ಪ್ಯಾರಾಲಿಂಪಿಕ್ಸ್: ಐತಿಹಾಸಿಕ ಫೈನಲ್ ಪ್ರವೇಶಿಸಿ ಚಿನ್ನದ ಬೇಟೆಯಾಡಲಿರುವ ಭವೀನಾಬೆನ್

28-08-21 10:52 am       Mykhel: Srinivas   ಕ್ರೀಡೆ

ಟೋಕಿಯೊ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಟೇಬಲ್ ಟೆನಿಸ್ ಆಟಗಾರ್ತಿ ಭವೀನಾಬೆನ್ ಹೊಸ ಇತಿಹಾಸವನ್ನು ನಿರ್ಮಿಸಿದ್ದಾರೆ.

ಟೋಕಿಯೋ, ಆಗಸ್ಟ್ 28: ಟೋಕಿಯೊ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಟೇಬಲ್ ಟೆನಿಸ್ ಆಟಗಾರ್ತಿ ಭವೀನಾಬೆನ್ ಹೊಸ ಇತಿಹಾಸವನ್ನು ನಿರ್ಮಿಸಿದ್ದಾರೆ. ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಇತ್ತೀಚಿಗಷ್ಟೆ ಸೆಮಿಫೈನಲ್ ಹಂತವನ್ನು ಪ್ರವೇಶಿಸುವುದರ ಮೂಲಕ ಹೊಸ ಇತಿಹಾಸವನ್ನು ನಿರ್ಮಿಸಿದ್ದ ಭವೀನಾಬೆನ್ ಇದೀಗ ಸೆಮಿಫೈನಲ್ ಹಂತದ ಪಂದ್ಯದಲ್ಲಿಯೂ ಸಹ ಜಯ ಸಾಧಿಸುವುದರ ಮೂಲಕ ಫೈನಲ್ ಪ್ರವೇಶಿಸಿ ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿಯೇ ಟೇಬಲ್ ಟೆನಿಸ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ ಭಾರತದ ಮೊದಲ ಕ್ರೀಡಾಪಟು ಎಂಬ ದಾಖಲೆಯನ್ನು ಬರೆದಿದ್ದಾರೆ.

ಕ್ವಾರ್ಟರ್‌ಫೈನಲ್‌ನಲ್ಲಿ ಭವೀನಾಬೆನ್ ಪಟೇಲ್ ಮಹಿಳೆಯರ ಕ್ಲಾಸ್‌ 4 ಇವೆಂಟ್‌ನಲ್ಲಿ ವಿಶ್ವದ ನಂಬರ್ 5 ಆಟಗಾರ್ತಿ ಸರ್ಬಿಯಾದ ಬೊರಿಸ್ಲೇವಾ ಪೆರಿಕ್ ರಾಂಕೋವಿಕ್ ವಿರುದ್ಧ ಗೆಲುವು ಸಾಧಿಸಿದ್ದರು. 34ರ ಹರೆಯದ ಭಾರತದ ಆಟಗಾರ್ತಿ ಸರ್ಬಿಯಾದ ಎದುರಾಳಿಯ ವಿರುದ್ಧ 11-5 11-6 11-7 ನೇರ ಸೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈ ಮೂಲಕ ಸೆಮಿಫೈನಲ್‌ಗೆ ಪ್ರವೇಶ ಪಡೆದುಕೊಂಡಿದ್ದರು.



ಹೀಗೆ ಯಶಸ್ವಿಯಾಗಿ ಸೆಮಿಫೈನಲ್ ಪ್ರವೇಶಿಸಿದ್ದ ಭಾರತದ ಟೇಬಲ್ ಟೆನಿಸ್ ಆಟಗಾರ್ತಿ ಭವೀನಾಬೆನ್ ಭಾರತಕ್ಕೆ ಪದಕ ಖಚಿತಪಡಿಸಿದ್ದರು. ಇನ್ನು ಸೆಮಿಫೈನಲ್ ಹಂತದಲ್ಲಿ ಭಾರತದ ಟೆನಿಸ್ ಆಟಗಾರ್ತಿ ಭವೀನಾಬೆನ್ ಚೀನಾದ ಟೆನಿಸ್ ಆಟಗಾರ್ತಿ ಝಾಂಗ್ ಮಿಯಾವೋ ವಿರುದ್ಧ ಶನಿವಾರ ( ಆಗಸ್ಟ್ 27 ) ನಡೆದ ಪಂದ್ಯದಲ್ಲಿ ಸೆಣಸಾಟ ನಡೆಸಿದ್ದಾರೆ. ವಿಶ್ವದ ನಂಬರ್ 3 ಟೇಬಲ್ ಟೆನಿಸ್ ಆಟಗಾರ್ತಿ ಝಾಂಗ್ ಮಿಯಾವೋ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಟೇಬಲ್ ಟೆನಿಸ್ ಆಟಗಾರ್ತಿ ಭವೀನಾಬೆನ್ ಮೊದಲ ಸುತ್ತಿನಲ್ಲಿಯೇ ಸೋಲುವುದರ ಮೂಲಕ ಕೆಟ್ಟ ಆರಂಭವನ್ನು ಪಡೆದುಕೊಂಡರು.

ಸೆಮಿಫೈನಲ್ ಹಂತದ ಮೊದಲನೇ ಸುತ್ತಿನಲ್ಲಿ ಭಾರತದ ಟೇಬಲ್ ಟೆನಿಸ್ ಆಟಗಾರ್ತಿ ಭವೀನಾಬೆನ್ ವಿರುದ್ಧ ಚೀನಾದ ಝಾಂಗ್ ಮಿಯಾವೋ 7-11 ಅಂತರದ ಸೆಟ್‌ನಿಂದ ಜಯ ಸಾಧಿಸುವುದರ ಮೂಲಕ ಉತ್ತಮ ಆರಂಭವನ್ನು ಪಡೆದುಕೊಂಡರು. ಹೀಗೆ ಮೊದಲನೇ ಸುತ್ತಿನಲ್ಲಿ ಹಿನ್ನಡೆ ಅನುಭವಿಸುವ ಮೂಲಕ ಆಟವನ್ನು ಆರಂಭಿಸಿದ ಭಾರತದ ಟೇಬಲ್ ಟೆನಿಸ್ ಆಟಗಾರ್ತಿ ಭವೀನಾಬೆನ್ ನಂತರ ನಡೆದ ಸೆಟ್‌ಗಳಲ್ಲಿ ಉತ್ತಮ ಪ್ರದರ್ಶನ ನೀಡುವುದರ ಮೂಲಕ ಚೀನಾದ ಟೇಬಲ್ ಟೆನಿಸ್ ಆಟಗಾರ್ತಿ ಝಾಂಗ್ ಮಿಯಾವೋ ವಿರುದ್ಧ 3-2 ಅಂತರದಲ್ಲಿ ಜಯ ಸಾಧಿಸುವುದರ ಮೂಲಕ ಫೈನಲ್ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಭಾರತದ ಟೇಬಲ್ ಟೆನಿಸ್ ಆಟಗಾರ್ತಿ ಭವೀನಾಬೆನ್ ಮತ್ತು ಚೀನಾದ ಟೇಬಲ್ ಟೆನಿಸ್ ಆಟಗಾರ್ತಿ ಝಾಂಗ್ ಮಿಯಾವೋ ನಡುವೆ 34 ನಿಮಿಷಗಳ ಕಾಲ ನಡೆದ ಟೇಬಲ್ ಟೆನಿಸ್ ಸೆಮಿಫೈನಲ್ ಪಂದ್ಯದಲ್ಲಿ ಚೀನಾದ ಝಾಂಗ್ ಮಿಯಾವೋ ವಿರುದ್ಧ 7-11, 11-7, 11-4, 9-11 ಮತ್ತು 11-8 ಸೆಟ್‌ಗಳ ಅಂತರದಲ್ಲಿ ಭಾರತದ ಟೇಬಲ್ ಟೆನಿಸ್ ಆಟಗಾರ್ತಿ ಭವೀನಾಬೆನ್ ಜಯ ಸಾಧಿಸಿ ಇತಿಹಾಸ ನಿರ್ಮಿಸಿದ್ದಾರೆ.



ಹೀಗೆ ಪ್ಯಾರಾಲಿಂಪಿಕ್ಸ್ ಮಹಿಳಾ ಟೇಬಲ್ ಟೆನಿಸ್ ವಿಭಾಗದಲ್ಲಿ ಫೈನಲ್ ಹಂತವನ್ನು ಪ್ರವೇಶಿಸಿದೆ ಭಾರತೀಯ ಕ್ರೀಡಾಪಟು ಭವೀನಾಬೆನ್ ಭಾರತಕ್ಕೆ ಚಿನ್ನ ಅಥವಾ ಬೆಳ್ಳಿ ಪದಕ ಲಭಿಸುವುದನ್ನು ಖಚಿತಪಡಿಸಿದ್ದಾರೆ. ಫೈನಲ್ ಹಂತದಲ್ಲಿ ಭವೀನಾಬೆನ್ ಗೆಲುವು ಸಾಧಿಸಿದರೆ ಚಿನ್ನದ ಪದಕ ಲಭಿಸಿದೆ, ಒಂದುವೇಳೆ ಸೋಲುಂಡರೆ ಬೆಳ್ಳಿ ಪದಕಕ್ಕೆ ಭವೀನಾಬೆನ್ ತೃಪ್ತಿಪಟ್ಟುಕೊಳ್ಳಬೇಕಾಗುತ್ತದೆ.

(Kannada Copy of Boldsky Kannada)