ಭಾರತ vs ಇಂಗ್ಲೆಂಡ್: ವಿಶ್ವದಾಖಲೆ ಸನಿಹದಲ್ಲಿದ್ದಾರೆ ವಿರಾಟ್ ಕೊಹ್ಲಿ!

23-02-21 03:35 pm       Source: MYKHEL   ಕ್ರೀಡೆ

ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಕೊಹ್ಲಿಗೆ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್‌ ದಾಖಲೆ ಸರಿಗಟ್ಟಿ ವಿಶ್ವದಾಖಲೆ ನಿರ್ಮಿಸುವ ಅವಕಾಶವಿದೆ.

ಅಹ್ಮದಾಬಾದ್: ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ವಿಶ್ವದಾಖಲೆಯ ಸಮೀಪದಲ್ಲಿದ್ದಾರೆ. ಮುಂಬರಲಿರುವ ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್‌ ಪಂದ್ಯದಲ್ಲಿ ಕೊಹ್ಲಿಗೆ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್‌ ದಾಖಲೆ ಸರಿಗಟ್ಟಿ ವಿಶ್ವದಾಖಲೆ ನಿರ್ಮಿಸುವ ಅವಕಾಶವಿದೆ. ಅಹ್ಮದಾಬಾದ್‌ ಮೊಟೆರಾ ಸ್ಟೇಡಿಯಂನಲ್ಲಿ ನಡೆಯಲಿರುವ ಪಿಂಕ್‌ಬಾಲ್‌ ಟೆಸ್ಟ್‌ನಲ್ಲಿ ಕೊಹ್ಲಿ ಏನಾದರೂ ಶತಕ ಬಾರಿಸಿದೆ ಮೈಲುಗಲ್ಲು ಸ್ಥಾಪನೆಯಾಗಲಿದೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಕೊಹ್ಲಿ ಎರಡು ಅರ್ಧಶತಕಗಳನ್ನು ಬಾರಿಸಿದ್ದರು. ಆದರೆ ಅದನ್ನು ಶತಕಕ್ಕೆ ಪರಿವರ್ತಿಸುವಲ್ಲಿ ಕೊಹ್ಲಿ ಎಡವಿದ್ದರು. ಫೆಬ್ರವರಿ 24ರಿಂದ ಆರಂಭಗೊಳ್ಳಲಿರುವ ಮೂರನೇ ಟೆಸ್ಟ್‌ನಲ್ಲಿ ಕೊಹ್ಲಿ ಶತಕ ಬಾರಿಸಿದರೆ ದಾಖಲೆ ನಿರ್ಮಾಣವಾಗಲಿದೆ.

ಭಾರತ-ಇಂಗ್ಲೆಂಡ್ ತೃತೀಯ (ಡೇ-ನೈಟ್) ಟೆಸ್ಟ್‌ ಅಹ್ಮದಾಬಾದ್‌ನ ಮೊಟೆರಾ (ಸರ್ದಾರ್ ಪಟೇಲ್ ಸ್ಟೇಡಿಯಂ)ದಲ್ಲಿ ಫೆಬ್ರವರಿ 24ರಂದು 2:30 PMಗೆ ಆರಂಭಗೊಳ್ಳಲಿದೆ.



ಶತಕ ಬಾರಿಸಿ ಬಹಳ ದಿನವಾಗಿದೆ

2019ರಂದು ಕೋಲ್ಕತ್ತಾದ ಈಡನ್ ಗಾರ್ಡನ್‌ನಲ್ಲಿ ನಡೆದಿದ್ದ ಬಾಂಗ್ಲಾದೇಶ ವಿರುದ್ಧದ ಡೇ-ನೈಟ್ ಟೆಸ್ಟ್‌ನಿಂದಲೂ ವಿರಾಟ್ ಕೊಹ್ಲಿ ಶತಕವನ್ನೇ ಬಾರಿಸಿಲ್ಲ. ಆ ಪಂದ್ಯದ ಬಳಿಕ ಕೊಹ್ಲಿ 10 ಅಂತಾರಾಷ್ಟ್ರೀಯ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. ಆದರೂ ಶತಕ ದಾಖಲಿಸೋದು ಕೊಹ್ಲಿಯಿಂದ ಸಾಧ್ಯವಾಗಿಲ್ಲ.



ಪಾಂಟಿಂಗ್ ದಾಖಲೆ ಬದಿಗೆ

ಇಂಗ್ಲೆಂಡ್‌ ವಿರುದ್ಧದ ಪಿಂಕ್‌ಬಾಲ್‌ ಟೆಸ್ಟ್‌ನಲ್ಲಿ ಕೊಹ್ಲಿಯೇನಾದರೂ ಶತಕ ಬಾರಿಸಿದರೆ ನಾಯಕನಾಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ಶತಕಗಳನ್ನು ಬಾರಿಸಿದ ಬ್ಯಾಟ್ಸ್‌ಮನ್‌ ಆಗಿ ಕೊಹ್ಲಿ ಗುರುತಿಸಿಕೊಳ್ಳಲಿದ್ದಾರೆ. ಆ ಶತಕದೊಂದಿಗೆ ಕೊಹ್ಲಿ 42 ಅಂತಾರಾಷ್ಟ್ರೀಯ ಶತಕಗಳನ್ನು ಬಾರಿಸಿದಂತಾಗುತ್ತದೆ. ಇಷ್ಟು ಶತಕ ಬಾರಿಸಿದ ವಿಶ್ವದ ಮೊದಲ ನಾಯಕನೆಂಬ ದಾಖಲೆಗೆ ಕೊಹ್ಲಿ ಪಾತ್ರರಾಗಲಿದ್ದಾರೆ.



ಪಾಂಟಿಂಗ್-ಕೊಹ್ಲಿ ಸರಿಸಮ

ವಿರಾಟ್ ಕೊಹ್ಲಿ ಮತ್ತು ರಿಕಿ ಪಾಂಟಿಂಗ್‌ ಸದ್ಯ ನಾಯಕರಾಗಿ 41 ಶತಕಗಳ ದಾಖಲೆ ಹೊಂದಿದ್ದಾರೆ. ಇನ್ನೊಂದು ಶತಕ ಬಾರಿಸಿದರೂ ರನ್ ಮಷೀನ್ ಹೆಸರಿನಲ್ಲಿ ವಿಶ್ವ ದಾಖಲೆ ನಿರ್ಮಾಣವಾಗಲಿದೆ. ತೃತೀಯ ಟೆಸ್ಟ್‌ನಲ್ಲಿ ಕೊಹ್ಲಿ ಶತಕ ಬಾರಿಸಿದರೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಕೊಹ್ಲಿ 28ನೇ ಶತಕ ಬಾರಿಸಿದಂತಾಗುತ್ತದೆ. ಇಂಗ್ಲೆಂಡ್ ವಿರುದ್ಧದ ದ್ವಿತೀಯ ಪಂದ್ಯದಲ್ಲಿ ಗೆಲುವಿನೊಂದಿಗೆ ಕೊಹ್ಲಿ, ಎಂಸ್ ಧೋನಿ ದಾಖಲೆ ಮೀರಿಸಿದ್ದರು. ತವರಿನಲ್ಲಿ ನಡೆದ ಟೆಸ್ಟ್‌ ಪಂದ್ಯಗಳಲ್ಲಿ 21 ಗೆಲುವುಗಳನ್ನು ಕಂಡ ನಾಯಕನಾಗಿ ಕೊಹ್ಲಿ ಗುರುತಿಸಿಕೊಂಡಿದ್ದರು.

This News Article is a Copy of MYKHEL