ಗಣೇಶ ಹಬ್ಬದ ಮುಗಿಸಿ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಅಪಘಾತ ; ಬೈಕ್ ಗೆ ಡಿಕ್ಕಿ ಹೊಡೆದ ಲಾರಿ, ಸ್ಥಳದಲ್ಲೇ ದಂಪತಿ, 8 ವರ್ಷದ ಪುತ್ರಿ ಸ್ಥಳದಲ್ಲೇ ಬಲಿ

15-09-26 12:48 pm       HK News Staffer   ಕ್ರೈಂ

ಗೌರಿ - ಗಣೇಶ ಹಬ್ಬದ ಸಂಭ್ರಮ ಮುಗಿಸಿ ವಾಪಸ್ ಬೆಂಗಳೂರಿಗೆ ತೆರಳಿದ್ದ ಕುಟುಂಬಸ್ಥರು ಭೀಕರ ಅಪಘಾತದಲ್ಲಿ ಮೃತಪಟ್ಟ ಘಟನೆ ಮದ್ದೂರು ತಾಲೂಕಿನ ಕೊಪ್ಪ ಗ್ರಾಮದಲ್ಲಿ ಇಂದು ಬೆಳ್ಳಂಬೆಳಗ್ಗೆ ಸಂಭವಿಸಿದೆ. ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಹಾಲಿನ ಟ್ಯಾಂಕ‌ರ್ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮಂಡ್ಯ, ಸೆ 15: ಗೌರಿ - ಗಣೇಶ ಹಬ್ಬದ ಸಂಭ್ರಮ ಮುಗಿಸಿ ವಾಪಸ್ ಬೆಂಗಳೂರಿಗೆ ತೆರಳಿದ್ದ ಕುಟುಂಬಸ್ಥರು ಭೀಕರ ಅಪಘಾತದಲ್ಲಿ ಮೃತಪಟ್ಟ ಘಟನೆ ಮದ್ದೂರು ತಾಲೂಕಿನ ಕೊಪ್ಪ ಗ್ರಾಮದಲ್ಲಿ ಇಂದು ಬೆಳ್ಳಂಬೆಳಗ್ಗೆ ಸಂಭವಿಸಿದೆ. ದ್ವಿಚಕ್ರ ವಾಹನಕ್ಕೆ ಹಿಂದಿನಿಂದ ಹಾಲಿನ ಟ್ಯಾಂಕ‌ರ್ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಬೆಂಗಳೂರು ಮೂಲದ ಮುತ್ತುರಾಜ್ (35), ಅವರ ಪತ್ನಿ ಕಾವ್ಯ (30) ಹಾಗೂ ಎಂಟು ವರ್ಷದ ಪುತ್ರಿ ಕೀರ್ತನಾ ಸ್ಥಳದಲ್ಲೇ ಪ್ರಾಣ ಕಳೆದುಕೊಂಡವರು. ದಂಪತಿಯ ಮತ್ತೊಂದು ಮಗುವಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ತಕ್ಷಣವೇ ಆ ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಗೌರಿ - ಗಣೇಶ ಹಬ್ಬದ ರಜೆಯ ಹಿನ್ನೆಲೆಯಲ್ಲಿ ಈ ದಂಪತಿ ಮಕ್ಕಳು ಸಮೇತ ಊರಿಗೆ ಆಗಮಿಸಿದ್ದರು. ಭಾನುವಾರ ಹಬ್ಬದ ಎಲ್ಲ ಸಂಭ್ರಮಗಳನ್ನು ಮುಗಿಸಿಕೊಂಡು ಇಂದು ನಸುಕಿನ ಜಾವಾ ಬೈಕ್ ನಲ್ಲಿ ಬೆಂಗಳೂರಿಗೆ ವಾಪಸ್ ಪ್ರಯಾಣ ಬೆಳೆಸಿದ್ದರು. ಆದರೆ, ಕೊಪ್ಪ ಗ್ರಾಮದ ಮುಖ್ಯ ರಸ್ತೆಯಲ್ಲಿ ಸಂಚರಿಸುತ್ತಿದ್ದ ವೇಳೆ ದ್ವಿಚಕ್ರ ವಾಹನ ಮತ್ತು ವೇಗವಾಗಿ ಬಂದ ಹಾಲಿನ ಟ್ಯಾಂಕ‌ರ್ ಮಧ್ಯೆ ಡಿಕ್ಕಿ ಸಂಭವಿಸಿದೆ. ಅಪಘಾತದ ತೀವ್ರತೆಗೆ ದಂಪತಿ ಹಾಗೂ ಹೆಣ್ಣು ಮಗು ರಸ್ತೆಯಲ್ಲೇ ರಕ್ತದ ಮಡುವಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಮತ್ತೊಂದು ಮಗು ತೀವ್ರವಾಗಿ ಗಾಯಗೊಂಡಿದೆ.

ಘಟನಾ ಸ್ಥಳಕ್ಕೆ ಕೊಪ್ಪ ಠಾಣೆಯ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಮಂಡ್ಯದ ಮಿಮ್ಸ್ (MIMS) ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದ್ದಾರೆ.

ಅತಿಯಾದ ವೇಗ ಹಾಗೂ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಈ ಸಂಬಂಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಹಬ್ಬದ ಖುಷಿಯಲ್ಲಿದ್ದ ದಂಪತಿ, ಮಗುವನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಗ್ರಾಮದಲ್ಲಿ ಶೋಕ ವಾತಾವರಣ ನಿರ್ಮಾಣವಾಗಿದೆ.