ಪ್ಯಾರಾಲಿಂಪಿಕ್ಸ್: ಭಾರತಕ್ಕೆ ಮೂರನೇ ಚಿನ್ನ ತಂದುಕೊಟ್ಟ ಮನೀಶ್ ನರ್ವಾಲ್

04-09-21 10:47 am       Mykhel: Srinivas   ಕ್ರೀಡೆ

ಪುರುಷರ 50 ಮೀಟರ್ 4 ಪೊಸಿಷನ್ ಏರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯ ಫೈನಲ್ ಸುತ್ತಿನಲ್ಲಿ ಭಾರತದ ಕ್ರೀಡಾಪಟು ಮನೀಷ್ ನರ್ವಾಲ್ ಚಿನ್ನದ ಪದಕವನ್ನು ಗೆದ್ದಿದ್ದಾರೆ

ಟೋಕಿಯೋ, ಸೆ. 4: ಪ್ರಸ್ತುತ ನಡೆಯುತ್ತಿರುವ ಟೋಕಿಯೊ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸೆಪ್ಟೆಂಬರ್ 4 ರ ದಿನದ ಆರಂಭದಲ್ಲಿಯೇ ಭಾರತದ ಕ್ರೀಡಾಪಟುಗಳು 2 ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

ಪುರುಷರ 50 ಮೀಟರ್ 4 ಪೊಸಿಷನ್ ಏರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯ ಫೈನಲ್ ಸುತ್ತಿನಲ್ಲಿ ಭಾರತದ ಕ್ರೀಡಾಪಟು ಮನೀಷ್ ನರ್ವಾಲ್ ಚಿನ್ನದ ಪದಕವನ್ನು ಗೆದ್ದಿದ್ದಾರೆ ಹಾಗೂ ಮತ್ತೊಬ್ಬ ಕ್ರೀಡಾಪಟು ಸಿಂಗ್‌ರಾಜ್ ರಜತ ಪದಕವನ್ನು ಇದೇ ಸುತ್ತಿನಲ್ಲಿ ತಮ್ಮದಾಗಿಸಿಕೊಂಡಿದ್ದಾರೆ.

ಪಿಸ್ತೂಲ್ ಶೂಟಿಂಗ್ ವಿಭಾಗದಲ್ಲಿ ಭಾರತದ ಕ್ರೀಡಾಪಟುಗಳಾದ ಮನೀಷ್ ನರ್ವಾಲ್ ಮತ್ತು ಸಿಂಗ್‌ರಾಜ್ 2 ಪದಕಗಳನ್ನು ಗೆಲ್ಲುವುದರ ಮೂಲಕ ಇದೀಗ ಟೋಕಿಯೊ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪದಕಗಳ ಸಂಖ್ಯೆ 15ಕ್ಕೆ ಏರಿಕೆ ಕಂಡಿದೆ.

ಈ 15 ಪದಕಗಳಲ್ಲಿ 3 ಚಿನ್ನ, 7 ಬೆಳ್ಳಿ ಮತ್ತು 5 ಕಂಚಿನ ಪದಕಗಳು ಸೇರಿವೆ. ಹಾಗೂ ಪುರುಷರ ಬ್ಯಾಡ್ಮಿಂಟನ್ ಎಸ್ಎಲ್ 3 ವಿಭಾಗದಲ್ಲಿ ಭಾರತದ ಬ್ಯಾಡ್ಮಿಂಟನ್ ಆಟಗಾರ ಪ್ರಮೋದ್ ಭಗತ್ ಸೆಮಿಫೈನಲ್ ಸುತ್ತಿನಲ್ಲಿ ಜಪಾನ್ ದೇಶದ ಬ್ಯಾಡ್ಮಿಂಟನ್ ಆಟಗಾರ ಡೈಸುಕೆ ಫುಜಿಹಾರ ವಿರುದ್ಧ 21-11, 21-16 ಸೆಟ್‌ಗಳ ಅಂತರದಿಂದ ಜಯ ಸಾಧಿಸುವುದರ ಮೂಲಕ ಫೈನಲ್ ಸುತ್ತಿಗೆ ಪ್ರವೇಶ ಪಡೆದುಕೊಂಡಿದ್ದಾರೆ. ಹೀಗೆ ಭಾರತದ ಬ್ಯಾಡ್ಮಿಂಟನ್ ಆಟಗಾರ ಪ್ರಮೋದ್ ಭಗತ್ ಬ್ಯಾಡ್ಮಿಂಟನ್ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ್ದು ಭಾರತಕ್ಕೆ ಮತ್ತೊಂದು ಚಿನ್ನದ ಪದಕ ಲಭಿಸುವ ನಿರೀಕ್ಷೆಯಿದೆ. ಒಂದುವೇಳೆ ಪ್ರಮೋದ್ ಭಗತ್ ಫೈನಲ್ ಸುತ್ತಿನಲ್ಲಿ ಸೋತರೆ ಭಾರತಕ್ಕೆ ಬೆಳ್ಳಿ ಪದಕ ಲಭಿಸುವುದು ಖಚಿತ.