ವಿಶ್ಲೇಷಣೆ : ಯಡಿಯೂರಪ್ಪ ಪಾಲಿಗೆ ಕಷ್ಟ ತಂದೊಡ್ಡಲಿದ್ದಾರಾ ಪಕ್ಷ ನಿಷ್ಟರು?

24-06-21 05:17 pm       R T Vittal Murthy   ಅಂಕಣಗಳು

ಸಧ್ಯದ ಲೆಕ್ಕಾಚಾರದ ಪ್ರಕಾರ, ಯಡಿಯೂರಪ್ಪ ಅವರ ವಿರುದ್ಧ ಬಹಿರಂಗ ಸಮರಕ್ಕೆ ಸಜ್ಜಾಗುವವರ ಸಂಖ್ಯೆ ಎರಡಂಕಿಯನ್ನು ದಾಟುವುದಿಲ್ಲ.ಆದರೆ ಹೈಕಮಾಂಡ್‌ ಸೂಚನೆಯನ್ನು ಕಾಯುತ್ತಿರುವ ಬಹುದೊಡ್ಡ ಶಾಸಕರ ಗುಂಪು ರಾಜ್ಯ ಬಿಜೆಪಿಯಲ್ಲಿದೆ.

ಆರ್.ಟಿ.ವಿಠ್ಠಲಮೂರ್ತಿ, ಹಿರಿಯ ಪತ್ರಕರ್ತರು 

ಹೈಕಮಾಂಡ್‌ ನಿಷ್ಠ ಶಾಸಕರ ಗುಂಪು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಲಿದೆಯೇ? ಹಾಗೆಂಬುದೊಂದು ಅನುಮಾನ ಖುದ್ದು ಯಡಿಯೂರಪ್ಪ ಅವರ ಕ್ಯಾಂಪನ್ನು ಕಾಡಿಸುತ್ತಿದೆ.ಮೂರು ದಿನಗಳ ಭೇಟಿಯನ್ನು ಮುಗಿಸಿ ಪಕ್ಷದ ಉಸ್ತುವಾರಿ ಹೊಣೆ ಹೊತ್ತ ಅರುಣ್‌ ಸಿಂಗ್‌ ಅವರು ದಿಲ್ಲಿಗೆ ಹೋದ ನಂತರ ಯಡಿಯೂರಪ್ಪ ಅವರ ಕ್ಯಾಂಪನ್ನು ಕಾಡುತ್ತಿರುವ ಈ ಅನುಮಾನ ಸಹಜವೂ ಹೌದು. ಯಾಕೆಂದರೆ ಯಡಿಯೂರಪ್ಪ ಅವರ ನಾಯಕತ್ವದ ವಿರುದ್ದ ಎದ್ದ ಅಪಸ್ವರ ಬಲಾಬಲ ಪರೀಕ್ಷೆಗೆ ಅನುವು ಮಾಡಿಕೊಟ್ಟಿದ್ದರೆ ಆಟ ಬೇರೆ ಇರುತ್ತಿತ್ತು.

ಆದರೆ ಅರುಣ್‌ ಸಿಂಗ್‌ ಅವರು ಬಂದಾಗ ಬಲಾಬಲ ಪ್ರದರ್ಶನಕ್ಕೆ ವೇದಿಕೆ ಸೃಷ್ಟಿಯಾಗಲಿಲ್ಲ.ಆದರೆ ಯಡಿಯೂರಪ್ಪ ಅವರ ವಿಷಯದಲ್ಲಿ ಹೈಕಮಾಂಡ್‌ ನಿರ್ಧಾರವನ್ನು ಕಾಯುತ್ತಿರುವ ದೊಡ್ಡ ಗುಂಪೊಂದರ ಚಹರೆ ಪಟ್ಟಿ ಕಂಡಿರುವುದು ಈ ಕ್ಯಾಂಪಿನ ಅನುಮಾನಕ್ಕೆ ಕಾರಣ. ಸಧ್ಯದ ಲೆಕ್ಕಾಚಾರದ ಪ್ರಕಾರ, ಯಡಿಯೂರಪ್ಪ ಅವರ ವಿರುದ್ಧ ಬಹಿರಂಗ ಸಮರಕ್ಕೆ ಸಜ್ಜಾಗುವವರ ಸಂಖ್ಯೆ ಎರಡಂಕಿಯನ್ನು ದಾಟುವುದಿಲ್ಲ.ಆದರೆ ಹೈಕಮಾಂಡ್‌ ಸೂಚನೆಯನ್ನು ಕಾಯುತ್ತಿರುವ ಬಹುದೊಡ್ಡ ಶಾಸಕರ ಗುಂಪು ರಾಜ್ಯ ಬಿಜೆಪಿಯಲ್ಲಿದೆ.

ಒಂದು ವೇಳೆ ಯಡಿಯೂರಪ್ಪ ಅವರು ಮುಂದುವರಿಯಲಿ ಎಂದು ಹೈಕಮಾಂಡ್‌ ಬಯಸಿದರೆ ಈ ಗುಂಪು ಮೌನವಾಗಿ ಒಪ್ಪಿಕೊಳ್ಳುತ್ತದೆ.ಇಲ್ಲ,ಯಡಿಯೂರಪ್ಪ ಬೇಡ ಎಂದು ಅದು ಸಿಗ್ನಲ್ಲು ಕೊಟ್ಟರೆ ನಿಶ್ಚಿತವಾಗಿ ಅದನ್ನು ಪಾಲಿಸುತ್ತದೆ. ಅದರರ್ಥ ಬೇರೇನೂ ಅಲ್ಲ,ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿಯುತ್ತಾರೋ?ಇಲ್ಲವೋ?ಎಂಬುದು ಈಗ ಮೋದಿ,ಅಮಿತ್‌ ಷಾ ಅವರನ್ನು ಅವಲಂಬಿಸಿದೆ. ಒಂದು ವೇಳೆ ಅವರು ಯಡಿಯೂರಪ್ಪ ಇರಲಿ ಎಂದರೆ ಸಂಪುಟ ಪುನರ್‌ ರಚನೆಯಂತಹ ಬೆಳವಣಿಗೆ ನಡೆಯಬಹುದು.ಬೇಡ ಎಂದರೆ ಪರ್ಯಾಯ ನಾಯಕರು ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಬಹುದು. ಹೀಗಾಗಿ ಅರುಣ್‌ ಸಿಂಗ್‌ ಅವರು ಬಂದು ಹೋದ ನಂತರ ರಾಜ್ಯ ಬಿಜೆಪಿಯನ್ನು ಕಾಡುತ್ತಿರುವ ಒಂದೇ ಪ್ರಶ್ನೆ ಎಂದರೆ ವರಿಷ್ಟರು ಯೆಸ್‌ ಅನ್ನುತ್ತಾರಾ?ನೋ ಅನ್ನುತ್ತಾರಾ?ಎಂಬುದು.

ಗಮನಿಸಬೇಕಾದ ಸಂಗತಿ ಎಂದರೆ ವರಿಷ್ಟರು ಹೇಳಿದ್ದನ್ನು ಪಾಲಿಸಲು ಸಿದ್ಧರಾಗಿರುವವರ ಗುಂಪೇ ಯಡಿಯೂರಪ್ಪ ಅವರಿಗೆ ದೊಡ್ಡ ಕಂಟಕ.ಯಾಕೆಂದರೆ ಈ ಗುಂಪಿಗೆ ಭವಿಷ್ಯದ ನಾಯಕ ಯಾರು?ಅನ್ನುವುದು ಮುಖ್ಯವಲ್ಲ. ಇಂತಹ ಗುಂಪೇ ರಾಜ್ಯ ರಾಜಕಾರಣದಲ್ಲಿ ಬಹುದೊಡ್ಡ ನಾಯಕರನ್ನು ಹೊಡೆದುರುಳಿಸಿದೆ.ಕರ್ನಾಟಕದ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸರ ವಿರುದ್ಧ ಇಂದಿರಾಗಾಂಧಿ ತಿರುಗಿ ಬಿದ್ದರಲ್ಲ? ಆ ಸಂದರ್ಭದಲ್ಲಿ ಅರಸರನ್ನು ಕೆಳಗಿಳಿಸುವುದು ಕಷ್ಟ ಎಂಬ ಪರಿಸ್ಥಿತಿ ಇತ್ತು.ಅಷ್ಟೊತ್ತಿಗಾಗಲೇ ಎರಡನೇ ಬಾರಿ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸರು ಪ್ರಬಲ ಸಮುದಾಯಗಳ ವಿರುದ್ಧ ಶೋಷಿತರ ಮತಬ್ಯಾಂಕನ್ನು ಕಟ್ಟಿ ಬಲಿಷ್ಟರಾಗಿ ಬೆಳೆದು ನಿಂತಿದ್ದರು. ಹೀಗಾಗಿ ದೇವರಾಜ ಅರಸರನ್ನು ಕೆಳಗಿಳಿಸುವುದು ಸುಲಭವಲ್ಲ ಎಂದು ಭಾವಿಸಲಾಗಿತ್ತು.ಅಷ್ಟೇ ಮುಖ್ಯವಾಗಿ ರಾಷ್ಟ್ರ ರಾಜಕಾರಣದಲ್ಲಿ ಕುಸಿತ ಕಂಡು,ಆಗಷ್ಟೇ ಮೇಲೆದ್ದು ನಿಂತಿದ್ದ ಇಂದಿರಾಗಾಂಧಿ ಅವರು ಅರಸರನ್ನು ಎದುರು ಹಾಕಿಕೊಳ್ಳುವುದಿಲ್ಲ ಎಂಬುದು ಹಲವರ ಲೆಕ್ಕಾಚಾರವಾಗಿತ್ತು.

ಆದರೆ ಇಂದಿರಾಗಾಂಧಿ ರಾತ್ರೋ ರಾತ್ರಿ ಯುವ ನಾಯಕ ಬಂಗಾರಪ್ಪ ಅವರನ್ನು ದಿಲ್ಲಿಗೆ ಕರೆಸಿಕೊಂಡರು. ಪ್ರದೇಶ ಕಾಂಗ್ರೆಸ್‌ ಸಮಿತಿಗೆ ಅಡ್‌ ಹಾಕ್‌ ಅಧ್ಯಕ್ಷರಾಗಲು ತಯಾರಾಗಿರಿ ಎಂದು ಸೂಚಿಸಿ ಅರಸು ವಿರುದ್ಧದ ಆಟಕ್ಕೆ ಚಾಲನೆ ನೀಡಿದರು. ನೋಡ,ನೋಡುತ್ತಿದ್ದಂತೆಯೇ ಅರಸರ ಪಾಳೆಯದಲ್ಲಿದ್ದ ಶಾಸಕರ ಪಡೆ ಪಕ್ಷ ನಿಷ್ಟೆಯ ಹೆಸರಿನಲ್ಲಿ ಇಂದಿರಾಗಾಂಧಿ ಅವರ ಕಡೆ ಹೊರಳಿಕೊಂಡಿತು.ಪರಿಣಾಮ ಅರಸರಂತಹ ದಿಗ್ಗಜ ನಾಯಕ ಧರೆಗುರುಳಿ,ಗುಂಡೂರಾವ್‌ ಮುಖ್ಯಮಂತ್ರಿ ಹುದ್ದೆಯ ಮೇಲೆ ಬಂದು ಕುಳಿತರು. ಎಂಭತ್ತೊಂಭತ್ತರಲ್ಲೂ ಇತಿಹಾಸ ಮರುಕಳಿಸಿತು.ಆಗ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದವರು ವೀರೇಂದ್ರಪಾಟೀಲ್.ಎಲ್ಲ ಮತ ಬ್ಯಾಂಕುಗಳು ಸೇರಿ ರೂಪುಗೊಂಡಿದ್ದ ಸರ್ಕಾರದ ಚುಕ್ಕಾಣಿಯನ್ನು ಹಿಡಿದಿದ್ದ ಪಾಟೀಲರು ಸುಭದ್ರರಾಗಿದ್ದಾರೆ ಎಂಬ ಭಾವನೆ ಇತ್ತು.

ಆದರೆ ಕೆಲವೇ ಕಾಲದಲ್ಲಿ ಇಲ್ಲಿನ ಮತ್ತು ದಿಲ್ಲಿಯ ನಾಯಕರು ವೀರೇಂದ್ರಪಾಟೀಲರ ವಿರುದ್ಧ ತಿರುಗಿ ಬಿದ್ದರು.ಅಷ್ಟೇ ಅಲ್ಲ,ಅವರಿಗೆ ಅನಾರೋಗ್ಯವಾಗಿದ್ದನ್ನೇ ನೆಪವಾಗಿಟ್ಟುಕೊಂಡು ಅಧಿಕಾರದಿಂದ ಕೆಳಗಿಳಿಸಿದರು. ಆ ಸಂದರ್ಭದಲ್ಲೂ ವೀರೇಂದ್ರಪಾಟೀಲರ ಜತೆ ಶಾಸಕರ ದೊಡ್ಡ ಗುಂಪಿತ್ತು.ಕೆಲ ದಿನಗಳ ಕಾಲ ಅದು ಹೈಕಮಾಂಡ್‌ ನಿರ್ಧಾರವನ್ನು ವಿರೋಧಿಸುವ ಲಕ್ಷಣಗಳೂ ಕಂಡವು.ಆದರೆ ಆ ಗುಂಪು ಕೂಡಾ ಕೆಲವೇ ದಿನಗಳಲ್ಲಿ ಪಕ್ಷ ನಿಷ್ಟೆಯ ಫೋಸು ಕೊಟ್ಟು ಪಾಟೀಲರ ಕ್ಯಾಂಪನ್ನು ತೊರೆಯಿತು. ಇದೇ ರೀತಿ 2008 ರಲ್ಲಿ ಇದೇ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದರಲ್ಲ?ಆ ಸಂದರ್ಭದಲ್ಲಿ ಅಡ್ವಾಣಿ ನೇತೃತ್ವದ ಬಿಜೆಪಿ ಹೈಕಮಾಂಡ್‌ ಒಳಗಿಂದೊಳಗೇ ಕುದಿಯುತ್ತಿತ್ತು. ಹೇಗಾದರೂ ಮಾಡಿ ಯಡಿಯೂರಪ್ಪ ಅವರನ್ನು ಕೆಳಗಿಳಿಸಬೇಕು ಎಂಬ ಅಜೆಂಡಾದೊಂದಿಗೆ ಹೊರಟ ಅದಕ್ಕೆ ನೆರವಾಗಿದ್ದು ಆಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ವರದಿ.

ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಅವರ ಈ ವರದಿ ಕೈ ಸೇರಿದ್ದೇ ತಡ,ವರಿಷ್ಟರು ಯಡಿಯೂರಪ್ಪ ಅವರ ವಿರುದ್ಧ ತಿರುಗಿ ಬಿದ್ದರು.ಅವತ್ತು ಯಡಿಯೂರಪ್ಪ ಪದೇ ಪದೇ ತಮಗಿರುವ ಶಾಸಕ ಬಲವನ್ನು ಪ್ರದರ್ಶನ ಮಾಡಿದರಾದರೂ ಅದು ಪ್ರಯೋಜನ ನೀಡಲಿಲ್ಲ. ಯಾಕೆಂದರೆ ಅವರ ಜತೆ ದೊಡ್ಡ ಗುಂಪು ಇದ್ದುದು ನಿಜವಾದರೂ ಹೈಕಮಾಂಡ್‌ ಕೈಗೊಂಡ ನಿರ್ಧಾರವನ್ನು ಬಹುತೇಕರು ಪ್ರಶ್ನಿಸಲಿಲ್ಲ.ಬದಲಿಗೆ ಪಕ್ಷ ನಿಷ್ಟೆಯ ಹೆಸರಿನಲ್ಲಿ ವಾಲಿಕೊಂಡರು. ಪರಿಣಾಮ ಯಡಿಯೂರಪ್ಪ ಅವರು ಕೆಳಗಿಳಿಯಬೇಕಾಯಿತು. ಮುಂದೆ ಸದಾನಂದಗೌಡರನ್ನು ಸಿಎಂ ಹುದ್ದೆಯ ಮೇಲೆ ಕೂರಿಸಿದ್ದೂ ಅವರೇ,ಜಗದೀಶ್‌ ಶೆಟ್ಟರ್‌ ಅವರನ್ನು ತಂದು ಕೂರಿಸಿದವರೂ ಅವರೇ.

ಆದರೆ ಅಷ್ಟು ಶಾಸಕರ ಬಲವಿದ್ದರೂ ಪಕ್ಷ ನಿಷ್ಟೆಯ ಪ್ರಶ್ನೆ ಬಂದಾಗ ಅದು ಯಡಿಯೂರಪ್ಪ ಅವರ ಖುರ್ಚಿಯನ್ನು ಉಳಿಸಲಿಲ್ಲ. ಈಗಲೂ ಅಂತಹ ಇತಿಹಾಸ ಮರುಕಳಿಸುತ್ತದೆಯೇ ಎಂಬುದು ಯಡಿಯೂರಪ್ಪ ಅವರ ಕಟ್ಟಾ ಬೆಂಬಲಿಗರ ಅನುಮಾನ.ಒಂದು ವೇಳೆ ವರಿಷ್ಟರು ನಾಯಕತ್ವ ಬದಲಾವಣೆ ಬೇಡ ಎಂದರೆ ಸಮಸ್ಯೆ ಇಲ್ಲ.ಅದರೆ ಅದು ನಾಯಕತ್ವ ಬದಲಾವಣೆಯಾಗಲಿ ಎಂದು ಬಯಸಿದರೆ ಮುಂದೇನು ಅನ್ನುವುದು ಅದರ ಯೋಚನೆ. ಅರುಣ್‌ ಸಿಂಗ್‌ ಅವರ ಮೂರು ದಿನಗಳ ರಾಜ್ಯ ಭೇಟಿಯ ನಂತರ ಉದ್ಭವವಾಗಿರುವ ಈ ಪ್ರಶ್ನೆಗೆ ಹೈಕಮಾಂಡ್‌ನ ನಡೆಯೇ ಉತ್ತರ ನೀಡಬೇಕು.ಅಲ್ಲಿಯವರೆಗೆ ನಾಯಕತ್ವದ ವಿವಾದ ಮುಂದುವರಿಯುತ್ತದೆ.