ಪ್ಯಾರಾಲಿಂಪಿಕ್ಸ್: ಪುರುಷರ ಡಿಸ್ಕಸ್ ಎಸೆತದಲ್ಲಿ ಬೆಳ್ಳಿ ಪದಕ ಗೆದ್ದ ಯೋಗೇಶ್ ಕಥುನಿಯಾ

30-08-21 12:50 pm       Mykhel: Madhukar shetty   ಕ್ರೀಡೆ

ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳ ಪದಕದ ಬೇಟೆ ಮುಂದುವರಿದಿದೆ. ಪುರುಷರ ಡಿಸ್ಕಸ್ ಎಸೆತದಲ್ಲಿ ಭಾರತದ ಅಥ್ಲೀಟ್ ಯೋಗೇಶ್ ಕಥುನಿಯಾ ಸೋಮವಾರ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ.

ಟೋಕಿಯೋ, ಆಗಸ್ಟ್ 30: ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳ ಪದಕದ ಬೇಟೆ ಮುಂದುವರಿದಿದೆ. ಪುರುಷರ ಡಿಸ್ಕಸ್ ಎಸೆತದಲ್ಲಿ ಭಾರತದ ಅಥ್ಲೀಟ್ ಯೋಗೇಶ್ ಕಥುನಿಯಾ ಸೋಮವಾರ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ. ಫೈನಲ್‌ನಲ್ಲಿ 44.38 ಮೀಟರ್ ಎಸೆಯುವ ಮೂಲಕ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿದ ಯೋಗೇಶ್ ಬೆಳ್ಳಿಯ ಪದಕವನ್ನು ಕೊರಳಿಗೇರಿಸಿಕೊಂಡಿದ್ದಾರೆ.

ಭಾರತದ ಯೋಗೇಶ್ ಕಥುನಿಯಾ ಅವರಿಂದ ಬ್ರೆಜಿಲ್‌ನ ವಿಶ್ವದಾಖಲೆಯನ್ನು ಹೊಂದಿರುವ ಅಥ್ಲೀಟ್ ಬಟಿಸ್ಟಾ ಡಾಸ್ ಸ್ಯಾಂಟೋಸ್ ಕ್ಲೌಡಿನೆ ಮಾತ್ರವೇ ಮುಂದಿದ್ದರು. ಬ್ರೆಜಿಲ್‌ನ ಈ ಕ್ರೀಡಾಒಟು 45.59 ಮೀ. ದೂರಕ್ಕೆ ಎಸೆಯುವ ಮೂಲಕ ಚಿನ್ನವನ್ನು ಗೆದ್ದುಕೊಂಡಿದ್ದಾರೆ.



ಕಥುನಿಯಾ ಸ್ಪರ್ಧೆ ಫೌಲ್‌ನೊಂದಿಗೆ ಆರಂಭವಾಯಿತು. ಆದರೆ ನಂತರ 42.84 ಮೀಟರ್ ದೂರಕ್ಕೆ ಎಸೆದರು. ಬಳಿಕ 43.55 ಮೀ. ದೂರಕ್ಕೆ ಎಸೆಯುವ ಮೂಲಕ ಉತ್ತಮ ಎಸೆತವನ್ನು ಸಾಧಿಸಿದರು. ಆದರೆ ತನ್ನ ಅಂತಿಮ ಅವಕಾಶದಲ್ಲಿ ಅತ್ಯುತ್ತಮ ಸಾಧನೆ ಮಾಡುವಲ್ಲಿ ಕಥುನಿಯಾ ಯಶಸ್ವಿಯಾದರು. ಈ ವೇಲೆ ಅವರು 44.38 ಮೀಟರ್ ದೂರಕ್ಕೆ ಎಸೆಯಲು ಯಶಸ್ವಿಯಾಗಿದ್ದರು. ಈ ಮೂಲಕ ಯೋಗೇಶ್ ಕಥುನಿಯಾ ಬೆಳ್ಳಿ ಪದಕವನ್ನು ಕೊರಳಿಗೇರಿಸಿಕೊಂಡಿದ್ದಾರೆ. ಯೋಯೋಶ್ ಕಥುನಿಯಾ 24ರ ಹರೆಯದ ಅಥ್ಲೀಟ್ ಆಗಿದ್ದು 2019ರಲ್ಲಿ ದುಬೈನಲ್ಲಿ ನಡೆದಿದ್ದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕವನ್ನು ಗೆದ್ದಿದ್ದರು. ಈ ಮೂಲಕ ಪ್ಯಾರಾಲಿಂಪಿಕ್ಸ್‌ಗೆ ಅರ್ಹತೆಯನ್ನು ಸಂಪಾದಿಸಿದ್ದರು. ಇದೀಗ ಟೋಕಿಯೋ ಅಂಗಳದಲ್ಲಿ ಭಾರತಕ್ಕೆ ಮತ್ತೊಂದು ಬೆಳ್ಳಿ ಪದಕವನ್ನು ಖಚಿತಪಡಿಸಿದ್ದಾರೆ.

ಭಾನುವಾರ ಭಾರತದಲ್ಲಿ ಕ್ರೀಡಾ ದಿನವನ್ನು ಆಚರಿಸಲಾಗಿತ್ತು. ಇದೇ ದಿನ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ತನ್ನ ಪದಕದ ಬೇಟೆಯನ್ನು ಆರಂಭಿಸಿತ್ತು. ಮೊದಲಿಗೆ ಟೇಬಲ್‌ಟೆನಿಸ್ ಆಟಗಾರ್ತಿ ಭವೀನಾಬೆನ್ ಪಟೇಲ್ ಬೆಳದ್ಳಿ ಪದಕವನ್ನು ಗೆಲ್ಲುವ ಮೂಲಕ ಭಾರತದ ಪದಕ ಬೇಟೆಗೆ ಚಾಲನೆ ದೊರೆಯಿತು. ನಂತರ ಒಟ್ಟು ಭಾರತ ಮೂರು ಪದಕವನ್ನು ಭಾನುವಾರ ಗೆದ್ದುಕೊಂಡಿತ್ತು. ಭಾನುವಾರ ಪ್ರದರ್ಶಿಸಿದ ಅದ್ಭುತ ಪ್ರದರ್ಶನವನ್ನು ಭಾರತೀಯ ಕ್ರೀಡಾಪಟುಗಳು ಸೋಮವಾರವೂ ಮುಂದುವರಿಸಿದ್ದಾರೆ. ಅವನಿ ಲೇಖರಾ ಚಿನ್ನದ ಪದಕ ಗೆಲ್ಲುವ ಮೂಲಕ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತದ ಮಹಿಳಾ ಸ್ಪರ್ಧಿ ಗೆದ್ದ ಪ್ರಪ್ರಥಮ ಚಿನ್ನದ ಪದಕ ಎಂಬ ಐತಿಹಾಸಿಕ ಸಾಧನೆಯಾನ್ನು ಮಾಡಿದ್ದಾರೆ. ಇದು ಭಾರತ ಪ್ಯಾರಾಲಿಂಪಿಕ್ಸ್ ಇತಿಹಾಸದಲ್ಲಿ ಗೆದ್ದ ಒಟ್ಟಾರೆ ಐದನೇ ಚಿನ್ನದ ಪದಕವಾಗಿದೆ.