ಪಾಕಿಸ್ತಾನ ಕ್ರಿಕೆಟ್‌ ಕೋಚ್ ಸ್ಥಾನಕ್ಕೆ ಮಿಸ್ಬಾ ಉಲ್ ಹಕ್, ವಾಕರ್ ಯೂನಿಸ್ ರಾಜೀನಾಮೆ

06-09-21 04:37 pm       Mykhel: Sadashiva   ಕ್ರೀಡೆ

ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ನಾಯಕ, ಮುಖ್ಯ ಕೋಚ್ ಮಿಸ್ಬಾ ಉಲ್ ಹಕ್ ಮತ್ತು ಮುಖ್ಯ ಬೌಲಿಂಗ್ ಕೋಚ್ ವಾಕರ್ ಯೂನಿಸ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಕರಾಚಿ: ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ನಾಯಕ, ಮುಖ್ಯ ಕೋಚ್ ಮಿಸ್ಬಾ ಉಲ್ ಹಕ್ ಮತ್ತು ಮುಖ್ಯ ಬೌಲಿಂಗ್ ಕೋಚ್ ವಾಕರ್ ಯೂನಿಸ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಟಿ20 ವಿಶ್ವಕಪ್‌ ಸಮೀಪದಲ್ಲಿರುವಾಗಲೇ ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್‌ (ಪಿಸಿಬಿ)ನಲ್ಲಿ ಪ್ರಮುಖ ಬದಲಾವಣೆಯಾಗಿದೆ. ಪಿಸಿಬಿ ಈ ಸಂಗತಿಯನ್ನು ಸೋಮವಾರ (ಸೆಪ್ಟೆಂಬರ್‌ 6) ತಿಳಿಸಿದೆ.

ಪಾಕಿಸ್ತಾನ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿದ್ದ ಮಿಸ್ಬಾ ಉಲ್ ಹಕ್ ಮತ್ತು ಮುಖ್ಯ ಬೌಲಿಂಗ್ ಕೋಚ್ ಆಗಿದ್ದ ಯೂನಿಸ್ ಖಾನ್ ಇಬ್ಬರೂ ಸೋಮವಾರ ಮುಂಜಾನೆ ತಮ್ಮ ನಿರ್ಧಾರ ತಿಳಿಸಿರುವುದಾಗಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಹೇಳಿದೆ. ವೆಸ್ಟ್‌ ಇಂಡೀಸ್‌ನಲ್ಲಿರುವ ಮಿಸ್ಬಾಗೆ ಕೋವಿಡ್-19 ಪಾಸಿಟಿವ್ ಬಂದಿದೆ. ಅವರೀಗ ಐಸೊಲೇಶನ್‌ನಲ್ಲಿದ್ದಾರೆ.



ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ನ್ಯೂಜಿಲೆಂಡ್ ವಿರುದ್ಧ ಇದೇ ಸೆಪ್ಟೆಂಬರ್‌ 25ರಿಂದ ಅಕ್ಟೋಬರ್‌ 3ರ ವರೆಗೆ ಐದು ಟಿ20ಐ ಪಂದ್ಯ ನಡೆಯಲಿದೆ. ಪಾಕಿಸ್ತಾನಕ್ಕೆ ಪ್ರವಾಸ ಬರಲಿರುವ ಕಿವೀಸ್ ತಂಡ ಅಲ್ಲಿ ಟಿ20ಐ ಸರಣಿ ಆಡಲಿದೆ. ಅದಾಗಿ ಇಂಗ್ಲೆಂಡ್ ವಿರುದ್ಧ ಪಾಕ್ ತಂಡಕ್ಕೆ ಎರಡು ಪಂದ್ಯಗಳ ಟಿ20ಐ ಸರಣಿ ನಡೆಯಲಿದೆ. ಅಕ್ಟೋಬರ್‌ 13 ಮತ್ತು 14ರಂದು ಪಾಕ್ ಮತ್ತು ಇಂಗ್ಲೆಂಡ್ ಮಧ್ಯೆ ಎರಡು ಪಂದ್ಯಗಳ ಟಿ20ಐ ಸರಣಿ ನಡೆಯಲಿದೆ.

ನ್ಯೂಜಿಲೆಂಡ್, ಇಂಗ್ಲೆಂಡ್ ವಿರುದ್ಧದ ಟಿ20 ಸರಣಿ ಬಳಿಕ ಅಕ್ಟೋಬರ್‌-ನವೆಂಬರ್‌ನಲ್ಲಿ ಟಿ20 ವಿಶ್ವಕಪ್‌ ನಡೆಯಲಿದೆ. ಇದಕ್ಕೂ ಮುನ್ನ ಪಿಸಿಬಿ ಕೋಚಿಂಗ್ ವಿಭಾಗದಲ್ಲಿ ಬದಲಾವಣೆಯಾಗಲಿದೆ. ತೆರವಾಗಿರುವ ಸ್ಥಾನಕ್ಕೆ ತಾತ್ಕಾಲಿಕವಾಗಿ ಅಬ್ದುಲ್ ರಝಾಕ್ ಮತ್ತು ಸಕ್ಲೇನ್ ಮುಷ್ತಾಕ್ ಬರಲಿದ್ದಾರೆ. ಟಿ20 ವಿಶ್ವಕಪ್‌ಗೂ ಮುನ್ನ ಕೋಚ್‌ಗಳನ್ನು ಆರಿಸುವುದಾಗಿ ಪಿಸಿಬಿ ಹೇಳಿದೆ. ಟಿ20 ವಿಶ್ವಕಪ್‌ ಟೂರ್ನಿಗೆ ಸಂಬಂಧಿಸಿ ಸೋಮವಾರ ಪಾಕಿಸ್ತಾನ 15 ಜನರ ತಂಡ ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಪಾಕ್ ತಂಡದ ಕೋಚಿಂಗ್ ಸ್ಥಾನಕ್ಕೆ ಇಬ್ಬರು ರಾಜೀನಾಮೆ ನೀಡಿರುವ ಸಂಗತಿ ಕೇಳಿ ಬಂದಿದೆ.