ಬ್ರೇಕಿಂಗ್ ನ್ಯೂಸ್
15-08-21 08:37 pm Giridhar Shetty, Mangaluru ಅಂಕಣಗಳು
Photo credits : Pisumathu Studio
ಅದು ಹದಿಮೂರು ದಿನಗಳ ಉದ್ದಕ್ಕೆ ಕುತಂತ್ರಿ ಬ್ರಿಟಿಷ್ ಅಧಿಕಾರಿಗಳ ವಿರುದ್ಧ ಎದೆಯುಬ್ಬಿಸಿ ನಿಂತು ಊದಿದ ಸ್ವಾತಂತ್ರ್ಯದ ಕಹಳೆ. ಹೊರ ದೇಶಿಗರ ದಾಸ್ಯದ ಸಂಕೋಲೆಯನ್ನು ಬಿಡಿಸಲು ಹೋರಾಡಿ ಮೊದಲ ಬಾರಿಗೆ ಸ್ವಾತಂತ್ರ್ಯದ ಕಹಳೆ ಮೊಳಗಿಸಿದ ತುಳುನಾಡಿನ ರಾಷ್ಟ್ರವಾದಿ ತರುಣರ ಸಾಹಸಗಾಥೆ. ನಮ್ಮ ಇತಿಹಾಸದ ಪುಸ್ತಕಗಳಲ್ಲಿ ಅಡಗಿ ಹೋದ, ಕರುನಾಡಿನ ಸ್ವಾತಂತ್ರ್ಯ ಹೋರಾಟದ ಚರಿತ್ರೆಯಲ್ಲಿ ದಾಖಲಾಗದ ಅಮರ ಸಂಗ್ರಾಮದ ಕತೆ.
1834ರ ಸುಮಾರಿಗೆ ಅತ್ತ ಕೊಡಗಿನಲ್ಲಿ ಆಡಳಿತ ನಡೆಸುತ್ತಿದ್ದ ಚಿಕ್ಕ ವೀರರಾಜೇಂದ್ರನನ್ನು ಬ್ರಿಟಿಷರು ಪಟ್ಟದಿಂದ ಕೆಳಗಿಳಿಸಿ, ಅಲ್ಲಿನ ಸಾಮ್ರಾಜ್ಯವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡರು. ಅಲ್ಲದೆ, ಪಂಜ ಸೀಮೆಗೆ ಒಳಪಟ್ಟಿದ್ದ ಪುತ್ತೂರು, ಸುಳ್ಯವನ್ನು ಕೊಡಗಿನಿಂದ ಬೇರ್ಪಡಿಸಿ, ದಕ್ಷಿಣ ಕನ್ನಡ ಜಿಲ್ಲೆಗೆ ಸೇರಿಸಿದರು. ಕೊಡಗಿನ ಜೊತೆ ಅವಿನಾಭಾವ ಸಂಬಂಧ ಹೊಂದಿದ್ದ ಪ್ರದೇಶವನ್ನು ಬ್ರಿಟಿಷರು ವಿಭಜಿಸಿದ್ದಲ್ಲದೆ, ಹೆಚ್ಚುವರಿಯಾಗಿ ಕಂದಾಯವನ್ನು ಹೇರಿದ್ದು ಜನರನ್ನು ರೊಚ್ಚಿಗೆಬ್ಬಿಸಿತ್ತು. ಇತ್ತ ದಕ್ಷಿಣ ಕನ್ನಡ ಜಿಲ್ಲೆಯ ಮಂಜೇಶ್ವರ, ಕುಂಬಳೆ, ಹೊಸದುರ್ಗ, ಬಂಟ್ವಾಳ, ಉಡುಪಿ, ಫರಂಗಿಪೇಟೆ, ಮಂಗಳೂರು, ಬ್ರಹ್ಮಾವರ, ಕುಂದಾಪುರ ಹೀಗೆ ಇಷ್ಟೂ ಭಾಗವನ್ನು ಸೌತ್ ಕೆನರಾ ಎಂದು ಬ್ರಿಟಿಷರು ಗುರುತಿಸಿದ್ದರು. ಟಿಪ್ಪು ಮರಣಾ ನಂತರ ಈ ಭಾಗದಲ್ಲಿ ಪ್ರಭುತ್ವ ಸ್ಥಾಪಿಸಿದ್ದ ಬ್ರಿಟಿಷರು ಸುಳ್ಯ, ಕೊಡಗನ್ನೂ ಆಕ್ರಮಿಸಿದ್ದರು.
ಆದರೆ, ಕೊಡಗನ್ನು ಎರಡಾಗಿ ವಿಭಜಿಸಿ ಸೌತ್ ಕೆನರಾ ಅಧೀನಕ್ಕೆ ತಂದಿದ್ದು ಸುಳ್ಯ ಭಾಗದ ಜನರನ್ನು ಕೆರಳಿಸಿತ್ತು. ಈಗಿನ ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಭಾಗಗಳು ಆ ಹೊತ್ತಿನಲ್ಲಿ ಕೆಳಗಿನ ಕೊಡಗು ಎಂದು ಕರೆಯಲ್ಪಡುತ್ತಿತ್ತು. ಈ ಭಾಗದ ಜೊತೆಗೆ ಸಾಂಸ್ಕೃತಿಕ ಮತ್ತು ರಕ್ತ ಸಂಬಂಧವೂ ಇತ್ತು. ಕಿತ್ತೂರಲ್ಲಿ ಝಾನ್ಸಿ ರಾಣಿ ಸಿಡಿದೇಳಲು ಕಾರಣವಾಗಿದ್ದ ಕರ್ನಲ್ ಡಾಲ್ ಹೌಸಿ ಹೇರಿದ್ದ ದತ್ತು ಮಗನಿಗೆ ಅಧಿಕಾರ ಇಲ್ಲ ಎಂಬ ಕಾನೂನನ್ನು ಕೊಡಗಿನಲ್ಲೂ ಹೇರಲಾಗಿತ್ತು. ಚಿಕ್ಕವೀರನನ್ನು ದುರಾಡಳಿತ ನಡೆಸುತ್ತಿದ್ದಾನೆಂದು ಅಧಿಕಾರದಿಂದ ಕೆಳಗಿಳಿಸಿದ ಹೊತ್ತಲ್ಲಿ ಪರ್ಯಾಯ ಅಧಿಕಾರಕ್ಕೇರಲು ರಾಜವಂಶಸ್ಥರು ಬೇರೆ ಯಾರೂ ಇಲ್ಲವೆಂದು ಬ್ರಿಟಿಷರೇ ಆಳ್ವಿಕೆಯನ್ನು ಕೈಗೆತ್ತಿಕೊಳ್ಳುತ್ತಾರೆ.
ಇದರ ಜೊತೆಗೆ, ಅಲ್ಲೀ ವರೆಗೂ ರಾಜನಿಗೆ ವಸ್ತುಗಳ ರೂಪದಲ್ಲಿ ಕಂದಾಯ ಕಟ್ಟುವ ಪದ್ಧತಿ ಇತ್ತು. ಇದನ್ನು ಬದಿಗೊತ್ತಿ ಬ್ರಿಟಿಷರು ದಕ್ಷಿಣ ಕನ್ನಡ ಮತ್ತು ಕೊಡಗಿನಲ್ಲಿ ಹಣದ ರೂಪದಲ್ಲಿ ಕಂದಾಯ ಕಟ್ಟುವಂತೆ ಜನರ ಮೇಲೆ ಕಟ್ಟಳೆ ಹೇರಿದ್ದು ಹೈರಾಣು ಮಾಡಿತ್ತು. ತಮ್ಮನ್ನು ವಿದೇಶಿಯರು ಬಂದು ಆಳುತ್ತಿದ್ದಾರೆ, ಕಂದಾಯದ ನೆಪದಲ್ಲಿ ಹಣದ ರೂಪದಲ್ಲಿ ತಮ್ಮ ಬೆವರಿನಿಂದ ಗಳಿಸಿದ ಸಂಪತ್ತನ್ನು ಹೀರುತ್ತಿದ್ದಾರೆ ಎನ್ನುವುದು ಜನರಿಗೆ ಮನದಟ್ಟು ಆಗತೊಡಗಿತ್ತು. ಬೆಳೆ ಕೊಯ್ಲಿಗೆ ಬಂದ ಕೂಡಲೇ ಅದರ ಬಹುಪಾಲನ್ನು ಕಡಿಮೆ ಬೆಲೆಗೆ ದಲ್ಲಾಳಿಗಳಿಗೆ ಮಾರಾಟ ಮಾಡಿ, ಹಣವನ್ನು ಕಂದಾಯ ರೂಪದಲ್ಲಿ ಕಟ್ಟುತ್ತಿದ್ದ ಸ್ಥಿತಿ ಜನರಲ್ಲಿ ಒಂದೆಡೆ ಹಸಿವು, ಮತ್ತೊಂದೆಡೆ ಆಡಳಿತದ ವಿರುದ್ಧ ದಂಗೆ ಏಳಲು ಪ್ರೇರಣೆಯಾಗಿತ್ತು.
ಇದೇ ಸಂದರ್ಭದಲ್ಲಿ ಕೊಡಗು ಮತ್ತು ಸುಳ್ಯದಲ್ಲಿ ನೆಲೆ ಕಂಡುಕೊಂಡಿದ್ದ ಅರೆಭಾಷೆಯ ಗೌಡರು ತಮ್ಮ ತಮ್ಮಲ್ಲೇ ಕತ್ತಿ ಮಸೆಯಲಾರಂಭಿಸಿದ್ದರು. ಸುಳ್ಯದ ಗುಡ್ಡೆಮನೆಯ ಅಪ್ಪಯ್ಯ ಗೌಡ, ಕೂಜುಗೋಡು ಮಲ್ಲಪ್ಪ ಗೌಡ ಸೇರಿದಂತೆ ಹಲವರು ಸೇರಿ ಕತ್ತಿ ಮಸೆಯುತ್ತಿದ್ದರು. ಇದೇ ವೇಳೆ, ಕೊಡಗಿನ ವಿರಾಜಪೇಟೆಯ ಮೂಲದ ಅಪರಂಪ ಎನ್ನುವಾತ ತಾನೇ ರಾಜವಂಶಸ್ಥನೆಂದು ಹೇಳಿಕೊಂಡು ಜನರನ್ನು ನಂಬಿಸುತ್ತಾನೆ. ಕೊಡಗಿನ ಲಿಂಗರಾಜೇಂದ್ರ ಒಡೆಯರ ಅಣ್ಣ ಅಪ್ಪಾಜಿಯ ಮಗ ವೀರಪ್ಪ ಒಡೆಯ ಎಂದು ಹೇಳಿಕೊಂಡು ಮಡಿಕೇರಿ, ಸೋಮವಾರಪೇಟೆ, ಸುಳ್ಯದಲ್ಲಿ ಸಂಚರಿಸಿ ಬ್ರಿಟಿಷರ ವಿರುದ್ಧ ಜನಸಂಘಟನೆ ನಡೆಸುತ್ತಾನೆ. ಸುಳ್ಯದಲ್ಲಿ ಅಪ್ಪಯ್ಯ ಗೌಡರ ನೇತೃತ್ವದಲ್ಲಿ ಸಾವಿರಾರು ಮಂದಿ ಸಂಘಟನೆಯಾಗಿ ಬ್ರಿಟಿಷರನ್ನು ಕೊಡಗಿನಿಂದ ಹೊಡೆದೋಡಿಸಲು ಯೋಜನೆ ಹಾಕುತ್ತಾರೆ. ಆದರೆ, ಈ ವಿಷಯ ಬ್ರಿಟಿಷರಿಗೆ ತಿಳಿಯುತ್ತಲೇ 1835ರಲ್ಲಿ ಮೂಲತಃ ಜಂಗಮನಾಗಿದ್ದ ಅಪರಂಪನನ್ನು ಉಪಾಯದಿಂದ ಬಂಧಿಸುತ್ತಾರೆ. ಆದರೆ, ಉಳಿದವರು ಬ್ರಿಟಿಷರ ಸೆರೆಗೆ ಸಿಗದೆ ತಪ್ಪಿಸಿಕೊಳ್ಳುತ್ತಾರೆ.
ಆನಂತರ ಕೆಲವು ಕಾಲ ತಣ್ಣಗಾಗಿದ್ದ ಚಳುವಳಿ ಮತ್ತೆ ಸುಬ್ರಹ್ಮಣ್ಯ ಬಳಿಯ ಕೂಜುಗೋಡಿನ ಗುಡ್ಡೆಮನೆಯಿಂದಲೇ ಕಾವು ಪಡೆಯುತ್ತದೆ. ಅಪ್ಪಯ್ಯ ಗೌಡರು, ಕೆದಂಬಾಡಿ ರಾಮಯ್ಯ ಗೌಡರ ನೇತೃತ್ವದಲ್ಲಿ ಸಂಘಟನೆ ಮಾಡುತ್ತಾರೆ. ಇದೇ ಸಂದರ್ಭದಲ್ಲಿ ಕೊಡಗಿನ ಚಿಕ್ಕವೀರರಾಜೇಂದ್ರನ ವಂಶಸ್ಥನೆಂದು ಹೇಳಿಕೊಂಡು ಪುಟ್ಟ ಬಸಪ್ಪ ಎಂಬಾತ ಸುಳ್ಯಕ್ಕೆ ಬರುತ್ತಾನೆ. ಆತನನ್ನು ಎದುರ್ಗೊಂಡ ಚಲವಳಿಕಾರರು ಆತನನ್ನೇ ರಾಜನನ್ನಾಗಿ ಘೋಷಣೆ ಮಾಡುತ್ತಾರೆ. ಅಲ್ಲದೆ, ಆತನೇ ಕಲ್ಯಾಣಸ್ವಾಮಿ ಎಂದು ಬಿಂಬಿಸಿ ಕೊಡಗಿನ ರಾಜನೆಂದು ಘೋಷಿಸುತ್ತಾರೆ. ಕೆದಂಬಾಡಿ ರಾಮಯ್ಯ ಗೌಡರು, ಕೂಜುಗೋಡು ಮಲ್ಲಪ್ಪ ಗೌಡರು ಸೇರಿ ಎರಡು ಸಾವಿರಕ್ಕೂ ಹೆಚ್ಚು ಮಂದಿಯನ್ನು ಸಂಘಟಿಸುತ್ತಾರೆ. ಸುಳ್ಯದ ಪೂಮಲೆ ಬೆಟ್ಟದ ಅರಣ್ಯದಲ್ಲಿ ಅವಿತುಕೊಂಡು ರಣತಂತ್ರ ಹೆಣೆಯುತ್ತಾರೆ. ಇವರ ಹೋರಾಟಕ್ಕೆ ಸುಳ್ಯ, ಕೊಡಗಿನ ಇಡೀ ಗೌಡ ಸಮುದಾಯ ಬೆಂಬಲಕ್ಕೆ ನಿಂತಿತ್ತು.
ಎರಡು ಸಾವಿರಕ್ಕೂ ಹೆಚ್ಚು ಯುವಕರು ಸಂಘಟಿತರಾಗಿದ್ದು ಬ್ರಿಟಿಷರಿಗೆ ತಿಳಿಯಲೇ ಇಲ್ಲ. ಒಮ್ಮಿಂದೊಮ್ಮೆಲೇ ಬೆಳ್ಳಾರೆಯಲ್ಲಿ ಬ್ರಿಟಿಷರು ಮಾಡಿಕೊಂಡಿದ್ದ ಕೋಟೆಗೆ ನುಗ್ಗಿ, ಅಲ್ಲಿದ್ದ ಪ್ರಜಾಪೀಡಕ ಬ್ರಿಟಿಷ್ ಹವಾಲ್ದಾರ್ ಒಬ್ಬನನ್ನು ಕೊಲ್ಲುತ್ತಾರೆ. ಅಲ್ಲದೆ, ಕೋಟೆಯಲ್ಲಿದ್ದ ಶಸ್ತ್ರಾಸ್ತ್ರಗಳನ್ನು ದೋಚಿಕೊಂಡು ಅಲ್ಲಿಂದಲೇ ಬ್ರಿಟಿಷರ ವಿರುದ್ಧ ಸಶಸ್ತ್ರ ಹೋರಾಟಕ್ಕೆ ಇಳಿಯುತ್ತಾರೆ. ಬೆಳ್ಳಾರೆಯ ಕೋಟೆಯಲ್ಲಿ ಕಲ್ಯಾಣಸ್ವಾಮಿಯನ್ನು ಕಲ್ಯಾಣಪ್ಪ ಎಂದು ಪಟ್ಟ ಕಟ್ಟುತ್ತಾರೆ. ಅಲ್ಲದೇ, ಅಲ್ಲಿಯೇ ಮೊದಲ ಬಾರಿಗೆ ಬ್ರಿಟಿಷರ ವಿರುದ್ಧ ಸ್ವತಂತ್ರ ಧ್ವಜವನ್ನು ಹಾರಿಸುತ್ತಾರೆ(1834, ಮಾರ್ತ್ 30). ಕೊಡಗಿನ ಬೇರೆ ಬೇರೆ ಭಾಗಗಳಿಂದ ಬೆಂಬಲವೂ ದೊರೆಯುತ್ತದೆ. ಇದೇ ಸಂದರ್ಭದಲ್ಲಿ ಸುಳ್ಯವನ್ನು ಮರಳಿ ವಶಕ್ಕೆ ಪಡೆದ ಹುಮ್ಮಸ್ಸಿನಲ್ಲಿಯೇ ಬ್ರಿಟಿಷರನ್ನು ಈ ನೆಲದಿಂದಲೇ ಓಡಿಸಬೇಕೆಂದು ನಿಶ್ಚಯಿಸಿ ನಾಲ್ಕು ಕಡೆಗಳಿಗೆ ಪ್ರತ್ಯೇಕ ತಂಡಗಳಾಗಿ ತೆರಳಲು ನಿರ್ಧರಿಸುತ್ತಾರೆ.
ಕಲ್ಯಾಣಪ್ಪ ಅಲ್ಲಿ ಪ್ರಭುತ್ವ ಸ್ಥಾಪಿಸುತ್ತಿದ್ದಂತೆ, ಅಲ್ಲೀ ವರೆಗೂ ಬ್ರಿಟಿಷರ ಪರವಾಗಿದ್ದ ಸ್ಥಳೀಯರು ಕೂಡ ಕಲ್ಯಾಣಪ್ಪನ ಜೊತೆ ಸೇರಿದರು. ಬೆಳ್ಳಾರೆಯ ಬೀರಣ್ಣ ಬಂಟರ ನೇತೃತ್ವದಲ್ಲಿ ಒಂದು ತಂಡ ಸುಬ್ರಹ್ಮಣ್ಯ, ಬಿಸಲೆ, ಉಪ್ಪಿನಂಗಡಿ ಕಡೆಗೆ ತೆರಳಿದರೆ, ಕಂಚುಡ್ಕ ರಾಮಗೌಡರು, ಕುಡಕಲ್ಲು ಪುಟ್ಟಗೌಡರ ನೇತೃತ್ವದಲ್ಲಿ ಮತ್ತೊಂದು ತಂಡ ಕುಂಬಳೆ, ಕಾಸರಗೋಡಿನತ್ತ ತೆರಳಿತು. ಮತ್ತೊಂದು ತಂಡ, ಬಂಟ್ವಾಳ, ಕಾರ್ಕಳಕ್ಕೂ ತೆರಳಿತು. ರಾಮಗೌಡ ಮತ್ತು ಕಲ್ಯಾಣಪ್ಪನ ದಂಡು ಪುತ್ತೂರನ್ನು ವಶಕ್ಕೆ ಪಡೆದು ಅಲ್ಲಿದ್ದ ಇಂಗ್ಲಿಷ್ ಕರಣಿಕನನ್ನು ಬಂಧಿಸಿದರು. ಕಲ್ಯಾಣಪ್ಪನ ಜೊತೆಗಿದ್ದ ದಂಡು ಎಷ್ಟು ಪ್ರಭಾವಿಯಾಗಿತ್ತೆಂದರೆ, ವಿಟ್ಲದ ಅರಸನನ್ನು ಪುತ್ತೂರಿಗೇ ಕರೆಸಿಕೊಂಡು ಶರಣಾಗುವಂತೆ ಮಾಡಿತ್ತು.
ಇದೇ ವೇಳೆ, ಅತ್ತ ಕುಂಬಳೆಯಿಂದ ಅಲ್ಲಿನ ಸೀಮೆಯ ರಾಜನಾಗಿದ್ದ ಸುಬ್ಬಯ್ಯ ಹೆಗಡೆ ಕಲ್ಯಾಣಪ್ಪನ ಬೆಂಬಲಕ್ಕೆ ನಿಲ್ಲುತ್ತಾರೆ. ಅಲ್ಲಿಗೆ, ತೆರಳಿದ್ದ ಕಲ್ಯಾಣಪ್ಪನ ದಂಡು ಸುಬ್ಬಯ್ಯ ಹೆಗಡೆ ಜೊತೆ ಸೇರಿ ಮಂಗಳೂರಿನತ್ತ ಮುನ್ನುಗ್ಗುತ್ತಾರೆ. ಇಷ್ಟಾಗುತ್ತಿದ್ದಂತೆ, ಕಲ್ಯಾಣಪ್ಪನ ದಂಡು ವಿಟ್ಲ ಕಳೆದು ಬಂಟ್ವಾಳಕ್ಕೆ ಬರುತ್ತದೆ. ನಂದಾವರದ ಅರಮನೆಯಲ್ಲಿದ್ದ ಲಕ್ಷ್ಮಪ್ಪ ಬಂಗರಸ ಕೂಡ ಬ್ರಿಟಿಷರ ಹಾವಳಿಯಿಂದ ಬೇಸತ್ತಿದ್ದರಿಂದ ಕಲ್ಯಾಣಪ್ಪನ ಸ್ವಾತಂತ್ರ್ಯದ ಕಹಳೆಗೆ ಬೆಂಬಲಿಸುತ್ತಾನೆ. ಸಾವಿರಾರು ಮಂದಿ ಸೈನಿಕರ ಜೊತೆಗೆ ಊರವರೆಲ್ಲ ತೆಂಗಿನ ಕೊತ್ತಳಿಂಗೆ, ದೊಣ್ಣೆಯನ್ನು ಹಿಡಿದು ಮಂಗಳೂರಿಗೆ ಮುತ್ತಿಗೆ ಹಾಕುತ್ತಾರೆ. ಇದರ ಬಗ್ಗೆ ಮೊದಲೇ ಮಾಹಿತಿ ಪಡೆದಿದ್ದ ಬ್ರಿಟಿಷ್ ಕಲೆಕ್ಟರನಾಗಿದ್ದ ಲೂಯಿಸ್ ಎಪ್ರಿಲ್ 5ರಂದು ತನ್ನ ಕುಟುಂಬದವರು, ಇತರು ಇಂಗ್ಲಿಷರನ್ನೆಲ್ಲ ಸೇರಿಸಿಕೊಂಡು ಪಲಾಯನ ಮಾಡುತ್ತಾನೆ.
ಬ್ರಿಟಿಷರ ಕಾಲದಲ್ಲಿ ಕಲೆಕ್ಟರ್ ಕಚೇರಿಯಿದ್ದ (ಈಗಿನ ಬಲ್ಮಠ) ಮುಂಭಾಗದಲ್ಲೇ ನಾಲ್ಕು ಸಾವಿರಕ್ಕೂ ಹೆಚ್ಚಿದ್ದ ಕಲ್ಯಾಣಪ್ಪನ ದಂಡು ಬೀಡು ಬಿಡುತ್ತದೆ. ಆಗ ಎತ್ತರವಾದ ಗುಡ್ಡವಾಗಿದ್ದ ಈಗಿನ ಬಾವುಟ ಗುಡ್ಡೆಯಲ್ಲಿ ಸ್ವಾತಂತ್ರ್ಯದ ಕಹಳೆ ಮೊಳಗಿಸುತ್ತಲೇ ಸೂರ್ಯನ ಚಿತ್ರವುಳ್ಳ ಬಾವುಟ ಹಾರಿಸುತ್ತಾರೆ. 1837ರ ಎಪ್ರಿಲ್ 5ರಂದು ಭಾರತದ ಪಾಲಿಗೆ ಮೊಟ್ಟಮೊದಲ ಸ್ವತಂತ್ರ ಬಾವುಟ ಮಂಗಳೂರಿನ ಬಾವುಟಗುಡ್ಡೆಯಲ್ಲಿ ರಾರಾಜಿಸಿತ್ತು. ಬ್ರಿಟಿಷರನ್ನು ಹೊಡೆದೋಡಿಸಿದೆವು ಎಂಬ ಜಂಭದಲ್ಲಿ ಸಾವಿರಾರು ರೈತರು, ಇನ್ನಿತರ ಚಳವಳಿಗಾರರು ಕಲ್ಯಾಣಪ್ಪನ ಕ್ರಾಂತಿ ಕಹಳೆಗೆ ಜಯಘೋಷ ಹಾಕುತ್ತಾರೆ. ಗುಡ್ಡೆಮನೆ ತಮ್ಮಯ್ಯ ತಮ್ಮ ಹಾಲೇರಿ ವಂಶಸ್ಥರ ಸೂರ್ಯ ಲಾಂಛನದ ಬಾವುಟವನ್ನು ಹಾರಿಸಿ, ಅಲ್ಲಿನ ಗುಡ್ಡಕ್ಕೆ ಬಾವುಟ ಗುಡ್ಡೆಯೆಂದು ಹೆಸರು ಬರಲು ಕಾರಣವಾಗುತ್ತಾರೆ.
ಅಷ್ಟಾಗುತ್ತಿದ್ದಂತೆ, ಕೇರಳದ ಕಣ್ಣಾನೂರಿಗೆ ಹಡಗಿನಲ್ಲಿ ತೆರಳಿದ್ದ ಮಂಗಳೂರಿನ ಕಲೆಕ್ಟರ್ ಲೂಯಿಸ್, ಅಲ್ಲಿಂದ ಸಾವಿರಾರು ಬ್ರಿಟಿಷ್ ಸೈನಿಕರು, ಮದ್ದು ಗುಂಡುಗಳನ್ನು ತರಿಸಿಕೊಂಡು ಮತ್ತೆ ಮಂಗಳೂರಿಗೆ ಮರಳುತ್ತಾನೆ. ಆನಂತರ ರಾತ್ರೋರಾತ್ರಿ ಬ್ರಿಟಿಷರು ತಮ್ಮ ಹಡಗುಗಳಲ್ಲಿ ಮಂಗಳೂರಿಗೆ ದಾಂಗುಡಿ ಇಡುತ್ತಾರೆ. ಅಲ್ಲೀ ವರೆಗೂ ಉಳ್ಳಾಲದಲ್ಲಿ ಕಾದು ಕುಳಿತಿದ್ದ ಕುಂಬಳೆಯ ಸುಬ್ಬಯ್ಯ ಹೆಗೆಡೆ ಜೊತೆಗೆ ಬಂದಿದ್ದ ದಂಡು ದೋಣಿಗಳ ಮೂಲಕ ನೇತ್ರಾವತಿ ದಾಟಲು ಪ್ರಯತ್ನ ಪಡುತ್ತಾರೆ. ಆದರೆ, ಹಡಗಿನಲ್ಲಿ ಬಂದು ಅವಿತುಕೊಂಡಿದ್ದ ಬ್ರಿಟಿಷರು ಸುಬ್ಬಯ್ಯ ಹೆಗಡೆಯ ದಂಡು ಬರುತ್ತಿದ್ದ ದೋಣಿಯ ಮೇಲೆ ಫಿರಂಗಿ ದಾಳಿ ನಡೆಸಿ, ಸುಟ್ಟು ಬಿಡುತ್ತದೆ. ಅತ್ತ ಫಿರಂಗಿ ದಾಳಿ ನಡೆಸುತ್ತಲೇ ಕಲ್ಯಾಣಪ್ಪ ಮತ್ತು ನಂದಾವರದ ಬಂಗರಸ ಬ್ರಿಟಿಷರ ಮೇಲೆರೆಗುತ್ತಾರೆ. ಆದರೆ, ರಾತ್ರಿ ಕಾಲದ ಯುದ್ಧಕ್ಕೆ ಬೇಕಾದ ಶಸ್ತ್ರಾಸ್ತ್ರಗಳಿಲ್ಲದೆ ಸೋಲು ಕಾಣುವಂತಾಯ್ತು. ಹಲವು ಬಿಳಿಯರನ್ನು ತಮ್ಮ ಖಡ್ಗದಿಂದಲೇ ಸದೆಬಡಿದರೂ, ಫಿರಂಗಿ, ಮದ್ದುಗುಂಡುಗಳ ದಾಳಿಗೆ ಕಲ್ಯಾಣಪ್ಪನ ಜೊತೆಗಿದ್ದ ದಂಡು ತತ್ತರಗೊಂಡು ದಿಕ್ಕಾಪಾಲಾಯಿತು. 13 ದಿನಗಳ ಕಾಲ ರಾರಾಜಿಸಿದ್ದ ಸ್ವಾತಂತ್ರ್ಯದ ಬಾವುಟವನ್ನು ಬ್ರಿಟಿಷರು ಕಿತ್ತು ಹಾಕುತ್ತಾರೆ. ಬಾವುಟಗುಡ್ಡೆಯಲ್ಲಿ ನೆಟ್ಟಿದ್ದ ಅಧಿಪತ್ಯವನ್ನು ಕೊನೆಗಾಣಿಸುತ್ತಾರೆ. ಲಕ್ಷ್ಮಪ್ಪ ಬಂಗರಸ, ಗುಡ್ಡೆಮನೆ ಅಪ್ಪ್ಯ ಗೌಡ, ಶಾಂತಳ್ಳಿ ಮಲ್ಲಯ್ಯ ಸೇರಿ ಹಲವರನ್ನು ಬ್ರಿಟಿಷರು ಬಂಧಿಸುತ್ತಾರೆ. ಆದರೆ, ಕಲ್ಯಾಣಪ್ಪ ಬ್ರಿಟಿಷರ ಕೈಯಿಂದ ತಪ್ಪಿಸಿಕೊಂಡು ಕಡಬದತ್ತ ತೆರಳುತ್ತಾನೆ.
ಒಂದು ತಿಂಗಳ ಅವಿತುಕೊಂಡು ಅಡ್ಡಾಡುವ ಕಲ್ಯಾಣಪ್ಪನನ್ನು ಬ್ರಿಟಿಷರು ಬಳಿಕ ಮಡಿಕೇರಿ ಗಡಿಭಾಗದಲ್ಲಿ ಸೆರೆಹಿಡಿದು ಮರಳಿ ಮಂಗಳೂರಿಗೆ ತರುತ್ತಾರೆ. ಬಂಗರಸ, ಕಲ್ಯಾಣಪ್ಪನನ್ನು ವಿಚಾರಣೆ ನಡೆಸುವ ನಾಟಕವಾಡಿ ಒಂದು ತಿಂಗಳ ಕಾಲ ತಮ್ಮಲ್ಲೇ ಇರಿಸಿಕೊಂಡು ಚಿತ್ರಹಿಂಸೆ ನೀಡುತ್ತಾರೆ. ಬಳಿಕ ನ್ಯಾಯಾಲಯದ ಮೂಲಕ ಶಿಕ್ಷೆ ಘೋಷಿಸಿ, ದಂಗೆಯ ನೇತೃತ್ವ ವಹಿಸಿದ್ದ ಕಲ್ಯಾಣಪ್ಪ, ಬಂಗರಸ, ಗುಡ್ಡೆಮನೆ ಅಪ್ಪಯ್ಯ ಗೌಡ ಇನ್ನಿತರರಿಗೆ ಗಲ್ಲು ಶಿಕ್ಷೆ ವಿಧಿಸುತ್ತಾರೆ. ಕಲ್ಯಾಣಪ್ಪ ಮತ್ತು ಬಂಗರಸನನ್ನು ಈಗಿನ ನಂತೂರು ಬಳಿಯ ಬಿಕರ್ನಕಟ್ಟೆಯಲ್ಲಿ ದೊಡ್ಡ ಆಲದ ಮರಕ್ಕೆ ತೂಗು ಹಾಕಿ ಗಲ್ಲಿಗೇರಿಸುತ್ತಾರೆ. (1837, ಜೂನ್ 19) ಹಲವಾರು ದಿನಗಳ ಕಾಲ ಅವರನ್ನು ಮರದಲ್ಲೇ ಉಳಿಸಿ, ಚಳವಳಿಕಾರರಲ್ಲಿ ಭೀತಿ ಹುಟ್ಟಿಸುತ್ತಾರೆ. ಇದೇ ಆಲದ ಮರದಲ್ಲಿ ಹಲವಾರು ಮಂದಿಯನ್ನು ಗಲ್ಲಿಗೇರಿಸುತ್ತಿದ್ದುದರಿಂದ ಅದನ್ನು ಭೀಕರ ಮರಣಕಟ್ಟೆ ಎಂದೇ ಕರೆಯುತ್ತಿದ್ದರು ಎನ್ನಲಾಗುತ್ತಿದೆ.
ಗುಡ್ಡೆಮನೆ ಅಪ್ಪಯ್ಯ ಗೌಡರನ್ನು ಮಡಿಕೇರಿಗೆ ಒಯ್ದು ಹಾಗೆಯೇ ಜನರ ಮಧ್ಯದ ಮರಕ್ಕೆ ನೇತುಹಾಕಿ ಗಲ್ಲಿಗೇರಿಸುತ್ತಾರೆ. ಚೆಟ್ಟಿಕುಡಿಯ, ಕುರ್ತುಕುಡಿಯ, ಶಾಂತಳ್ಳಿ ಮಲ್ಲಯ್ಯ, ಕೃಷ್ಣಯ್ಯ ಇವರಿಗೆ ದಂಗೆಯೇಳಲು ಸಹಕಾರ ನೀಡಿದ್ದಕ್ಕಾಗಿ ಜೀವಾವಧಿ ಶಿಕ್ಷೆ ವಿಧಿಸಿ ಜೈಲಿಗೆ ತಳ್ಳುತ್ತಾರೆ. ಕೆದಂಬಾಡಿ ರಾಮಯ್ಯ ಗೌಡರನ್ನು ಸಿಂಗಾಪುರಕ್ಕೆ ಗಡೀಪಾರು ಮಾಡುತ್ತಾರೆ. ಅಲ್ಲಿಗೆ ಸುಳ್ಯದಲ್ಲಿ ಹಳ್ಳಿಯಲ್ಲಿ ಕಿಚ್ಚು ಹಚ್ಚಿಕೊಂಡು ತುಳುನಾಡಿನಾದ್ಯಂತ ಸ್ವಾತಂತ್ರ್ಯದ ಕಿಚ್ಚು ಹಚ್ಚಿದ್ದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಕೊನೆಯಾಗುತ್ತದೆ. ಆದರೆ, ಪುತ್ತೂರು, ವಿಟ್ಲ, ಬಂಟ್ವಾಳ ಅತ್ತ ಮಂಜೇಶ್ವರ, ಉಳ್ಳಾಲ ಹೀಗೆ ದಿಬ್ಬಣದ ರೀತಿ ಸಾಗಿಬಂದ ಕಲ್ಯಾಣಪ್ಪನ ದಂಡು ಅಲ್ಲಲ್ಲಿ ಬ್ರಿಟಿಷರು ಸುಂಕ ಕೀಳಲು ಮಾಡಿಕೊಂಡಿದ್ದ ಕಚೇರಿಯನ್ನು ಧ್ವಂಸ ಮಾಡುತ್ತಾ ಬಂದಿದ್ದರು. ಮಂಗಳೂರಿನ ಕಲೆಕ್ಟರ್ಸ್ ಕಚೇರಿಗೆ ನುಗ್ಗಿ ಅಲ್ಲಿದ್ದ ರೆಕಾರ್ಡುಗಳನ್ನೆಲ್ಲ ಸುಟ್ಟು ಹಾಕಿದ್ದರು.
1857ರ ಸಿಪಾಯಿ ದಂಗೆಯನ್ನು ಮಾತ್ರ ಭಾರತೀಯ ಇತಿಹಾಸಕಾರರು ಮೊದಲ ಸ್ವಾತಂತ್ರ್ಯ ಸಂಗ್ರಾಮವೆಂದು ದಾಖಲಿಸಿದ್ದಾರೆ. ಅದಕ್ಕೂ 20 ವರ್ಷಗಳ ಹಿಂದೆಯೇ ನಡೆದುಹೋಗಿದ್ದ ಬ್ರಿಟಿಷ್ ಆಡಳಿತವನ್ನು ಮಂಗಳೂರಿನಿಂದ ಕೊಡಗಿನ ವರೆಗೂ ಒಂದು ಹಂತದಲ್ಲಿ ಅಧೀರರನ್ನಾಗಿಸಿ ಮಂಗಳೂರಿನ ಆಳ್ವಿಕೆಯನ್ನು ಕೈಗೆ ಪಡೆದಿದ್ದ ಸಂಗ್ರಾಮದ ಕತೆಯನ್ನು ಕಲ್ಯಾಣಪ್ಪನ ಕಾಟಕಾಯಿ (ದರೋಡೆ) ಎಂದು ನಿರ್ಲಕ್ಷ್ಯ ಮಾಡಿದ್ದಾರೆ. ನಮ್ಮ ಇತಿಹಾಸದ ಪುಟಗಳಲ್ಲಿ ದಾಖಲಾಗದ ಸುಳ್ಯ, ಕೊಡಗು ಮತ್ತು ತುಳುವರು ಸೇರಿಕೊಂಡು ಊದಿದ್ದ ಸ್ವಾತಂತ್ರ್ಯದ ಕಹಳೆ, ಅದಕ್ಕಾಗಿ ಕೊಟ್ಟ ಬಲಿದಾನ ಇಡೀ ದೇಶದಲ್ಲೇ ಬ್ರಿಟಿಷರ ದಾಸ್ಯದ ಸಂಕೋಲೆಯ ವಿರುದ್ಧ ಕಿಚ್ಚು ಹಚ್ಚುವಂತೆ ಮಾಡಿತ್ತು. ಅದಕ್ಕೂ ಮುನ್ನ ಟಿಪ್ಪು ಇನ್ನಿತರ ರಾಜರು ತಮ್ಮ ಸಾಮ್ರಾಜ್ಯಕ್ಕಾಗಿ ಹೋರಾಡಿ ಪ್ರಾಣ ಕಳಕೊಂಡಿದ್ದರೆ, ಇವರೆಲ್ಲ ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯ ಪಡೆಯುವುದಕ್ಕಾಗಿ ಹೋರಾಡಿ ಪ್ರಾಣ ಅರ್ಪಿಸಿದ್ದರು ಅನ್ನುವುದು ಮರೆಯಬಾರದ ಕಹಿಸತ್ಯ.
As India marks 70 years of its independence from British rule, few know that the rumblings against the British taxmen aka the Collector began in Mangalore where in 1837, 20 years before the first Mutiny, the revolutionaries went to Bavutagudde and brought down the Union Jack that was hoisted there. The revolutionaries then hoisted their own flag . The South Canara Gazetteer (Published by the government) records the event but Bavutagudde is little known, as is Bikarnakatte, its name derived from the Kannada word 'Bheekara Nyaya Katte,' meaning a place where the most harsh justice was executed, where the revolutionaries were hanged.
21-11-24 09:32 pm
Bangalore Correspondent
Bangalore Fire showroom: ಇಲೆಕ್ಟ್ರಿಕ್ ವಾಹನ ಶೋರ...
20-11-24 09:57 pm
Liquor Bandh, Mangalore: ನ.20ರ ಮದ್ಯ ವ್ಯಾಪಾರ ಬ...
19-11-24 11:05 pm
Bangalore Fire, Electric Showroom; ಬೆಂಗಳೂರು ಎ...
19-11-24 06:55 pm
Chitradurga, suicide: ಹೃದಯಾಘಾತಕ್ಕೆ ಗಂಡ ಬಲಿ ;...
19-11-24 06:46 pm
18-11-24 03:54 pm
HK News Desk
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
ಭಾರತೀಯ ರೈಲ್ವೇ ಹೊಸ ಇತಿಹಾಸದತ್ತ ಹೆಜ್ಜೆ ; ವಿದ್ಯುತ...
14-11-24 11:11 pm
ಅಮೆರಿಕದ ಗುಪ್ತಚರ ಸಂಸ್ಥೆ ಮುಖ್ಯಸ್ಥರಾಗಿ ಹಿಂದು ಮಹಿ...
14-11-24 05:58 pm
ಸುದೀರ್ಘ 18 ವರ್ಷಗಳ ಹಿಂದೆ ಕೊಲೆಯಾದ ಕೊಡಗಿನ ಸಫಿಯಾಗ...
12-11-24 09:00 pm
22-11-24 11:55 am
Mangalore Correspondent
Kundapura Accident, Udupi: ಕುಂಭಾಶಿ ; ಹೆದ್ದಾರಿ...
21-11-24 11:08 pm
Mangalore, Rev Hannibal Cabral, Rachitha Cabr...
21-11-24 09:57 pm
Mangalore, Belthangady, Elephant attack: ಬೆಳ್...
21-11-24 09:22 pm
Saket Rajan encounter, Vikram Gowda e counter...
21-11-24 06:19 pm
22-11-24 03:04 pm
Mangalore Correspondent
Mangalore court, crime, Rape: ಅಜ್ಜಿ ಮನೆಯಲ್ಲಿ...
22-11-24 01:33 pm
Naxal leader Vikram Gowda Encounter, Ground R...
19-11-24 07:40 pm
Hassan Murder, Dowry; ಹಾಸನ ; ಗರ್ಭಿಣಿ ಪತ್ನಿಗೆ...
19-11-24 05:56 pm
Naxal Leader Vikram Encounter, Udupi crime; ಹ...
19-11-24 06:39 am