ಬಡ ಪ್ರತಿಭಾವಂತ ಹುಡುಗ ಜೈಸ್ವಾಲ್‌ಗೆ ವಿಶೇಷ ಉಡುಗೊರೆ ಕೊಟ್ಟ ಬಟ್ಲರ್

05-05-21 04:51 pm       Source: MYKHEL Madhukara Shetty   ಕ್ರೀಡೆ

ಇಂಗ್ಲೆಂಡ್‌ ಆಟಗಾರ ಜೋಸ್ ಬಟ್ಲರ್, ಭಾರತದ ಯುವ ಬ್ಯಾಟ್ಸ್‌ಮನ್‌ ಯಶಸ್ವಿ ಜೈಸ್ವಾಲ್‌ಗೆ ವಿಶೇಷ ಉಡುಗೊರೆ ನೀಡಿದ್ದಾರೆ.

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 14ನೇ ಆವೃತ್ತಿ ಅಮಾನತಾಗಿದೆ. ಹೀಗಾಗಿ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ವಿದೇಶಿ ಕ್ರಿಕೆಟಿಗರು ತಮ್ಮ ತಮ್ಮ ದೇಶಗಳಿಗೆ ಹೊರಡಲು ಸಜ್ಜಾಗಿದ್ದಾರೆ. ಹೊರಡುವ ಮುನ್ನ ರಾಜಸ್ಥಾನ್ ರಾಯಲ್ಸ್ ಪರ ಆಡುವ ಇಂಗ್ಲೆಂಡ್‌ ಆಟಗಾರ ಜೋಸ್ ಬಟ್ಲರ್, ಭಾರತದ ಯುವ ಬ್ಯಾಟ್ಸ್‌ಮನ್‌ ಯಶಸ್ವಿ ಜೈಸ್ವಾಲ್‌ಗೆ ವಿಶೇಷ ಉಡುಗೊರೆ ನೀಡಿದ್ದಾರೆ.

ರಾಜಸ್ಥಾನ್ ರಾಯಲ್ಸ್ ಪರ ಯಶಸ್ವಿ ಜೈಸ್ವಾಲ್ ಮತ್ತು ಜೋಸ್ ಬಟ್ಲರ್ ಒಂದೆರಡು ಪಂದ್ಯಗಳಲ್ಲಿ ಆರಂಭಿಕರಾಗಿ ಆಡಿದ್ದರು. ಬಟ್ಲರ್ ಟೂರ್ನಿ ಆರಂಭದಲ್ಲಿ ಅಂಥ ಬ್ಯಾಟಿಂಗ್‌ ಪ್ರದರ್ಶನ ನೀಡಿರದಿದ್ದರೂ ಮೇ 2ರಂದು ದೆಹಲಿಯಲ್ಲಿ ನಡೆದಿದ್ದ ಪಂದ್ಯದಲ್ಲಿ ಬಟ್ಲರ್ ಸ್ಫೋಟಕ ಬ್ಯಾಟಿಂಗ್ ನೀಡಿದ್ದರು. ಕೇವಲ 64 ಎಸೆತಗಳಲ್ಲಿ 124 ರನ್ ಕೊಡುಗೆ ನೀಡಿದ್ದರು. ಈ ಪಂದ್ಯದಲ್ಲಿ ಬಟ್ಲರ್-ಜೈಸ್ವಾಲ್ ಆರಂಭಿಕರಾಗಿ ಆಡಿದ್ದರು.

ಅಂದು ಶತಕ ಬಾರಿಸಿದ್ದ ಬ್ಯಾಟನ್ನು ಬಟ್ಲರ್, ಯುವ ಬ್ಯಾಟ್ಸ್‌ಮನ್‌ ಯಶಸ್ವಿಗೆ ಉಡಿಗೊರೆಯಾಗಿ ನೀಡಿದ್ದಾರೆ. ಆಂಗ್ಲ ಆಟಗಾರನಿಗೆ ಭಾರತೀಯ ಆಟಗಾರನ ಮೇಲಿರುವ ಪ್ರೀತಿಗೆ ಕ್ರಿಕೆಟ್‌ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಂದ್ಹಾಗೆ ಈ ಯಶಸ್ವಿ ಜೈಸ್ವಾಲ್ ಬಡ ಕುಟುಂಬದಿಂದ ಬಂದ ಪ್ರತಿಭಾನ್ವಿತ ಆಟಗಾರ. 

ಬ್ಯಾಟ್‌ನ ಮೇಲೆ, 'ಎಂಜಾಯ್ ಯುವರ್ ಟ್ಯಾಲೆಂಟ್. ಬಸ್ಟ್ ವಿಶಸ್' ಎಂದು ಆಟೋಗ್ರಾಫ್‌ ಕೂಡ ಬರೆದಿರುವ ಬಟ್ಲರ್, ಆ ಬ್ಯಾಟನ್ನು ಯಶಸ್ವಿಗೆ ನೀಡಿದ್ದಾರೆ. ಈ ಚಿತ್ರವನ್ನು ರಾಜಸ್ಥಾನ್ ರಾಯಲ್ಸ್ ತನ್ನ ಟ್ವಿಟರ್ ಖಾತೆಯಲ್ಲಿ ಹಾಕಿಕೊಂಡಿದೆ. ಪೋಸ್ಟ್‌ನ ಜೊತೆಗೆ 'ವಿಶೇಷ ಓಪನಿಂಗ್ ಪಾರ್ಟ್ನರ್‌ನಿಂದ ವಿಶೇಷ ಉಡುಗೊರೆ' ಎಂದು ಆರ್‌ಆರ್‌ ಸಾಲ್ಲನ್ನೂ ಬರೆದುಕೊಂಡಿದೆ.

This News Article Is A Copy Of MYKHEL