ಕೊಟ್ಟ ಮಾತಿನಂತೆ ಪಿವಿ ಸಿಂಧು ಜೊತೆ ಐಸ್‌ಕ್ರೀಮ್‌ ಸವಿದ ನರೇಂದ್ರ ಮೋದಿ

16-08-21 05:37 pm       Mykhel: Sadashiva   ಕ್ರೀಡೆ

ಭಾರತದ ಪ್ರಧಾನಿ ನರೇಂದ್ರ ಮೋದಿ ಭಾರತದ ಸ್ಟಾರ್ ಶಟ್ಲರ್ ಪಿವಿ ಸಿಂಧುಗೆ ಕೊಟ್ಟ ಮಾತಿನಂತೆ ಅವರ ಜೊತೆ ಐಸ್‌ಕ್ರೀಮ್‌ ಸವಿದಿದ್ದಾರೆ.

ನವದೆಹಲಿ, ಆ.16: ಭಾರತದ ಪ್ರಧಾನಿ ನರೇಂದ್ರ ಮೋದಿ ಭಾರತದ ಸ್ಟಾರ್ ಶಟ್ಲರ್ ಪಿವಿ ಸಿಂಧುಗೆ ಕೊಟ್ಟ ಮಾತಿನಂತೆ ಅವರ ಜೊತೆ ಐಸ್‌ಕ್ರೀಮ್‌ ಸವಿದಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪದಕ ವಿಜೇತ ಅಥ್ಲೀಟ್‌ಗಳನ್ನು ತನ್ನ ನಿವಾಸದಲ್ಲಿ ಭೇಟಿಯಾದ ಮೋದಿ ಅಥ್ಲೀಟ್‌ಗಳ ಜೊತೆ ಮಾತನಾಡಿದರು. ಇದೇ ವೇಳೆ ಮೋದಿ ಸಿಂಧು ಜೊತೆ ಐಸ್‌ಕ್ರೀಮ್‌ ಸವಿದಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸಿಂಧು ಮಹಿಳಾ ಬ್ಯಾಡ್ಮಿಂಟನ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ದೇಶಕ್ಕೆ ಕಂಚಿನ ಪದಕ ಗೆದ್ದ ಪಿವಿ ಸಿಂಧು ತನಗೆ ಪ್ರಧಾನಿ ಜೊತೆಗೆ ಐಸ್‌ಕ್ರೀಮ್‌ ಸವಿಯುವ ಆಸೆಯಿದೆ ಎಂದಿದ್ದರು. ಇದ್ದಕ್ಕೆ ಕಳೆದ ಜುಲೈನಲ್‌ನಲ್ಲಿ ಪ್ರತಿಕ್ರಿಯಿಸಿದ್ದ ಪ್ರಧಾನಿ, ಸಿಂಧು ಆಸೆ ನೆರವೇರಿಸುವುದಾಗಿ ಹೇಳಿಕೊಂಡಿದ್ದರು. ಅದರಂತೆ ಸೋಮವಾರ (ಆಗಸ್ಟ್ 16) ತನ್ನ ನಿವಾಸದಲ್ಲಿ ಅಥ್ಲೀಟ್‌ಗಳನ್ನು ಭೇಟಿಯಾದ ಮೋದಿ ಸಿಂಧು ಜೊತೆ ಐಸ್‌ಕ್ರೀಮ್‌ ಸವಿದಿದ್ದಾರೆ.



ಸಿಂಧುಗೆ ಐಸ್‌ಕ್ರೀಮ್‌ ಬಗೆಯಿರುವ ಪ್ರೀತಿಯ ಬಗ್ಗೆ ಕೇಳಲ್ಪಟ್ಟೆ

"ಒಬ್ಬ ಅಥ್ಲೀಟ್‌ ಆಗಿ ಪಿವಿ ಸಿಂಧುಗೆ ಎಡೆಬಿಡದ ವೇಳಾಪಟ್ಟಿಯಿರುತ್ತದೆ. ಅವರು ಪರಿಶ್ರಮ ಪಡಬೇಕಾಗಿರುತ್ತದೆ. ನಾನು ಪಿವಿ ಸಿಂಧುಗೆ ಐಸ್‌ಕ್ರೀಮ್‌ ಬಗೆಯಿರುವ ಪ್ರೀತಿಯ ಬಗ್ಗೆ ಕೇಳಲ್ಪಟ್ಟೆ. ಜೊತೆಗೆ ಅವರ ಹೆತ್ತವರ ಜೊತೆಗೂ ಮಾತನಾಡಿದೆ," ಎಂದು ಮೋದಿ ಟ್ವೀಟಿನಲ್ಲಿ ಬರೆದುಕೊಂಡಿದ್ದಾರೆ. ಮೋದಿ ಜೊತೆಗೆ ಸಂವಾದ ನಡೆಸಿದ್ದ ಸಿಂಧು, ಟೋಕಿಯೋ ಒಲಿಂಪಿಕ್ಸ್ ಸ್ಪರ್ಧೆಯ ವೇಳೆ ತನಗೆ ಡಯಟ್ ಮಾಡಲಿರುವುದರಿಂದ ಬಹಳ ದಿನಗಳ ಕಾಲ ತಾನು ಐಸ್‌ಕ್ರೀಮ್‌ ಸವೆಯುವುದಿಲ್ಲ. ಹೀಗಾಗಿ ಕ್ರೀಡಾಕೂಟ ಮುಗಿದ ಬಳಿಕ ತಾನು ಮೋದಿ ಜೊತೆಗೆ ಐಸ್‌ಕ್ರೀಮ್‌ ಸವೆಯುವುದಾಗಿ ಹೇಳಿದ್ದರು. ಅದಕ್ಕೆ ಮೋದಿ ಕೂಡ ತಾನು ಸಿಂಧು ಜೊತೆಗೆ ಐಸ್‌ ಕ್ರೀಮ್‌ ಸವೆಯುವುದಾಗಿ ಭರವಸೆ ನೀಡಿದ್ದರು.



ನೀರಜ್ ಚೋಪ್ರಾ, ಹಾಕಿ ತಂಡದ ಆಟಗಾರರ ಉಪಸ್ಥಿತಿ

"ಸಂವಾದದ ವೇಳೆ ಪ್ರಧಾನಿ ಮೋದಿ ಸಿಂಧುಗೆ ಸ್ಫೂರ್ತಿ ತುಂಬಿದ್ದರು. ಟೊಕಿಯೋದಿಂದ ವಾಪಸ್ ಬಂದ ಬಳಿಕ ನಿನ್ನ ಜೊತೆಗೆ ಐಸ್‌ ಕ್ರೀಮ್‌ ಸವೆಯುವುದಾಗಿ ಹೇಳಿದ್ದರು. ಈಗ ಪಿವಿ ಸಿಂಧು ಮೋದಿ ಜೊತೆಗೆ ಐಸ್‌ಕ್ರೀತ್‌ ಸವಿದಿದ್ದಾರೆ," ಎಂದು ಸಿಂಧು ತಂದೆ ಪಿವಿ ರಮಣ ಹೇಳಿದ್ದಾರೆ. ನವದೆಹಲಿಯ ಲೋಕಕಲ್ಯಾಣ ಮಾರ್ಗದಲ್ಲಿರುವ ಪ್ರಧಾನಿ ಮೋದಿಯ ಅಧಿಕೃತ ನಿವಾಸದಲ್ಲಿ ಸಿಂಧು ಮೋದಿ ಜೊತೆ ಐಸ್‌ಕ್ರೀಮ್‌ ಸವಿದಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಅಥ್ಲೆಟಿಕ್ಸ್‌ನಲ್ಲಿ ಮೊದಲ ಬಂಗಾರದ ಪದಕ ಗೆದ್ದಿರುವ ನೀರಜ್ ಚೋಪ್ರಾ ಮತ್ತು ಕಂಚಿನ ಪದಕ ಗೆದ್ದಿದ್ದ ಪುರುಷರ ಹಾಕಿ ತಂಡದ ಆಟಗಾರರೂ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.



ಟೋಕಿಯೋ ಒಲಿಂಪಿಕ್ಸ್‌ನಲ್ಲಿ ದಾಖಲೆ ನಿರ್ಮಿಸಿದ್ದ ಭಾರತ

ಆಗಸ್ಟ್‌ 15ರ ಭಾನುವಾರ ಸ್ವಾತಂತ್ರ್ಯೋತ್ಸವದ ಭಾಷಣದ ವೇಳೆಯೂ ಪ್ರಧಾನಿ ಮೋದಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಮತ್ತು ಪದಕ ಗೆದ್ದ ಅಥ್ಲೀಟ್‌ಗಳನ್ನು ಶ್ಲಾಘಿಸಿದ್ದರು. ಆಗಸ್ಟ್ 8ರಂದು ಕೊನೆಗೊಂಡ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ಒಟ್ಟಿಗೆ 7 ಪದಕಗಳನ್ನು ಗೆದ್ದಿತ್ತು. ಮಹಿಳಾ ವೇಟ್ ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನುಗೆ ಬೆಳ್ಳಿ ಪದಕ, ಮಹಿಳಾ ಬ್ಯಾಡ್ಮಿಂಟನ್‌ನಲ್ಲಿ ಸಿಂಧುಗೆ ಕಂಚಿನ ಪದಕ, ಮಹಿಳಾ ಬಾಕ್ಸಿಂಗ್‌ನಲ್ಲಿ ಲವ್ಲಿನಾ ಬೊರ್ಗೊಹೈನ್‌ಗೆ ಕಂಚು, ಪುರುಷರ ರಸ್ಲಿಂಗ್‌ನಲ್ಲಿ ರವಿ ಕುಮಾರ್ ದಹಿಯಾಗೆ ಬೆಳ್ಳಿ ಪದಕ, ಪುರುಷರ ರಸ್ಲಿಂಗ್‌ನಲ್ಲಿ ಭಜರಂಗ್ ಪೂನಿಯಾಗೆ ಕಂಚು, ಪುರುಷರ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾಗೆ ಬಂಗಾರ, ಪುರುಷರ ಹಾಕಿ ತಂಡಕ್ಕೆ ಕಂಚಿನ ಪದಕ ಲಭಿಸಿತ್ತು. ಒಲಿಂಪಿಕ್ಸ್‌ ಇತಿಹಾಸದಲ್ಲೇ ಭಾರತಕ್ಕೆ 7 ಪದಕಗಳು ಸಿಕ್ಕಿದ್ದು ಇದೇ ಮೊದಲು.

(Kannada Copy of Mykhel Kannada)