ಟೋಕಿಯೋ ಪ್ಯಾರಾಲಿಂಪಿಕ್ಸ್: ಜಾವೆಲಿನ್ ಎಸೆತದಲ್ಲಿ ಭಾರತಕ್ಕೆ ಎರಡು ಪದಕ

30-08-21 11:06 am       Mykhel: Madhukar shetty   ಕ್ರೀಡೆ

ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಅಥ್ಲೀಟ್‌ಗಳ ಪದಕದ ಬೇಟೆ ಮುಂದುವರಿದಿದೆ. ಜಾವೆಲಿನ್ ಎಸೆತದಲ್ಲಿ ಭಾರತ ಎರಡು ಪದಕಗಳನ್ನು ತನ್ನದಾಗಿಸಿಕೊಂಡಿದೆ.

ಟೋಕಿಯೋ, ಆಗಸ್ಟ್ 30: ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಅಥ್ಲೀಟ್‌ಗಳ ಪದಕದ ಬೇಟೆ ಮುಂದುವರಿದಿದೆ. ಜಾವೆಲಿನ್ ಎಸೆತದಲ್ಲಿ ಭಾರತ ಎರಡು ಪದಕಗಳನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಕಳೆದ 24 ಗಂಟೆಗಳ ಅಂತರದಲ್ಲಿ ಭಾರತ ಪ್ಯಾರಾಲಿಂಪಿಕ್ಸ್‌ನಲ್ಲಿ 7ನೇ ಪದಕವನ್ನು ಗೆದ್ದುಕೊಂಡಂತಾಗಿದೆ. ಜಾವೆಲಿನ್ ಎಸೆತದಲ್ಲಿ ಭಾರತದ ದೇವೇಂದ್ರ ಝಝಾರಿಯಾ ಹಾಗೂ ಸುಂದರ್ ಸಿಂಗ್ ಬೆಳ್ಳಿ ಹಾಗೂ ಕಂಚಿನ ಪದಕವನ್ನು ಗೆಲ್ಲುವ ಮೂಲಕ ಈ ಸಾಧನೆ ಮಾಡಿ ಮಿಂಚಿದ್ದಾರೆ.

ಎರಡು ಬಾರಿ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದು ಸಾಧನೆ ಮಾಡಿರುವ ದೇವೇಂದ್ರ ಝಝಾರಿಯಾ ಈ ಬಾರಿಯೂ ಭಾರತದ ಕ್ರೀಡಾಭಿಮಾನಿಗಳು ಗೆಮ್ಮೆ ಪಡುವಂತಾ ಸಾಧನೆ ಮಾಡಿದ್ದಾರೆ. ಫೈನಲ್‌ನಲ್ಲಿ ದೇವೇಂದ್ರ ಅವರು 64.35 ಎಸೆಯುವ ಮೂಲಕ ತಮ್ಮ ವೈಯಕ್ತಿಕ ಅತ್ಯುನ್ನತ ಸಾಧನೆ ಮಾಡಿದ್ದಾರೆ. ಈ ಮೂಲಕ ಬೆಳ್ಳಿಯ ಪದಕವನ್ನು ಗೆದ್ದು ಬೀಗಿದ್ದಾರೆ.

ಇನ್ನು ಇದೇ ಸ್ಪರ್ಧೆಯಲ್ಲಿ ಭಾರತದ ಸುಂದರ್ ಸಿಂಗ್ ಗುರ್ಜಾರ್ ಕಂಚಿನ ಪದಕವನ್ನು ಗೆದ್ದುಕೊಂಡಿದ್ದಾರೆ. 64.01 ಮೀಟರ್ ದೂರಕ್ಕೆ ಜಾವೆಲಿನ್ ಎಸೆಯುವ ಮೂಲಕ ಸುಂದರ್ ಸಿಂಗ್ ಗುರ್ಜಾರ್ ಈ ಬಾರಿಯ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ 7ನೇ ಪದಕಕ್ಕೆ ಕೊರಳೊಡ್ಡುವಂತೆ ಮಾಡಿದ್ದಾರೆ. ಈ ಸ್ಪರ್ಧೆಯಲ್ಲಿ ಶ್ರೀಲಂಕಾದ ಜಾವೆಲಿನ್ ಎಸೆತಗಾರ ಹೆರಾತ್ ಮುಡಿಯನ್ಸ್ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ. 67.79 ಮೀಟರ್ ದೂರಕ್ಕೆ ಎಸೆದು ಈ ಸಾಧನೆ ಮಾಡಿದ್ದಾರೆ ಶ್ರೀಲಂಕಾದ ಈ ಕ್ರೀಡಾಪಟು.



ಈ ಜಾವೆಲಿನ್ ಎಸೆತ ಸ್ಪರ್ಧೆಯಲ್ಲಿ ಭಾರತದ ಮೂವರು ಕ್ರೀಡಾಒಟುಗಳು ಭಾಗವಹಿಸಿದ್ದರು. ದೇವೇಂದ್ರ ಜಜಾರಿಯಾ, ಅಜೀತ್ ಸಿಂಗ್ ಮತ್ತು ಸುಂದರ್ ಸಿಂಗ್ ಗುರ್ಜಾರ್ ಸರ್ಧೆಯನ್ನು ಮಾಡಿದ್ದರು. ಸ್ಪರ್ಧೆಗೆ ಮುನ್ನವೇ ಭಾರತದ ದೇವೇಂದ್ರ ತಮ್ಮ ಹೆಸರಿನಲ್ಲಿ ಎಫ್ 46 ವಿಭಾಗದ ವಿಶ್ವ ದಾಖಲೆಯನ್ನು ಹೊಂದಿದ್ದರು. ಅಲ್ಲದೆ ಪ್ಯಾರಾಲಿಂಪಿಕ್ ಕ್ರೀಡಾಕೂಟದಲ್ಲಿ ಎರಡು ಚಿನ್ನದ ಪದಕವನ್ನು ಗೆದ್ದಿರುವ ಏಕೈಕ ಕ್ರೀಡಾಪಟು ಎಂಬ ಸಾಧನೆಯನ್ನು ಕೂಡ ಮಾಡಿದ್ದಾರೆ. ಈಗ ಇವರ ಈ ಸಾಧನೆಗೆ ಬೆಳ್ಳಿಯ ಪದಕ ಕೂಡ ಸೇರ್ಪಡೆಗೊಂಡಿದೆ.

ಈ ಬಾರಿಯ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ 8 ಕ್ರೀಡಾಪಟುಗಳ ಪ್ರಬಲ ತಂಡವನ್ನು ಕಳುಹಿಸಿದೆ. ಇದರಲ್ಲಿ ದೇವೇಂದ್ರ ಝಝಾರಿಯಾ ಪದಕ ಗೆಲ್ಲವು ಪ್ರಮುಖ ಸ್ಪರ್ಧಿಯಾಗಿದ್ದರು. ಸಂದೀಪ್ ಚೌಧರಿ (ಎಫ್ 44 ವಿಭಾಗ), ಸುಮಿತ್ ಆಂಟಿಲ್ (ಎಫ್ 64 ವಿಭಾಗ), ಸುಂದರ್ ಸಿಂಗ್ ಗುರ್ಜಾರ್ (ಎಫ್ 46 ವಿಭಾಗ), ಅಜೀತ್ ಸಿಂಗ್ ಯಾದವ್ (ಎಫ್ 46 ವಿಭಾಗ), ನವದೀಪ್ (ಎಫ್ 41 ವಿಭಾಗ) ಮತ್ತು ರಂಜೀತ್ ಭಾಟಿ (ಎಫ್ 57 ವಿಭಾಗ)ದಲ್ಲಿ ಸ್ಪರ್ಧಿಸುತ್ತಿದ್ದಾರೆ.