ಇಂಡಿಯಾ vs ಇಂಗ್ಲೆಂಡ್: ಪಿಚ್ ವರ್ತನೆ ಚರ್ಚೆಗೆ ತಿರುಗೇಟು ನೀಡಿದ ಸುನಿಲ್ ಗವಾಸ್ಕರ್

15-02-21 03:06 pm       Source: MYKHEL   ಕ್ರೀಡೆ

ಇಂಗ್ಲೆಂಡ್‌ನಲ್ಲಿ ಪಂದ್ಯದ ಐದು ದಿನವೂ ಸೀಮಿಂಗ್ ಟ್ರ್ಯಾಕ್ ಇದ್ದಾಗ ಯಾರೂ ಮಾತನಾಡಲ್ಲ, ಆದರೆ ಭಾರತದಲ್ಲಿ ಸ್ಪಿನ್ ಆಗುತ್ತಿದ್ದಂತೆಯೇ ಮಾತನಾಡಲು ಮುಂದಾಗುತ್ತಾರೆ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ಎರಡನೇ ಪಂದ್ಯದ ಮೊದಲ ದಿನದಿಂದಲೇ ಸಾಕಷ್ಟು ತಿರುವು ಪಡೆದುಕೊಂಡಿತ್ತು. ಇದರ ಲಾಭವನ್ನು ಸ್ಪಿನ್ನರ್‌ಗಳು ಪಡೆದುಕೊಂಡಿದ್ದು ಬ್ಯಾಟ್ಸ್‌ಮನ್‌ಗಳ ಮೇಲೆ ಸವಾರಿ ಮಾಡಿದ್ದಾರೆ. ಆದರೆ ಆರಂಭದ ದಿನದಿಂದಲೇ ಪಿಚ್ ವರ್ತಿಸುತ್ತಿರುವ ರೀತಿಯ ಬಗ್ಗೆ ಕೆಲ ಮಾಜಿ ಆಟಗಾರರು ಆಕ್ಷೇಪವನ್ನು ವ್ಯಕ್ತಪಡಿಸಿದರು. ಅದರಲ್ಲೂ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಇದೊಂದು ಕೆಟ್ಟ ಪಿಚ್, ಐದು ದಿನಗಳ ಕಾಲ ಆಡುವ ಸ್ಪರ್ಧಾತ್ಮಕ ಪಿಚ್ ಅಲ್ಲ ಎಂದಿದ್ದರು.

ಈ ರೀತಿಯ ಪ್ರತಿಕ್ರಿಯೆಗಳಿಗೆ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ದಿಗ್ಗಜ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಪ್ರತಿಕ್ರಿಯಿಸಿದ್ದು ತಿರುಗೇಟಿ ನೀಡಿದ್ದಾರೆ. ಇಂಗ್ಲೆಂಡ್‌ನಲ್ಲಿ ಪಂದ್ಯದ ಐದು ದಿನವೂ ಸೀಮಿಂಗ್ ಟ್ರ್ಯಾಕ್ ಇದ್ದಾಗ ಯಾರೂ ಮಾತನಾಡಲ್ಲ, ಆದರೆ ಭಾರತದಲ್ಲಿ ಸ್ಪಿನ್ ಆಗುತ್ತಿದ್ದಂತೆಯೇ ಮಾತನಾಡಲು ಮುಂದಾಗುತ್ತಾರೆ ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ಚೆನ್ನೈ ಪಿಚ್‌ನಲ್ಲಿ ಟೀಮ್ ಇಂಡಿಯಾ ಆಟಗಾರರು ಬ್ಯಾಟಿಂಗ್ ಮಾಡಿದ ರೀತಿಯ ಬಗ್ಗೆ ಗವಾಸ್ಕರ್ ಮಾತನಾಡಿದರು. "ನಿನ್ನೆ ರೋಹಿತ್ ಶರ್ಮಾ ಬ್ಯಾಟಿಂಗ್ ನಡೆಸಿ 150 ರನ್‌ಗಳನ್ನು ಕಲೆಹಾಕಿರುವುದನ್ನು ನಾವು ಗಮನಿಸಿದ್ದೇವೆ. ಚೆಂಡನ್ನು ಅದ್ಭುತವಾಗಿ ಅವರು ಎದುರಿಸಿದ್ದರು. ಇದು ಈ ಪಿಚ್‌ನ್ನು ಸಮರ್ಥನೆ ಮಾಡಿಕೊಂಡಂತಾಗಿದೆ" ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ. "ಕೆಲವರು ಈ ಬಗ್ಗೆ ಮಾತನಾಡುತ್ತಾರೆ. ಆದರೆ ಇಂಗ್ಲೆಂಡ್‌ನಲ್ಲಿ ನೀವು ಸೀಮಿಂಗ್ ಪಿಚ್‌ಗಳನ್ನು ಹೊಂದಿರುತ್ತೀರಿ. ಆಸ್ಟ್ರೇಲಿಯಾ ಈ ಸೀಮಿಂಗ್ ಪಿಚ್‌ನ್ಲಲಿ 46 ರನ್‌ಗಳಿಗೆ ಆಲೌಟ್ ಆಗಿದೆ. ಪಂದ್ಯದ ಐದು ದಿನವೂ ಸೀಮರ್‌ಗಳಿಗೆ ಪೂರಕವಾಗಿರುತ್ತದೆ. ಆಬಗ್ಗೆ ಯಾರೂ ಮಾತನಾಡಲಾರರು. ಇದು ಯಾವಾಗಲೂ ಭಾರತೀಯ ಪಿಚ್‌ಗಳ ಬಗ್ಗೆಯೇ ಮಾತು. ಚೆಮಡು ತಿರುವು ಪಡೆಯುತ್ತಿದ್ದಂತೆಯೇ ಅವರಿಗೆ ಸಮಸ್ಯೆಗಳು ಆರಂಭವಾಗುತ್ತವೆ" ಎಂದು ಟೀಕಿಸಿದ್ದಾರೆ ಸುನಿಲ್ ಗವಾಸ್ಕರ್.

"ಇದು ಒಂದು ಅಥವಾ ಇಬ್ಬರು ಭಾರತವನ್ನು ಇಷ್ಟ ಪಡದವರು ಆಡುವ ಮಾತುಗಳು. ಇದನ್ನು ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯಗಳು ನಡೆಯುವಾಗ ಪ್ರತಿ ಬಾರಿಯೂ ಮಾಡುತ್ತಾರೆ. ನಾವು ಅದನ್ನು ನಿರ್ಲಕ್ಷಿಸಬೇಕು ಯಾಕೆಂದರೆ ಅವರು ಎರಡು ರೀತಿಯ ಮಾನದಂಡಗಳನ್ನು ಹೊಂದಿದವರು" ಎಂದು ಸುನಿಲ್ ಗವಾಸ್ಕರ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

This News Article is a Copy of MYKHEL