ಕ್ರಿಕೆಟ್ ಕಾಮೆಂಟರಿಯಿಂದ ದಂತಕತೆ ಮೈಕಲ್ ಹೋಲ್ಡಿಂಗ್ ನಿವೃತ್ತಿ

16-09-21 11:35 am       Mykhel: Sadashiva   ಕ್ರೀಡೆ

ವೆಸ್ಟ್ ಇಂಡೀಸ್ ಕ್ರಿಕೆಟ್ ದಿಗ್ಗಜ ಮೈಕಲ್ ಹೋಲ್ಡಿಂಗ್ ಅವರು ಕ್ರಿಕೆಟ್ ಕಾಮೆಂಟರಿಯಿಂದ ನಿವೃತ್ತಿ ಹೊಂದಿದ್ದಾರೆ.

ಲಂಡನ್: ವೆಸ್ಟ್ ಇಂಡೀಸ್ ಕ್ರಿಕೆಟ್ ದಿಗ್ಗಜ ಮೈಕಲ್ ಹೋಲ್ಡಿಂಗ್ ಅವರು ಕ್ರಿಕೆಟ್ ಕಾಮೆಂಟರಿಯಿಂದ ನಿವೃತ್ತಿ ಹೊಂದಿದ್ದಾರೆ. ಬುಧವಾರ (ಸೆಪ್ಟೆಂಬರ್‌ 15) ಹೋಲ್ಡಿಂಗ್‌ ಕ್ರಿಕೆಟ್ ಕಾಮೆಂಟರಿಗೆ ನಿವೃತ್ತಿ ಘೋಷಿಸಿರುವುದಾಗಿ ಇಎಸ್‌ಪಿಎನ್ ಕ್ರಿಕ್‌ಇನ್ಫೋ ವರದಿ ಹೇಳಿದೆ. 

ಸುಮಾರು 20 ವರ್ಷಗಳಿಂದ ಮೈಕಲ್ ಹೋಲ್ಡಿಂಗ್ ಸ್ಕೈ ಸ್ಪೋರ್ಟ್ಸ್ ಕಾಮೆಂಟರಿ ಪ್ಯಾನೆಲ್‌ನ ಸದಸ್ಯರಾಗಿದ್ದರು. ವೆಸ್ಟ್ ಇಂಡೀಸ್ ದಂತಕತೆ ಹೋಲ್ಡಿಂಗ್ ಕಳೆದ ವರ್ಷದಿಂದಲೂ ಕಾಮೆಂಟರಿಗೆ ನಿವೃತ್ತಿ ಘೋಷಿಸಲು ಯೋಚಿಸುತ್ತಿದ್ದರು ಎನ್ನಲಾಗಿದೆ.



"ಕಾಮೆಂಟರಿ ವಿಚಾರದಲ್ಲಿ 2020ರ ಬಳಿಕ ನಾನು ಎಷ್ಟರವರೆಗೆ ಸಾಗುತ್ತೇನೆ ಎಂಬುದರ ಬಗ್ಗೆ ನನಗೆ ಗೊತ್ತಿರಲಿಲ್ಲ. ನನ್ನ ಈ ಇಳಿ ವಯಸ್ಸಿನಲ್ಲಿ ನಾನು ಬಹಳ ವರ್ಷಗಳ ಕಾಲ ಕಾಮೆಂಟರಿ ಮಾಡುತ್ತೇನೆಂದು ನಾನು ಅಂದುಕೊಳ್ಳುವುದಿಲ್ಲ. ನನಗೀಗ 66 ವರ್ಷ, 36, 46 ಅಥವಾ 56 ವರ್ಷವಲ್ಲ," ಎಂದು ಬಿಬಿಸಿ ರೇಡಿಯೋ ಮಾತುಕತೆಯಲ್ಲಿ ಹೋಲ್ಡಿಂಗ್ ಹೇಳಿದ್ದಾರೆ.

1987ರಲ್ಲಿ ಹೋಲ್ಡಿಂಗ್ ಕ್ರಿಕೆಟ್ ಕಾಮೆಂಟರಿ ಅಥವಾ ವಿಶ್ಲೇಷಣೆ ವೃತ್ತಿ ಆರಂಭಿಸಿದ್ದರು. ದೂರದೃಷ್ಟಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಾಗಿ ಹೋಲ್ಡಿಂಗ್ ಕ್ರಿಕೆಟ್ ಕಾಮೆಂಟರಿ ವಿಚಾರದಲ್ಲಿ ಬಹಳ ಗೌರವ ಹೊಂದಿದ್ದರು. ಬೌಲರ್ ಆಗಿದ್ದ ಹೋಲ್ಡಿಂಗ್ ವೆಸ್ಟ್ ಇಂಡೀಸ್ ತಂಡದ ಪರ 60 ಟೆಸ್ಟ್ ಪಂದ್ಯಗಳಲ್ಲಿ 910 ರನ್, 249 ವಿಕೆಟ್, 102 ಏಕದಿನ ಪಂದ್ಯಗಳಲ್ಲಿ 282 ರನ್, 142 ವಿಕೆಟ್‌ ಗಳಿಸಿದ್ದಾರೆ.