ಐಎಸ್‌ಎಲ್: ಗೌರವಕ್ಕಾಗಿ ಕೇರಳ ಮತ್ತು ಚೆನ್ನೈ ಸೆಣಸು

21-02-21 12:31 pm       Source: MYKHEL   ಕ್ರೀಡೆ

ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಕೇರಳ ಬ್ಲಾಸ್ಟರ್ಸ್ ಹಾಗೂ ಚೆನ್ನೈಯಿನ್ ಎಫ್ ಸಿ ತಂಡಗಳ ಪ್ಲೇ ಆಫ್ ಆಸೆ ಕೊನೆಗೊಂಡಿದೆ,

ಗೋವಾ: ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಕೇರಳ ಬ್ಲಾಸ್ಟರ್ಸ್ ಹಾಗೂ ಚೆನ್ನೈಯಿನ್ ಎಫ್ ಸಿ ತಂಡಗಳ ಪ್ಲೇ ಆಫ್ ಆಸೆ ಕೊನೆಗೊಂಡಿದೆ, ಆದರೆ ಭಾನುವಾರ ಜಿಎಂಸಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ದಕ್ಷಿಣದ ಎರಡು ಬಲಿಷ್ಠ ತಂಡಗಳು ಗೌರವಕ್ಕಾಗಿ ಹೋರಾಟ ನಡೆಸಲಿವೆ.

ಕೇರಳ ತಂಡ ಕಳೆದ ಆರು ಪಂದ್ಯಗಳಲ್ಲಿ ಜಯ ಕಂಡಿರಲಿಲ್ಲ. ಹಲವಾರು ಸಂದರ್ಭಗಳಲ್ಲಿ ತಂಡದ ಡಿಫೆನ್ಸ್ ವಿಭಾಗ ಸೋಲಿಗೆ ದಾರಿಮಾಡಿಕೊಟ್ಟಿತ್ತು. ಆ ಆರು ಪಂದ್ಯಗಳಲ್ಲಿ ಕೇರಳ 12 ಗೋಲುಗಳನ್ನು ಎದುರಾಳಿ ತಂಡಕ್ಕೆ ನೀಡಿತ್ತು. ಮಧ್ಯಂತರ ಕೋಚ್ ಇಶ್ಫಕ್ ಅಹಮದ್ ಚೆನ್ನೈ ವಿರುದ್ಧದ ಪಂದ್ಯಕ್ಕೆ ತಮ್ಮ ತಂಡ ಸಾಕಷ್ಟು ಸ್ಫೂರ್ತಿ ಪಡೆದಿದೆ ಎಂದಿದ್ದಾರೆ.

"ನಾವೀಗ ಸಂಕಷ್ಟ ಪರಿಸ್ಥಿತಿಯಲ್ಲಿ ಇದ್ದೇವೆ. ಹಲವಾರು ಅಂಶಗಳನ್ನು ಬದಲಾಯಿಸಲು ಈಗ ಕಾಲಾವಕಾಶವಿಲ್ಲ. ಆದರೆ ಕೆಲವೊಂದು ವಿಷಯಗಳನ್ನು ನಾವು ಬದಲಾಯಿಸಿಕೊಂಡಿದ್ದೇವೆ," ಎಂದರು. "ಬಹಳ ಮುಖ್ಯವಾದ ಅಂಶವೆಂದರೆ ತಂಡದ ಆಟಗಾರರು ಸ್ಫೂರ್ತಿ ಪಡೆದಿದ್ದಾರೆ. ಗೌರವ ಮತ್ತು ಸ್ವಾಭಿಮಾನಕ್ಕಾಗಿ ನಾವು ಆಡುತ್ತಿದ್ದೇವೆ. ಎರಡು ಪಂದ್ಯಗಳಿಗಾಗಿ ಅವರು ಬಲಿಷ್ಠರಾಗಿದ್ದಾರೆ," ಎಂದರು.



ಚೆನ್ನೈಯಿನ್‌ಗೆ ಅದೃಷ್ಟ ಕೈಗೂಡಲಿಲ್ಲ

ಇದೇ ವೇಳೆ ಚೆನ್ನೈಯಿನ್ ತಂಡಕ್ಕೆ ಅದೃಷ್ಟ ಕೈಗೂಡಲಿಲ್ಲ. ಪ್ಲೇ ಆಫ್ ತಲುಪಲು ತಂಡಕ್ಕೆ ಉತ್ತಮ ಅವಕಾಶವಿದ್ದಿತ್ತು, ಆದರೆ ಸಾಬಾ ಲಾಸ್ಜ್ಲೊ ಪಡೆ ಕಳೆದ ಎಂಟು ಪಂದ್ಯಗಳಲ್ಲಿ ಜಯ ಕಂಡಿರಲಿಲ್ಲ. ನಾರ್ಥ್ ಈಸ್ಟ್ ಯುನೈಟೆಡ್ ಮತ್ತು ಎಫ್ ಸಿ ಗೋವಾ ವಿರುದ್ಧದ ಪಂದ್ಯದಲ್ಲಿ ಮುನ್ನಡೆ ಕಂಡಿದ್ದರೂ ಕೊನೆಯ ಕ್ಷಣದಲ್ಲಿ ಗೋಲು ನೀಡಿ ಜಯದಿಂದ ವಂಚಿತವಾಗಿತ್ತು. ಕೋಚ್ ಲಾಸ್ಜ್ಲೋ ಈ ಬಗ್ಗೆ ಯಾವುದೇ ರೀತಿಯ ದೂರನ್ನು ವ್ಯಕ್ತಪಡಿಸಿಲ್ಲ, " ಈಗಲೂ ನಾನು ನನ್ನ ತಂಡದ ಹಲವು ಅಂಶಗಳಿಗಾಗಿ ಹೆಮ್ಮೆಪಡುತ್ತೇನೆ. ಯಾವುದೇ ತಂಡವಿರಲಿ ನಮ್ಮ ಆಟಗಾರರು ನೈಜ ಆಟವಾಡಿದ್ದಾರೆ. ತಂಡ ನಿಜವಾಗಿಯೂ ತನ್ನ ನೈಜ ಸಾಮರ್ಥ್ಯ ತೋರಿದೆ ಆದರೆ ಗೋವಾ ಮತ್ತು ನಾರ್ಥ್ ಈಸ್ಟ್ ವಿರುದ್ಧ ಜಯ ಕಾಣುವಲ್ಲಿ ವಿಫಲವಾಗಿರುವುದು ಅಂಕ ಕಳೆದುಕೊಳ್ಳಲು ಕಾರಣವಾಯಿತು," ಎಂದಿದ್ದಾರೆ.



ಯಾವುದೇ ಬದಲಾವಣೆಯಾಗದು

ಕೇರಳ ಬ್ಲಾಸ್ಟರ್ಸ್ ವಿರುದ್ಧ ಜಯ ಗಳಿಸಿದರೆ ಚೆನ್ನೈಯಿನ್ ತಂಡದ ಅಂಕಪಟ್ಟಿಯಲ್ಲಿ ಯಾವುದೇ ಬದಲಾವಣೆಯಾಗದು, ಆದರೆ ಕೋಚ್ ಆಭಿಮಾನಿಗಳು ಮತ್ತು ತಂಡಕ್ಕಾಗಿ ನಾಳೆ ಜಯ ಅಗತ್ಯ ಇದೆ ಎಂದಿದ್ದಾರೆ. "ನಾವು ನಮ್ಮ ಅಭಿಮಾನಿಗಳಿಗಾಗಿ ಗೆಲ್ಲಬೇಕಿದೆ. ಕ್ಲಬ್ ಮಾಲೀಕರು ಮತ್ತು ಎಲ್ಲರಿಗಾಗಿ ಉಳಿದ ಪಂದ್ಯಗಳಲ್ಲಿ ಗೆಲ್ಲಬೇಕಾಗಿದೆ. ನಾವು ಮೊದಲ ಪಂದ್ಯದಲ್ಲಿ ಜೆಮ್ಷೆಡ್ಪುರ ವಿರುದ್ಧ ಗೆದ್ದಿದ್ದೇವೆ, ಅದೇ ರೀತಿ ಕೊನೆಯ ಪಂದ್ಯದಲ್ಲಿ ಕೇರಳ ವಿರುದ್ಧ ಗೆಲ್ಲುತ್ತೇವೆ," ಎಂದರು. 

ಉತ್ತಮ ಸಾಮರಸ್ಯ ಕಂಡಿದ್ದೇನೆ

ಸಾಮರಸ್ಯದ ವಿಷಯದಲ್ಲಿ ತಾನು ಇದುವರೆಗೂ ಕೆಲಸ ಮಾಡಿರುವ ತಂಡಗಳಲ್ಲಿ ಇದು ಉತ್ತಮವಾಗಿದೆ ಎಂದಿದ್ದಾರೆ. "ನಾನು ಸಾಕಷ್ಟು ತಂಡಗಳ ಜತೆಗಿದ್ದೆ, ಇದು ನನ್ನ ಮೂರನೇ ಖಂಡ. ಆದರೆ ಇಲ್ಲಿ ಉತ್ತಮ ಸಾಮರಸ್ಯ ಕಂಡಿದ್ದೇನೆ. ನಾವು ಅತ್ಯಂತ ಕೆಟ್ಟ ಆಟ, ಕೆಟ್ಟ ಸಂದರ್ಭಗಳನ್ನು ಎದುರಿಸಿದ್ದೇವೆ, ಆದರೆ ಆಟಗಾರರು ಒಬ್ಬರನ್ನೊಬ್ಬರು ಹುರಿದುಂಬಿಸಿರುವುದು ಗಮನಾರ್ಹ," ಎಂದರು.

This News Article is a Copy of MYKHEL