Mangalore Crime, Ullal Police: 916 ಹಾಲ್ ಮಾರ್ಕಿನದ್ದೇ ನಕಲಿ ಆಭರಣ ಅಡವಿರಿಸಿ ತೊಕ್ಕೊಟ್ಟಿನ ಫೈನಾನ್ಸ್ ಗೆ ಭಾರೀ ವಂಚನೆ ; ಫೈನಾನ್ಸ್ ಮಾಲೀಕನ ಸಮಯ ಪ್ರಜ್ಞೆಗೆ ಸಿಕ್ಕಿಬಿದ್ದ ಕಳ್ಳರು, ಉಳ್ಳಾಲ ಪೊಲೀಸರ ಬಲೆಗೆ ಬಿದ್ದ ಖತರ್ನಾಕ್ ಖದೀಮರು 

26-11-25 06:26 pm       Mangalore Correspondent   ಕ್ರೈಂ

ತೊಕ್ಕೊಟ್ಟಿನ ಫೈನಾನ್ಸ್ ಒಂದರಲ್ಲಿ 916 ಹಾಲ್ ಮಾರ್ಕ್ ಇರುವ ಅಸಲಿ ಚಿನ್ನವನ್ನೇ ಹೋಲುವ ನಕಲಿ ಆಭರಣಗಳನ್ನ ಅಡವಿರಿಸಿ ಲಕ್ಷಾಂತರ ರೂಪಾಯಿ ವಂಚನೆಗೈದಿರುವ ಖತರ್ನಾಕ್ ಗ್ಯಾಂಗ್ ನ ಆರು ಮಂದಿ ಆರೋಪಿಗಳನ್ನ ಉಳ್ಳಾಲ ಪೊಲೀಸರು ಬಂಧಿಸಿ ಹೆಡೆಮುರಿ ಕಟ್ಟಿದ್ದು, ಓರ್ವ ತಲೆಮರೆಸಿಕೊಂಡಿದ್ದಾನೆ.

ಉಳ್ಳಾಲ, ನ.26 : ತೊಕ್ಕೊಟ್ಟಿನ ಫೈನಾನ್ಸ್ ಒಂದರಲ್ಲಿ 916 ಹಾಲ್ ಮಾರ್ಕ್ ಇರುವ ಅಸಲಿ ಚಿನ್ನವನ್ನೇ ಹೋಲುವ ನಕಲಿ ಆಭರಣಗಳನ್ನ ಅಡವಿರಿಸಿ ಲಕ್ಷಾಂತರ ರೂಪಾಯಿ ವಂಚನೆಗೈದಿರುವ ಖತರ್ನಾಕ್ ಗ್ಯಾಂಗ್ ನ ಆರು ಮಂದಿ ಆರೋಪಿಗಳನ್ನ ಉಳ್ಳಾಲ ಪೊಲೀಸರು ಬಂಧಿಸಿ ಹೆಡೆಮುರಿ ಕಟ್ಟಿದ್ದು, ಓರ್ವ ತಲೆಮರೆಸಿಕೊಂಡಿದ್ದಾನೆ.

ಮಹಾರಾಷ್ಟ್ರ ಮೂಲದ ವಿಕ್ರಮ್, ಹರೇಕಳದ ಇಸ್ಮಾಯಿಲ್ ಮತ್ತು ಮಿಸ್ಬಾ, ಸುರತ್ಕಲ್ ಕಾಟಿಪಳ್ಳದ ಉಮರ್ ಫಾರೂಕ್, ಉಳ್ಳಾಲ ಮೇಲಂಗಡಿಯ ಇಮ್ತಿಯಾಝ್, ಮಂಚಿಲದ ಝಹೀಮ್ ಅಹ್ಮದ್ ರನ್ನ ಉಳ್ಳಾಲ ಪೊಲೀಸರು ಬಂಧಿಸಿದ್ದು, ಹೆಜಮಾಡಿಯ ನೌಫಾಲ್ ಎಂಬ ಆರೋಪಿ ತಲೆಮರೆಸಿಕೊಂಡಿದ್ದಾನೆ.

ತೊಕ್ಕೊಟ್ಟು ಕೇಂದ್ರ ಭಾಗದ ಕೊಣಾಜೆ ವಿವಿ ರಸ್ತೆಯ ದ್ವಾರಕ ಕಾಂಪ್ಲೆಕ್ಸ್ ನಲ್ಲಿ, ಗುರು ರಾಘವೇಂದ್ರ ಫೈನಾನ್ಸ್ & ಇನ್ವೆಸ್ಟ್ ಮೆಂಟ್ ಕಚೇರಿ ಹೊಂದಿದ್ದು ಕಳೆದ 25 ವರುಷಗಳಿಂದ‌ಲೂ ಫೈನಾನ್ಸ್ ವ್ಯವಹಾರ ನಡೆಸುತ್ತಿರುವ ದಿನೇಶ್ ರೈ ಕಳ್ಳಿಗೆ ಎಂಬವರು ಮೋಸ ಹೋಗಿದ್ದು ಉಳ್ಳಾಲ ಠಾಣೆಗೆ ದೂರು ನೀಡಿದ್ದರು. 

ನ.22ರ ಶನಿವಾರ ಸಂಜೆ ಸುಮಾರು 5 ಗಂಟೆಗೆ ದಿನೇಶ್ ರೈ ಅವರ ಫೈನಾನ್ಸ್ ಗೆ ಬಂದಿದ್ದ ಹೆಜಮಾಡಿ ನಿವಾಸಿ ನೌಫಾಲ್ ಮತ್ತು ಉಳ್ಳಾಲ ಮಂಚಿಲದ ನಿವಾಸಿ ಝಹೀಮ್ ಅಹ್ಮದ್ ಎಂಬವರು 41 ಗ್ರಾಂ ತೂಗುವ ಎರಡು ಚೈನ್ ಗಳನ್ನ ನೀಡಿ ಸಾಲ ಕೊಡುವಂತೆ ಹೇಳಿದ್ದಾರೆ. ಫೈನಾನ್ಸ್ ಕಚೇರಿಯಲ್ಲಿದ್ದ ಮಾಲಕ ದಿನೇಶ್ ರೈ ಮತ್ತು ಸಿಬ್ಬಂದಿ ನಿಕೇಶ್ ಎಂಬವರು ಪರಿಶೀಲಿಸಿದಾಗ ಚೈನ್ ಗಳ ಕೊಂಡಿಯಲ್ಲಿದ್ದ ಚಿನ್ನದ ಪರಿಶುದ್ಧತೆಯ 916 ಸಂಕೇತ ಇರುವುದನ್ನು ನೋಡಿದ್ದು ಉಜ್ಜುವ ಕಲ್ಲಿನಲ್ಲಿ ಚೆಕ್ ಮಾಡಿದಾಗ ಚಿನ್ನ ಎಂದು ಕಂಡುಬಂದಿತ್ತು. ಫೈನಾನ್ಸ್ ಮಾಲಕರು ಝಹೀಮ್ ಅಹ್ಮದ್ ಹೆಸರಿನಲ್ಲಿ ಆಭರಣಗಳನ್ನು ಅಡವು ಇಟ್ಟು 3 ಲಕ್ಷದ 55 ಸಾವಿರ ಹಣವನ್ನು ಸಾಲ ನೀಡಿದ್ದಾರೆ.

ನ.24ರ ಸೋಮವಾರ ಸಂಜೆ 5 ಗಂಟೆಗೆ ಉಳ್ಳಾಲ ಮೇಲಂಗಡಿ ನಿವಾಸಿ ಇಮ್ತಿಯಾಝ್  ಎಂಬಾತ ಗುರು ರಾಘವೇಂದ್ರ ಫೈನಾನ್ಸ್ ಗೆ ಬಂದಿದ್ದು 55 ಗ್ರಾಂ ತೂಕದ ಎರಡು ಚೈನ್ ಮತ್ತು ಒಂದು ಬ್ರಾಸ್ ಲೇಟ್ ಅನ್ನು ಅಡವಿಟ್ಟು 4 ಲಕ್ಷ 80 ಸಾವಿರ ರೂಪಾಯಿಗಳನ್ನ ಸಾಲ ಕೊಡುವಂತೆ ಬೇಡಿಕೆ ಇಟ್ಟಿದ್ದಾನೆ. ಇಮ್ತಿಯಾಝ್ ನೀಡಿದ ಆಭರಣಗಳನ್ನೂ ಪರಿಶೀಲಿಸಿದಾಗ ಅದರಲ್ಲೂ 916 ಸಂಕೇತ ಮತ್ತು ಓರೆ ಕಲ್ಲಿಗೆ ಉಜ್ಜಿದಾಗ ಚಿನ್ನವೆಂದೇ ಕಂಡುಬಂದಿದೆ. ಚಿನ್ನ ಎಲ್ಲಿಂದ ಖರೀದಿಸಿದ್ದೆಂದು ವಿಚಾರಿಸಿದಾಗ ಆರೋಪಿ ಇಮ್ತಿಯಾಝ್ ದುಬೈಯ ಚಿನ್ನವೆಂದು ಹೇಳಿದ್ದನಂತೆ.

ಈ ವೇಳೆ ಅನುಮಾನಗೊಂಡ ಫೈನಾನ್ಸ್ ಮಾಲಕ ದಿನೇಶ್ ರೈ ಸಮಯ ಪ್ರಜ್ಞೆ ಮೆರೆದಿದ್ದು ಇಮ್ತಿಯಾಝ್ ಮತ್ತು ಝಹೀಮ್‌ ಅಹ್ಮದ್ ಅಡವಿಟ್ಟಿದ್ದ ಆಭರಣಗಳ ಪರಿಶುದ್ಧತೆ ಬಗ್ಗೆ ಖಚಿತ ಪಡಿಸಿಕೊಳ್ಳಲು ಮಂಗಳೂರಿನಲ್ಲಿ ಚಿನ್ನದ ಕೆಲಸ ಮಾಡುವ ಸ್ನೇಹಿತ ಉದಯ್ ಆಚಾರ್ಯ ಅವರಲ್ಲಿ ಹೋಗಿ ಪರೀಕ್ಷೆ ನಡೆಸಿದ್ದಾರೆ. ಆಭರಣಗಳನ್ನು ಆಸಿಡ್ ನಲ್ಲಿ ಮುಳುಗಿಸಿ ಬಿಸಿ ಮಾಡಿದಾಗ ನೊರೆ ಬಂದಿದ್ದು, ನಕಲಿ ಎಂದು ತಿಳಿದುಬಂದಿದೆ.

ಆರೋಪಿಗಳಾದ ಝಹೀಮ್ ಅಹ್ಮದ್, ನೌಫಾಲ್ ಹಾಗೂ ಇಮ್ತಿಯಾಝ್ ಸೇರಿ ನಕಲಿ ಚಿನ್ನವನ್ನ ಅಡವಿಟ್ಟು ಲಕ್ಷಾಂತರ ರೂಪಾಯಿ ಹಣವನ್ನ ಪಡೆದು ಸಂಸ್ಥೆಗೆ ಮೋಸ ಮಾಡಿರುವುದಾಗಿ ಫೈನಾನ್ಸ್ ಮಾಲಕ ದಿನೇಶ್ ರೈ ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆರೋಪಿ ಇಮ್ತಿಯಾಝ್ ಎಂಬಾತನನ್ನ ಪೊಲೀಸರು ಮೊದಲಿಗೆ ಲಾಕ್ ಮಾಡಿದ್ದು, ಅವನ ಮಾಹಿತಿಯಲ್ಲಿ ಇತರ ಆರೋಪಿಗಳನ್ನ ಹೆಡೆಮುರಿ ಕಟ್ಟಿದ್ದಾರೆ.

ಹರೇಕಳದ ಇಸ್ಮಾಯಿಲ್ ಎಂಬಾತ ಈ ಜಾಲದ ಕಿಂಗ್ ಪಿನ್ ಆಗಿದ್ದು, ಈತನಿಗೆ ಮಹಾರಾಷ್ಟ್ರ ಮೂಲದ ವಿಕ್ರಮ್ ಎಂಬಾತ ಗ್ರಾಂಗೆ 5,200 ರೂ‌.ಗೆ 916 ಹಾಲ್ ಮಾರ್ಕ್ ಇರುವ ಚಿನ್ನವನ್ನೇ ಹೋಲುವ ಆಭರಣಗಳನ್ನ ಪೂರೈಸುತ್ತಿದ್ದ ಎನ್ನಲಾಗಿದೆ. ಇಸ್ಮಾಯಿಲ್ ಇದನ್ನ ತನ್ನ ಸಹಚರರಿಗೆ ನೀಡಿ ಹಣಕಾಸು ಸಂಸ್ಥೆಗಳಲ್ಲಿ ಅಡವಿರಿಸಿ ವಂಚಿಸುತ್ತಿದ್ದನೆನ್ನಲಾಗಿದೆ. ವಿಕ್ರಮ್ ವಿರುದ್ಧ ನಕಲಿ ಚಿನ್ನಾಭರಣ ಪೂರೈಕೆ ವಿಚಾರದಲ್ಲಿ ಮಹಾರಾಷ್ಟ್ರದಲ್ಲಿ ಪ್ರಕರಣಗಳಿದ್ದು, ಜೈಲಿಗೂ ಹೋಗಿದ್ದನಂತೆ. ಆರೋಪಿಗಳು ಬೇರೆ ಹಣಕಾಸು ಸಂಸ್ಥೆಗಳಿಗೆ ವಂಚನೆ ನಡೆಸಿದ್ದಾರೆಯೇ ಎಂದು ಉಳ್ಳಾಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

A major fraud involving fake gold jewellery stamped with 916 hallmark—designed to look exactly like real gold—has been uncovered at a finance firm in Tokkottu. Ullal Police have arrested six members of the gang while one accused is still absconding.