ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ನೂತನ ಅಧ್ಯಕ್ಷರಾಗಿ ಪ್ರಥಮೇಶ್ ಮಿಶ್ರಾ ಆಯ್ಕೆ

01-07-21 02:48 pm       MYKHEL: Sadashiva   ಕ್ರೀಡೆ

ಐಪಿಎಲ್ ನ ಆಕರ್ಷಣೀಯ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ನೂತನ ಅಧ್ಯಕ್ಷರಾಗಿ ಪ್ರಥಮೇಶ್ ಮಿಶ್ರಾ ಆಯ್ಕೆಯಾಗಿದ್ದಾರೆ.

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್)ನ ಆಕರ್ಷಣೀಯ ಫ್ರಾಂಚೈಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ನೂತನ ಅಧ್ಯಕ್ಷರಾಗಿ ಪ್ರಥಮೇಶ್ ಮಿಶ್ರಾ ಆಯ್ಕೆಯಾಗಿದ್ದಾರೆ. ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಗುರುವಾರ (ಜುಲೈ 1) ಮಿಶ್ರಾ ಅವರನ್ನು ತಮ್ಮ ನೂತನ ಅಧ್ಯಕ್ಷರೆಂದು ಘೋಷಿಸಿದೆ.

ಡಿಯಾಗೋ ಇಂಡಿಯಾದ ಅಂಗ ಸಂಸ್ಥೆಯಾಗಿರುವ ರಾಯಲ್ ಚಾಲೆಂಜರ್ಸ್ ಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್, ಆರ್‌ಸಿಬಿಯ ಮಾಲೀಕತ್ವ ಹೊಂದಿದೆ. ಪ್ರಥಮೇಶ್ ಮಿಶ್ರಾ ಸದ್ಯ ಡಿಯಾಗೋ ಇಂಡಿಯಾದಲ್ಲಿ ಮುಖ್ಯ ವ್ಯವಹಾರ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಭಾರತದ ನಾಯಕ ವಿರಾಟ್ ಕೊಹ್ಲಿ ಆರ್‌ಸಿಬಿ ನಾಯಕತ್ವ ಹೊಂದಿದ್ದರೆ, ನ್ಯೂಜಿಲೆಂಡ್ ಮಾಜಿ ಕ್ರಿಕೆಟಿಗ ಮೈಕ್ ಹೆಸನ್ ಮತ್ತು ಆಸ್ಟ್ರೇಲಿಯಾದ ಮಾಜಿ ಆಟಗಾರ ಸೈಮನ್ ಕಟಿಚ್ ತಂಡದ ಕೋಚಿಂಗ್ ವಿಭಾಗದಲ್ಲಿದ್ದಾರೆ.



ಮಿಶ್ರಾ ಅವರು ಮೊದಲು ಆರ್‌ಸಿಬಿ ಅಧ್ಯಕ್ಷರಾಗಿದ್ದ ಆನಂದ್ ಕೃಪಾಲು ಸ್ಥಾನ ತುಂಬಲಿದ್ದಾರೆ. ಕೃಪಾಲು ಅವರ ಡಿಯಾಗೋ ಇಂಡಿಯಾದ ನಿರ್ವಹಣಾ ನಿರ್ದೇಶಕ ಮತ್ತು ಸಿಇಒ ಕರ್ತವ್ಯ ಜೂನ್ 30ಕ್ಕೆ ಕೊನೆಗೊಂಡಿದೆ. ಒಮ್ಮೆಯೂ ಐಪಿಎಲ್ ಟ್ರೋಫಿ ಗೆಲ್ಲದ ಅರ್‌ಸಿಬಿ ಈ ಬಾರಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ಟ್ರೋಫಿಯ ನಿರೀಕ್ಷೆ ಮೂಡಿಸಿದೆ.

"ರಾಯಲ್ ಚಾಲೆಂಜರ್ಸ್ ಬೆಂಗಳೂರು ಡಿಯಾಗೋ ಇಂಡಿಯಾದ ಅವಿಭಾಜ್ಯ ಅಂಗವಾಗಿದ್ದು, ನಾವೆಲ್ಲರೂ ತಂಡದ ಬಗ್ಗೆ ಹೆಚ್ಚಿನ ಉತ್ಸಾಹವನ್ನು ಹೊಂದಿದ್ದೇವೆ. ವಿರಾಟ್ ಕೊಹ್ಲಿ, ಮೈಕ್ ಹೆಸನ್ ಮತ್ತು ಸೈಮನ್ ಕಟಿಚ್‌ ಅವರೊಂದಿಗೆ ತಂಡದ ಏಳಿಗೆಗೆ ನನ್ನ ಭುಜವನ್ನು ಸೇರಿಸುವ ಬಗ್ಗೆ ಮತ್ತು ನಾವು ಮೈದಾನದಲ್ಲಿ ಮತ್ತು ಹೊರಗೆ ಮಾಡುವ ಎಲ್ಲಾ ಕೆಲಸಗಳಲ್ಲಿಯೂ ಧೈರ್ಯದಿಂದ ಪಾಲ್ಗೊಳ್ಳುವ ಬಗ್ಗೆ ನಾನು ಉತ್ಸುಕನಾಗಿದ್ದೇನೆ. ಆರ್‌ಸಿಬಿಗೆ ಆನಂದ್ ನೀಡಿದ ಅಪಾರ ಕೊಡುಗೆಗಾಗಿ ನಾನು ಅವರಿಗೆ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇನೆ," ಎಂದು ಪ್ರಥಮೇಶ್ ಮಿಶ್ರಾ ಹೇಳಿದ್ದಾರೆ.

(Kannada Copy of Mykhel Kannada)