ಭಾರತ vs ಇಂಗ್ಲೆಂಡ್: ತವರಿನಲ್ಲಿ ಹರ್ಭಜನ್ ಸಾಧನೆ ಹಿಂದಿಕ್ಕಿದ ಆರ್ ಅಶ್ವಿನ್

14-02-21 03:56 pm       Source: MYKHEL Madhukara Shetty   ಕ್ರೀಡೆ

ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಅನುಭವಿ ಬೌಲರ್ ಆರ್ ಅಶ್ವಿನ್ ಎದುರಾಳಿ ಇಂಗ್ಲೆಂಡ್‌ಗೆ ಕಂಟಕವಾಗಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ನಲ್ಲಿ ಅನುಭವಿ ಬೌಲರ್ ಆರ್ ಅಶ್ವಿನ್ ಎದುರಾಳಿ ಇಂಗ್ಲೆಂಡ್‌ಗೆ ಕಂಟಕವಾಗಿದ್ದಾರೆ. ಅಶ್ವಿನ್ ಬೌಲಿಂಗ್ ದಾಳಿಯನ್ನು ಎದುರಿಸಲು ಇಂಗ್ಲೆಂಡ್ ದಾಂಡಿಗರು ಪರದಾಡುತ್ತಿದ್ದಾರೆ. ಇಂಗ್ಲೆಂಡ್ ಕಳೆದುಕೊಂಡ ಮೊದಲ ಆರು ವಿಕೆಟ್‌ಗಳ ಪೈಕಿ ಮೂರು ಅಶ್ವಿನ್ ಪಾಲಾಗಿದೆ. ಈ ಮೂಲಕ ಅಶ್ವಿನ್ ತವರಿನಲ್ಲಿ ಹರ್ಭಜನ್ ಸಿಂಗ್ ಸಾಧನೆಯನ್ನು ಹಿಂದಿಕ್ಕಿದ್ದಾರೆ.

ಆರ್ ಅಶ್ವಿನ್ ಆರಂಭಿಕ ಆಟಗಾರ ಡಾಮ್ ಸಿಬ್ಲಿ ಹಾಗೂ ಡೇನಿಯಲ್ ಲಾರೆನ್ಸ್ ವಿಕೆಟ್ ಪಡೆಯುವ ಮೂಲಕ ಹರ್ಭಜನ್ ಸಿಂಗ್ ತವರಿನಲ್ಲಿ ಪಡೆದ ವಿಕೆಟ್‌ಗೆ ಸಮನಾದ ಸಾಧನೆಯನ್ನು ಮಾಡಿದರು. ನಂತರ ಭೋಜನ ವಿರಾಮ ಮುಗಿಸಿ ದಾಳಿಗಿಳಿದ ಅಶ್ವಿನ್‌ಗೆ ಬೆನ್ ಸ್ಟೋಕ್ಸ್‌ ಬೌಲ್ಡ್ ಆಗುವ ಮೂಲಕ ವಿಕೆಟ್ ಒಪ್ಪಿಸಿದರು. ಈ ಮೂಲಕ ತವರಿನಲ್ಲಿ 265 ವಿಕೆಟ್ ಕಬಳಿಸಿದ್ದ ಹರ್ಭಜನ್ ಸಿಂಗ್ ಸಾಧನೆಯನ್ನು ಹಿಂದಿಕ್ಕಿದ್ದಾರೆ.

ಭಾರತದಲ್ಲಿ ಅತಿ ಹೆಚ್ಚು ವಿಕೆ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಮಾಜಿ ನಾಯಕ ಅನಿಲ್ ಕುಂಬ್ಳೆ ಮೊದಲ ಸ್ಥಾನದಲ್ಲಿದ್ದಾರೆ. 62 ಟೆಸ್ಟ್ ಪಂದ್ಯಗಳಲ್ಲಿ ಅನಿಲ್ ಕುಂಬ್ಳೆ 350 ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಇದರಲ್ಲಿ 25 ಐದು ವಿಕೆಟ್‌ಗಳ ಗೊಂಚಲು ಹಾಗೂ 7 10 ವಿಕೆಟ್‌ಗಳ ಗೊಂಚಲು ಇದೆ. ಭಾರತದಲ್ಲಿ ಆರ್ ಅಶ್ವಿನ್ 45 ಟೆಸ್ಟ್ ಪಂದ್ಯಗಳನ್ನು ಆಡಿದ್ದು 22.69ರ ಸರಾಸರಿಯಲ್ಲಿ 266 ವಿಕೆಟ್ ಪಡೆದಿದ್ದಾರೆ. ಇದರಲ್ಲಿ 22 ಬಾರಿ 5 ವಿಕೆಟ್‌ಗಳ ಗೊಂಚಲು ಪಡೆದಿರುವ ಅಶ್ವಿನ್ 6 ಬಾರಿ 10 ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದ್ದಾರೆ.

ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಟೀಮ್ ಇಂಡಿಯಾ ಸಂಪೂರ್ಣ ಹಿಡಿತವನ್ನು ಸಾಧಿಸಿದ್ದು ಇಂಗ್ಲೆಂಡ್ ತಂಡ 87 ರನ್ ಗಳಿಸಿದ ವೇಳೆ ತನ್ನ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ. ಈ ಮೂಲಕ ಭಾರತ ಮೊದಲ ಟೆಸ್ಟ್‌ನ ಸೋಲಿಗೆ ಸರಿಯಾದ ತಿರುಗೇಟು ನೀಡುವ ಕಾತರದಲ್ಲಿದೆ.

This News Article is a Copy of MYKHEL