ಅಂತಾರಾಷ್ಟ್ರೀಯ ಕ್ರಿಕೆಟರ್‌ಗಳಾಗಿ ಮಿಂಚಿದ ಈ 3 ಆಟಗಾರರು ಈಗ ಆಸ್ಟ್ರೇಲಿಯಾದಲ್ಲಿ ಬಸ್ ಡ್ರೈವರ್‌ಗಳು!

01-03-21 12:38 pm       Source: MYKHEL   ಕ್ರೀಡೆ

ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟರ್‌ಗಳಾದ ಸೂರಜ್ ರಣ್‌ದೀವ್, ಚಿಂತಕ ಜಯಸಿಂಘೆ ಹಾಗೂ ವಾಡಿಂಗ್ಟನ್ ಮ್ವೆಂಗಾ ತಮ್ಮ ವೃತ್ತಿ ಬದಲಾಯಿಸಿಕೊಂಡು ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ ಬಸ್ ಡ್ರೈವರ್‌ಗಳಾಗಿದ್ದಾರೆ.

ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟರ್‌ಗಳಾದ ಸೂರಜ್ ರಣ್‌ದೀವ್, ಚಿಂತಕ ಜಯಸಿಂಘೆ ಹಾಗೂ ವಾಡಿಂಗ್ಟನ್ ಮ್ವೆಂಗಾ ತಮ್ಮ ವೃತ್ತಿ ಬದಲಾಯಿಸಿಕೊಂಡು ಆಸ್ಟ್ರೇಲಿಯಾದ ಮೆಲ್ಬರ್ನ್‌ನಲ್ಲಿ ಬಸ್ ಡ್ರೈವರ್‌ಗಳಾಗಿದ್ದಾರೆ. ಈ ಮೂವರು ಕೂಡ ಫ್ರಾನ್ಸ್ ಮೂಲದ ಕಂಪನಿಯೊಂದರಲ್ಲಿ ಬಸ್ ಚಾಲಕರಾಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ.

ಈ ಮೂವರು ಕೂಡ ತಮ್ಮ ರಾಷ್ಟ್ರಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ ಆಟಗಾರರಾಗಿದ್ದಾರೆ. ಈಗ ಇವರು ಮೆಲ್ಬರ್ನ್‌ನಲ್ಲಿ ಬಸ್ ಡ್ರೈವರ್‌ಗಳಾಗಿ ಕರ್ತವ್ಯ ನಿರ್ವಹಿಸುವ ಜೊತೆಗೆ ಸ್ಥಳೀಯ ಕ್ಲಬ್‌ವೊಂದರಲ್ಲಿ ಕ್ರಿಕೆಟ್ ಆಡುತ್ತಿದ್ದಾರೆ. ಸೂರಜ್ ರಣ್‌ದೀವ್ ಐಪಿಎಲ್‌ನಲ್ಲೂ ಆಡಿದ ಅನುಭವ ಹೊಂದಿದ್ದು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದಾರೆ.

ಫ್ರಾನ್ಸ್ ಮೂಲದ ಕಂಪನಿಯಲ್ಲಿ ಡ್ರೈವರ್‌ಗಳು

ಸೂರಜ್ ರಣ್‌ದೀವ್, ಚಿಂತಕ ಜಯಸಿಂಘೆ ಶ್ರೀಲಂಕಾ ತಂಡವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ್ದರೆ ವಾಡಿಂಗ್ಟನ್ ಮ್ವೆಂಗಾ ಜಿಂಬಾಬ್ವೆ ತಂಡದ ಪರವಾಗಿ ಕ್ರಿಕೆಟ್ ಆಡಿದವರು. ಈ ಮೂವರನ್ನು ಕೂಡ ಫ್ರಾನ್ಸ್ ಮೂಲಕ ಕಂಪನಿ ಟ್ರಾನ್ಸ್‌ಡೇವ್ ಬಸ್‌ಡ್ರೈವರ್‌ಗಳಾಗಿ ನೇಮಿಸಿಕೊಂಡಿದೆ. ಈ ಕಂಪನಿಯಲ್ಲಿ 1200 ಬಸ್‌ ಡ್ರೈವರ್‌ಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಕ್ಲಬ್‌ನಲ್ಲಿ ರಣ್‌ದೀವ್ ಸಕ್ರಿಯ

ಸೂರಜ್ ರಣ್‌ದೀವ್ ಬಸ್ ಡ್ರೈವರ್‌ ಆಗಿ ಕರ್ತವ್ಯ ನಿರ್ವಹಿಸುವ ಜೊತೆಗೆ ಸ್ಥಳೀಯ ಮಟ್ಟದ ಕ್ರಿಕೆಟ್‌ನಲ್ಲಿ ಸಾಕಷ್ಟು ಕ್ರೀಯಾಶೀಲರಾಗಿದ್ದಾರೆ. ಭಾರತದ ವಿರುದ್ಧ ಆಸ್ಟ್ರೇಲಿಯಾ ಟೆಸ್ಟ್ ಸರಣಿಯನ್ನು ಆಡುವ ವೇಳೆ ರಣ್‌ದೀವ್ ಭಾರತದ ಸವಾಲನ್ನು ಎದುರಿಸಲು ಮೆಲ್ಬರ್ನ್ ಕ್ರಿಕೆಟ್ ಅಂಗಳದಲ್ಲಿ ಅಭ್ಯಾಸದ ವೇಳೆ ಸಹಾಯವನ್ನು ಮಾಡಿದ್ದರು. ಈ ಬಗ್ಗೆ ಮಾತನಾಡಿದ ರಣ್‌ದೀವ್ "ಕ್ರಿಕೆಟ್ ಆಸ್ಟ್ರೇಲಿಯಾ ಭಾರತ ಸರಣಿಯ ವೇಳೆ ಆಸಿಸ್ ಬ್ಯಾಟ್ಸ್‌ಮನ್‌ಗಳಿಗೆ ನೆಟ್‌ನಲ್ಲಿ ಬೌಲಿಂಗ್ ಮಾಡಲು ಕೇಳಿಕೊಂಡಿತ್ತು. ನನಗೆ ಸಿಕ್ಕ ಆ ಅವಕಾಶವನ್ನು ನಾನು ಕಳೆದುಕೊಳ್ಳಲು ಸಿದ್ಧನಿರಲಿಲ್ಲ" ಎಂದಿದ್ದಾರೆ. ಸದ್ಯ ರಣ್‌ದೀವ್ ಡ್ಯಾಂಡೆನಂಗ್ ಕ್ರಿಕೆಟ್ ಕ್ಲಬ್‌ ಪರವಾಗಿ ಆಡುತ್ತಿದ್ದಾರೆ.

ಜಯಸಿಂಘೆ-ಮ್ವೆಂಗಾ ಅಂತಾರಾಷ್ಟ್ರೀಯ ಕೆರಿಯರ್

ಚಿಂತಕ ಜಯಸಿಂಘೆ ಶ್ರೀಲಂಕಾ ತಂಡವನ್ನು 5 ಟಿ20 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದಾರೆ. ರಾಷ್ಟ್ರೀಯ ತಂಡದ ಪರವಾಗಿ 49 ರನ್ ಗಳಿಸಿದ್ದಾರೆ. 2009 ಡಿಸೆಂಬರ್ 9ರಂದು ಅವರು ಭಾರತದ ವಿರುದ್ಧ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ್ದರು. ಮತ್ತೊಂದೆಡೆ ಜಿಂಬಾಬ್ವೆಯ ಮಧ್ಯಮ ವೇಗದ ಬೌಲರ್ ಆಗಿದ್ದ ವಾಡಿಂಗ್ಟನ್ ಮ್ವೆಂಗಾ 2005-06ರ ಅವಧಿಯಲ್ಲಿ ಒಂದು ಟೆಸ್ಟ್ ಪಂದ್ಯ ಹಾಗೂ 3 ಏಕದಿನ ಪಂದ್ಯಗಳಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದಾರೆ.

ಸೆಹ್ವಾಗ್ ಶತಕ ತಪ್ಪಸಿದ್ದ ರಣ್‌ದೀವ್

ಸೂರಜ್ ರಣ್‌ದೀವ್ ಅವರನ್ನು ಭಾರತೀಯ ಕ್ರಿಕೆಟ್ ಪ್ರೇಮಿಗಳು ಬೇಡದ ಕಾರಣವೊಂದಕ್ಕೆ ನೆನಪಿಸಿಕೊಳ್ಳುತ್ತಾರೆ. 2010ರಲ್ಲಿ ಭಾರತದ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವಿಗೆ 1 ರನ್ ಅಗತ್ಯವಿತ್ತು. ಸ್ಟ್ರೈಕ್‌ನಲ್ಲಿದ್ದ ವೀರೇಂದ್ರ ಸೆಹ್ವಾಗ್ 99 ರನ್ ಗಳಿಸಿದ್ದರು. ಆಗ ಬೌಲಿಂಗ್ ಮಾಡುತ್ತಿದ್ದ ರಣ್‌ದೀವ್ ಎಸೆತವನ್ನು ಸೆಹ್ವಾಗ್ ಸಿಕ್ಸರ್‌ಗೆ ಅಟ್ಟಿದ್ದರು. ಆದರೆ ಆ ಎಸೆತ ನೋ ಬಾಲ್ ಆಗಿತ್ತು. ಈ ಮೂಲಕ ಸೆಹ್ವಾಗ್ ಸೆಹ್ವಾಗ್ ಶತಕವನ್ನು ತಪ್ಪಿಸಿಕೊಂಡಿದ್ದರು. ಇದು ಬೌಲರ್ ರಣ್‌ದೀವ್ ಬೇಕೆಂದೇ ಎಸೆದ ನೋ ಬಾಲ್ ಎಂದು ಒಂದಷ್ಟು ವಿವಾದವೂ ಆಗಿತ್ತು.

This News Article Is A Copy Of MYKHEL