ಒಂದು ರೂಪಾಯಿಗೆ ಊಟ; ಬಡವರ ಹೊಟ್ಟೆ ತುಂಬಿಸುತ್ತಿರುವ ಗೌತಮ್ ಗಂಭೀರ್

21-08-21 01:02 pm       Mykhel: Sadashiva   ಕ್ರೀಡೆ

ಜನ್ ರಸೋಯಿ ಕ್ಯಾಂಟೀನ್ ಆರಂಭಿಸಿ ಬಡ ಜನರಿಗೆ ಒಂದು ರೂಪಾಯಿಯಲ್ಲಿ ಹೊಟ್ಟೆ ತುಂಬ ಊಟ ಹಾಕುತ್ತಿರುವ ಗೌತಮ್ ಗಂಭೀರ್ ಇದೀಗ ತಮ್ಮ ಜನ್ ರಸೋಯಿ ಕ್ಯಾಂಟೀನ್‌ನ ಮೂರನೇ ಶಾಖೆಯನ್ನು ಆರಂಭಿಸಲು ಮುಂದಾಗಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಗೆದ್ದಿರುವ ಒಂದು ಟಿ ಟ್ವೆಂಟಿ ವಿಶ್ವಕಪ್ ಮತ್ತು ಒಂದು ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಪಾತ್ರ ಎಷ್ಟು ಮಹತ್ವದ್ದು ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. ಒಂದುವೇಳೆ ಗೌತಮ್ ಗಂಭೀರ್ ಭಾರತ ಗೆದ್ದ ವಿಶ್ವಕಪ್ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡದೇ ಇದ್ದಿದ್ದರೆ ಟೀಮ್ ಇಂಡಿಯಾ ಟ್ರೋಫಿ ಎತ್ತಿ ಹಿಡಿಯುತ್ತಿರಲಿಲ್ಲ ಎಂದರೆ ತಪ್ಪಾಗಲಾರದು. ಹೀಗೆ ಟೀಮ್ ಇಂಡಿಯಾ ಪರ ವಿಶ್ವಕಪ್ ಟೂರ್ನಿಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಗೌತಮ್ ಗಂಭೀರ್ ಅವರನ್ನು ವರ್ಲ್ಡ್ ಕಪ್ ಹೀರೋ ಎಂದೇ ಕರೆಯಲಾಗುತ್ತದೆ. ಕೇವಲ ವಿಶ್ವಕಪ್ ಟೂರ್ನಿಗಳಲ್ಲಿ ಮಾತ್ರವಲ್ಲದೆ ಇನ್ನೂ ಸಾಕಷ್ಟು ಮಹತ್ವದ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಪರ ಅತ್ಯದ್ಭುತ ಪ್ರದರ್ಶನವನ್ನು ನೀಡುವ ಮೂಲಕ ಗೌತಮ್ ಗಂಭೀರ್ ಹಲವಾರು ಬಾರಿ ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದಾರೆ.



ಹೀಗೆ ಕ್ರಿಕೆಟ್ ಜೀವನದಲ್ಲಿ ಒಬ್ಬ ಆಟಗಾರ ಜನರು ಜೀವನಪೂರ್ತಿ ತನ್ನನ್ನು ನೆನಪಿಟ್ಟುಕೊಳ್ಳುವಂತಹ ಇನ್ನಿಂಗ್ಸ್ ಆಡಬೇಕು ಎಂದು ಕನಸನ್ನು ಕಟ್ಟಿಕೊಂಡಿರುತ್ತಾರೆ. ಆ ರೀತಿಯ ಕನಸ್ಸನ್ನು ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಎರಡೆರಡು ಬಾರಿ ನನಸು ಮಾಡಿಕೊಂಡಿದ್ದಾರೆ. ಯಾರಾದರೂ ವಿಶ್ವಕಪ್ ಟೂರ್ನಿಗಳ ಬಗ್ಗೆ ಚರ್ಚೆ ನಡೆಸಿದರೆ ಸಾಕು ಅದರಲ್ಲಿ ಗೌತಮ್ ಗಂಭೀರ್ ಹೆಸರು ಬರದೇ ಇರಲು ಸಾಧ್ಯವೇ ಇಲ್ಲ. ಹೀಗೆ ಕ್ರಿಕೆಟ್ ಜೀವನದಲ್ಲಿ ಯಶಸ್ಸು ಸಾಧಿಸಿ ತದನಂತರ ಕ್ರಿಕೆಟ್‌ಗೆ ವಿದಾಯ ಸಲ್ಲಿಸಿ ಗೌತಮ್ ಗಂಭೀರ್ ರಾಜಕೀಯದ ಕಡೆ ಮುಖ ಮಾಡಿದರು.

ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಮೂಲಕ ಪೂರ್ವ ದೆಹಲಿ ಕ್ಷೇತ್ರದಲ್ಲಿ ಜಯ ಸಾಧಿಸಿದ ಗಂಭೀರ್ ರಾಜಕೀಯದ ಮುಖಾಂತರ ಹಲವಾರು ಬಡ ಜನರಿಗೆ ಈಗಾಗಲೇ ಸಾಕಷ್ಟು ಸಹಾಯಗಳನ್ನು ಮಾಡಿದ್ದಾರೆ. ಲೋಕಸಭಾ ಸದಸ್ಯನಾದ ನಂತರ ತಮ್ಮ ಕ್ಷೇತ್ರಗಳಲ್ಲಿನ ಬಡಜನರಿಗೆ ಅಗತ್ಯವಿರುವ ಸೌಕರ್ಯಗಳನ್ನು ಕಲ್ಪಿಸಲು ಸದಾ ಪ್ರಯತ್ನಿಸುವ ಗೌತಮ್ ಗಂಭೀರ್ ಈಗಾಗಲೇ ಸಾಕಷ್ಟು ಬದಲಾವಣೆಗಳನ್ನು ತಂದಿದ್ದಾರೆ. ಪೂರ್ವ ದೆಹಲಿಯನ್ನು ಹೊಗೆ ಮುಕ್ತ ಮಾಡಬೇಕೆಂದು ಪಣ ತೊಟ್ಟಿದ್ದ ಗೌತಮ್ ಗಂಭೀರ್ ಸಾಕಷ್ಟು ಪರಿಸರ ಸ್ನೇಹಿ ಚಟುವಟಿಕೆಗಳನ್ನು ಆರಂಭಿಸಿದ್ದರು.



ಹೀಗೆ ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಿರುವ ಗೌತಮ್ ಗಂಭೀರ್ ಅವರು ಈ ಹಿಂದೆ 'ಜನ್ ರಸೋಯಿ ಕ್ಯಾಂಟೀನ್' ಎಂಬ ಯೋಜನೆಯಡಿಯಲ್ಲಿ ಕ್ಯಾಂಟಿನ್ ಆರಂಭಿಸಿ ಕೇವಲ ಒಂದು ರೂಪಾಯಿಯಲ್ಲಿ ಬಡ ಜನರಿಗೆ ಹೊಟ್ಟೆ ತುಂಬ ಊಟ ಹಾಕುವ ಮಹತ್ಕಾರ್ಯಕ್ಕೆ ಕೈಹಾಕಿದ್ದರು. ಅವರು ಅಂದುಕೊಂಡಂತೆ ಈಗಾಗಲೇ ಗಾಂಧಿನಗರ ಮತ್ತು ಅಶೋಕ್ ನಗರಗಳಲ್ಲಿ ತಲಾ ಒಂದೊಂದು ಜನ್ ರಸೋಯಿ ಕ್ಯಾಂಟೀನ್ ಆರಂಭಿಸಿ ಬಡ ಜನರಿಗೆ ಒಂದು ರೂಪಾಯಿಯಲ್ಲಿ ಹೊಟ್ಟೆ ತುಂಬ ಊಟ ಹಾಕುತ್ತಿರುವ ಗೌತಮ್ ಗಂಭೀರ್ ಇದೀಗ ತಮ್ಮ ಜನ್ ರಸೋಯಿ ಕ್ಯಾಂಟೀನ್‌ನ ಮೂರನೇ ಶಾಖೆಯನ್ನು ಆರಂಭಿಸಲು ಮುಂದಾಗಿದ್ದಾರೆ. ಗೌತಮ್ ಗಂಭೀರ್ ರಾಜಕೀಯ ಆಪ್ತರು ನೀಡಿರುವ ಮಾಹಿತಿಯ ಪ್ರಕಾರ ಗಂಭೀರ್ ತಮ್ಮ ಜನ್ ರಸೋಯಿ ಕ್ಯಾಂಟಿನ್ ಯೋಜನೆಯ ಮೂರನೇ ಕ್ಯಾಂಟೀನ್‌ನ್ನು ಪತ್ಪರ್‌ಗಂಜ್ ನಗರದಲ್ಲಿ ಆರಂಭಿಸಲು ಮುಂದಾಗಿದ್ದಾರೆ.

ಇನ್ನು ಗೌತಮ್ ಗಂಭೀರ್ ತಮ್ಮ ಈ ಜನ ರಸೋಯಿ ಕ್ಯಾಂಟೀನ್ ಯೋಜನೆಯಡಿಯಲ್ಲಿ ಶುದ್ಧ ಮತ್ತು ಆರೋಗ್ಯಕರವಾದಂತಹ ಆಹಾರವನ್ನು ಜನರಿಗೆ ಒದಗಿಸುತ್ತಿದ್ದಾರೆ. ಹೀಗೆ ಬಡಜನರ ಉಳಿವಿಗಾಗಿ ಒಂದು ರೂಪಾಯಿ ಊಟವನ್ನು ಒದಗಿಸುತ್ತಿರುವ ಗೌತಮ್ ಗಂಭೀರ್ ಕುರಿತು ಭಾರತದ ಮತ್ತೋರ್ವ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. 'ನಿಮ್ಮ ಈ ಕೆಲಸ ನೋಡಿ ತುಂಬ ಖುಷಿಯಾಗುತ್ತಿದೆ, ನಿಮ್ಮ ಈ ಜನ್ ರಸೋಯಿ ಕ್ಯಾಂಟೀನ್ ಯೋಜನೆ ಇನ್ನೂ ದೊಡ್ಡ ಮಟ್ಟಕ್ಕೆ ಬೆಳೆಯಲಿ ಆ ದೇವರು ನಿಮಗೆ ಇನ್ನಷ್ಟು ಸಹಾಯ ಮಾಡುವ ಶಕ್ತಿಯನ್ನು ನೀಡಲಿ' ಎಂದು ಹರ್ಭಜನ್ ಸಿಂಗ್ ಟ್ವೀಟ್ ಮುಖಾಂತರ ಗೌತಮ್ ಗಂಭೀರ್ ಅವರಿಗೆ ಶುಭ ಕೋರಿದ್ದಾರೆ.

(Kannada Copy of Mykhel Kannada)