ಕಡೆಗೂ ಆರ್‌ಸಿಬಿ ದಾಂಡಿಗನಿಂದ ಬಂತು ಸ್ಪೋಟಕ ಆಟ: ಕಿವೀಸ್ ವಿರುದ್ಧ ಆಸಿಸ್‌ಗೆ ಭರ್ಜರಿ ಗೆಲುವು

03-03-21 05:09 pm       Source: MYKHEL   ಕ್ರೀಡೆ

ಈ ಬಾರಿಯ ಐಪಿಎಲ್ ಹರಾಜಿನಲ್ಲಿ 14.26 ಕೋಟಿಗೆ ಆರ್‌ಸಿಬಿ ತಂಡಕ್ಕೆ ಹರಾಜಾಗುವ ಮೂಲಕ ಹುಬ್ಬೇರುವಂತೆ ಮಾಡಿದ್ದರು ಆಸ್ಟ್ರೇಲಿಯಾ ತಂಡದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್.

ಈ ಬಾರಿಯ ಐಪಿಎಲ್ ಹರಾಜಿನಲ್ಲಿ 14.26 ಕೋಟಿಗೆ ಆರ್‌ಸಿಬಿ ತಂಡಕ್ಕೆ ಹರಾಜಾಗುವ ಮೂಲಕ ಹುಬ್ಬೇರುವಂತೆ ಮಾಡಿದ್ದರು ಆಸ್ಟ್ರೇಲಿಯಾ ತಂಡದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್. ಆದರೆ ಈ ಹರಾಜಿನ ನಂತರ ನಡೆದ ಸತತ ಎರಡು ಪಂದ್ಯಗಳಲ್ಲಿ ಹೀನಾಯ ಪ್ರದರ್ಶನ ನೀಡುವ ಮೂಲಕ ಟೀಕೆಗೆ ಗುರಿಯಾಗಿದ್ದರು. ಆದರೆ ಈಗ ಈ ಟೀಕೆಗಳಿಗೆ ಮ್ಯಾಕ್ಸ್‌ವೆಲ್ ತಮ್ಮ ಬ್ಯಾಟ್‌ನಿಂದಲೇ ಉತ್ತರವನ್ನು ನೀಡಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಸಿಡಿಲಬ್ಬರದ ಬ್ಯಾಟಿಂಗ್ ಮಾಡಿದ್ದಾರೆ. ಕೇವಲ 31 ಎಸೆತಗಳನ್ನು ಎದುರಿಸಿದ ಗ್ಲೆನ್ ಮ್ಯಾಕ್ಸ್‌ವೆಲ್ ಬರೊಬ್ಬರಿ 70 ರನ್‌ ಬಾರಿಸಿದ್ದಾರೆ. ಈ ಸ್ಪೋಟಕ ಇನ್ನಿಂಗ್ಸ್‌ನಲ್ಲಿ 8 ಬೌಂಡರಿ ಹಾಗೂ 5 ಸಿಕ್ಸರ್ ಒಳಗೊಂಡಿತ್ತು. 225.81ರ ಸ್ಟ್ರೈಕ್ರೇಟ್‌ನಲ್ಲಿ ಅವರು ಬ್ಯಾಟ್ ಬೀಸಿದ್ದರು.

ಇನ್ನು ಮ್ಯಾಕ್ಸ್‌ವೆಲ್ ಮಾತ್ರವಲ್ಲ ಆರ್‌ಸಿಬಿ ತಂಡದಲ್ಲಿರುವ ಆಸ್ಟ್ರೇಲಿಯಾ ತಂಡದ ಇನ್ನೋರ್ವ ಆಟಗಾರ ಜೋಶ್ ಫಿಲಿಪ್ಪೆ ಕೂಡ ಉತ್ತಮ ಪ್ರದರ್ಶನ್ನು ನೀಡಿದ್ದಾರೆ. 27 ಎಸೆತಗಳಲ್ಲಿ ಫಿಲಿಪ್ಪೆ 43 ರನ್‌ಗಳ ಕೊಡುಗೆಯನ್ನು ನೀಡಿದ್ದಾರೆ. ಇನ್ನು ಆರ್‌ಸಿಬಿ ತಂಡದಿಂದ ಹೊರ ಬಿದ್ದು ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಮಾರಾಟವಾಗದೇ ಉಳಿದುಕೊಂಡ ಆಸ್ಟ್ರೇಲಿಯಾ ತಂಡದ ನಾಯಕ ಆರೋನ್ ಫಿಂಚ್ ಕೂಡ ಸ್ಪೋಟಕ ಪ್ರದರ್ಶನ ನೀಡುವಲ್ಲಿ ಸಫಲರಾಗಿದ್ದಾರೆ. ಫಿಂಚ್ 44 ಎಸೆತಗಳಲ್ಲಿ 69 ರನ್ ಗಳಿಸಿದರು.

ಆಸ್ಟ್ರೇಲಿಯಾ ತಂಡದ ಈ ಅಬ್ಬರದ ಆಟದಿಂದಾಗಿ ನಿಗದಿತ 20 ಓವರ್‌ಗಳಲ್ಲಿ 208 ರನ್‌ ಪೇರಿಸಲು ಶಕ್ತವಾಯಿತು. ಈ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲೆಂಡ್ ಪರವಾಗಿ ಉತ್ತಮ ಜೊತೆಯಾಟ ಲಭ್ಯವಾಗಲಿಲ್ಲ. ಮಾರ್ಟಿನ್ ಗಪ್ಟಿಲ್ 43 ರನ್‌ ಗಳಿಸಿದರೆ ಡೆವೋನ್ ಕಾನ್ವೆ 38 ರನ್‌ಗಳ ಕೊಡುಗೆಯನ್ನು ನೀಡಿದರು. ಉಳಿದಂತೆ ಎಲ್ಲಾ ಆಟಗಾರರು ವಿಫಲರಾದರು.

ಆಸ್ಟ್ರೇಲಿಯಾ ತಂಡದ ಪರವಾಗಿ ಸ್ಪಿನ್ನರ್ ಆಶ್ಟನ್ ಅಗರ್ ನ್ಯೂಜಿಲೆಂಡ್ ತಂಡಕ್ಕೆ ಆಘಾತವನ್ನು ನೀಡಿದರು. ಕೀವಿಸ್‌ನ 6 ವಿಕೆಟ್‌ ಆಶ್ಟನ್ ಅಗರ್ ಪಾಲಾಯಿತು. ಹೀಗಾಗಿ ಆಸಿಸ್ ನೀಡಿದ ದೊಡ್ಡ ಮೊತ್ತವನ್ನು ಬೆನ್ನಟ್ಟಲು ಕೀವಿಸ್ ಪಡೆ ಸಂಪೂರ್ಣವಾಗಿ ವಿಫಲವಾಗಿ 144 ರನ್‌ಗಳಿಗೆ ಆಲೌಟ್ ಆಯಿತು. ಈ ಮೂಲಕ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾ ಅಂತರವನ್ನು 1-2ಕ್ಕೆ ಕುಗ್ಗಿಸಿಕೊಂಡಿದೆ.

This News Article Is A Copy Of MYKHEL