ಭಾರತ vs ಇಂಗ್ಲೆಂಡ್: ಸಿಕ್ಸರ್‌ನಲ್ಲಿ ದಾಖಲೆ ಬರೆದ 'ಹಿಟ್‌ಮ್ಯಾನ್'!

13-02-21 03:39 pm       Source: MYKHEL Sadashiva   ಕ್ರೀಡೆ

'ಹಿಟ್‌ಮ್ಯಾನ್' ಎಂದು ಕರೆಯಲ್ಪಡುವ ಟೀಮ್ ಇಂಡಿಯಾದ ಉಪನಾಯಕ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಿಕ್ಸರ್‌ಗಾಗಿಯೇ ದಾಖಲೆ ನಿರ್ಮಿಸಿದ್ದಾರೆ.

ಚೆನ್ನೈ: ಬಿರುಸಿನ ಬ್ಯಾಟಿಂಗ್‌ಗಾಗಿ 'ಹಿಟ್‌ಮ್ಯಾನ್' ಎಂದು ಕರೆಯಲ್ಪಡುವ ಟೀಮ್ ಇಂಡಿಯಾದ ಉಪನಾಯಕ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಿಕ್ಸರ್‌ಗಾಗಿಯೇ ದಾಖಲೆ ನಿರ್ಮಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್‌ನಲ್ಲಿ ರೋಹಿತ್ ಈ ಮೈಲಿಗಲ್ಲು ಸ್ಥಾಪಿಸಿದ್ದಾರೆ.

ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಭಾರತ ಮತ್ತು ಇಂಗ್ಲೆಂಡ್ ಮಧ್ಯೆ ದ್ವಿತೀಯ ಟೆಸ್ಟ್‌ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಆರಂಭಿಕರಾಗಿ ಬಂದಿದ್ದ ರೋಹಿತ್ ಶರ್ಮಾ ತವರಿನಲ್ಲಿ ಅಂದರೆ ಭಾರತದಲ್ಲಿ ನಡೆದ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ 200+ ಸಿಕ್ಸರ್‌ಗಳ ದಾಖಲೆ ನಿರ್ಮಿಸಿದ್ದಾರೆ.

ಭಾರತದಲ್ಲಿ ನಡೆದ ಪಂದ್ಯಗಳಲ್ಲಿ 200+ ಸಿಕ್ಸರ್ ಬಾರಿಸಿದ ಮೊದಲ ಭಾರತೀಯನಾಗಿ ರೋಹಿತ್ ಗುರುತಿಸಿಕೊಂಡಿದ್ದಾರೆ. ಭಾರತದ ಮೊದಲನೇ ಇನ್ನಿಂಗ್ಸ್‌ನ 62ನೇ ಓವರ್‌ ವೇಳೆಗೆ ರೋಹಿತ್ 16 ಫೋರ್ಸ್, 2 ಸಿಕ್ಸರ್‌ನೊಂದಿಗೆ 138 ರನ್ ಬಾರಿಸಿ ಆಡುತ್ತಿದ್ದರು. ಈ 2 ಸಿಕ್ಸರ್‌ನೊಂದಿಗೆ ದಾಖಲೆ ನಿರ್ಮಾಣವಾಗಿದೆ.

ದ್ವಿತೀಯ ಟೆಸ್ಟ್‌ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದ್ದ ಭಾರತದಿಂದ ರೋಹಿತ್ ಮತ್ತು ಟೆಸ್ಟ್ ಉಪನಾಯಕ ಅಜಿಂಕ್ಯ ರಹಾನೆ ಉತ್ತಮ ಜೊತೆಯಾಟ ನೀಡಿದ್ದರು. 60 ಓವರ್ ವೇಳೆಗೆ ಇಬ್ಬರಿಂದ 120+ ರನ್ ಜೊತೆಯಾಟ ಬಂದಿತ್ತು. ಈ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಡಕ್ ಔಟ್ ಆಗಿ ನಿರ್ಗಮಿಸಿದ್ದರು.

This News Article is a Copy of MYKHEL