ಪ್ಯಾರಾಲಿಂಪಿಕ್ಸ್ ; ಶೂಟಿಂಗ್ ನಲ್ಲಿ ಅವನಿಗೆ ಕಂಚಿನ ಪದಕ, ಒಂದೇ ಕ್ರೀಡಾಕೂಟದಲ್ಲಿ 2 ಪದಕ ಗೆದ್ದ ಮೊದಲ ಮಹಿಳೆ

03-09-21 01:49 pm       Headline Karnataka News Network   ಕ್ರೀಡೆ

ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಶೂಟರ್ ಅವನಿ ಲೇಖರಾ ಅವರು ಇತಿಹಾಸ ನಿರ್ಮಿಸಿದ್ದು, ಈ ಹಿಂದೆ ಚಿನ್ನ ಗೆದ್ದಿದ್ದ ಅವನಿ ಇದೀಗ ಮತ್ತೆ ಕಂಚಿನ ಪದಕ ಗೆದ್ದು ದಾಖಲೆ ನಿರ್ಮಿಸಿದ್ದಾರೆ.

ಟೋಕಿಯೊ, ಸೆ.3: ಜಪಾನ್ ರಾಜಧಾನಿ ಟೋಕಿಯೊದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಶೂಟರ್ ಅವನಿ ಲೇಖರಾ ಅವರು ಇತಿಹಾಸ ನಿರ್ಮಿಸಿದ್ದು, ಈ ಹಿಂದೆ ಚಿನ್ನ ಗೆದ್ದಿದ್ದ ಅವನಿ ಇದೀಗ ಮತ್ತೆ ಕಂಚಿನ ಪದಕ ಗೆದ್ದು ದಾಖಲೆ ನಿರ್ಮಿಸಿದ್ದಾರೆ.

ಹೌದು.. ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೊಂದು ಪದಕ ಲಭಿಸಿದ್ದು, ಶೂಟಿಂಗ್ ವಿಭಾಗದಲ್ಲಿ ಭಾರತದ ಅವನಿ ಲೇಖರಾ ಕಂಚಿನ ಪದಕ ಜಯಿಸಿದ್ದಾರೆ. ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಶುಕ್ರವಾರ ನಡೆದ ಆರ್ 8 ಈವೆಂಟ್ ನ ಮಹಿಳೆಯರ 50 ಮೀ ರೈಫಲ್ 3 ಪಿ ಎಸ್‌ಎಚ್ 1 ಸ್ಪರ್ಧೆಯಲ್ಲಿ 3ನೇ ಸ್ಥಾನ ಪಡೆದ ಅವನಿ ಲೇಖರಾ ಕಂಚಿನ ಪದಕ ಗೆದ್ದಿದ್ದಾರೆ. 

ಈ ಫೈನಲ್ ಪಂದ್ಯದಲ್ಲಿ ಭಾರತದ ಅವನಿ ಲೇಖರಾ ಒಟ್ಟು 445.9ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೇರಿ ಕಂಚಿನ ಪದಕಕ್ಕೆ ಮುತ್ತಿಟ್ಟಿದ್ದಾರೆ. ಅಂತಿಮ ಸುತ್ತು ಆರಂಭಕ್ಕೂ ಮುನ್ನ ಅವನಿ ಕೇವಲ  149.5 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದರು. ಆದರೆ ಅಂತಿಮ ಸುತ್ತಿನಲ್ಲಿ ಭರ್ಜರಿ ಪ್ರದರ್ಶನ ನೀಡಿ ಮೂರನೇ ಸ್ಥಾನ ಪಡೆದರು. 

ಹಾಲಿ ಕ್ರೀಡಾಕೂಟದಲ್ಲಿ ಅವನಿಗೆ ಇದು 2ನೇ ಪದಕ

ಇನ್ನು ಇದಕ್ಕೂ ಮೊದಲು ಇದೇ ಅವನಿ ಲೇಖರಾ ಚಿನ್ನದ ಪದಕ ಗೆದ್ದಿದ್ದರು. 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಭಾರತದ ಅವನಿ ಲೇಖಾ ಚಿನ್ನದ ಪದಕ ಗೆಲ್ಲುವ ಮೂಲಕ ಈ ರೀತಿಯ ಸಾಧನೆ ಮಾಡಿದ ಮೊದಲ ಭಾರತೀಯ ಪ್ಯಾರಾಒಲಿಂಪಿಕ್ಸ್ ಮಹಿಳಾ ಕ್ರೀಡಾಪಟು ಎಂಬ ಐತಿಹಾಸಿಕ ದಾಖಲೆಯನ್ನು ನಿರ್ಮಿಸಿದ್ದಾರೆ. 

ಐತಿಹಾಸಿಕ ಸಾಧನೆ
ಇನ್ನು ಒಂದೇ ಕ್ರೀಡಾಕೂಟದಲ್ಲಿ 2 ಪದಕ ಗೆದ್ದ ಭಾರತದ ಮೊದಲ ಮಹಿಳೆ ಎಂಬ ಕೀರ್ತಿಗೆ ಅವನಿ ಲೇಖರಾ ಪಾತ್ರರಾಗಿದ್ದಾರೆ. 

12ಕ್ಕೇರಿದ ಪದಕಗಳ ಸಂಖ್ಯೆ

ಇನ್ನು ಅವನಿ ಅವರ ಈ ಕಂಚಿನ ಪದಕ ಗಳಿಕೆಯ ಬಳಿಕ ಹಾಲಿ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕಗಳ ಸಂಖ್ಯೆ 12ಕ್ಕೇರಿಕೆಯಾಗಿದೆ. ಈ ಪೈಕಿ 2 ಚಿನ್ನ, 6 ಬೆಳ್ಳಿ ಮತ್ತು 4 ಕಂಚಿನ ಪದಕಗಳಿವೆ. 

ಪ್ರಸ್ತುತ ನಡೆಯುತ್ತಿರುವ ಟೋಕಿಯೊ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತ 12 ಪದಕಗಳನ್ನು ಗೆದ್ದಿದ್ದು ಇದರಲ್ಲಿ 2 ಚಿನ್ನದ ಪದಕಗಳು ಸಹ ಸೇರಿವೆ. ಈ ಸ್ಪರ್ಧೆಯಲ್ಲಿ ಭಾರತದ ಪರ ಪದಕ ಗೆದ್ದಿರುವ ಕ್ರೀಡಾಪಟುಗಳ ಪಟ್ಟಿ ಈ ಕೆಳಕಂಡಂತಿದೆ ನೋಡಿ..

1. ಭಾವಿನ ಪಟೇಲ್ - ಬೆಳ್ಳಿ ಪದಕ - ಮಹಿಳಾ ಸಿಂಗಲ್ಸ್ ಟೇಬಲ್ ಟೆನಿಸ್ C4

2. ನಿಶಾದ್ ಕುಮಾರ್ - ಬೆಳ್ಳಿ ಪದಕ - ಪುರುಷರ ಹೈಜಂಪ್ ಟಿ 47

3. ಅವನಿ ಲೇಖರ - ಚಿನ್ನದ ಪದಕ - ಮಹಿಳೆಯರ 10 ಮೀ ಏರ್ ರೈಫಲ್ ಶೂಟಿಂಗ್ ಸ್ಟ್ಯಾಂಡಿಂಗ್ ಎಸ್ ಎಚ್ 1

4. ದೇವೇಂದ್ರ ಜಜಾರಿಯಾ - ಬೆಳ್ಳಿ ಪದಕ - ಪುರುಷರ ಜಾವೆಲಿನ್ ಥ್ರೋ ಎಫ್ 46

5. ಸುಂದರ್ ಸಿಂಗ್ ಗುರ್ಜಾರ್ - ಕಂಚಿನ ಪದಕ - ಪುರುಷರ ಜಾವೆಲಿನ್ ಥ್ರೋ ಎಫ್ 46

6. ಯೋಗೀಶ್ ಕಠುನಿಯಾ - ಬೆಳ್ಳಿ ಪದಕ - ಪುರುಷರ ಡಿಸ್ಕಸ್ ಥ್ರೋ ಎಫ್ 56

7. ಸುಮಿತ್ ಆಂಟಿಲ್ - ಚಿನ್ನದ ಪದಕ - ಪುರುಷರ ಜಾವೆಲಿನ್ ಥ್ರೋ ಎಫ್ 64

8. ಸಿಂಗರಾಜ್ ಅಧಾನ - ಕಂಚಿನ ಪದಕ - ಪುರುಷರ 10 ಮೀಟರ್ ಏರ್ ಪಿಸ್ತೂಲ್ ಶೂಟಿಂಗ್ ಎಸ್ ಎಚ್ 1

9. ಮರಿಯಪ್ಪನ್ ತಂಗವೇಲು - ಬೆಳ್ಳಿ ಪದಕ - ಪುರುಷರ ಹೈ ಜಂಪ್ ಟಿ 42

10. ಶರದ್ ಕುಮಾರ್ - ಕಂಚಿನ ಪದಕ - ಪುರುಷರ ಹೈಜಂಪ್ ಟಿ 42

11. ಪ್ರವೀಣ್ ಕುಮಾರ್ - ಬೆಳ್ಳಿ ಪದಕ - ಪುರುಷರ ಎತ್ತರ ಜಿಗಿತ ಟಿ 64


12. ಅವನಿ ಲೇಖರ - ಕಂಚಿನ ಪದಕ - ಮಹಿಳೆಯರ 50 ಮೀ ಏರ್ ರೈಫಲ್ ಶೂಟಿಂಗ್ ಸ್ಟ್ಯಾಂಡಿಂಗ್ ಎಸ್ ಎಚ್ 1

Avani Lekhara clinched a historic second medal at the Tokyo Paralympics, winning a bronze in the 50m Rifle 3 Positions SH1 event on Friday. She has now become the first Indian woman to win two Paralympic medals.