134 ರನ್‌ಗಳಿಗೆ ಆಲೌಟ್ ಆದ ಇಂಗ್ಲೆಂಡ್: ಭಾರತಕ್ಕೆ ಮೊದಲ ಇನ್ನಿಂಗ್ಸ್‌ನಲ್ಲಿ 195 ರನ್‌ಗಳ ಮುನ್ನಡೆ

14-02-21 03:51 pm       Source: MYKHEL Madhukara Shetty   ಕ್ರೀಡೆ

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಯಶಸ್ಸನ್ನು ಸಾಧಿಸಿದೆ.

ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಯಶಸ್ಸನ್ನು ಸಾಧಿಸಿದೆ. ಇಂಗ್ಲೆಂಡ್ ತಂಡವನ್ನು ಕೇವಲ 134 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಟೀಮ್ ಇಂಡಿಯಾ ಯಶಸ್ವಿಯಾಗಿದೆ. ಈ ಮೂಲಕ ಮೊದಲ 195 ರನ್‌ಗಳ ದೊಡ್ಡ ಅಂತರದ ಮುನ್ನಡೆಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ

ಟೀಮ್ ಇಂಡಿಯಾದ ಬೌಲಿಂಗ್ ದಾಳಿಗೆ ಆಂಗ್ಲ ಬ್ಯಾಟ್ಸ್‌ಮನ್‌ಗಳು ಸಂಪೂರ್ಣವಾಗಿ ವಿಫಲರಾದರು. ಅದರಲ್ಲೂ ಸ್ಪಿನ್ ಬೌಲಿಂಗ್ ಪಡೆಗೆ ಪ್ರತ್ಯುತ್ತರವನ್ನು ನೀಡಲು ಇಂಗ್ಲೆಂಡ್ ಆಟಗಾರರಿಂದ ಅಸಾಧ್ಯವಾಯಿತು. ಹೀಗಾಗಿ 134 ರನ್‌ಗಳಿಗೆ ತನ್ನ ಎಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿದೆ. ಟೀಮ್ ಇಂಡಿಯಾ ಪರವಾಗಿ ಆರ್ ಅಶ್ವಿನ್ 5 ವಿಕೆಟ್‌ಗಳನ್ನು ಪಡೆದು ಇಂಗ್ಲೆಂಡ್ ತಂಡಕ್ಕೆ ಆಘಾತವನ್ನು ನೀಡಿದ್ದಾರೆ. ವೇಗಿ ಇಶಾಂತ್ ಶರ್ಮಾ ಹಾಗೂ ಅಕ್ಷರ್ ಪಟೇಲ್ ತಲಾ 2 ವಿಕೆಟ್ ಪಡೆದು ಮಿಂಚಿದ್ದಾರೆ. ಒಂದು ವಿಕೆಟ್ ಮೊಹಮ್ಮದ್ ಸಿರಾಜ್ ಪಾಲಾಗಿದೆ. ಸುದೀರ್ಘ ಬೆಂಚ್ ಕಾದು ಆಡುವ ಬಳಗದಲ್ಲಿ ಅವಕಾಶ ಪಡೆದ ಕುಲ್‌ದೀಪ್ ಯಾದವ್‌ ವಿಕೆಟ್ ಪಡೆಯದೆ ನಿರಾಸೆ ಅನುಭವಿಸಿದ್ದಾರೆ. ಇನ್ನು ಇಂಗ್ಲೆಂಡ್ ತಂಡದ ಪರವಾಗಿ ವಿಕೆಟ್ ಕೀಪರ್ ಬೆನ್ ಫೋಕ್ಸ್ ಗಳಿಸಿದ 42 ರನ್‌ ಹೈಯೆಸ್ಟ್ ಸ್ಕೋರ್ ಎನಿಸಿದೆ. ಒಲ್ಲೀ ಪೋಪ್ 22 ಬೆನ್ ಸ್ಟೋಕ್ಸ್ 18 ಹಾಗೂ ಡಾಮಿನಿಕ್ ಸಿಬ್ಲಿ 16 ರನ್ ಗಳಿಸಿದ್ದು ಈ ಆಟಗಾರರು ಮಾತ್ರವೇ ಎರಡಂಕಿಯನ್ನು ದಾಟುವಲ್ಲಿ ಯಶಸ್ವಿಯಾದರು.

ಟೀಮ್ ಇಂಡಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಆರಂಭಿಸಿದ್ದು ಬೃಹತ್ ಮೊತ್ತದ ಗುರಿಯನ್ನು ಇಂಗ್ಲೆಂಡ್‌ಗೆ ನೀಡುವ ಉದ್ದೇಶವಿಟ್ಟುಕೊಂಡಿದೆ. ಈ ಮೂಲಕ ಮೊದಲ ಟೆಸ್ಟ್‌ನಲ್ಲಿ ಅನುಭವಿಸಿದ ಸೋಲಿಗೆ ತಕ್ಕದಾದ ಪ್ರತ್ಯುತ್ತರವನ್ನು ನೀಡಲು ಟೀಮ್ ಇಂಡಿಯಾ ಸಜ್ಜಾಗಿದೆ.

This News Article is a Copy of MYKHEL