ಯೆ ವಿಶ್ರಾಂತಿಯ ಅಗತ್ಯವಿದೆ ಎಂದು ಕೋಚ್ ರವಿ ಶಾಸ್ತ್ರಿ ಹೇಳಿದ್ದಾರೆ.

ಟೀಮ್ ಇಂಡಿಯಾದ ಮುಖ್ಯ ಕೋಚ್ ರವಿ ಶಾಸ್ತ್ರಿ "ಭಾರತೀಯ ಆಟಗಾರರು ಇಂಗ್ಲೆಂಡ್ ವಿರುದ್ಧ ನಾಲ್ಕು ಟೆಸ್ಟ್, 5 ಟಿ20 ಹಾಗೂ 3 ಏಕದಿನ ಪಂದ್ಯಗಳಲ್ಲಿ ಪಾಲ್ಗೊಂಡ ಬಳಿಕ ಐಪಿಎಲ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಆದರೆ ಅದಾದ ನಂತರ ಮುಂದಿನ ಸರಣಿಗೂ ಮುನ್ನ ಎರಡು ವಾರಗಳ ವಿಶ್ರಾಂತಿ ಬೇಕು" ಎಂದಿದ್ದಾರೆ ರವಿ ಶಾಸ್ತ್ರಿ.

ಭಾರತ ಐಪಿಎಲ್‌ ನಂತರ ಶ್ರೀಲಂಕಾ ವಿರುದ್ಧ ಸರಣಿಯನ್ನು ಭಾರತದಲ್ಲಿ ಆಡಲಿದೆ. ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಆಯ್ಕೆಯಾದರೆ ಅದರಲ್ಲೂ ಪಾಲ್ಗೊಳ್ಳಬೇಕಿದೆ. ಈ ವರ್ಷಾಂತ್ಯದಲ್ಲಿ ಟಿ20 ವಿಶ್ವಕಪ್ ಭಾರತದಲ್ಲಿ ಆಯೋಜನೆಯಾಗಲಿರುವ ಕಾರಣ ಅದಕ್ಕೂ ಮುನ್ನ ಕೆಲ ದ್ವಿಪಕ್ಷೀಯ ಟಿ20 ಸರಣಿಗಳು ಭಾರತದಲ್ಲಿ ಆಯೋಜನೆಯಾಗುವ ನಿರೀಕ್ಷೆಯಿದೆ. ಟೀಮ್ ಇಂಡಿಯಾ ಆಟಗಾರರು ಆಸ್ಟ್ರೇಲಿಯಾ ವಿರುದ್ಧದ ಸುದೀರ್ಘ ಸರಣಿಯನ್ನು ಮುಗಿಸಿದ ಬಳಿಕ ತವರಿಗೆ ಆಗಮಿಸಿದರು. ಆದರೆ ಕುಟುಂಬದೊಂದಿಗೆ ಸಮಯಕಳೆಯಲು ಕೇವಲ ಒಂದು ವಾರಗಳ ಕಾಲಾವಕಾಶ ಮಾತ್ರವೇ ಅವರಿಗೆ ದೊರೆತಿತ್ತು. ಬಳಿಕ ಚೆನ್ನೈಗೆ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗಾಗಿ ಬಂದ ಕ್ರಿಕೆಟಿಗರು ಆರು ದಿನ ಹೋಟೆಲ್ ಕ್ವಾರಂಟೈನ್ ಪೂರೈಸಿ ತರಬೇತಿ ಆರಂಭಿಸಿದ್ದರು.

" ಕೆಲ ಸಂದರ್ಭಗಳಲ್ಲಿ ಆಟಗಾರರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಕೆಲ ಸಮಯಗಳ ವಿರಾಮ ಅಗತ್ಯವಿರುತ್ತದೆ ಎಂದು ನಾನು ನಂಬುತ್ತೇನೆ. ಇಂಗ್ಲೆಂಡ್ ವಿರುದ್ಧದ ಸರಣಿಯ ನಂತರ ಅವರು ಐಪಿಎಲ್‌ಗೆ ಕಾಲಿಡುತ್ತಾರೆ. ಮತ್ತೊಂದು ಐಪಿಎಲ್‌ನ ನಂತರ ಒಂದೆರಡು ವಾರಗಳ ವಿರಾಮ ಅಗತ್ಯವಾಗಿದೆ. ಯಾಕೆಂದರೆ ಈ ಬಯೋಬಬಲ್‌ಗಳು ಹಾಗೂ ಕ್ವಾರಂಟೈನ್‌ಗಳು ಆಟಗಾರರನ್ನು ಮಾನಸಿಕವಾಗಿ ಸಾಕಷ್ಟು ಬಳಲುವಂತೆ ಮಾಡುತ್ತದೆ. ಅಂತಿಮವಾಗಿ ಅವರು ಕೂಡ ಮನುಷ್ಯರೇ ಅಲ್ಲವೇ" ಎಂದು ರವಿ ಶಾಸ್ತ್ರಿ ಹೇಳಿದ್ದಾರೆ.

This News Article is a Copy of MYKHEL