ಬಹುಕೋಟಿ ವಂಚಕ ಶಿವಾನಂದ ನೀಲಣ್ಣವರ್ ಮಂಗಳೂರಿನಲ್ಲಿ ಬಂಧನ ; ಇಡಿ ವಿಚಾರಣೆ ಕರೆಸಿ 12 ದಿನ ಕಸ್ಟಡಿಗೆ, ನಕಲಿ ಸ್ಕೀಮ್ ಹೆಸರಲ್ಲಿ ನಾಲ್ಕು ರಾಜ್ಯಗಳಲ್ಲಿ 2110 ಕೋಟಿ ವಂಚನೆ, ಸಿನಿಮಾ ಹೂಡಿಕೆ- ಸೇವಾ ಚಟುವಟಿಕೆ ಪೋಸು !

14-08-26 08:49 pm       HK News Staffer   ಕ್ರೈಂ

ಬಹುಕೋಟಿ ವಂಚನೆ ಪ್ರಕರಣದಲ್ಲಿ ಬೆಳಗಾವಿಯ ಶಿವಾನಂದ ಸಿದ್ದಪ್ಪ ನೀಲಣ್ಣವರ್ ನನ್ನು ಮಂಗಳೂರು ವಿಭಾಗದ ಇಡಿ ಅಧಿಕಾರಿಗಳು ಬಂಧಿಸಿದ್ದು, ಕೋರ್ಟಿಗೆ ಹಾಜರುಪಡಿಸಿ 12 ದಿನಗಳ ಕಸ್ಟಡಿ ಪಡೆದಿದ್ದಾರೆ.

ಮಂಗಳೂರು, ಆ.14: ಬಹುಕೋಟಿ ವಂಚನೆ ಪ್ರಕರಣದಲ್ಲಿ ಬೆಳಗಾವಿಯ ಶಿವಾನಂದ ಸಿದ್ದಪ್ಪ ನೀಲಣ್ಣವರ್ ನನ್ನು ಮಂಗಳೂರು ವಿಭಾಗದ ಇಡಿ ಅಧಿಕಾರಿಗಳು ಬಂಧಿಸಿದ್ದು, ಕೋರ್ಟಿಗೆ ಹಾಜರುಪಡಿಸಿ 12 ದಿನಗಳ ಕಸ್ಟಡಿ ಪಡೆದಿದ್ದಾರೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ(2002) ಜಾರಿ ನಿರ್ದೇಶನಾಲಯ ಅಧಿಕಾರಿಗಳು ಶಿವಾನಂದ್ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಶಿವಂ ಅಸೋಸಿಯೇಟ್ಸ್ ಹೆಸರಲ್ಲಿ ಕರ್ನಾಟಕ, ಮಹಾರಾಷ್ಟ್ರದಲ್ಲಿ ಹೆಚ್ಚಿನ ಮೊತ್ತದ ಬಡ್ಡಿ ನೀಡುವುದಾಗಿ ನಂಬಿಸಿ ಜನರಿಂದ ಹಣವನ್ನು ಸಂಗ್ರಹಿಸಿ ವಂಚಿಸುತ್ತಿದ್ದ ಬಗ್ಗೆ ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ 2019ರ ಬಡ್ಸ್ (Banning of Unregulated Deposit Schemes Act 2019) ಮತ್ತು ಠೇವಣಿದಾರರ ಸುರಕ್ಷತಾ ಕಾಯ್ದೆ 2024ರ ಅಡಿ ಪ್ರಕರಣ ದಾಖಲಾಗಿತ್ತು.

ಎಂ.ಎಸ್ ಶಿವಂ ಅಸೋಸಿಯೇಟ್ಸ್ ಹೆಸರಲ್ಲಿ ಶಿವಾನಂದ ನೀಲಣ್ಣವರ್ ಸಾವಿರಾರು ಜನರನ್ನು ಹೆಚ್ಚಿನ ಬಡ್ಡಿ ನೀಡುವುದಾಗಿ ನಂಬಿಸಿ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದ. ತಿಂಗಳಿಗೆ 3 ಶೇಕಡಾ ಬಡ್ಡಿ ಮೊತ್ತ ಹಿಂತಿರುಗಿಸುವ ಆಮಿಷದಲ್ಲಿ ಸಾರ್ವಜನಿಕರಿಂದ ಸುಮಾರು 2110 ಕೋಟಿ ಮೊತ್ತವನ್ನು ಅಕ್ರಮವಾಗಿ ಸಂಗ್ರಹಿಸಿದ್ದಾನೆ ಎಂಬುದನ್ನು ತನಿಖೆಯಲ್ಲಿ ಪತ್ತೆ ಮಾಡಲಾಗಿತ್ತು. ತನಿಖೆ ಸಂದರ್ಭದಲ್ಲಿ ಕರ್ನಾಟಕ, ಮಹಾರಾಷ್ಟ್ರ, ಗೋವಾ, ಛತ್ತೀಸ್ಗಢ ರಾಜ್ಯದಲ್ಲಿ ಈತನ ವಹಿವಾಟು ಹರಡಿಕೊಂಡಿರುವುದು ತಿಳಿದುಬಂದಿತ್ತು.

2019ರಿಂದ ಶಿವಂ ಅಸೋಸಿಯೇಟ್ಸ್ ನಷ್ಟದಲ್ಲಿದ್ದು, ಹೂಡಿಕೆದಾರರಿಗೆ ಮರು ಪಾವತಿ ಕಷ್ಟವಾಗಿದ್ದರೂ, ಕಂಪನಿ ಸುರಕ್ಷಿತವಾಗಿದೆ ಎಂದು ಹೇಳಿ ಮತ್ತಷ್ಟು ಜನರನ್ನು ಬೇರೆ ಬೇರೆ ಯೋಜನೆ ಹೆಸರಲ್ಲಿ ಹೂಡಿಕೆ ಮಾಡಿಸಿಕೊಳ್ಳುತ್ತಿದ್ದ. ಅಲ್ಲದೆ, ತನ್ನ ಕುಟುಂಬ ಸದಸ್ಯರು, ಆಪ್ತ ಸ್ನೇಹಿತರನ್ನು ಮುಂದಿಟ್ಟು ಸಮಾಜದಲ್ಲಿ ಸಂಭಾವಿತನಂತೆ ಬಿಂಬಿಸಿಕೊಳ್ಳಲು ಸೇವಾ ಚಟುವಟಿಕೆಯನ್ನೂ ನಡೆಸುತ್ತಿದ್ದ. ಇದಕ್ಕಾಗಿ ಶಿವಂ ಸೇವಾ ಪ್ರೈವೇಟ್ ಲಿಮಿಟೆಡ್ ಮತ್ತು ಶಿವಂ ಪ್ರೊಡಕ್ಷನ್ಸ್ ಎನ್ನುವ ಪ್ರತ್ಯೇಕ ಸಂಸ್ಥೆಗಳನ್ನು ಮಾಡಿಸಿದ್ದ. ಲಕ್ಸುರಿ ವಾಹನಗಳಲ್ಲಿ ತಿರುಗಾಡುವುದು, ವಿಲ್ಲಾಗಳನ್ನು ಖರೀದಿಸುವುದು, ಸಿನಿಮಾ ನಿರ್ಮಾಣಕ್ಕೆ ಹಣ ಹೂಡಿಕೆ ಮಾಡುವುದನ್ನು ಮಾಡಿ ಜನರೆದುರಲ್ಲಿ ಎಂಎಲ್ಎ ರೀತಿ ಪೋಸು ಕೊಡುತ್ತಿದ್ದ. ಪಿಎಂಎಲ್ಎ ಏಕ್ಟ್ ಪ್ರಕಾರ, ಸಾರ್ವಜನಿಕರ ದುಡ್ಡನ್ನು ಬಳಸಿ ಶೋಕಿ ಮಾಡುತ್ತಿದ್ದುದು ಅಪರಾಧ ಚಟುವಟಿಕೆಯ ಭಾಗವೆಂದು ಪರಿಗಣಿಸಲಾಗಿದ್ದು, ಆತನಿಗೆ ಸೇರಿದ ಇನ್ನಷ್ಟು ಆಸ್ತಿಯನ್ನು ಮುಟ್ಟುಗೋಲು ಹಾಕಲು ತನಿಖೆ ಮುಂದುವರಿಸಲಾಗಿದೆ ಎಂದು ಇಡಿ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಳಗಾವಿಯಲ್ಲಿ ಎರಡು ತಿಂಗಳ ಹಿಂದೆ ಅಲ್ಲಿನ ಜಿಲ್ಲಾಧಿಕಾರಿ ಆದೇಶದಂತೆ ತಹಸೀಲ್ದಾರ್ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ಮಾಡಿ, ಶಿವಾನಂದ ನೀಲಣ್ಣವರ್ ಗೆ ಸೇರಿದ ಆಸ್ತಿ ಮುಟ್ಟುಗೋಲಿಗೆ ಶುರು ಮಾಡಿದ್ದರು. ಆನಂತರ, ಮಾಳಮಾರುತಿ ಠಾಣೆಯಲ್ಲಿ ಅಕ್ರಮ ಹಣ ವರ್ಗಾವಣೆ ಮತ್ತು ನಕಲಿ ಸ್ಕೀಮ್ ಹೆಸರಲ್ಲಿ ಹಣ ಸಂಗ್ರಹಿಸುತ್ತಿದ್ದ ವಿಚಾರಕ್ಕೆ ಕೇಸು ದಾಖಲಿಸಲಾಗಿತ್ತು. ಆ ಪ್ರಕರಣದಲ್ಲಿ ಜಾಮೀನು ಮೇಲೆ ಹೊರಬಂದಿದ್ದ ಶಿವಾನಂದನನ್ನು ಆಗಸ್ಟ್ 13ರಂದು ಸಂಜೆ ಮಂಗಳೂರಿನ ಇಡಿ ಕಚೇರಿಗೆ ವಿಚಾರಣೆಗೆ ಕರೆಸಲಾಗಿತ್ತು. ನಿನ್ನೆ ರಾತ್ರಿಯಿಡೀ ವಿಚಾರಣೆ ನಡೆಸಿದ ಬಳಿಕ ಶುಕ್ರವಾರ ಬೆಳಗ್ಗೆ ಬಂಧಿಸಿದ್ದು, ಮಂಗಳೂರಿನ ಕೋರ್ಟಿಗೆ ಹಾಜರುಪಡಿಸಿ 12 ದಿನ ಕಸ್ಟಡಿಗೆ ಪಡೆಯಲಾಗಿದೆ.

In a major development, alleged multi-crore fraudster Shivanand Neelannavar has been arrested in Mangaluru in connection with a massive financial fraud case. The Enforcement Directorate (ED) has taken him into custody for 12 days for questioning.