9 ಕ್ಯಾರೆಟ್ ಚಿನ್ನ ಮಂಗಳೂರಿನ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ಯಾ..? ರಾಜಸ್ಥಾನದಿಂದ ನಕಲಿ ಚಿನ್ನ ಪೂರೈಕೆ ಜಾಲ, ಫೈನಾನ್ಸ್ ಸಂಸ್ಥೆಯಲ್ಲಿ 916 ಹಾಲ್ ಮಾರ್ಕ್ ಅಸಲಿತನ ಬಯಲು, ಜುವೆಲ್ಲರಿ ಚಿನ್ನಕ್ಕೇನು ಗ್ಯಾರಂಟಿ !?  

27-11-25 09:14 pm       Mangalore Correspondent   ಕ್ರೈಂ

ಸಾಮಾನ್ಯವಾಗಿ 916 ಹಾಲ್ ಮಾರ್ಕ್ ಇದ್ದರೆ ಅಸಲಿ ಚಿನ್ನ ಎಂದೇ ನಂಬಲಾಗುತ್ತದೆ. ಯಾಕಂದ್ರೆ, ಚಿನ್ನದ ನೈಜತೆಯನ್ನು ತೋರಿಸುವುದಕ್ಕೆ ಅಧಿಕೃತವಾಗಿ 916 ಮಾರ್ಕ್ ಹಾಕಲಾಗುತ್ತದೆ. ಆದರೆ ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ 916 ಹಾಲ್ ಮಾರ್ಕ್ ಹಾಕಿದ್ದ ನಕಲಿ ಬಂಗಾರವನ್ನು ಫೈನಾನ್ಸ್ ಕಂಪನಿಯಲ್ಲಿ ಅಡವಿಟ್ಟು ಮೋಸಕ್ಕೆ ಬಳಸಿರುವುದು ಪತ್ತೆಯಾಗಿದೆ.

ಮಂಗಳೂರು, ನ.27 : ಸಾಮಾನ್ಯವಾಗಿ 916 ಹಾಲ್ ಮಾರ್ಕ್ ಇದ್ದರೆ ಅಸಲಿ ಚಿನ್ನ ಎಂದೇ ನಂಬಲಾಗುತ್ತದೆ. ಯಾಕಂದ್ರೆ, ಚಿನ್ನದ ನೈಜತೆಯನ್ನು ತೋರಿಸುವುದಕ್ಕೆ ಅಧಿಕೃತವಾಗಿ 916 ಮಾರ್ಕ್ ಹಾಕಲಾಗುತ್ತದೆ. ಆದರೆ ಮಂಗಳೂರಿನಲ್ಲಿ ಇದೇ ಮೊದಲ ಬಾರಿಗೆ 916 ಹಾಲ್ ಮಾರ್ಕ್ ಹಾಕಿದ್ದ ನಕಲಿ ಬಂಗಾರವನ್ನು ಫೈನಾನ್ಸ್ ಕಂಪನಿಯಲ್ಲಿ ಅಡವಿಟ್ಟು ಮೋಸಕ್ಕೆ ಬಳಸಿರುವುದು ಪತ್ತೆಯಾಗಿದೆ.

ತೊಕ್ಕೊಟ್ಟಿನ ಗುರು ರಾಘವೇಂದ್ರ ಫೈನಾನ್ಸ್ ಸಂಸ್ಥೆಗೆ ಬೆನ್ನು ಬೆನ್ನಿಗೆ ಈ ರೀತಿಯ ಚಿನ್ನ ಅಡವಿಟ್ಟು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಉಳ್ಳಾಲ ಪೊಲೀಸರು ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದು ಇವರು ಬಳಸಿದ್ದ ಚಿನ್ನವನ್ನು 9 ಕ್ಯಾರೆಟ್ ಚಿನ್ನವೆಂದು ಹೇಳಿ ಗೊಂದಲಕ್ಕೀಡು ಮಾಡಿದ್ದಾರೆ. ಬಂಧಿತರನ್ನು ಮಹಾರಾಷ್ಟ್ರ ಮೂಲದ ವಿಕ್ರಮ್ ಅಮೃತ್ ಲಾಲ್ ಬಫ್ನಾ(48), ಉಳ್ಳಾಲ ತಾಲೂಕಿನ ಹರೇಕಳ ನಿವಾಸಿ ಮಹಮ್ಮದ್ ಇಸ್ಮಾಯಿಲ್ (35), ಮಹಮ್ಮದ್ ಮಿಸ್ಬಾ(30), ಸುರತ್ಕಲ್ ಕಾಟಿಪಳ್ಳದ ಉಮರ್ ಫಾರೂಕ್(52), ಉಳ್ಳಾಲ ಮೇಲಂಗಡಿಯ ಇಮ್ತಿಯಾಝ್(29), ಮಂಚಿಲದ ಝಹೀಮ್ ಅಹ್ಮದ್(20) ಎಂದು ಗುರುತಿಸಲಾಗಿದೆ. ಇವರಿಂದ ಆರು ಮೊಬೈಲ್ ಫೋನ್, 47 ಸಾವಿರ ರೂ. ನಗದು ಮತ್ತು 9 ಕ್ಯಾರೇಟ್ ಬೆಲೆಯ 141 ಗ್ರಾಂ ಚಿನ್ನಾಭರಣಗಳನ್ನ ವಶಪಡಿಸಿದ್ದಾರೆ.

ನೋಡಿದರೆ ಅಸಲಿ ಚಿನ್ನದ ರೀತಿಯಲ್ಲೇ ತೋರುತ್ತಿದ್ದು, ನೈಜತೆಗೆ 916 ಮಾರ್ಕ್ ಕೂಡ ಇದೆ. ಹೀಗಾಗಿ ಇದರ ಬಗ್ಗೆ ಪ್ರಶ್ನೆ ಮಾಡುವ ಪ್ರಮೇಯವೇ ಬರುವುದಿಲ್ಲ ಎನ್ನುವ ಫೈನಾನ್ಸ್ ಸಂಸ್ಥೆಯ ಮಾಲಕ ದಿನೇಶ್ ರೈ, ಎರಡು ದಿನಗಳ ಅಂತರದಲ್ಲಿ ಒಂದೇ ಪಾರ್ಟಿಯವರು ಚಿನ್ನ ಅಡವಿಟ್ಟು ಸಾಲಕ್ಕೆ ಬಂದಿರುವುದು ಸಂಶಯ ಹುಟ್ಟಿಸಿತ್ತು. ಹೀಗಾಗಿ ಚೆಕ್ ಮಾಡಿಸಿದಾಗ ನಕಲಿ ಚಿನ್ನ ಎನ್ನುವುದು ತಿಳಿದುಬಂದಿತ್ತು ಎನ್ನುತ್ತಾರೆ. ಇವರ ಫೈನಾನ್ಸ್ ಸಂಸ್ಥೆಯಲ್ಲಿ ನ.22ರಂದು 41 ಗ್ರಾಮಿನ ಚಿನ್ನವನ್ನು ಅಡವಿಟ್ಟು 3.55 ಲಕ್ಷ ಸಾಲ ಪಡೆದಿದ್ದರು. ಎರಡು ದಿನ ಬಿಟ್ಟು ನ.24ರಂದು ಮತ್ತೆ ಅದೇ ತಂಡ 55 ಗ್ರಾಮ್ ಚಿನ್ನವನ್ನು ತಂದು ಸಾಲ ಕೇಳಿತ್ತು. ಅಸಲಿ ಚಿನ್ನದ ರೇಟಿನಂತೆ 4.80 ಲಕ್ಷ ರೂ. ಸಾಲ ಕೇಳಿದ್ದರು.

ಎಂದಿನ ರೀತಿಯಲ್ಲಿ ತಪಾಸಣೆ ನಡೆಸಿದಾಗ ಅಸಲಿ ಚಿನ್ನವೆಂದೇ ಬಂದಿದ್ದರೂ, ಹೆಚ್ಚುವರಿಯಾಗಿ ಮಂಗಳೂರಿನಲ್ಲಿ ಪರಿಶೀಲನೆಗೆ ಒಳಪಡಿಸಿದಾಗ ಅಸಲಿತನ ಬಯಲಾಗಿತ್ತು. ಇದರಂತೆ, ದಿನೇಶ್ ರೈ ಉಳ್ಳಾಲ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಿದಾಗ ಮಹಾರಾಷ್ಟ್ರ ಮೂಲದ ವ್ಯಕ್ತಿ ರಾಜಸ್ಥಾನದಿಂದ ಈ ರೀತಿಯ ನಕಲಿ ಚಿನ್ನವನ್ನು ಪೂರೈಸುತ್ತಿರುವುದು ಪತ್ತೆಯಾಗಿದೆ. ಸದ್ಯಕ್ಕೆ ಉಳ್ಳಾಲದ ಐವರು ಸೇರಿ, ಇವರಿಗೆ ನಕಲಿ ಚಿನ್ನ ಕೊಡಿಸಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ. ತನಿಖೆಯಲ್ಲಿ ಮಂಗಳೂರಿಗೆ ಅಸಲಿ ಚಿನ್ನವೆಂದೇ ಯಾಮಾರಿಸುವ ರೀತಿಯ ನಕಲಿ ಚಿನ್ನ ಪೂರೈಕೆ ಆಗುತ್ತಿರುವುದು ಬೆಳಕಿಗೆ ಬಂದಿದೆ.

ಜುವೆಲ್ಲರಿ ಚಿನ್ನವನ್ನು ನಂಬೋದು ಹೇಗೆ ?  

ಮಂಗಳೂರು, ತೊಕ್ಕೊಟ್ಟಿನಲ್ಲಿ ಕಳೆದ 4-5 ವರ್ಷಗಳಲ್ಲಿ ನಾಯಿ ಕೊಡೆಗಳ ರೀತಿ ಜುವೆಲ್ಲರಿಗಳು ಆರಂಭಗೊಂಡಿದ್ದು, ಚಿನ್ನದ ದರವೂ ಗಗನಕ್ಕೇರಿದೆ. ಜುವೆಲ್ಲರಿಗಳಲ್ಲಿ 916 ಹಾಲ್ ಮಾರ್ಕ್ ಇದ್ದರೆ ಅಸಲಿಯೆಂದೂ, ಅದು ಒರಿಜಿನಲ್ ಚಿನ್ನವೆಂದು ಜನಸಾಮಾನ್ಯರು ನಂಬುತ್ತಾರೆ. ಆದರೆ ಈ ಹಾಲ್ ಮಾರ್ಕ್ ಅಸಲಿತನವನ್ನೇ ಉಳ್ಳಾಲದ ಈ ಪ್ರಕರಣ ತೊಡೆದು ಹಾಕಿದೆ. 916 ಇದ್ದರೂ, ಜುವೆಲ್ಲರಿಗಳಲ್ಲಿ ತೋರಿಸುವ ಚಿನ್ನ ಅಸಲಿ ಎನ್ನುವುದನ್ನು ಹೇಗೆ ನಂಬೋದು ಎನ್ನುವ ಪ್ರಶ್ನೆ ಉಂಟಾಗಿದೆ.

ಹಾಲಿ ಮಾರುಕಟ್ಟೆಯಲ್ಲಿ 22 ಕ್ಯಾರೆಟ್ ಚಿನ್ನಾಭರಣಕ್ಕೆ ಗ್ರಾಂಗೆ 11,500 ರೂಪಾಯಿ ಬೆಲೆಯಿದ್ದರೆ, ಇದರಲ್ಲಿ ಗ್ರಾಮ್ ಮೇಲೆ ಎರಡು ಪರ್ಸೆಂಟ್ ತಾಮ್ರವೂ ಒಳಗೊಂಡಿರುತ್ತದೆ. ಆದರೆ ಈಗ ನಕಲಿ ಚಿನ್ನವೆಂದು ಬರುತ್ತಿರುವುದರಲ್ಲಿ ತಾಮ್ರದ ಪ್ರಮಾಣ ಹೆಚ್ಚಿಸಿ, ಚಿನ್ನದ ಪ್ರಮಾಣ ಕಡಿಮೆ ಮಾಡಿರುತ್ತಾರೆ. ತಾಮ್ರದ ಆಭರಣಕ್ಕೆ ಚಿನ್ನದ ಕೋಟಿಂಗ್ ಕೂಡ ಮಾಡಿದ್ದು ಮೇಲ್ನೋಟಕ್ಕೆ ಅಸಲಿ ಚಿನ್ನವೆಂದೇ ತೋರುತ್ತದೆ.

ರಾಜಸ್ಥಾನದಿಂದ ಪೂರೈಸಲಾಗುತ್ತಿರುವ ಚಿನ್ನವನ್ನು ಪೊಲೀಸರು 9 ಕ್ಯಾರೆಟ್ ಎಂದು ಹೇಳುತ್ತಿದ್ದು, ಚಿನ್ನದ ಮಾರುಕಟ್ಟೆಯಲ್ಲಿ 9 ಕ್ಯಾರೆಟ್ ಚಿನ್ನದ ಬಳಕೆ ಇಲ್ಲ. ಕಡಿಮೆ ಅಂದರೆ, 18 ಕ್ಯಾರೆಟ್ ಚಿನ್ನದ ಆಭರಣ ಬಳಕೆ ಇದೆಯಂತೆ. ಮಹಾರಾಷ್ಟ್ರದ ವ್ಯಕ್ತಿ 9 ಕ್ಯಾರೆಟ್ ಚಿನ್ನವನ್ನ ಗ್ರಾಂಗೆ 5,200 ರೂ.ನಂತೆ ಮಂಗಳೂರು ನಗರಕ್ಕೆ ಪೂರೈಸಿದ್ದಾನೆ ಎನ್ನಲಾಗುತ್ತಿದೆ. ಈ ಪ್ರಕರಣದಿಂದಾಗಿ ಮಂಗಳೂರಿನ ಜುವೆಲ್ಲರಿಗಳಲ್ಲಿಯೂ ಇದೇ ಮಾದರಿಯ ನಕಲಿ ಚಿನ್ನವನ್ನು ಮಾರಾಟ ಮಾಡಲಾಗುತ್ತಿದೆಯೇ ಎಂಬ ಅನುಮಾನ ಬಂದಿದೆ.

A major fake gold racket has been busted in Mangaluru after a finance firm in Thokkottu detected counterfeit jewellery stamped with a forged 916 hallmark, raising concerns about gold authenticity across the city. Ullal Police arrested six accused, including a Maharashtra-based supplier, who allegedly circulated 9-carat gold coated to resemble 22-carat jewellery.