ಪ್ರಿಯದರ್ಶಿನಿ ಸೊಸೈಟಿಯಲ್ಲಿ ಪರಿಶಿಷ್ಟ ಜಾತಿ ವ್ಯಕ್ತಿಯ ಜಾಗ ಮುಂದಿಟ್ಟು ಅಕ್ರಮ ಸಾಲ ; ಕಾಂಗ್ರೆಸ್ ಮುಖಂಡ ವಸಂತ ಬೆರ್ನಾರ್ಡ್, ಬ್ರಾಂಚ್ ಮ್ಯಾನೇಜರ್, ಸಿಇಓ ಸೇರಿ ಏಳು ಮಂದಿ ವಿರುದ್ಧ ಪ್ರಕರಣ ದಾಖಲು

13-08-26 04:29 pm       HK News Staffer   ಕ್ರೈಂ

ಖಾಸಗಿ ವ್ಯಕ್ತಿಯೊಬ್ಬರ ಜಾಗದ ದಾಖಲೆಗಳನ್ನು ಮುಂದಿಟ್ಟು ಅಕ್ರಮವಾಗಿ 20 ಲಕ್ಷ ರೂ. ಸಾಲ ಪಡೆದು ವಂಚಿಸಿದ ಬಗ್ಗೆ ಪಡುಬಿದ್ರಿ ಪ್ರಿಯದರ್ಶಿನಿ ಸಹಕಾರ ಸಂಘದ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ವಸಂತ ಬೆರ್ನಾರ್ಡ್ ಹಾಗೂ ಬ್ರಾಂಚ್ ಮ್ಯಾನೇಜರ್, ಸಿಇಓ ವಿರುದ್ಧ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು, ಆ.13: ಖಾಸಗಿ ವ್ಯಕ್ತಿಯೊಬ್ಬರ ಜಾಗದ ದಾಖಲೆಗಳನ್ನು ಮುಂದಿಟ್ಟು ಅಕ್ರಮವಾಗಿ 20 ಲಕ್ಷ ರೂ. ಸಾಲ ಪಡೆದು ವಂಚಿಸಿದ ಬಗ್ಗೆ ಪಡುಬಿದ್ರಿ ಪ್ರಿಯದರ್ಶಿನಿ ಸಹಕಾರ ಸಂಘದ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ವಸಂತ ಬೆರ್ನಾರ್ಡ್ ಹಾಗೂ ಬ್ರಾಂಚ್ ಮ್ಯಾನೇಜರ್, ಸಿಇಓ ವಿರುದ್ಧ ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಹಳೆಯಂಗಡಿ ನಿವಾಸಿ ನಾಗೇಶ್ ಎಂಬವರು ತನ್ನ ಮದುವೆ ನಿಮಿತ್ತ 2023ರ ಆಗಸ್ಟ್ 28ರಂದು ಹಳೆಯಂಗಡಿ ಪ್ರಿಯದರ್ಶಿನಿ ಸೊಸೈಟಿಗೆ ತನ್ನ ಜಾಗದ ದಾಖಲಾತಿಗಳನ್ನು ಇಟ್ಟು 5 ಲಕ್ಷ ಸಾಲ ಪಡೆದಿದ್ದರು. ಈ ವೇಳೆ, ಜಾಗದ ಮೂಲ ದಾಖಲಾತಿಗಳನ್ನು ಪಡುಬಿದ್ರೆ ಶಾಖೆಯಲ್ಲಿ ಸ್ವೀಕರಿಸಿದ್ದ ಬ್ರಾಂಚ್ ಮ್ಯಾನೇಜರ್ ಪ್ರಜ್ಞಾಶ್ರೀ ಮತ್ತು ಸೊಸೈಟಿ ಅಧ್ಯಕ್ಷ ವಸಂತ್ ಬೆರ್ನಾರ್ಡ್ ಅವರು, ಸಾಲದ ನೆಪದಲ್ಲಿ ಹಲವಾರು ಕಾಗದ ಪತ್ರಗಳಿಗೆ ಸಹಿಗಳನ್ನು ಪಡೆದಿದ್ದರು. 

ಹೆಚ್ಚುವರಿ ಜಾಗದ ದಾಖಲೆ ಪತ್ರಗಳನ್ನು ನೀಡುವಂತೆ ಸೂಚಿಸಿದ್ದರಿಂದ ನಾಗೇಶ್ ತನಗೆ ಸರ್ಕಾರದಿಂದ ಮಂಜೂರಾಗಿದ್ದ 66 ಸೆಂಟ್ಸ್ ಜಾಗದ ದಾಖಲೆಗಳನ್ನು ನೀಡಿದ್ದರು. ಆದರೆ ಅದೇ ಸೆಪ್ಟೆಂಬರ್ 7ರಂದು ನಾಗೇಶ್ ಗಮನಕ್ಕೆ ತಾರದೆ 20 ಲಕ್ಷ ರೂ. ಹೆಚ್ಚುವರಿ ಸಾಲ ಪಡೆದಿದ್ದು ಮೋಸ ಮಾಡಿರುತ್ತಾರೆ. ಇತ್ತೀಚೆಗೆ ಈ ವಿಷಯ ತಿಳಿದ ದೂರುದಾರ ನಾಗೇಶ್ 2026ರ ಜೂನ್ 16ರಂದು ಪಡುಬಿದ್ರೆಯಲ್ಲಿ ವಸಂತ್ ಬೆರ್ನಾರ್ಡ್ ಅವರ ಕಾರನ್ನು ನಿಲ್ಲಿಸಿ ತನ್ನ ಪಾಸ್ ಬುಕ್ ಬಗ್ಗೆ ವಿಚಾರಿಸಿದಾಗ ಆರೋಪಿ ಬೈದು ನಿಂದಿಸಿದ್ದಾರೆ. ಜೂನ್ 17ರಂದು ಪ್ರಿಯದರ್ಶಿನಿ ಹಳೆಯಂಗಡಿ ಸೊಸೈಟಿಯಿಂದ ಸಾಲದ ಕಂತು ಪಾವತಿ ಬಗ್ಗೆ ನೋಟಿಸ್ ಬಂದಿದ್ದು ಅದರಲ್ಲಿ ಅಸಲು 4.49 ಲಕ್ಷವೆಂದು ತೋರಿಸಿದ್ದು ಬಡ್ಡಿ ಸೇರಿ 7.97 ಲಕ್ಷವೆಂದು ತಿಳಿಸಲಾಗಿತ್ತು. ಹೆಚ್ಚುವರಿ 20 ಲಕ್ಷ ಸಾಲದ ಬಗ್ಗೆ ಮಾಹಿತಿ ಇರಲಿಲ್ಲ. 

ಬಳಿಕ ಪಡುಬಿದ್ರಿ ಶಾಖೆಯಿಂದ ಮಾಹಿತಿ ಪಡೆದಾಗ ತನ್ನ ಹೆಸರಲ್ಲಿ 20 ಲಕ್ಷ ಸಾಲ ಪಡೆದು, ಇವರ ಗಮನಕ್ಕೆ ತಾರದೇ 19.10 ಲಕ್ಷ ಹಣವನ್ನು ಶೇಖ್ ವಜೀರ್ ಎಂಬವರ ಹಳೆಯಂಗಡಿ ಕೆನರಾ ಬ್ಯಾಂಕ್ ಶಾಖೆಗೆ ವರ್ಗಾಯಿಸಿದ್ದು ಆನಂತರ ಅದೇ ಹಣವನ್ನು ಪ್ರಮುಖ ಆರೋಪಿ ವಸಂತ ಬೆರ್ನಾರ್ಡ್ ಮತ್ತು 5ನೇ ಆರೋಪಿ ಸೊಸೈಟಿ ನಿರ್ದೇಶಕಿ ಮಿರ್ಜಾ ಅಹಮದ್ ಅವರ ಖಾತೆಗಳಿಗೆ ವರ್ಗಾವಣೆಯಾಗಿದ್ದು ಪತ್ತೆಯಾಗಿದೆ. 


 
ಆರೋಪಿತರು ಸಮಾನ ಉದ್ದೇಶದಿಂದ ನಾಗೇಶ್ ಪರಿಶಿಷ್ಟ ಜಾತಿಗೆ ಸೇರಿದವರೆಂದು ತಿಳಿದರೂ ಸರ್ಕಾರದಿಂದ ಮಂಜೂರಾದ ಸುಮಾರು 66 ಸೆಂಟ್ಸ್‌ ಜಾಗವನ್ನು ಅಕ್ರಮವಾಗಿ ತಮ್ಮ ಸಹಕಾರ ಸಂಘದಲ್ಲಿ ಅಡಮಾನ ಇರಿಸಿ 20 ಲಕ್ಷ ರೂಪಾಯಿ ಮಂಜೂರಾಗಿದ್ದರೂ ನೀಡದೇ ದುರುಪಯೋಗ ಮಾಡಿದ್ದು ನಂಬಿಕೆ ದ್ರೋಹ ಎಸಗಿರುವುದಾಗಿ ನೀಡಿದ ದೂರಿನಂತೆ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಅಪರಾಧ ಕ್ರಮಾಂಕ 89/2026 ಕಲಂ: 316(2), 318(4), 336(2) ಜೊತೆಗೆ 3(5) BNS ಮತ್ತು 3(1)(ş) SC-ST POA Act ರಂತೆ ಪ್ರಕರಣ ದಾಖಲಾಗಿರುತ್ತದೆ. 

ಪ್ರಕರಣದಲ್ಲಿ ಪ್ರಿಯದರ್ಶಿನಿ ಸಹಕಾರ ಸಂಘದ ಅಧ್ಯಕ್ಷ ವಸಂತ ಬೇರ್ನಾಡ್‌, ಪಡುಬಿದ್ರಿ ಶಾಖೆ ಬ್ರಾಂಚ್‌ ಮ್ಯಾನೇಜರ್‌ ಪ್ರಜ್ಞಾಶ್ರೀ, ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಸುದರ್ಶನ ಪೂಜಾರಿ, ಸಿಬಂದಿ ರೇಶ್ಮಾ, ನಿರ್ದೇಶಕಿ ಮಿರ್ಜಾ ಅಹಮದ್, ನಿರ್ದೇಶಕ ಉಮನಾಥ್‌ ಜೆ ಶೆಟ್ಟಿಗಾರ್‌, ನಿರ್ದೇಶಕಿ ಶೆರಿಲ್‌ ಲಿಯೋನಾ ಐಮನ್‌ ಎಂಬವರ ವಿರುದ್ಧ ಪಡುಬಿದ್ರಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.