ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬ್ರೆಂಡನ್ ಟೇಲರ್

13-09-21 01:03 pm       Mykhel: Sadashiva   ಕ್ರೀಡೆ

ಜಿಂಬಾಬ್ವೆ ಕ್ರಿಕೆಟ್ ತಂಡದ ಮಾಜಿ ನಾಯಕ, ವಿಕೆಟ್ ಕೀಪರ್-ಬ್ಯಾಟ್ಸ್‌ಮನ್‌ ಬ್ರೆಂಡನ್ ಟೇಲರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.

ಹರಾರೆ, ಸೆ.13: ಜಿಂಬಾಬ್ವೆ ಕ್ರಿಕೆಟ್ ತಂಡದ ಮಾಜಿ ನಾಯಕ, ವಿಕೆಟ್ ಕೀಪರ್-ಬ್ಯಾಟ್ಸ್‌ಮನ್‌ ಬ್ರೆಂಡನ್ ಟೇಲರ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ತಾನು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುತ್ತಿರುವುದಾಗಿ ಟೇಲರ್ ಸೋಮವಾರ (ಸೆಪ್ಟೆಂಬರ್‌ 13) ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ. ಸೋಮವಾರ ಐರ್ಲೆಂಡ್‌ ವಿರುದ್ಧ ನಡೆಯಲಿರುವ ಮೂರನೇ ಮತ್ತು ಕೊನೇಯ ಏಕದಿನ ಪಂದ್ಯ ಟೇಲರ್ ಅವರ ಅಂತಿಮ ಅಂತಾರಾಷ್ಟ್ರೀಯ ಪಂದ್ಯವಾಗಲಿದೆ.

35ರ ಹರೆಯದ ಬ್ರೆಂಡನ್ ಟೇಲರ್ ಏಪ್ರಿಲ್ 2004ರಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. 2021ರ ಸೆಪ್ಟೆಂಬರ್‌ 10ರಂದು ಐರ್ಲೆಂಡ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಆಡಿದ್ದರು. ಜಿಂಬಾಬ್ವೆ ಕ್ರಿಕೆಟ್‌ನಲ್ಲಿ ಸಾರ್ವಕಾಲಿಕ ಅತ್ಯುತ್ತಮ ಕ್ರಿಕೆಟರ್‌ಗಳಲ್ಲಿ ಒಬ್ಬರಾಗಿ ಟೇಲರ್ ಗುರುತಿಸಿಕೊಂಡಿದ್ದಾರೆ.



ಟ್ವಿಟರ್‌ನಲ್ಲಿ ಬ್ರೆಂಡನ್ ಟೇಲರ್ ಭಾವುಕ ಸಂದೇಶ

'ನನ್ನ ಪ್ರೀತಿಪಾತ್ರ ದೇಶದ ಪರ ನಾನು ನಾಳೆ (ಸೆಪ್ಟೆಂಬರ್‌ 13) ಕಡೇಯ ಪಂದ್ಯ ಆಡುತ್ತಿದ್ದೇನೆ ಎಂದು ತಿಳಿಸಲು ನನ್ನ ಹೃದಯ ಭಾರವಾಗುತ್ತಿದೆ. 17 ವರ್ಷಗಳ ಈ ವೃತ್ತಿ ಬದುಕಿನಲ್ಲಿ ಏರಿದ ಎತ್ತರ, ಆಳಕ್ಕೆ ಕುಸಿದು ಬಿದ್ದಿದ್ದನ್ನೆಲ್ಲಾ ನಾನು ಈ ಜಗತ್ತಿಗಾಗಿ ಬದಲಾಯಿಸಲು ಸಾಧ್ಯವಿಲ್ಲ. ಕ್ರೀಡೆ ನನಗೆ ವಿನಮ್ರತೆ ಕಲಿಸಿದೆ. ಜಿಂಬಾಬ್ವೆ ಆಟಗಾರನಾಗಿ ಇಷ್ಟು ಸುದೀರ್ಘ ಕಾಲ ಮುಂದುವರೆಯಲು ನಾನೆಷ್ಟು ಲಕ್ಕಿ ಅನ್ನೋದನ್ನು ಕ್ರಿಕೆಟ್‌ ನೆನಪಿಸಿದೆ. ಧರಿಸುತ್ತಿದ್ದ ಈ ಕ್ರಿಕೆಟ್ ಬ್ಯಾಡ್ಜ್ ಅನ್ನು ಸೇರಿಸಿ ಎಲ್ಲವನ್ನೂ ನಾನು ಮೈದಾನದಲ್ಲೇ ಬಿಟ್ಟು ಹೋಗುತ್ತಿದ್ದೇನೆ. 2004 ರಲ್ಲಿ ನಾನು ಮೊದಲ ಬಾರಿಗೆ ಬಂದಾಗ ತಂಡವನ್ನು ಉತ್ತಮ ಸ್ಥಾನದಲ್ಲಿ ಬಿಡುವುದು ನನ್ನ ಗುರಿಯಾಗಿತ್ತು, ನಾನು ಅದನ್ನು ಮಾಡಿದ್ದೇನೆ ಎಂದು ನಾನು ಭಾವಿಸುತ್ತೇನೆ,' ಎಂದು ಉದ್ದ ಟ್ವಿಟರ್ ಸಂದೇಶದ ಮೂಲಕ ಬ್ರೆಂಡನ್ ಟೇಲರ್ ಅಂತಾರಾಷ್ಟ್ರೀಯ ನಿವೃತ್ತಿಯ ಸಂಗತಿ ತಿಳಿಸಿದ್ದಾರೆ.


ಜಿಂಬಾಬ್ವೆ ಕ್ರಿಕೆಟ್ ಬೋರ್ಡ್‌ಗೆ ಟೇಲರ್ ಧನ್ಯವಾದ

ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯದ ಸಂಗತಿ ತಿಳಿಸುವಾಗ ಟೇಲರ್ ತನ್ನ ಕುಟುಂಬಸ್ಥರು, ಜಿಂಜಾಬ್ವೆ ಕ್ರಿಕೆಟ್ ಬೋರ್ಡ್, ತಂಡದ ಆಟಗಾರರು, ಅಭಿಮಾನಿಗಳಿಗೆ ತುಂಬು ಮನದ ಧನ್ಯವಾದಗಳನ್ನು ತಿಳಿಸಿದ್ದಾರೆ. "ಕೊನೆಯದಾಗಿ ನನ್ನ ಹೆಂಡತಿ ಮತ್ತು ನಮ್ಮ ಮೂವರು ಮುದ್ದಿನ ಹುಡುಗರಿಗೆ ನಾನು ಧನ್ಯವಾದ ತಿಳಿಸುತ್ತೇನೆ. ನನ್ನ ಪಾಲಿಗೆ ಎಲ್ಲವೂ ನೀವಾಗಿದ್ದಿರಿ. ನೀವಿಲ್ಲದೆ ಈ ಪ್ರಯಾಣ ಖಂಡಿತಾ ಸಾಧ್ಯವಿರಲಿಲ್ಲ," ಎಂದು ಟೇಲರ್ ಬರೆದುಕೊಂಡಿದ್ದಾರೆ. ಬಲಗೈ ಬ್ಯಾಟ್ಸ್‌ಮನ್‌ ಆಗಿದ್ದ ಟೇಲರ್ ಶ್ರೀಲಂಕಾ ವಿರುದ್ಧದ ಟೆಸ್ಟ್‌ ಪಂದ್ಯದ ಮೂಲಕ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಟೇಲರ್ ಅಂತಾರಾಷ್ಟ್ರೀಯ ಟಿ20ಐಗೆ ಪಾದಾರ್ಪಣೆ ಮಾಡಿದ್ದು 2006ರಲ್ಲಿ ಬಾಂಗ್ಲಾದೇಶದ ವಿರುದ್ಧ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲೂ ಟೇಲರ್, ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಆಡಿದ್ದರು.

ಬ್ರೆಂಡನ್ ಟೇಲರ್ ಕ್ರಿಕೆಟ್ ವೃತ್ತಿ ಬದುಕಿನ ಅಂಕಿ-ಅಂಶ

ಜಿಂಬಾಬ್ವೆ ರಾಷ್ಟ್ರೀಯ ಕ್ರಿಕೆಟ್ ತಂಡದ ಪರ ಬ್ರೆಂಡನ್ ಟೇಲರ್ 34 ಟೆಸ್ಟ್ ಪಂದ್ಯಗಳಲ್ಲಿ 36.25ರ ಸರಾಸರಿಯಂತೆ 2320 ರನ್, 6 ಶತಕ ಬಾರಿಸಿದ್ದಾರೆ. 204 ಏಕದಿನ ಪಂದ್ಯಗಳಲ್ಲಿ 35.71ರ ಸರಾಸರಿಯಲ್ಲಿ 6677 ರನ್, 11 ಶತಕ ಬಾರಿಸಿದ್ದಾರೆ. ಇನ್ನು 44 ಟಿ20ಐ ಪಂದ್ಯಗಳಲ್ಲಿ 22.03ರ ಸರಾಸರಿಯಲ್ಲಿ 859 ರನ್, ಬಾರಿಸಿದ್ದಾರೆ. ಜಿಂಬಾಬ್ವೆ ತಂಡವಲ್ಲದೆ ಚಿತ್ತಗಾಂಗ್ ಕಿಂಗ್ಸ್, ಉತುರ ರುದ್ರಾಸ್, ಸನ್ ರೈಡರ್ಸ್ ಹೈದರಾಬಾದ್, ನಾಟಿಂಗ್‌ಹ್ಯಾಮ್‌ಶೈರ್, ಬರಿಸಾಲ್ ಬುಲ್ಸ್, ಲಿಯೋ ಲಯನ್ಸ್, ಸ್ಟೆಲೆನ್‌ಬೋಸ್ಕ್ ಕಿಂಗ್ಸ್, ಖುಲ್ನಾ ಟೈಟಾನ್ಸ್, ಮರಾಥಾ ಅರೇನಿಯನ್ಸ್, ಕಾಹೋರ್ ಕಲಂದರ್, ವರ್ಲ್ಡ್ XI, ಮುಲ್ತಾನ್ ಸುಲ್ತಾನ್ಸ್, ಕಾಂಡ್ಯ ಟಸ್ಕರ್ಸ್ ತಂಡಗಳ ಪರ ಟೇಲರ್ ಆಡಿದ್ದಾರೆ.