ಬ್ರೇಕಿಂಗ್ ನ್ಯೂಸ್
27-08-22 05:21 pm Mangalore Correspondent ಕ್ರೈಂ
ಮಂಗಳೂರು, ಆಗಸ್ಟ್ 27: ಕೋ ಆಪರೇಟಿವ್ ಸೊಸೈಟಿಗಳಂದ್ರೆ ನಂಬಿಕೆಯ ಮೇಲೆ ಹಣಕಾಸು ವಹಿವಾಟು ನಡೆಸುವ ಕೇಂದ್ರಗಳು. ಸಹಕಾರಿ ಇಲಾಖೆಯಲ್ಲಿ ನೋಂದಣಿಗೊಂಡು ಜನರ ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡು ಕಾರ್ಯ ನಿರ್ವಹಿಸುವ ಸಹಕಾರಿ ಸೊಸೈಟಿಗಳು ಈಗ ಜನರನ್ನೇ ಯಾಮಾರಿಸಿ ಮೋಸ ಎಸಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಬೆಂಗಳೂರು, ಮಂಗಳೂರು ಸೇರಿದಂತೆ ರಾಜ್ಯಾದ್ಯಂತ ಕಚೇರಿ ಹೊಂದಿದ್ದ ಪಂಚವಟಿ ಮಲ್ಟಿ ಸ್ಟೇಟ್ ಕೋ ಆಪರೇಟಿವ್ ಸೊಸೈಟಿ ಬಡ ಜನರನ್ನೇ ಲೂಟಿಗೈದು ಎರಡು ವರ್ಷಗಳಿಂದ ಕಚೇರಿ ಮುಚ್ಚಿದ್ದಲ್ಲದೆ, ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗದಂತೆ ನೋಡಿಕೊಂಡು ರಾಜಕೀಯ ಪ್ರಭಾವಿಗಳನ್ನು ಬಳಸಿ ಮಹಾನ್ ವಂಚನೆ ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸುತ್ತಿರುವ ಕೃತ್ಯ ಬೆಳಕಿಗೆ ಬಂದಿದೆ.
ಪಂಚವಟಿ ಸೊಸೈಟಿ ಮೊದಲಿಗೆ ಮಹಾರಾಷ್ಟ್ರದಲ್ಲಿ ನೋಂದಣಿಗೊಂಡಿದ್ದ ಸಂಸ್ಥೆ. 2012ರಲ್ಲಿ ಸಂಸ್ಥೆ ಆರಂಭಗೊಂಡಿದ್ದು ಎರಡೇ ವರ್ಷದಲ್ಲಿ ಅದರ ಪ್ರಧಾನ ಕಚೇರಿಯನ್ನು ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿತ್ತು. ಆನಂತರ ತುಮಕೂರು, ಮಂಡ್ಯ, ರಾಮನಗರ, ಮೈಸೂರಿನಲ್ಲಿ ಕಚೇರಿಗಳನ್ನು ಆರಂಭಿಸಿತ್ತು. ಮಂಗಳೂರಿನ ಮಲ್ಲಿಕಟ್ಟೆಯಲ್ಲಿ 2016ರಲ್ಲಿ ಸೊಸೈಟಿ ಕಚೇರಿ ಆರಂಭಗೊಂಡಿತ್ತು. ಸೊಸೈಟಿ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದ ಎನ್.ಎಚ್.ರಾಜು ಮಂಗಳೂರಿಗೂ ಬಂದು ಇಲ್ಲಿನ ಕೆಲವರನ್ನು ವಿಶ್ವಾಸಕ್ಕೆ ಪಡೆದು ಕಚೇರಿ ಆರಂಭಿಸಿದ್ದರು. ಮಂಗಳೂರಿನಲ್ಲಿ ಜೆಡಿಎಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ಸುಮತಿ ಹೆಗ್ಡೆ ಮತ್ತು ಅವರ ಪತಿ ಸದಾಶಿವ ಹೆಗ್ಡೆ ಅವರನ್ನು ಸೇರಿಸಿಕೊಂಡು ಸೊಸೈಟಿ ಆರಂಭಿಸಲಾಗಿತ್ತು. ಸುಮತಿ ಹೆಗ್ಡೆ ಅವರನ್ನೇ ಸೊಸೈಟಿ ಡೈರೆಕ್ಟರ್ ಮಾಡಿದ್ದಲ್ಲದೆ, ಮಲ್ಲಿಕಟ್ಟೆಯಲ್ಲಿರುವ ಅವರದೇ ಕಟ್ಟಡದಲ್ಲಿ ಕಚೇರಿ ಶುರುವಾಗಿತ್ತು.
ಎರಡು ವರ್ಷ ಕಳೆಯುತ್ತಲೇ ಸೊಸೈಟಿ ವ್ಯವಹಾರದ ಬಗ್ಗೆ ಕೆಲವರಿಗೆ ಸಂಶಯಗಳು ಉಂಟಾಗಿದ್ದವು. ಆದರೆ, ಎಂಡಿ ರಾಜು ಸೇರಿದಂತೆ ಬೆಂಗಳೂರಿನ ಇತರೇ ಡೈರೆಕ್ಟರ್ ಗಳು ಬಂದು ತರಬೇತಿ ಕಾರ್ಯಕ್ರಮ ನಡೆಸುತ್ತಿದ್ದರು. ಏಜಂಟರಾಗಿ ಸೇರುವವರಿಗೆ ಉತ್ತಮ ಕಮಿಷನ್ ನೀಡುವ ಆಸೆ ತೋರಿಸುತ್ತಿದ್ದರು. ಅದರಂತೆ, ಉಡುಪಿ ಮತ್ತು ಮೂಡುಬಿದ್ರೆಯಲ್ಲೂ ಸೊಸೈಟಿ ಕಚೇರಿಗಳನ್ನು ತೆರೆಯಲಾಗಿತ್ತು. ಆಯಾ ಪ್ರದೇಶಗಳಲ್ಲಿ ಏಜಂಟರನ್ನು ನೇಮಿಸಿದ್ದರಿಂದ ಕೋಟ್ಯಂತರ ವಹಿವಾಟು ನಡೆಯುತ್ತಿತ್ತು. ಐದು ವರ್ಷಕ್ಕೆ ಅಥವಾ 9 ವರ್ಷ ಹಣ ಡಿಪಾಸಿಟ್ ಇಟ್ಟಲ್ಲಿ ಡಬಲ್ ಆಗುತ್ತೆ ಅನ್ನುವ ಆಮಿಷ ಜನರನ್ನು ಆಕರ್ಷಿಸಿತ್ತು.
ಡಬಲ್ ಆಗುವ ಆಮಿಷದಲ್ಲಿ ಹಣ ಹೂಡಿಕೆ
ಅದೆಷ್ಟೋ ಮಂದಿ ತಾವು ಬೇರೆ ಬೇರೆ ಬ್ಯಾಂಕುಗಳಲ್ಲಿ ಇರಿಸಿದ್ದ ಲಕ್ಷಾಂತರ ಹಣವನ್ನು ಡಬಲ್ ಆಗುವ ಆಸೆಯಿಂದ ಪಂಚವಟಿ ಸೊಸೈಟಿಯಲ್ಲಿ ಹೂಡಿಕೆ ಮಾಡಿದ್ದರು. 5 ಲಕ್ಷ, ಹತ್ತು ಲಕ್ಷ ಎಂದು ಹಣ ಡಿಪಾಸಿಟ್ ಇಟ್ಟವರು ಬಹಳಷ್ಟಿದ್ದಾರೆ. ಬಡ ವರ್ಗದವರು ಆರ್ ಡಿ ಹೆಸರಲ್ಲಿ ವಾರಕ್ಕೆ ಇಂತಿಷ್ಟು, ತಿಂಗಳಿಗೆ ಇಂತಿಷ್ಟು ಎಂದು ಹಣ ಹೂಡಿಕೆ ಮಾಡಿದ್ದರು. ಆದರೆ 2019ರ ವೇಳೆಗೆ ಕೆಲವು ಗ್ರಾಹಕರಣ ಹಣ ಮೆಚ್ಯೂರಿಟಿ ಬಂದಾಗ ಹಿಂತಿರುಗಿಸದೇ ಇದ್ದುದು ಶಂಕೆಗೆ ಕಾರಣವಾಗಿತ್ತು. ಏಜಂಟರಿಗೆ ಶಂಕೆ ಇದ್ದರೂ, ಗ್ರಾಹಕರು ತಮ್ಮ ವ್ಯವಹಾರ ನಡೆಸುತ್ತಲೇ ಇದ್ದರು. ಪಂಡವಟಿ ಸೊಸೈಟಿಯಿಂದ ಮಂಗಳೂರಿನ ಕೆಲವರು ಸಾಲವನ್ನೂ ಪಡೆದಿದ್ದಾರೆ. ಫಾದರ್ ಮುಲ್ಲರ್ಸ್ ಸಂಸ್ಥೆಯಲ್ಲಿ ಆಯಾಗಳಾಗಿ ದುಡಿಯುವ 100ಕ್ಕೂ ಹೆಚ್ಚು ಮಂದಿ ಆರ್ ಡಿ ಹೆಸರಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಠೇವಣಿ ಇಟ್ಟವರಿಗೆ ನಕಲಿ ಬಾಂಡ್ ನೀಡಲಾಗಿದ್ದು, ಸೊಸೈಟಿ ಹೆಸರಲ್ಲಿ ಆರ್ಥಿಕ ಅಪರಾಧ ಎಸಗಿರುವುದಕ್ಕೆ ಜ್ವಲಂತ ಸಾಕ್ಷಿ.
ಕೊರೊನಾ ಲಾಕ್ಡೌನ್ ಬಳಿಕ ಓಪನ್ ಆಗಲೇ ಇಲ್ಲ
2020ರ ವೇಳೆ ಕೊರೊನಾ ನೆಪದಲ್ಲಿ ಕಚೇರಿ ಬಾಗಿಲು ಎಳ್ಕೊಂಡಿದ್ದು ಮತ್ತೆ ಓಪನ್ ಆಗಲಿಲ್ಲ. ಹಣ ಕಳಕೊಂಡ ಸಂತ್ರಸ್ತರು ಮಂಗಳೂರಿನಲ್ಲಿ ಸೊಸೈಟಿ ಡೈರೆಕ್ಟರ್ ಆಗಿದ್ದ ಸುಮತಿ ಹೆಗ್ಡೆ ಬಳಿ ಅಲವತ್ತುಕೊಂಡಿದ್ದಾರೆ. ಮೊದಲಿಗೆ, ನಾನೇ ನಿಮ್ಮ ಜೊತೆಗಿದ್ದೇನೆ, ಪೊಲೀಸು ಕೇಸು ಏನೂ ಬೇಡ ಎಂದು ಸಮಜಾಯಿಷಿ ನೀಡಿ ಸಮಾಧಾನಿಸಿದ್ದಾರೆ. ಇದರಿಂದ ಒಂದಷ್ಟು ಮಂದಿ ನಂಬಿಕೆಯಲ್ಲಿದ್ದರೆ, ಇನ್ನೊಂದಷ್ಟು ಮಂದಿ ಬೆಂಗಳೂರಿನ ಸೊಸೈಟಿ ಎಂಡಿ ರಾಜುಗೆ ಫೋನ್ ಮಾಡಲು ತೊಡಗಿದ್ದರು. ಮೊದಲಿಗೆ ರಿಸೀವ್ ಮಾಡುತ್ತಿದ್ದ ರಾಜು ಆನಂತರ, ಫೋನ್ ತೆಗೆಯುವುದನ್ನೇ ಬಿಟ್ಟಿದ್ದಾನೆ ಎನ್ನುತ್ತಾರೆ, ಹಣ ಕಳಕೊಂಡವರು. ಈ ಬಗ್ಗೆ ಮಂಗಳೂರಿನಲ್ಲಿ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ. 2021ರ ಜನವರಿಯಿಂದ ಅದೆಷ್ಟೋ ಮಂದಿ ದೂರು ನೀಡುತ್ತಲೇ ಬಂದಿದ್ದಾರೆ.
50ಕ್ಕೂ ಹೆಚ್ಚು ಮಂದಿಯಿಂದ ದೂರಿತ್ತರೂ ನಿರ್ಲಕ್ಷ್ಯ
ಹಿಂದೆ ರಾಮಕೃಷ್ಣ ಇನ್ಸ್ ಪೆಕ್ಟರ್ ಇದ್ದಾಗ ಮೊದಲು ದೂರು ಹಿಡಿದು ಹೋಗಿದ್ದೆವು. ದೂರು ಪಡೆದು ಹಿಂಬರಹ ಅಷ್ಟೇ ಕೊಟ್ಟಿದ್ದಾರೆ. ಆನಂತರ, ಸೈಬರ್ ಠಾಣೆ ಉರ್ವಾಕ್ಕೆ ಆದಮೇಲೂ ದೂರು ನೀಡಿದ್ದೇವೆ. ಅಂದಾಜು 50ಕ್ಕೂ ಹೆಚ್ಚು ಮಂದಿ ದೂರು ನೀಡಿದ್ದೇವೆ. ಆದರೆ ಪೊಲೀಸರು ಎಫ್ಐಆರ್ ದಾಖಲು ಮಾಡಿಲ್ಲ. ಇತ್ತೀಚೆಗೆ ಅಂಚೆ ಮೂಲಕವೂ ಪೊಲೀಸ್ ಕಮಿಷನರ್ ಅವರಿಗೆ ದೂರನ್ನು ಕಳುಹಿಸಿದ್ದೇವೆ. ಜೆಡಿಎಸ್ ನಾಯಕರ ಒತ್ತಡದ ಕಾರಣವೋ ಗೊತ್ತಿಲ್ಲ. ದಕ್ಷಿಣ ಕನ್ನಡ, ಉಡುಪಿಯಲ್ಲಿ ಒಂದೂವರೆ ಎರಡು ಸಾವಿರ ಮಂದಿಗೆ ವಂಚನೆ ಮಾಡಿರುವ ಸೊಸೈಟಿ ಬಗ್ಗೆ ದೂರು ನೀಡಿದರೆ ಪೊಲೀಸರು ಎಫ್ಐಆರ್ ದಾಖಲು ಮಾಡದೇ ಪ್ರಕರಣ ಮುಚ್ಚಿ ಹಾಕಿದ್ದಾರೆ ಎಂದು ಸಂತ್ರಸ್ತರೊಬ್ಬರು ಅಲವತ್ತುಕೊಂಡಿದ್ದಾರೆ.
ಜಿಲ್ಲಾಧಿಕಾರಿ ಸೂಚಿಸಿದ್ರೂ ಎಫ್ಐಆರ್ ಆಗಿಲ್ಲ !
ವಂಚನೆ ಪ್ರಕರಣದ ಬಗ್ಗೆ ಜಿಲ್ಲಾಧಿಕಾರಿಗೂ ದೂರು ಹೇಳಿದ್ದೇವೆ. ಜಿಲ್ಲಾಧಿಕಾರಿ ನಮ್ಮ ಎದುರಲ್ಲೇ ಪೊಲೀಸ್ ಕಮಿಷನರ್ ಗೆ ಫೋನ್ ಮಾಡಿ, ಎಫ್ಐಆರ್ ದಾಖಲಿಸಲು ಹೇಳಿದ್ದಾರೆ. ಆದರೆ ಎಫ್ಐಆರ್ ಮಾತ್ರ ಈವರೆಗೂ ದಾಖಲಾಗಿಲ್ಲ. ಈಗಿನ ಸೈಬರ್ ಇನ್ಸ್ ಪೆಕ್ಟರ್ ಬಳಿಯೂ ಹೇಳಿದ್ದೇವೆ. ಸೊಸೈಟಿಯಲ್ವಾ, ನಾವು ಎಫ್ಐಆರ್ ಹೇಗೆ ಮಾಡೋಕ್ಕಾಗುತ್ತೆ ಎಂದು ಕೇಳುತ್ತಿದ್ದಾರೆ ಎಂಬುದಾಗಿ ಸಂತ್ರಸ್ತರು ಹೇಳಿದ್ದಾರೆ. ವಿಚಿತ್ರ ಏನಪ್ಪಾಂದ್ರೆ, ಡಿಪಾಸಿಟ್ ಹಣ ಇಟ್ಟವರ ಪೈಕಿ ಹೆಚ್ಚಿನವರಿಗೆ ನಕಲಿ ಬಾಂಡ್ ಕೊಟ್ಟಿದ್ದಾರೆ. ಖಾಲಿ ಕಾಗದ ಪತ್ರದಲ್ಲಿ ಸೊಸೈಟಿ ಸೀಲ್ ಹಾಕಿ ಕೊಟ್ಟಿದ್ದಾರೆ. ಗ್ರಾಹಕರು ಹಣ ಕಟ್ಟಿದ ಬಗ್ಗೆ, ಸೊಸೈಟಿ ಅಕ್ರಮ ಎಸಗಿರುವ ಬಗ್ಗೆ ಸಾಕಷ್ಟು ದಾಖಲೆ ಇದ್ದರೂ, ಪೊಲೀಸರು ಕೇಸು ದಾಖಲಿಸಿಕೊಳ್ಳದೆ ಯಾಮಾರಿಸುತ್ತಿದ್ದಾರೆಯೇ ಎನ್ನುವ ಅನುಮಾನ ಕೇಳಿಬಂದಿದೆ.
ವೈಯ್ಯಾರಿ ಮ್ಯಾನೇಜರ್, ಡೈರೆಕ್ಟರ್ ನಾಪತ್ತೆ
ಮಂಗಳೂರಿನಲ್ಲಿ ಸೊಸೈಟಿ ಆರಂಭದಿಂದಲೂ ಹರ್ಷಿತ ಎಂಬ ಯುವತಿ ಮ್ಯಾನೇಜರ್ ಆಗಿದ್ದಳು. ಸುಮತಿ ಹೆಗ್ಡೆ ಇತರೇ ವ್ಯವಹಾರ ನೋಡಿಕೊಳ್ಳುತ್ತಿದ್ದರು. ಈಗ ಇವರಿಬ್ಬರೂ ಸೊಸೈಟಿಯಿಂದ ದೂರ ನಿಂತಿದ್ದಾರೆ. ಬೆಂಗಳೂರಿನ ಡೈರೆಕ್ಟರ್ ಗಳು ತಲೆಮರೆಸಿಕೊಂಡಿದ್ದಾರೆ. ಈ ನಡುವೆ, ಗೋವಾದಲ್ಲೂ ಕಚೇರಿ ತೆರೆದು ಅಲ್ಲಿಯೂ ವಂಚನೆ ನಡೆಸಿದ್ದಾರೆ. ಒಟ್ಟು ನೂರು ಕೋಟಿಗೂ ಹೆಚ್ಚು ವಂಚನೆ ಮಾಡಲಾಗಿದೆ. ಈ ಬಗ್ಗೆ ಪ್ರತ್ಯೇಕ ತನಿಖಾ ತಂಡದಿಂದ ಸಮಗ್ರ ತನಿಖೆಯಾಗಬೇಕೆಂದು ಸೊಸೈಟಿಯಲ್ಲಿ ಏಜಂಟರಾಗಿದ್ದ ವ್ಯಕ್ತಿಯೊಬ್ಬರು ಹೇಳುತ್ತಾರೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ಸಾವಿರದಷ್ಟು ಮಂದಿ ವಂಚನೆಗೊಳಗಾಗಿದ್ದಾರೆ. ಇಡೀ ರಾಜ್ಯದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಮಂದಿಗೆ ಮೋಸ ಆಗಿರುವ ಶಂಕೆಯಿದೆ. ಈ ಬಗ್ಗೆ ತುಮಕೂರಿನಲ್ಲಿ ಒಂದು ಪ್ರಕರಣ ದಾಖಲಾಗಿದ್ದು ಬಿಟ್ಟರೆ, ಉಳಿದೆಡೆ ಕೇಸು ದಾಖಲಾಗದಂತೆ ಮೋಸಗಾರರೇ ನೋಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಕುಮಾರಸ್ವಾಮಿ ಬಳಿ ಹೋದ್ರೂ ಡೋಂಟ್ ಕೇರ್
ಸೊಸೈಟಿಯಿಂದ ಹಣ ಕಳಕೊಂಡ ಹೆಚ್ಚಿನವರು ಕ್ರಿಸ್ತಿಯನ್ನರು. ಮಂಗಳೂರು, ಮೂಡುಬಿದ್ರೆ, ಉಡುಪಿ ಭಾಗದ ನೂರಾರು ಮಂದಿ ಹಣ ಕಳಕೊಂಡಿದ್ದಾರೆ. ಮಂಗಳೂರಿನಲ್ಲಿ ಕಚೇರಿ ಬಂದ್ ಆಗುತ್ತಲೇ ಉಡುಪಿ, ಮೂಡುಬಿದ್ರೆಯಲ್ಲಿದ್ದ ಕಚೇರಿಯೂ ಬಂದ್ ಆಗಿತ್ತು. ಈಗ ಬೆಂಗಳೂರಿನಲ್ಲೂ ಕಚೇರಿ ಬಂದ್ ಮಾಡಿದ್ದಾರೆ. ವಂಚಕರು ಯಾರು ಕೂಡ ಫೋನ್ ರಿಸೀವ್ ಮಾಡುತ್ತಿಲ್ಲ. ಸುಮತಿ ಹೆಗ್ಡೆ ಬಳಿ ಕೇಳಿದರೆ, ನನಗೂ ಅದಕ್ಕೂ ಸಂಬಂಧವೇ ಇಲ್ಲ ಎನ್ನುತ್ತಿದ್ದಾರೆ ಎಂದು ಜನರು ಅಳಲು ತೋಡಿಕೊಂಡಿದ್ದಾರೆ. ಇತ್ತೀಚೆಗೆ ಜೆಡಿಎಸ್ ವರಿಷ್ಠ ಮಾಜಿ ಸಿಎಂ ಕುಮಾರಸ್ವಾಮಿ ಮಂಗಳೂರಿಗೆ ಬಂದಿದ್ದಾಗ, ಒಂದಷ್ಟು ಮಂದಿ ದೂರು ಹೇಳಲು ಹೋಗಿದ್ದರು. ನೀವು ಕಮಿಷನರ್ ಬಳಿ ಹೋಗಿ, ಅವರಿಗೆ ನಾನು ಹೇಳುತ್ತೇನೆ ಎಂದಿದ್ರಂತೆ. ಕಮಿಷನರ್ ಬಳಿಯೂ ಸಂತ್ರಸ್ತರು ಹೋಗಿದ್ದು, ನೀವು ಸಿಸಿಬಿಗೆ ಹೋಗಿ, ಅವರಿಗೆ ತನಿಖೆ ಮಾಡಲು ಹೇಳುತ್ತೇನೆ ಎಂದಿದ್ರಂತೆ. ಈ ಬಗ್ಗೆ ಸೈಬರ್ ಠಾಣೆಯಲ್ಲಿ ಕೇಳಿದರೆ, ಪಂಚವಟಿ ಸೊಸೈಟಿ ಬಗ್ಗೆ ಈವರೆಗೂ ಯಾವುದೇ ಎಫ್ಐಆರ್ ಆಗಿಲ್ಲ ಎಂದು ಹೇಳಿದ್ದಾರೆ.
ಸಹಕಾರಿ ಸೊಸೈಟಿ ಹೆಸರಲ್ಲಿ ಸಾಮೂಹಿಕವಾಗಿ ಜನರನ್ನು ದೋಚುತ್ತಿರುವುದಕ್ಕೆ ಪಂಚವಟಿ ಹಗರಣ ಸ್ಪಷ್ಟ ನಿದರ್ಶನ. ಮಲ್ಪಿ ಸ್ಟೇಟ್ ಸೊಸೈಟಿಯೆಂದು ಮಹಾರಾಷ್ಟ್ರದಲ್ಲಿ ರಿಜಿಸ್ಟರ್ ಮಾಡಿಕೊಂಡು ಕರ್ನಾಟಕದಲ್ಲಿ ಭಾರೀ ವಂಚನೆ ಎಸಗಿರುವ ಪಂಚವಟಿ ಸೊಸೈಟಿ ಡೈರೆಕ್ಟರ್ ಗಳನ್ನೆಲ್ಲ ಬಂಧಿಸಬೇಕು. ಅವರ ಆಸ್ತಿಯನ್ನೆಲ್ಲ ಜಪ್ತಿ ಮಾಡಿ, ವಂಚನೆಗೊಳಗಾದ ಸಾವಿರಾರು ಸಂತ್ರಸ್ತರಿಗೆ ನೀಡಬೇಕು. ಮಹಾನ್ ವಂಚನೆ ಪ್ರಕರಣದ ಬಗ್ಗೆ ರಾಜ್ಯ ಸರಕಾರವೇ ತನಿಖೆಗೆ ಪ್ರತ್ಯೇಕ ತನಿಖಾ ತಂಡವನ್ನು ರಚಿಸಬೇಕಾಗಿದೆ.
Mangalore Panchawati Multistate CoOperative Credit Society scam, 100 crores fraud exposed in various districts of Karnataka. Hundreds of people in Mangalore have lost their money and are fighting for justice. Even after complaints in various police stations yet police officials are not taking any action is the cry of the innocents who have lost their money.
16-05-25 10:04 am
Bangalore Correspondent
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
16-05-25 02:47 pm
Mangalore Correspondent
Mangalore Cargo Ship, Lakshadweep: ಲಕ್ಷದ್ವೀಪಕ...
16-05-25 10:06 am
Capt Brijesh Chowta, Mangalore Mp, CM Siddara...
15-05-25 08:04 pm
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm