ಬದಲಾಗಲಿದೆ ಕಿಂಗ್ಸ್ XI ಪಂಜಾಬ್ ಹೆಸರು: 'ಈ' ಹೆಸರಿನೊಂದಿಗೆ ಕಣಕ್ಕಿಳಿಯಲಿದೆ ಪಂಜಾಬ್ ತಂಡ

16-02-21 11:13 am       Source: MYKHEL Madhukara Shetty   ಕ್ರೀಡೆ

ಕಿಂಗ್ಸ್ ಇಲೆವ್ ಪಂಜಾಬ್ ತಂಡ ತನ್ನ ಹೆಸರನ್ನು ಬದಲಾಯಿಸಿಕೊಂಡು ಅದೃಷ್ಟ ಪರೀಕ್ಷೆಗೆ ಇಳಿಯಲು ಸಜ್ಜಾಗಿದೆ.

ಕಿಂಗ್ಸ್ ಇಲೆವ್ ಪಂಜಾಬ್ ತಂಡ ತನ್ನ ಹೆಸರನ್ನು ಬದಲಾಯಿಸಿಕೊಂಡು ಅದೃಷ್ಟ ಪರೀಕ್ಷೆಗೆ ಇಳಿಯಲು ಸಜ್ಜಾಗಿದೆ. ಕಳೆದ 13 ಆವೃತ್ತಿಗಳಲ್ಲಿ ಒಂದು ಬಾರಿಯೂ ಪ್ರಶಸ್ತಿ ಗೆಲ್ಲಲು ವಿಫಲವಾಗಿರುವ ಈ ಫ್ರಾಂಚೈಸಿ ಮುಂದಿನ ಐಪಿಎಲ್ ಆವೃತ್ತಿಯಲ್ಲಿ ತನ್ನ ಹೆಸರನ್ನು ಬದಲಾಯಿಸಿಕೊಂಡು ಕಣಕ್ಕಿಳಿಯುವುದು ಖಚಿತವಾಗಿದೆ. ಈ ಹಿಂದೆಯೂ ಐಪಿಎಲ್‌ನಲ್ಲಿ ಫ್ರಾಂಚೈಸಿಗಳು ತಮ್ಮ ತಂಡದ ಹೆಸರು ಬದಲಾಯಿಸಿದ ಉದಾಹರಣೆಗಳು ಇದೆ. ಇತ್ತೀಚೆಗೆ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಇದೇ ರೀತಿಯಲ್ಲಿ ಹೆಸರನ್ನು ಬದಲಾಯಿಸಿಕೊಂಡು ಕಣಕ್ಕಿಳಿದಿತ್ತು. ಅದಕ್ಕೂ ಮುನ್ನ ಸದ್ಯ ಕಾರ್ಯನಿರ್ವಹಿಸದ ಪುಣೆ ಸೂಪರ್‌ಜೈಂಟ್ಸ್‌ ತಂಡ ಕೂಡ ತನ್ನ ಹೆಸರನ್ನು ಬದಲಾವಣೆ ಮಾಡಿಕೊಂಡಿತ್ತು.



ಕಿಂಗ್ಸ್ XI ಪಂಜಾಬ್‌ಗೆ ಹೊಸ ಹೆಸರು

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ "ಪಂಜಾಬ್ ಕಿಂಗ್ಸ್" ಎಂದು ತನ್ನ ಹೆಸರನ್ನು ಬದಲಾವಣೆ ಮಾಡಿಕೊಳ್ಳಲಿದೆ. ಸುದ್ದಿ ಸಂಸ್ಥೆ ಪಿಟಿಐ ವರದಿಯ ಪ್ರಕಾರ ಪಂಜಾಬ್ ಮೂಲದ ಫ್ರಾಂಚೈಸಿ ಸಾಕಷ್ಟು ಚರ್ಚೆಯ ನಂತರ ಹೊಸ ಹೆಸರನ್ನು ಆಯ್ಕೆ ಮಾಡಿಕೊಂಡಿದೆ. ಆದರೆ ಈ ಹೆಸರು ಬದಲಾವಣೆ ಮಾಡುವ ನಿರ್ಧಾರ ತಕ್ಷಣೆವೇ ತೆಗೆದುಕೊಂಡಿರಲಿಲ್ಲ. ಸಾಕಷ್ಟು ಸಮಯಗಳಿಂದ ತಂಡದ ಹೆಸರು ಬದಲಾವಣೆ ಮಾಡಬೇಕು ಎಂಬ ಚರ್ಚೆ ನಡೆಯುತ್ತಿತ್ತು. ಇದೀಗ ಮುಂದಿನ ಆವೃತ್ತಿಯಿಂದ ಬದಲಾದ ಹೆಸರಿನೊಂದಿಗೆ ಕಣಕ್ಕಿಳಿಯಲಿದೆ.



ಚೆನ್ನೈ ಟೆಸ್ಟ್‌ ನಂತರ ಮಿನಿ ಹರಾಜು

ಮುಂದಿನ ಬಾರಿಯ ಐಪಿಎಲ್ 2021ರ ಏಪ್ರಿಲ್‌ನಿಂದ ಆರಂಭವಾಗುವ ನಿರೀಕ್ಷೆಯಿದೆ. ಇದಕ್ಕೂ ಮುನ್ನ ಫೆಬ್ರವರಿ 18ರಂದು ಐಪಿಎಲ್ ಮಿನಿ ಹರಾಜು ಪ್ರಕ್ರಿಯೆ ಚೆನ್ನೈನಲ್ಲಿ ನಡೆಯಲಿದೆ. ಸದ್ಯ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಎರಡು ಹಾಗೂ ಮೂರನೇ ಪಂದ್ಯದ ಮಧ್ಯದ ಅವಧಿಯಲ್ಲಿ ಈ ಹರಾಜು ನಡೆಯಲಿದೆ.



ಕಳೆದ ಬಾರಿ ಎಡವಿದ ಪಂಜಾಬ್

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಟೀಮ್ ಇಂಡಿಯಾ ಆಟಗಾರ ಕೆಎಲ್ ರಾಹುಲ್ ಮುನ್ನಡೆಸುತ್ತಿದ್ದಾರೆ. ಕಳೆದ ಬಾರಿಯ ಆವೃತ್ತಿಯಲ್ಲಿ ಆರಂಭದಲ್ಲಿ ಸತತ ಸೋಲುಗಳಿಂದ ಕಂಗೆಟ್ಟು ಬಳಿಕ ಅದ್ಭುತ ರೀತಿಯಲ್ಲಿ ಕಮ್‌ಬ್ಯಾಕ್ ಮಾಡಿ ಹುಬ್ಬೇರುವಂತೆ ಮಾಡಿತ್ತು ಪಂಜಾಬ್. ಆದರೆ ಅಂತಿಮ ಹಂತದಲ್ಲಿ ಮತ್ತೆ ಎಡವಿ ಫ್ಲೇಆಫ್‌ಗೆ ಏರುವಲ್ಲಿ ವಿಫಲವಾಗಿತ್ತು.



ಒಂದೇ ಬಾರಿ ಫೈನಲ್‌ ಸಾಧನೆ

ಈ ಹಿಂದಿನ ಎಲ್ಲಾ ಆವೃತ್ತಿಗಳಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಉತ್ತಮ ಪ್ರದರ್ಶನವನ್ನು ನೀಡಿಕೊಂಡು ಬಂದಿದೆ. ಆದರೆ ಈವರೆಗೂ ಪ್ರಶಸ್ತಿ ಗೆಲ್ಲಲು ಅದು ವಿಫಲವಾಗಿದೆ. 2015ರಲ್ಲಿ ಒಂದು ಭಾರಿ ಫೈನಲ್ ಹಂತಕ್ಕೆ ಪ್ರವೇಶಿಸಿ ರನ್ನರ್‌ಅಪ್‌ಗೆ ತೃಪ್ತಿಪಟ್ಟುಕೊಂಡಿತ್ತು. ಕೇವಲ ಎರಡು ಬಾರಿ ಮಾತ್ರವೇ ಪ್ಲೇ ಆಫ್‌ಹಂತಕ್ಕೆ ಪ್ರವೇಶ ಪಡೆಯುವಲ್ಲಿ ತಂಡ ಯಶಸ್ವಿಯಾಗಿದೆ. ಈಗ ಹೊಸ ಹೆಸರು ಪಂಜಾಬ್‌ಗೆ ಅದೃಷ್ಠವನ್ನು ತರಲಿದೆಯಾ ಎಂಬುದ ಕುತೂಹಲ ಮೂಡಿಸಿದೆ.

This News Article is a Copy of MYKHEL